ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ ದುರಸ್ತಿ ಮರೆತ ಇಲಾಖೆ; ಜನರ ಪರದಾಟ

Last Updated 4 ನವೆಂಬರ್ 2017, 7:20 IST
ಅಕ್ಷರ ಗಾತ್ರ

ಚಿತ್ತಾಪುರ: ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಸುರಿದ 105ಮಿ.ಮೀ ದಾಖಲೆಯ ಭಾರಿ ಮಳೆಗೆ ತಾಲ್ಲೂಕಿನ ಯರಗಲ್ ಗ್ರಾಮದಿಂದ ಮಾಲಗತ್ತಿ ಗ್ರಾಮಕ್ಕೆ ಸಂಪರ್ಕ ಜೋಡಿಸುವ ರಸ್ತೆ ಸಂಪೂರ್ಣ ಕೊಚ್ಚಿಕೊಂಡು ಹೋಗಿ ಜನರು ತೀವ್ರ ಪರದಾಡುತ್ತಿದ್ದಾರೆ.

ಯರಗಲ್ ಗ್ರಾಮದ ದಕ್ಷಿಣಕ್ಕೆ ರಸ್ತೆಯ ಮಾರ್ಗದಲ್ಲಿರುವ ಸೇತುವೆ ಬಳಿಯ ಡಾಂಬರ್ ರಸ್ತೆ ಮಳೆ ನೀರಿನ ರಭಸಕ್ಕೆ ಕೊಚ್ಚಿ ಹೋಗಿದೆ. ಒಂದು ಸ್ಥಳದಲ್ಲಿ ಇಡೀ ರಸ್ತೆ ಇನ್ನಿಲ್ಲದಂತೆ ಕೊಚ್ಚಿ ಹೋಗಿದ್ದರಿಂದ ದ್ವಿಚಕ್ರ ವಾಹನ, ಎತ್ತಿನ ಬಂಡಿಯೂ ಹೋಗಲಾಗದೆ ಸಾರ್ವಜನಿಕರು, ರೈತರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.

ಮಾಲಗತ್ತಿಯ ಹಿರೋಡೇಶ್ವರ ದೇವಸ್ಥಾನಕ್ಕೆ ಚಿತ್ತಾಪುರ, ಮೊಗಲಾ, ಇಟಗಾ, ದಿಗ್ಗಾಂವ ಸೇರಿದಂತೆ ಸುತ್ತಲಿನ ಅನೇಕ ಗ್ರಾಮಗಳ ಮತ್ತು ಯರಗಲ್ ಗ್ರಾಮದ ಜನರು ಇದೇ ರಸ್ತೆಯ ಮೂಲಕ ಹೋಗಿ ಬರುತ್ತಿದ್ದರು. ಶಹಾಬಾದ ನಗರಕ್ಕೆ ಹೋಗಲು ಸಮೀಪದ ರಸ್ತೆ ಇದಾಗಿತ್ತು. ರಸ್ತೆ ಕೊಚ್ಚಿ ಹೋಗಿದ್ದರಿಂದ ಈ ಮಾರ್ಗದ ಸಾರಿಗೆ ಸಂಚಾರವು ಸಂಪೂರ್ಣ ಸ್ತಬ್ಧಗೊಂಡಿದೆ.

‘ರೈತರ ಹೊಲಗಳಲ್ಲಿ ಸಮೃದ್ಧವಾಗಿ ತೊಗರಿ ಬೆಳೆ ಹೂವಾಡುವ ಹಂತದಲ್ಲಿದೆ. ಕೀಟದ ಹಾವಳಿ ಕಾಣಿಸಿಕೊಂಡಿದೆ. ರಸ್ತೆ ಕೊಚ್ಚಿ ಹೋಗಿದ್ದರಿಂದ ಕೀಟನಾಶಕ ಔಷಧಿ ಸಿಂಪರಣೆಗಾಗಿ ರೈತರು ತಮ್ಮ ಹೊಲಗಳಿಗೆ ಎತ್ತಿನ ಬಂಡಿ ತೆಗೆದುಕೊಂಡು ಹೋಗಲಾಗದೆ ಸಂಕಷ್ಟ ಎದುರಿಸುತ್ತಿದ್ದಾರೆ. ಸಂಬಂಧಿತ ಇಲಾಖೆಯ ಅಧಿಕಾರಿಗಳು ಗಮನವೇ ಹರಿಸುತ್ತಿಲ್ಲ’ ಎಂದು ಯರಗಲ್ ಗ್ರಾಮದ ಸಂಗು ನಾಟಿಕಾರ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಕಳೆದ ವರ್ಷದ ಮಳೆಗಾಲದಲ್ಲೂ ಇದೇ ಸ್ಥಳದಲ್ಲಿ ಮಳೆ ನೀರಿನ ಪ್ರವಾಹಕ್ಕೆ ರಸ್ತೆ ಕೊಚ್ಚಿಕೊಂಡು ಹೋಗಿ ಸಂಚಾರ ಬಂದ್ ಆಗಿತ್ತು. ಕಲ್ಲುಗಣಿಗಳಲ್ಲಿನ ಕಲ್ಲು ಚಿಪ್ಪು ತಂದು ಹಾಕಿ ತಾತ್ಕಾಲಿಕವಾಗಿ ರಸ್ತೆ ದುರಸ್ತಿ ಮಾಡಲಾಗಿತ್ತು. ಮತ್ತೆ ಅದೇ ಸ್ಥಳದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರಸ್ತೆ ಕೊಚ್ಚಿ ಹೋಗಿದೆ. ಕೊಚ್ಚಿ ಹೋದ ರಸ್ತೆಯ ದುರಸ್ತಿ ಮಾಡಿಸುವ ಕನಿಷ್ಠ ಜವಾಬ್ದಾರಿಯನ್ನೂ ಇಲಾಖೆಯ ಅಧಿಕಾರಿಗಳು ಮಾಡುತ್ತಿಲ್ಲ’ ಎಂದು ರೈತರು ಶುಕ್ರವಾರ ‘ಪ್ರಜಾವಾಣಿ’ ಬಳಿ ಅಳಲು ತೋಡಿಕೊಂಡರು.

‘ಮಳೆ ಪ್ರವಾಹಕ್ಕೆ ಕೊಚ್ಚಿ ಹೋದ ರಸ್ತೆಯ ಕುರಿತು ಸಚಿತ್ರ ವರದಿಯನ್ನು ಜಿಲ್ಲಾಧಿಕಾರಿಗೆ ಮತ್ತು ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆಯ ಇಇ ಅವರಿಗೆ ಸಲ್ಲಿಸಲಾಗಿದೆ. ಇನ್ನೂ ಅನುದಾನ ಸೌಲಭ್ಯ ದೊರೆತ್ತಿಲ್ಲ. ಅನುದಾನ ದೊರೆತ ತಕ್ಷಣ ಹಾಳಾದ ರಸ್ತೆ ದುರಸ್ತಿ ಮಾಡಿಸುತ್ತೇವೆ’ ಎಂದು ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಶ್ರೀಧರ್ ಹೇಳಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT