ಸೋಮವಾರ, ಮಾರ್ಚ್ 1, 2021
31 °C

ಆರೋಗ್ಯ ಸಚಿವರ ವಿರುದ್ಧ ಘೋಷಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆರೋಗ್ಯ ಸಚಿವರ ವಿರುದ್ಧ ಘೋಷಣೆ

ಬಾಗಲಕೋಟೆ: ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (ಕೆಪಿಎಂಇ)ಮಸೂದೆಗೆ ತಿದ್ದುಪಡಿ ತರುಲು ಮುಂದಾಗಿರುವ ರಾಜ್ಯ ಸರ್ಕಾರದ ಕ್ರಮ ವಿರೋಧಿಸಿ ಭಾರತೀಯ ವೈದ್ಯಕೀಯ ಸಂಘದ ಆಶ್ರಯದಲ್ಲಿ ಶುಕ್ರವಾರ ವೈದ್ಯರು ನಗರದಲ್ಲಿ ಪ್ರತಿಭಟನೆ ನಡೆಸಿದರು.

ನವನಗರದ ಜಿಲ್ಲಾಡಳಿತ ಭವನದ ಎದುರು ನಡೆದ ಪ್ರತಿಭಟನೆಗೆ ಮೆರವಣಿಗೆಯಲ್ಲಿ ಬಂದ ವೈದ್ಯರು ಹಾಗೂ ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳು ರಾಜ್ಯ ಸರ್ಕಾರ ಹಾಗೂ ಆರೋಗ್ಯ ಸಚಿವ ರಮೇಶಕುಮಾರ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಐ.ಎಂ.ಎ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಶೇಖರ ಮಾನೆ, ಕೆ.ಪಿ.ಎಂ.ಇ ಕಾಯ್ದೆ ತಿದ್ದುಪಡಿಯಿಂದ ಆಗುವ ಗಂಭೀರ ಪರಿಣಾಮಗಳನ್ನು ಮುಖ್ಯಮಂತ್ರಿಗಳು, ಆರೋಗ್ಯ ಸಚಿವರು ಹಾಗೂ ಜಂಟಿ ಸದನ ಸಮಿತಿಗೆ ಮನವರಿಕೆ ಮಾಡಿಕೊಡಲಾಗಿತ್ತು. ಆದರೂ ನಮ್ಮ ಮನವಿಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸದೇ ನಿರ್ಲಕ್ಷ್ಯ ವಹಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅತ್ಯಂತ ಕನಿಷ್ಠ ದರದಲ್ಲಿ ಸೇವೆ ನೀಡುತ್ತಿರುವ ವೈದ್ಯರು ಮತ್ತು ಆಸ್ಪತ್ರೆಗಳಿಗೆ ಈ ಕಾಯಿದೆ ಮಾರಕವಾಗಿದೆ. ಅಲ್ಲದೇ ರೋಗಿಗಳು ಮತ್ತು ವೈದ್ಯರ ನಡುವಿನ ಸಂಬಂಧ ಮತ್ತು ಒಟ್ಟು ವೈದ್ಯಕೀಯ ಸೇವೆಯೇ ಹಾಳಾಗಲಿದೆ. ಈ ತಿದ್ದುಪಡಿಯು ಕಾನೂನಿಗೆ ವಿರುದ್ಧವಾಗಿದೆ. ಹಾಗಾಗಿ ಇದನ್ನು ಪುನರ್‌ಪರಿಶೀಲಿಸಬೇಕು. ನ್ಯಾ. ವಿಕ್ರಂಜಿತ್‌ ಸೇನ್‌ ಸಮಿತಿ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

ರೋಗಿಗಳಿಗೆ ನ್ಯಾಯ ಒದಗಿಸಲು ಗ್ರಾಹಕರ ನ್ಯಾಯಾಲಯ ಹಾಗೂ ಮೆಡಿಕಲ್ ಕೌನ್ಸಿಲ್‌ಗಳಿವೆ. ಆದರೆ ಜಿಲ್ಲಾ ಮಟ್ಟದಲ್ಲಿ ಕುಂದುಕೊರತೆ ಪರಿಹಾರ ಸಮಿತಿ ರಚನೆ ಮಾಡಲು ಮುಂದಾಗಿರುವುದು ಸರಿಯಲ್ಲ. ಚಿಕಿತ್ಸೆಯ ವೈಫಲ್ಯ ಹಾಗೂ ಆಸ್ಪತ್ರೆ ವೆಚ್ಚಗಳ ಏರುಪೇರಿನ ಕಾರಣಕ್ಕೆ ಜೈಲು ಶಿಕ್ಷೆ ಹಾಗೂ ಜುಲ್ಮಾನೆ ವಿಧಿಸುವುದು ವೈದ್ಯ ವೃತ್ತಿಗೆ ಅಗೌರವ ತೋರಿದಂತಾಗುತ್ತದೆ ಎಂದರು.

ಖಾಸಗಿ ಆಸ್ಪತ್ರೆಗಳ ಹಕ್ಕು ಕಸಿದುಕೊಳ್ಳುವ ಬದಲು ಸರ್ಕಾರಿ ಆಸ್ಪತ್ರೆಗಳನ್ನು ಅಭಿವೃದ್ಧಿಪಡಿಸಲು ಮುಂದಾಗಬೇಕು. ಆಸ್ಪತ್ರೆಯ ದರ ಪರಿಷ್ಕರಣೆ ಹಾಗೂ ನಿಗದಿ ಮಾಡುವುದು ಸರಿಯಲ್ಲ. ಇದರಿಂದ ವೈದ್ಯರಿಗೆ ಮಾನಸಿಕ ತೊಂದರೆಯುಂಟಾಗಿ ಗುಣಮಟ್ಟದ ಸೇವೆಯನ್ನು ನೀಡಲು ಸಾಧ್ಯವಾಗುವುದಿಲ್ಲ. ಈ ಅಂಶಗಳನ್ನು ಹೊರತು ಪಡಿಸಿ ಕಾಯ್ದೆ ತಿದ್ದುಪಡಿಗೆ ನಮ್ಮ ಆಕ್ಷೇಪವಿಲ್ಲ ಎಂದರು.

ಅಸೋಸಿಯೇಷನ್‌ ಕಾರ್ಯ ದರ್ಶಿ ಡಾ.ಬಾಬುರಾಜೇಂದ್ರ ನಾಯಿಕ, ಡಾ.ಶ್ರೀಕಾಂತ ತೇಲಸಂಗ, ಡಾ.ಪ್ರಮೋದ ಮಿರ್ಜಿ, ಡಾ.ಮನ್ನಾಪುರ, ಡಾ.ಅರುಣ, ಡಾ.ಜಿ.ಆರ್.ಮಾಸುರಕರ, ಡಾ. ಬಿ.ಎಸ್.ಮರೇಗುದ್ದಿ, ಡಾ.ವಿ.ಆರ್.ಸೊರಗಾವಿ ಮತ್ತಿತರರು ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.