ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಂಕನ್ನೇ ಹರಾಜು ಹಾಕಿ ಪ್ರತಿಭಟಿಸಿದ ರೈತರು

ಕೆಸ್ತೂರು ವಿಜಯ ಬ್ಯಾಂಕಿಗೆ ರೈತರ ಮುತ್ತಿಗೆ; ಬೀಗ
Last Updated 4 ನವೆಂಬರ್ 2017, 6:35 IST
ಅಕ್ಷರ ಗಾತ್ರ

ಮದ್ದೂರು: ಸಾಲ ಮರುಪಾವತಿ ಮಾಡದ ಕಾರಣಕ್ಕೆ ತಾಲ್ಲೂಕಿನ ಕುಂದನಕುಪ್ಪೆ ಗ್ರಾಮದ ರೈತ ಚಂದ್ರಶೇಖರ್ ವಾಸದ ಮನೆಯನ್ನು ಕೆಸ್ತೂರು ವಿಜಯ ಬ್ಯಾಂಕ್ ಜಪ್ತಿ ಮಾಡಿದ ಕ್ರಮ ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ರೈತರು ಬ್ಯಾಂಕಿಗೆ ಶುಕ್ರವಾರ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಿದರು.

ಗ್ರಾಮದ ಪ್ರಮುಖ ಬೀದಿಗಳಲ್ಲಿ ತಮಟೆ ಬಡಿದು ಮೆರವಣಿಗೆಯಲ್ಲಿ ಬಂದ ರೈತರು, ಬ್ಯಾಂಕಿನೊಳಗಿದ್ದ ಅಧಿಕಾರಿಗಳನ್ನು ಹೊರ ಹಾಕಿ, ಬ್ಯಾಂಕಿನ ಮುಖ್ಯದ್ವಾರಕ್ಕೆ ಬೀಗ ಜಡಿದು ಪ್ರತಿಭಟನೆ ಆರಂಭಿಸಿದರು. ಬಳಿಕ ವಿಜಯ ಬ್ಯಾಂಕಿನ ಅಣಕು ಹರಾಜು ಪ್ರಕ್ರಿಯೆ ನಡೆಸಿ, ರೈತ ಚಂದ್ರಶೇಖರ್ ಅವರ ಮನೆಯ ಬೀಗಮುದ್ರೆ ಕೂಡಲೇ ತೆರವುಗೊಳಿಸಬೇಕೆಂದು ಘೋಷಣೆ ಕೂಗಿದರು.

ಪ್ರಾಂತ ರೈತ ಸಂಘದ ತಾಲ್ಲೂಕು ಕಾರ್ಯದರ್ಶಿ ಟಿ.ಯಶವಂತ್ ಮಾತನಾಡಿ, ಸಾಲಬಾಧೆಯಿಂದ ನರಳುತ್ತಿರುವ ರೈತ ಚಂದ್ರಶೇಖರ್ ಅವರ ಕುಟುಂಬಕ್ಕೆ ಸಾಂತ್ವನ ಹೇಳುವ ಬದಲು ಬ್ಯಾಂಕಿನ ಅಧಿಕಾರಿಗಳು ಇರುವ ವಾಸದ ಮನೆಯನ್ನು ವಶಪಡಿಸಿಕೊಂಡು ಇಡೀ ಕುಟುಂಬವನ್ನು ಬೀದಿಗೆ ತಳ್ಳಿ ಸಾಮಾಜಿಕ ಅಪಮಾನಕ್ಕೆ ಗುರಿ ಮಾಡಿದ್ದಾರೆ. ಇದು ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯೂ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ. ನರಸರಾಜು ಮಾತನಾಡಿ, ಸತತ ಬರಗಾಲದಿಂದ ರೈತರು ಕಂಗಾಲಾಗಿರುವ ಸಂದರ್ಭದಲ್ಲಿ ರೈತರು ಜೀವನ ಮಾಡುವುದೇ ಕಷ್ಟವಾಗಿದೆ. ಇಂತಹ ಸಂದರ್ಭದಲ್ಲಿ ಮಾನವೀಯತೆ ಮರೆತು ಬ್ಯಾಂಕಿನ ಅಧಿಕಾರಿಗಳು ರೈತನ ಕುಟುಂಬವನ್ನು ಹೊರ ಹಾಕಿ ಮನೆ ಜಪ್ತಿ ಮಾಡಿರುವುದು ಅಮಾನವೀಯ. ಈ ಕೂಡಲೇ ಬ್ಯಾಂಕಿನ ಅಧಿಕಾರಿಗಳು ಬೀಗಮುದ್ರೆ ತೆರವು ಮಾಡಬೇಕು. ಇಲ್ಲದಿದ್ದಲ್ಲಿ ಬೀಗ ಒಡೆಯಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸುದ್ದಿ ತಿಳಿದು ಸ್ಥಳಕ್ಕೆ ಬಂದ ತಹಶೀಲ್ದಾರ್ ನಾಗರಾಜು, ಉದ್ರಿಕ್ತ ರೈತರನ್ನು ಸಮಾಧಾನಪಡಿಸಿ ಜಿಲ್ಲಾಧಿಕಾರಿಗಳೊಡನೆ ಮಾತುಕತೆ ನಡೆಸಲಾಗುವುದು. ರೈತ ಚಂದ್ರಶೇಖರ್‌ ಅವರ ಮನೆಯ ಬೀಗಮುದ್ರೆ ತೆರವುಗೊಳಿಸಿ ರೈತ ಕುಟುಂಬದ ವಾಸಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆದರು.

ರೈತ ಸಂಘದ ತಾಲ್ಲೂಕು ಅಧ್ಯಕ್ಷ ಜಿ.ಎ.ಶಂಕರ್, ವಿಭಾಗೀಯ ಕಾರ್ಯದರ್ಶಿ ಯರಗನಹಳ್ಳಿ ರಾಮಕೃಷ್ಣಯ್ಯ, ಪ್ರಾಂತ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಶಿವಣ್ಣ, ಮುಖಂಡರಾದ ಗೊಲ್ಲರದೊಡ್ಡಿ ಅಶೋಕ್, ಅಣ್ಣೂರು ಮಹೇಂದ್ರ, ವರದಪ್ಪ, ಹುರುಗಲವಾಡಿ ಉಮೇಶ್, ವೆಂಕಟೇಗೌಡ, ಗಂಗಾಧರ್, ಬೋರೇಗೌಡ, ರಮೇಶ್, ಆನಂದ್, ಎಂ.ಸಿ.ಶೋಭಾ, ಕುಮಾರ್, ಸಂತೋಷ್ ಸೇರಿದಂತೆ ಹಲವರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT