ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಷ್ಟಗಿ: ಅನಧಿಕೃತ ಫ್ಲೆಕ್ಸ್ ಹಾವಳಿ

Last Updated 4 ನವೆಂಬರ್ 2017, 8:43 IST
ಅಕ್ಷರ ಗಾತ್ರ

ಕುಷ್ಟಗಿ: ಪಟ್ಟಣದ ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತ ಫ್ಲೆಕ್ಸ್ ಹಾವಳಿ ಮಿತಿಮೀರಿದ್ದು, ಪ್ಲಾಸ್ಟಿಕ್ ನಿಂದ ಮಾಲಿನ್ಯಕ್ಕೆ ಕಾರಣವಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ.
ವಿವಿಧ ರಾಜಕೀಯ ಪಕ್ಷಗಳು, ಸಂಘ ಸಂಸ್ಥೆಗಳ ಕಾರ್ಯಕರ್ತರು, ಬಟ್ಟೆ, ಆಭರಣ ಮತ್ತಿತರ ವ್ಯಾಪಾರಿಗಳು ಸಮಾಜ ಸೇವೆ ಹೆಸರಿನಲ್ಲಿ ಹಬ್ಬ, ಜಯಂತಿ ಅಥವಾ ರಾಜಕೀಯ ಸಭೆ ಸಮಾರಂಭಗಳ ನೆಪದಲ್ಲಿ ಫ್ಲೆಕ್ಸ್ ಗಳನ್ನು ಅಳವಡಿಸುವುದು ಸಾಮಾನ್ಯವಾಗಿದೆ ಎಂದು ತಿಳಿಸಿದ್ದಾರೆ.

ಪ್ರಮುಖ ವೃತ್ತಗಳು, ರಸ್ತೆ ಅಕ್ಕಪಕ್ಕ ರಸ್ತೆ ವಿಭಜಕದಲ್ಲಿ ಇಂಥ ನೂರಾರು ಫ್ಲೆಕ್ಸ್ ಕಣ್ಣಿಗೆ ರಾಚುತ್ತಿವೆ. ಬಸ್‌ ನಿಲ್ದಾಣ, ಸಾರಿಗೆ ಘಟಕ, ಬ್ಯಾಂಕ್, ಸರ್ಕಾರಿ ಕಚೇರಿಗಳು, ಪೊಲೀಸ್ ಠಾಣೆ ಹೀಗೆ ಎಲ್ಲೆಂದರಲ್ಲಿ ಮನಬಂದಂತೆ ನಿಲ್ಲಿಸುವುದಕ್ಕೆ ಪೈಪೋಟಿ ನಡೆಯುತ್ತಿದೆ ಎಂದು ನಿವಾಸಿಗಳಾದ ಬಸವರಾಜ ಕುರುಗೋಡು, ವೀರಭದ್ರಪ್ಪ ತೆಮ್ಮಿನಾಳ ದೂರಿದರು.

ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರ ದೃಷ್ಟಿ ಈ ಫ್ಲೆಕ್ಸ್ ಮೇಲೆ ಹರಿಯುತ್ತಿದ್ದು ಸಂಚಾರ ವ್ಯವಸ್ಥೆಗೂ ಅಡಚಣೆಯಾಗಿದೆ. ಹಾವಳಿ ನಿಯಂತ್ರಿಸುವಲ್ಲಿ ಪುರಸಭೆ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ವೀರಭದ್ರಯ್ಯ ಹಿರೇಮಠ, ಕೆ.ಪ್ರಹ್ಲಾದ್ ಅವರು ಅಸಮಾಧಾನ ವ್ಯಕ್ತಪಡಿಸಿದರು.

ಪುರಸಭೆಯಿಂದ ಪರವಾನಗಿ ಪಡೆದು ನಿಗದಿಪಡಿಸಿದ ಸ್ಥಳದಲ್ಲಿ ಮಾತ್ರ ಹಾಕಬೇಕು. ಆದರೆ ಸದ್ಯ ಕಂಡುಬರುವ ಫ್ಲೆಕ್ಸ್‌ ನಿಯಮಬಾಹಿರವಾಗಿವೆ ಎಂದು ಪುರಸಭೆ ಮೂಲಗಳು ತಿಳಿಸಿವೆ.ತೆರವಿಗೆ ಮುಂದಾದರೆ ಜಾತಿ, ರಾಜಕೀಯ ಪಕ್ಷ, ಕೆಲ ಸಂಘಟನೆಗಳಿಗೆ ಸೇರಿದ ವ್ಯಕ್ತಿಗಳು ಅಡ್ಡಿಪಡಿಸುತ್ತಿದ್ದಾರೆ ಎಂದು ಹೆಸರು ಪ್ರಕಟಿಸಲು ಇಚ್ಛಿಸದ ಪುರಸಭೆ ಅಧಿಕಾರಿ ತಿಳಿಸಿದರು.

ಎಲ್ಲ ತರಹದ ಪ್ಲಾಸ್ಟಿಕ್ ನಿಷೇಧ ಜಾರಿಯಲ್ಲಿದ್ದು, ಕಟ್ಟುನಿಟ್ಟಿನ ಕ್ರಮಕ್ಕೆ ಈ ಹಿಂದೆ ಜಿಲ್ಲಾಡಳಿತ ಪುರಸಭೆಗೆ ಸೂಚಿಸಿತ್ತು. ಅಧಿಕಾರಿಗಳ ಕಟ್ಟುನಿಟ್ಟಿನ ಕ್ರಮದಿಂದ ಫ್ಲೆಕ್ಸ್ ಹಾವಳಿ ನಿಯಂತ್ರಣದಲ್ಲಿತ್ತು. ಆದರೆ ಇತ್ತೀಚಿಗೆ ಅಂಥ ಯಾವುದೇ ನಿರ್ಬಂಧ ಇಲ್ಲದಿರುವುದೆ ಅನಧಿಕೃತ ಪ್ರಚಾರ ಫಲಕ ಅಳವಡಿಸುವವರ ಸಂಖ್ಯೆ ಮಿತಿ ಮೀರಿದೆ.

‘ಪ್ರಜಾವಾಣಿ’ಗೆ ವಿವರಿಸಿದ ಪುರಸಭೆ ನೈರ್ಮಲ್ಯ ವ್ಯವಸ್ಥೆ ಪ್ರಭಾರ ಸಿಬ್ಬಂದಿ ಶಾಂತಪ್ಪ, ಫ್ಲೆಕ್ಸ್ ಎಲ್ಲವೂ ಅನಧಿಕೃತವಾಗಿವೆ. ಮೇಲಧಿಕಾರಿಗಳ ಗಮನಕ್ಕೆ ತಂದು ತೆರವಿಗೆ ಕ್ರಮ ಕೈಗೊಳ್ಳುವುದಾಗಿ ಹೇಳಿದರು.

ಪುರಸಭೆ ಅನುಮತಿ ನೀಡಿದ ಸ್ಥಳದಲ್ಲಿ ಫ್ಲೆಕ್ಸ್ ಅಳವಡಿಸಬೇಕು. ಅನಧಿಕೃತವಾಗಿದ್ದರೆ ಪುರಸಭೆಯವರೇ ಕ್ರಮ ಜರುಗಿಸಬೇಕಾಗುತ್ತದೆ ಎಂದು ಪೊಲೀಸ್ ಇನ್‌ ಸ್ಪೆಕ್ಟರ್‌ ಸುರೇಶ ತಳವಾರ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT