ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ಸಾಧಕರಿಗೆ ವಯಸ್ಸು ಕೇವಲ ಸಂಖ್ಯೆಯಷ್ಟೆ

Last Updated 4 ನವೆಂಬರ್ 2017, 9:06 IST
ಅಕ್ಷರ ಗಾತ್ರ

ಮೈಸೂರು: ‘ವಯಸ್ಸು ಕೇವಲ ಸಂಖ್ಯೆಯಷ್ಟೆ. ಮನಸ್ಸಿಗೆ ಮುಪ್ಪು ಆಗದಂತೆ ನೋಡಿಕೊಂಡರೆ 70–80ರ ಹರೆಯದಲ್ಲೂ ಲವಲವಿಕೆಯಿಂದ ಜೀವನ ಸಾಗಿಸಬಹುದು. ನಿವೃತ್ತಿಯ ಬಳಿಕವೂ ಸಾಧಿಸಲು ಸಾಕಷ್ಟಿದೆ’ ಚಾಮುಂಡಿ ವಿಹಾರ ಕ್ರೀಡಾಂ ಗಣದ ಈಜುಕೊಳದಲ್ಲಿ ನಡೆದ 14ನೇ ರಾಷ್ಟ್ರೀಯ ಮಾಸ್ಟರ್ಸ್‌ ಈಜು ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಂಡಿದ್ದ ಕೆಲ ಹಿರಿಯ ಸ್ಪರ್ಧಿಗಳಲ್ಲಿ ‘ನಿಮ್ಮ ವಯಸ್ಸೆಷ್ಟು’ ಎಂದು ಕೇಳಿದಾಗ ಈ ಮೇಲಿನ ಉತ್ತರ ದೊರೆಯುತ್ತಿತ್ತು.

ನಿವೃತ್ತಿಯ ಬಳಿಕ ‘ಎಲ್ಲವೂ ಮುಗಿಯಿತು’ ಎಂದು ಭಾವಿಸಿ ಕೈಕಟ್ಟಿ ಕುಳಿತುಕೊಂಡವರಿಗೆ ಈ ಹಿರಿಯ ಸಾಧಕರ ಜೀವನ ಕ್ರಮ ಒಂದು ಪಾಠದಂತಿದೆ. ಈಜು ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಸಾಕಷ್ಟು ದೈಹಿಕ ಶ್ರಮ ಅಗತ್ಯ.  80ರ ಇಳಿವಯಸ್ಸಿನಲ್ಲೂ 100 ಮೀ, 200 ಮೀ. ದೂರ ಈಜುವ ಈ ಹಿರಿಯರ ತಾಕತ್ತು ಹಲವರನ್ನು ಅಚ್ಚರಿಯಲ್ಲಿ ಕೆಡವಿದೆ.

ಈಜುಕೂಟಕ್ಕೆ ಬಂದಿದ್ದ ಹಿರಿಯರು ಫಿಟ್‌ನೆಸ್‌ ಕಾಪಾಡಲು ಪ್ರತಿದಿನ ವಿವಿಧ ದೈಹಿಕ ಕಸರತ್ತು ನಡೆಸುತ್ತಾರೆ. ಜಾಗಿಂಗ್‌, ಯೋಗ, ಸೈಕ್ಲಿಂಗ್‌, ಧ್ಯಾನ, ನಡಿಗೆ... ಹೀಗೆ ಒಂದಿಲ್ಲೊಂದು ಚಟುವಟಿಕೆ ಮೂಲಕ ಈ ವಯಸ್ಸಿನಲ್ಲೂ ದೈಹಿಕ ಸಾಮರ್ಥ್ಯ ಕಾಪಾಡಿಕೊಂಡಿದ್ದಾರೆ.

ಗುಜರಾತಿನ ವಡೋದರದ 80ರ ಹರೆಯದ ಭಗವತಿ ಓಜಾ ಮತ್ತು ಮಹಾರಾಷ್ಟ್ರದ 86ರ ಹರೆಯದ ರಂಭಾಜಿ ಬಾಬಾಜಿ ವಾಘ್ಮುರೆ ‌ಅವರು ಕೂಟದಲ್ಲಿ ಪದಕ ಗೆದ್ದ ಅತಿಹಿರಿಯರು ಎಂಬ ಗೌರವ ಪಡೆದುಕೊಂಡಿದ್ದಾರೆ. ‘ವಯಸ್ಸಾಗುತ್ತಿದೆ ಎಂಬ ಭಾವನೆ ಮನಸ್ಸಿನಲ್ಲಿ ಮೂಡಿದರೆ ನಮ್ಮ ಅವನತಿ ಆರಂಭವಾಗುತ್ತದೆ. ಅಂತಹ ಭಾವನೆಗೆ ನನ್ನ ಮನಸ್ಸಿನಲ್ಲಿ ಸ್ಥಾನ ನೀಡಿಲ್ಲ’ ಎಂದು ಭಗವತಿ ಹೇಳುತ್ತಾರೆ.

ಸೂರತ್‌ನಿಂದ ಬಂದಿದ್ದ ಸ್ಪರ್ಧಿ ಬಕುಲಾ ಬೆಲ್‌ ಪಟೇಲ್‌ 74ರ ಇಳಿ ವಯಸ್ಸಿನಲ್ಲೂ ಉತ್ಸಾಹದ ಬುಗ್ಗೆ ಯಂತಿದ್ದಾರೆ. ಬಕುಲಾ ಅವರು ವಿದೇಶಗಳಲ್ಲಿ ನಡೆದಿದ್ದ ಮಾಸ್ಟರ್ಸ್‌ ಈಜು ಚಾಂಪಿಯನ್‌ಷಿಪ್‌ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿ ಪದಕ ಜಯಿಸಿದ್ದಾರೆ.

ಹಿರಿಯಜ್ಜ ರಂಭಾಜಿ: ಮಹಾರಾಷ್ಟ್ರದ ಅಹ್ಮದ್‌ ನಗರದ ರಂಭಾಜಿ ಕಳೆದ ಎರಡೂವರೆ ದಶಕಗಳಿಂದ ಮಾಸ್ಟರ್ಸ್‌ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊ ಳ್ಳುತ್ತಿದ್ದು, ಈಗಾಗಲೇ 100ಕ್ಕೂ ಅಧಿಕ ಪದಕಗಳನ್ನು ಗೆದ್ದುಕೊಂಡಿದ್ದಾರೆ. ‘ಈ ಹಿಂದೆ ಕೂಡಾ ಮಾಸ್ಟರ್ಸ್‌ ಕೂಟಗಳಲ್ಲಿ ಪಾಲ್ಗೊಳ್ಳಲು ಕರ್ನಾಟಕಕ್ಕೆ ಬಂದಿದ್ದೆ. ಮೈಸೂರು ಅಂದರೆ ತುಂಬಾ ಇಷ್ಟ’ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ದೆಹಲಿಯ ಮಾಯ್‌ ಚಂದ್‌, ಮಹಾರಾಷ್ಟ್ರದ ಪುರುಷೋತ್ತಮ್‌ ಶಂಕರ್‌, ರಾಮಕೃಷ್ಣ, ಕರ್ನಾಟಕದ ನಾರಾಯಣ ಸ್ವಾಮಿ, ತಮಿಳುನಾಡಿನ ಮುತ್ತುಕುಮಾರ ಸ್ವಾಮಿ, ದೆಹಲಿಯ ಶಂಶೇರ್‌ ಸಿಂಗ್‌ ಇವರೆಲ್ಲರೂ 75 ವರ್ಷಕ್ಕಿಂತ ಮೇಲಿನ ವಿಭಾಗಗಳಲ್ಲಿ ಸ್ಪರ್ಧಿಸಿ ಪದಕ ಗೆದ್ದ ಸಾಧನೆ ಮಾಡಿದ್ದಾರೆ.

‘ಬೆಳಿಗ್ಗೆ ಬೇಗನೇ ಎದ್ದು ಸುಮಾರು 10 ಕಿ.ಮೀ. ನಷ್ಟು ಜಾಗಿಂಗ್‌ ನಡೆಸುತ್ತೇನೆ. ಯೋಗ, ಧ್ಯಾನ ತಪ್ಪದೇ ಮಾಡುತ್ತೇನೆ. ಆದ್ದರಿಂದ ಈ ವಯಸ್ಸಿನಲ್ಲೂ ಆರೋಗ್ಯದಿಂದಿದ್ದೇನೆ’ ಎಂದು ಶಂಶೇರ್‌ ಹೇಳುವರು.

ಮೂರು ದಿನಗಳ ಈಜು ಚಾಂಪಿ ಯನ್‌ಷಿಪ್‌ಗೆ ಶುಕ್ರವಾರ ತೆರೆ ಬಿತ್ತು. ಸಾಂಸ್ಕೃತಿಕ ನಗರಿಯ ಈಜುಕೊಳದಲ್ಲಿ ಮಿಂದೆದ್ದ ಹಿರಿಯ ಜೀವಗಳು ಮಧುರ ನೆನಪುಗಳನ್ನು ಕಟ್ಟಿಕೊಂಡು ತಮ್ಮ ಊರಿನತ್ತ ಪ್ರಯಾಣ ಬೆಳೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT