7
ವೇದ–5

ವೇದ: ಕಾವ್ಯವೂ ಹೌದು, ವಿಚಾರವೂ ಹೌದು

Published:
Updated:

ವೇದ ಎಂದರೆ ಪೂಜೆ–ಪುನಸ್ಕಾರಗಳು ಎಂಬ ಭಾವನೆ ಬಹುಜನರದ್ದು. ಆದರೆ ವೇದಗಳಲ್ಲಿ ಅಂಥ ವಿವರಗಳ ಪ್ರಮಾಣ ತುಂಬ ಕಡಿಮೆ; ಇಲ್ಲವೇ ಇಲ್ಲ ಎಂದರೂ ತಪ್ಪಲ್ಲ. ದೇವತೆಗಳನ್ನು ಕುರಿತ ಪ್ರಾರ್ಥನೆಗಳಿವೆ; ಯಜ್ಞದ ಬಗ್ಗೆ ಸೊಲ್ಲುಗಳಿವೆ. ಇದಕ್ಕೆ ಹೊರತಾಗಿಯೂ ನಮ್ಮ ಬದುಕಿಗೆ ಒದಗುವಂಥ ಹಲವು ವಿವರಗಳು ಸಾಕಷ್ಟು ಪ್ರಮಾಣದಲ್ಲಿವೆ. ಮಾತ್ರವಲ್ಲ, ಕಾವ್ಯಸೌಂದರ್ಯದ ದೃಷ್ಟಿಯಿಂದಲೂ ಸೊಗಸಾದ ವರ್ಣನೆಗಳಿವೆ. ನಮ್ಮ ಈಗಿನ ಕಾಲದ ಚಿಂತನೆಯೋ ಎಂದೆನಿಸುವಂಥ ವೈಚಾರಿಕ ನಿಲುವುಗಳೂ ಧಾರಾಳವಾಗಿವೆ.

ವೇದದಲ್ಲಿರುವ ವಿಚಾರದ ಪ್ರಖರತೆಗೆ ಋಗ್ವೇದದಲ್ಲಿ ಬರುವ ‘ನಾಸದೀಯ ಸೂಕ್ತ’ವನ್ನು ನೋಡಬಹುದು. ಈ ಸೃಷ್ಟಿಯ ಮೂಲವೇನು? ಅದು ಹೇಗೆ ಹುಟ್ಟಿತು? – ಎಂಬ ಗಂಭೀರವಾದ ಚಿಂತನೆಯ ಬೆಳಕು ಅಲ್ಲಿ ಸೊಗಸಾಗಿ ಮೂಡಿದೆ:

ನಾಸದಾಸೀನ್ನೋ ಸದಾಸೀತ್ತದಾನೀಂ |

ನಾಸೀದ್ರಜೋ ನೋ ವ್ಯೋಮಾ ಪರೋ ಯತ್‌ |

ಕಿಮಾವರೀವಃ ಕುಹ ಕಸ್ಯ ಶರ್ಮನ್ನಂ |

ಭಃ ಕಿಮಾಸೀದ್ಗಹನಂ ಗಭೀರಮ್‌ ||

‘ಆಗ (ಮೊದಲಲ್ಲಿ) ಅಸತ್ತೂ ಇರಲಿಲ್ಲ, ಸತ್ತೂ ಇರಲಿಲ್ಲ, ಲೋಕವೂ ಇರಲಿಲ್ಲ. ಅದರ ಆಚೆಯ ಆಕಾಶವೂ ಇರಲಿಲ್ಲ. ಅದೇನನ್ನು ಆವರಿಸಿತ್ತು? ಎಲ್ಲಿ? ಯಾರ ಆಶ್ರಯದಲ್ಲಿ? ಅಲ್ಲಿ ಗಹನವೂ ಗಭೀರವೂ ಆದ ನೀರೇನಾದರೂ ಇತ್ತೆ?’

ನ ಮೃತ್ಯುರಾಸೀದಮೃತಂ ನ ತರ್ಹಿ |

ನ ರಾತ್ರ್ಯಾ ಅಹ್ನ ಅಸೀತ್ಪ್ರಕೇತಃ |

ಆನೀದವಾತಂ ಸ್ವಧಯಾ ತದೇಕಂ |

ತಸ್ಮಾದ್ಧಾನ್ಯನ್ನ ಪರಃ ಕಿಂ ಚನಾಸ ||

‘ಆಗ ಮೃತ್ಯವಿರಲಿಲ್ಲ, ಅಮೃತತ್ವವೂ ಇರಲಿಲ್ಲ, ರಾತ್ರಿ–ಹಗಲುಗಳಿಗೆ ಭೇದವಿರಲಿಲ್ಲ; ಅದೊಂದು (ಗಾಳಿ ಇಲ್ಲದೆ) ತನ್ನ ಬಲದಿಂದಲೇ ಉಸಿರಾಡುತ್ತಿತ್ತು. ಅದನ್ನು ಬಿಟ್ಟು ಹೊರಗೆ ಬೇರೆ ಏನೂ ಇರಲಿಲ್ಲ.’

ಕೋ ಅದ್ಧಾ ವೇದ ಕ ಇಹ ಪ್ರವೋಚತ್‌ |

ಕುತ ಆಜಾತಾ ಕುತ ಇಯಂ ವಿಸೃಷ್ಟಿಃ |

ಅರ್ವಾಗ್ದೇವಾ ಅಸ್ಯ ವಿಸರ್ಜನೇನಾ |

ಥಾ ಕೋ ವೇದ ಯತ ಆಬಭೂವ ||

‘ಇದನ್ನೆಲ್ಲ ನಿಜವಾಗಿ ತಿಳಿದವರು ಯಾರು? ಯಾವುದರಿಂದ ಇದೆಲ್ಲ ಆಯಿತು? ಈ ಸೃಷ್ಟಿ ಆದುದು ಹೇಗೆ; ಇದನ್ನು ಹೇಳುವವರು ಯಾರು? ಈ ಸೃಷ್ಟಿಯೆಲ್ಲ ಆದನಂತರ ಬಂದವರು ದೇವತೆಗಳು. ಆದ್ದರಿಂದ ಇದು ಹೇಗಾಯಿತು ಎಂದು ತಿಳಿದವರು ಯಾರು?’

ಇಯಂ ವಿಸೃಷ್ಟಿರ್ಯತ ಆಬಭೂವ |

ಯದಿ ವಾ ದಧೇ ಯದಿ ವಾ ನ |

ಯೋ ಅಸ್ಯಾಧ್ಯಕ್ಷಃ ಪರಮೇ ವ್ಯೋಮನ್‌ |

ಸೋ ಅಂಗ ವೇದ ಯದಿ ವಾ ನ ವೇದ ||

‘ಈ ಸೃಷ್ಟಿ ಎಲ್ಲಿಂದ ಉದ್ಭವವಾಯಿತು; ಅವನು ಅದನ್ನು ಸ್ಥಾಪಿಸಿದನೋ ಅಥವಾ ಇಲ್ಲವೋ? ಮೇಲಿನಿಂದ ಎಲ್ಲವನ್ನೂ ನೋಡುವ ಅವನಿಗೇ ಅದು ಗೊತ್ತು; ಇಲ್ಲ ಅವನಿಗೂ ತಿಳಿಯದೋ?’

(ಇಲ್ಲಿಯ ವೇದಮಂತ್ರಗಳ ಅನುವಾದ: ಜಿ. ಹನುಮಂತರಾವ್‌)

ಇಲ್ಲಿ ಉಲ್ಲೇಖಿಸಿರುವುದು ನಾಸದೀಯ ಸೂಕ್ತದ ಕೆಲವು ಮಂತ್ರಗಳನ್ನು ಮಾತ್ರವೇ. ಇಲ್ಲಿಯ ವಿಚಾರಸರಣಿ ನಮ್ಮ ಕಾಲಕ್ಕೂ ಹೇಗೆ ಮಾರ್ಗದರ್ಶಕವಾಗಿವೆ ಎನ್ನುವುದಕ್ಕೆ ಉದಾಹರಣೆಯಾಗಿದೆ. ಇಂಥ ಚಿಂತನಪ್ರಧಾನ ನೂರಾರು ಮಂತ್ರಗಳನ್ನು ವೇದಗಳ ಉದ್ದಕ್ಕೂ ಕಾಣಬಹುದಾಗಿದೆ.

***

ನಿಮ್ಮ ಅನಿಸಿಕೆಗಳನ್ನು ನಮಗೆ ಕಳುಹಿಸಿ. ವಿಳಾಸ: ಸಂಪಾದಕರು, ಪ್ರಜಾವಾಣಿ, ಅರಿವು ವಿಭಾಗ, ನಂ. 75, ಮಹಾತ್ಮ ಗಾಂಧಿ ರಸ್ತೆ, ಬೆಂಗಳೂರು – 560001 email: arivu@prajavani.co.in.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry