ಸೋಮವಾರ, ಮಾರ್ಚ್ 8, 2021
29 °C

ಗಿರಿಧಾಮಗಳ ಮಹಾರಾಣಿ ಮಹಾಬಲೇಶ್ವರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗಿರಿಧಾಮಗಳ ಮಹಾರಾಣಿ ಮಹಾಬಲೇಶ್ವರ

ಇಲ್ಲೊಂದು ಕಲ್ಲಿನ ಕುರ್ಚಿ ಇದೆ. ಕುಳಿತರೆ ಕಾಣುವ ಕತ್ತರಿಸಿದಂತಿರುವ ಗಿರಿಶ್ರೇಣಿಗಳು. ಅವುಗಳ ನಡುವಿನ ಆಳ ಕಣಿವೆ. ಕಣಿವೆಯೊಳಗೆ ಹಾವಿನಂತೆ ಹರಿಯುವ ಸಾವಿತ್ರಿ ನದಿ. ಬ್ರಿಟಿಷ್ ಅಧಿಕಾರಿ ಅರ್ಥರ್ ಎಂಬಾತ ಇಲ್ಲಿಯೇ ಕುಳಿತು ನೂರಾರು ಅಡಿ ಕೆಳಗೆ ಬಳಕುತ್ತ ಹರಿಯುವ ಸಾವಿತ್ರಿ ನದಿಯನ್ನೇ ಗಂಟೆಗಟ್ಟಲೆ ದಿಟ್ಟಿಸಿ ನೋಡುತ್ತಿದ್ದನಂತೆ. ದೋಣಿ ಮುಗುಚಿ ಅವನ ಹೆಂಡತಿ ಮತ್ತು ಮಗು ನದಿಯಲ್ಲಿ ಕೊಚ್ಚಿ ಹೋಗಿದ್ದರು. ಅಂದಿನಿಂದ ಅರ್ಥರ್‌ಗೆ ಇದೇ ದಿನಚರಿ. ಹಾಗಾಗಿ ಈ ಪಾಯಿಂಟ್‍ಗೆ ಅರ್ಥರ್ ಸೀಟ್ ಎಂದೇ ಹೆಸರಿಟ್ಟಿದ್ದಾರೆ.

ಮಹಾಬಲೇಶ್ವರದಲ್ಲಿ ಇಂಥ ವೀವ್ ಪಾಯಿಂಟ್‍ಗಳು ಅವೆಷ್ಟೋ ಇವೆ. ಸೌಂದರ್ಯದಲ್ಲಿ ಒಂದಕ್ಕೊಂದು ಪೈಪೋಟಿಗಿಳಿಯುವಷ್ಟು ಚೆಂದ. ಸಹ್ಯಾದ್ರಿ ಗಿರಿಶ್ರೇಣಿಯಲ್ಲಿರುವ ಮಹಾಬಲೇಶ್ವರ ಪುಟ್ಟ ಪಟ್ಟಣ. ಹಳೆ ಮಹಾಬಲೇಶ್ವರ ಮತ್ತು ಮಹಾಬಲೇಶ್ವರ ಎಂದು ಎರಡು ಹೋಳಾಗಿದೆ. ನೋಡಲು ಹೆಚ್ಚು ಸ್ಥಳಗಳಿರುವುದು ಹಳೆ ಮಹಾಬಲೇಶ್ವರದಲ್ಲಿ. ನಿತ್ಯ ಹರಿದ್ವರ್ಣದ ಕಾಡುಗಳನ್ನು ಹೊಂದಿರುವ ಮಹಾಬಲೇಶ್ವರ, ಬ್ರಿಟಿಷರ ಆಡಳಿತದಲ್ಲಿ ಮುಂಬೈ ಪ್ರಾಂತ್ಯದ ಬೇಸಿಗೆ ರಾಜಧಾನಿಯಾಗಿತ್ತು.

ಸತಾರ ಜಿಲ್ಲೆಯಲ್ಲಿರುವ ಮಹಾಬಲೇಶ್ವರ ಒಂದು ಗಿರಿಧಾಮ. ಬೆಂಗಳೂರಿನಿಂದ ಇಲ್ಲಿಗೆ ಸಾಕಷ್ಟು ಬಸ್ಸುಗಳಿವೆ. ಸತಾರದವರೆಗೆ ರೈಲಿದೆ. ಸಮೀಪದ ವಿಮಾನ ನಿಲ್ದಾಣ ಪುಣೆಯಲ್ಲಿದೆ.

ಲಿಂಗ ಸ್ವರೂಪ: ನೆಲದಿಂದ ಸ್ವಲ್ಪ ಮೇಲಕ್ಕೆ ಚಾಚಿಕೊಂಡಿರುವ, ಅಗಲವಾದ ಲಿಂಗ ಸ್ವರೂಪ ಮಹಾಬಲೇಶ್ವರ. ಈ ದೇವಾಲಯದ ಇತಿಹಾಸ ಕ್ರಿಸ್ತಶಕ 1215ರಿಂದ ಆರಂಭವಾಗುತ್ತದೆ. ದೇವಗಿರಿಯ ರಾಜ ಇಲ್ಲಿ ಚಿಕ್ಕ ದೇವಾಲಯ ನಿರ್ಮಿಸಿ ಕೃಷ್ಣೆಯ ನೀರು ಉಗಮವಾಗುವಲ್ಲಿ ಚಿಕ್ಕ ಕಲ್ಯಾಣಿಯೊಂದನ್ನು ಕಟ್ಟುತ್ತಾನೆ. ಮುಂದೆ ಸ್ಥಳೀಯ ರಾಜನನ್ನು ಸೋಲಿಸಿದ ಮರಾಠರು ಇಂದಿನ ಸ್ವರೂಪದ ದೇವಾಲಯವನ್ನು ನಿರ್ಮಿಸುತ್ತಾರೆ. 17ನೇ ಶತಮಾನದಲ್ಲಿ ಶಿವಾಜಿಯ ವಶವಾಗುತ್ತದೆ. ಇಲ್ಲಿಂದ 60 ಕಿ.ಮೀ. ದೂರದಲ್ಲಿ ಪ್ರತಾಪಗಡದಲ್ಲಿ ಕೋಟೆ ನಿರ್ಮಿಸುತ್ತಾನೆ.

1819ರಲ್ಲಿ ಬ್ರಿಟಿಷರು ಸತಾರ ರಾಜನ ಆಡಳಿತದ ಗಡಿಯಾಗಿ ಮಹಾಬಲೇಶ್ವರವನ್ನು ಗುರುತಿಸುತ್ತಾರೆ. ಕರ್ನಲ್ ಲಾಡ್ವಿಕ್ ಸತಾರದ ಆಡಳಿತಾಧಿಕಾರಿ. ಈತನ ನೇತೃತ್ವದಲ್ಲಿ ಸೈನಿಕರ ತಂಡವೊಂದು ಮಹಾಬಲೇಶ್ವರವನ್ನು ಚಾರಣದ ಮೂಲಕ ಏರುತ್ತದೆ. ಅವರು ತಲುಪಿದ ಸ್ಥಳ ಈಗ ಲಾಡ್ವಿಕ್ ವೀವ್‍ಪಾಯಿಂಟ್ ಎಂದು ಹೆಸರಾಗಿದೆ. ಹಲವು ವೀವ್ ಪಾಯಿಂಟ್‍ಗಳಿಗೆ ಬ್ರಿಟಿಷ ಅಧಿಕಾರಿಗಳ ಹೆಸರೇ ಉಳಿದುಕೊಂಡಿದೆ. ಆರ್ಥರ್ ಪಾಯಿಂಟ್, ಕೇಟ್ಸ್ ಪಾಯಿಂಟ್, ವಿಲ್ಸನ್ ಪಾಯಿಂಟ್ ಇತ್ಯಾದಿ.

ನಿಸರ್ಗದ ಮನಮೋಹಕ ದೃಶ್ಯಗಳನ್ನು ಕಟ್ಟಿಕೊಡುವ ವೀವ್ ಪಾಯಿಂಟ್‍ಗಳು ಮಹಾಬಲೇಶ್ವರದ ಹೆಗ್ಗಳಿಕೆ. ಇದರೊಂದಿಗೆ ಬ್ರಿಟಿಷರ ಕಾಲದ ಎರಡು ಬಂಗಲೆಗಳು, ರಾಜಭವನ ಮತ್ತು ಬಾಬಿಂಗ್ಟನ್ ಹೌಸ್ ಪ್ರಮುಖ ಆಕರ್ಷಣೆಗಳಾಗಿವೆ.

ಗಾಂಧೀಜಿ ಅವರ ಮೂರು ಮಂಗಗಳನ್ನು ನೆನಪಿಸುವ ಪರ್ವತಗಳನ್ನು ನೋಡಬಹುದಾದ ಮಂಕಿ ಪಾಯಿಂಟ್, ನಿಂತ ಆನೆಯಂತೆ ಕಾಣಿಸುವ ಕರಿಗಲ್ಲಿನ ಗುಡ್ಡೆಯನ್ನು ಹೊಂದಿರುವ ಎಲಿಫಂಟ್ ಹೆಡ್ ಪಾಯಿಂಟ್, ಸೊಂಡಿಲಿನ ನಡುವೆ ಕಿರು ಜಾಗವನ್ನೂ ಹೊಂದಿರುವುದರಿಂದ ನೀಡಲ್ ಪಾಯಿಂಟ್, ಪೂರ್ವದಲ್ಲಿ ಬಳಕವಾಡಿ ಮತ್ತು ಧೋಮ್ ಸರೋವರಗಳ ವಿಹಂಗಮ ನೋಟವನ್ನು ಕಟ್ಟಿಕೊಡುವ ಕೇಟ್ಸ್ ಪಾಯಿಂಟ್ ಕೆಲವು ವೀವ್ ಪಾಯಿಂಟ್‍ಗಳು. 1923ರಿಂದ ಮೂರು ವರ್ಷಗಳವರೆಗೆ ಮುಂಬೈ ಗವರ್ನರ್ ಆಗಿದ್ದ ಲೆಸ್ಲಿ ವಿಲ್ಸನ್ ನೆನಪಿಗಾಗಿ ವಿಲ್ಸನ್ ಪಾಯಿಂಟ್ ಸಹ ಇದೆ. ಸಮುದ್ರಮಟ್ಟದಿಂದ 1439 ಅಡಿ ಎತ್ತರದಲ್ಲಿರುವ ಈ ಪಾಯಿಂಟ್‍ನಿಂದ ಸೂರ್ಯೋದಯ ಮತ್ತು ಸೂರ್ಯಾಸ್ತಗಳೆರಡನ್ನೂ ಕಾಣಬಹುದು.

ವೆನ್ನಾ (ವೇಣಿ) ಸರೋವರ ಮಹಾಬಲೇಶ್ವರದ ಇನ್ನೊಂದು ಆಕರ್ಷಣೆ. ಬೃಹತ್ ಮರಗಳಿಂದ ಸುತ್ತುವರೆದಿರುವ ಈ ಸರೋವರ ಜಲಕ್ರೀಡೆಗಳ ವಿವಿಧ ಸೌಲಭ್ಯಗಳನ್ನು ಹೊಂದಿದೆ. ಪಟ್ಟಣದ ನಡುವೆಯೇ ಇರುವುದರಿಂದ ವ್ಯಾಪಾರಿ ಸ್ಥಳವೂ ಹೌದು.

ಸ್ಟ್ರಾಬೆರಿ ಹಣ್ಣುಗಳಿಗೆ ಮಹಾಬಲೇಶ್ವರ ಹೆಸರುವಾಸಿ. ಇದಕ್ಕೆ ಹೊಂದಿಕೊಂಡಿರುವ ಪಂಚಗಣಿ ಗಿರಿಧಾಮಕ್ಕೆ ಹೋಗುವ ಹಾದಿಯಲ್ಲಿ ಸ್ಟ್ರಾಬೆರಿ ಉತ್ಪನ್ನಗಳ ಬೃಹತ್ ಕಂಪೆನಿ ಮ್ಯಾಪ್ರೊ ಈ ಅಪರೂಪದ ಹಣ್ಣಿನ ಪರಿಚಯ ಮಾಡಿಸುತ್ತದೆ. ದೇಶದ ಒಟ್ಟು ಸ್ಟ್ರಾಬೆರಿ ಹಣ್ಣುಗಳ ಶೇ 85ರಷ್ಟು ಫಸಲು ಇಲ್ಲಿಂದಲೇ ಬರುತ್ತದೆ.

ಬಿರುಬೇಸಿಗೆಯಲ್ಲಿಯೂ ತಣ್ಣಗಿರುವ ಮಹಾಬಲೇಶ್ವರವನ್ನು ಮಹಾರಾಷ್ಟ್ರದ ಗಿರಿಧಾಮಗಳ ಮಹಾರಾಣಿ ಎಂದು ಬಣ್ಣಿಸಲಾಗಿದೆ. ವರ್ಷದ ಯಾವ ದಿನವೂ ಇಲ್ಲಿಗೆ ಭೇಟಿ ನೀಡಬಹುದು. ಆದರೆ ಜೂನ್‍ನಿಂದ ಅಕ್ಟೋಬರ್‌ ವರೆಗಿನ ಮಳೆಗಾಲ ಇನ್ನಷ್ಟು ಖುಷಿಕೊಡುತ್ತದೆ.

ಕರ್ನಾಟಕದ ನಂಟು 

ಮಹಾಬಲೇಶ್ವರಕ್ಕೂ ಕರ್ನಾಟಕಕ್ಕೂ ಅವಿನಾಭಾವ ಸಂಬಂಧ. ಉತ್ತರ ಕರ್ನಾಟಕದ ದಾಹ ತಣಿಸುವ ಕೃಷ್ಣಾ ನದಿಯ ಉಗಮ ಸ್ಥಾನ ಇದು. ಉಗಮ ಸ್ಥಾನದಲ್ಲಿ ಪುರಾತನ ಕೃಷ್ಣಾಬಾಯಿ ಮಂದಿರವಿದೆ. ಕೊಯ್ನಾ ನದಿ ಉಗಮವೂ ಇಲ್ಲಿದೆ. ಕರಾಡ್ ಎಂಬಲ್ಲಿ ಈ ಎರಡು ನದಿಗಳು ಸಂಗಮಿಸಿ ಮುಂದೆ ಹರಿಯುತ್ತವೆ. ಪುರಾಣ ಕತೆಯ ಪ್ರಕಾರ ಸಾವಿತ್ರಿಯ ಶಾಪದಿಂದಾಗಿ ತ್ರಿಮೂರ್ತಿಗಳು ಇಲ್ಲಿ ನದಿಗಳಾಗಿ ಜನಿಸುತ್ತಾರೆ. ವಿಷ್ಣು ಕೃಷ್ಣಾ ನದಿಯಾದರೆ, ಅದರ ಉಪನದಿಗಳಾದ ವೆನ್ನಾ (ವೇಣಿ) ಮತ್ತು ಕೊಯ್ನಾ ಶಿವ ಮತ್ತು ಬ್ರಹ್ಮನ ರೂಪಗಳು. ಸಾವಿತ್ರಿ ಮತ್ತು ಗಾಯತ್ರಿ ಎಂಬ ಇನ್ನೆರಡು ಉಪನದಿಗಳೂ ಹುಟ್ಟುತ್ತವೆ. ಈ ಎಲ್ಲ ನದಿಗಳ ಉಗಮ ಸ್ಥಾನ ಪಂಚಗಂಗಾ ದೇವಾಲಯದಲ್ಲಿ ಗೋಮುಖದಿಂದ ನೀರು ಸತತವಾಗಿ ಧಮ್ಮಿಕ್ಕುತ್ತಿರುತ್ತದೆ.

ಅಮೃತ್ ಜೋಗಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.