ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾಗೃತ ಪ್ರಜ್ಞೆಯ ಲೇಖಕಿ ಕೃಷ್ಣಾ ಸೋಬ್ತಿ

Last Updated 4 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಡಾ.ಎಚ್.ಎಂ.ಕುಮಾರಸ್ವಾಮಿ

‘ಲೇಖಕನಾದವನು ಒಬ್ಬ ವ್ಯಕ್ತಿಯ, ಸಮಾಜದ, ದೇಶ ಮತ್ತು ಕಾಲದ ಸದ್ದು–ಗದ್ದಲ ಮತ್ತು ಹೊಯ್ದಾಟಗಳನ್ನು ಆಲಿಸುತ್ತಾನೆ. ಅವುಗಳನ್ನು ಅನ್ವೇಷಿಸುತ್ತಾನೆ. ಅವೆಲ್ಲವನ್ನೂ ತನ್ನ ರಚನಾ ಪ್ರಕ್ರಿಯೆಯೊಳಗೆ ಪರಿಭಾವಿಸುತ್ತಾನೆ. ಲೇಖನವೆಂದರೆ ಕೇವಲ ಬರೆಯುವುದಷ್ಟೇ ಅಲ್ಲ, ಬದಲಾಗಿ ಬದುಕುವುದು, ಎದುರಿಸುವುದು... ಇವುಗಳ ಮಧ್ಯೆಯೇ ಬೆಳೆಯುತ್ತಾ ಹೋಗುವುದು. ಕ್ಷಣಕ್ಷಣಕ್ಕೂ ಬೆಳೆಯುತ್ತಾ ಸತ್ಯದ ಹುಡುಕಾಟ ಮತ್ತು ಮೌಲ್ಯಗಳನ್ನು ಗುರುತಿಸುತ್ತ ಅವನ್ನು ಸಾಹಿತ್ಯದ ಪರಿಧಿಯೊಳಗೆ ತರುವುದು. ಜೀವನ ಮತ್ತು ಕಲೆಯನ್ನು ಭಿನ್ನವಾಗಿ ನೋಡದೆ, ಗತ ಮತ್ತು ವರ್ತಮಾನದ ಕೊಂಡಿಗಳನ್ನು ಗಟ್ಟಿಗೊಳಿಸುತ್ತಾ, ಬದುಕಿನ ಅನಂತ ಸಂಬಂಧಗಳನ್ನು ಪ್ರೀತಿಸುತ್ತಾ ಸಾಗುವುದು... ಇವು ಒಬ್ಬ ಲೇಖಕನಿಗೆ ಇರಬೇಕಾದ ಮೂಲ ದ್ರವ್ಯಗಳು. ಇವುಗಳ ಸಮರ್ಪಕ ನಿರ್ವಹಣೆಯಿಂದ ಮಾತ್ರ ಗಟ್ಟಿ ಸಾಹಿತ್ಯ ಕೃತಿಗಳನ್ನು ನೀಡಲು ಸಾಧ್ಯ...’

ಇದು ಕೆಲ ಸಮಯದ ಹಿಂದೆ ನೀಡಿದ್ದ ಒಂದು ಸುದೀರ್ಘ ಸಂದರ್ಶನದಲ್ಲಿ ಹಿಂದಿ ಲೇಖಕಿ ಕೃಷ್ಣಾ ಸೋಬ್ತಿ ಅವರು ವ್ಯಕ್ತಪಡಿಸಿದ್ದ ‘ಸಾಹಿತ್ಯ–ಬದುಕು’ ಕುರಿತಾದ ಅನಿಸಿಕೆ.

ಹೀಗೆ ಬದುಕು ಮತ್ತು ಸಾಹಿತ್ಯ ಎರಡನ್ನೂ ಬೇರೆಬೇರೆಯಾಗಿ ನೋಡದೆ, ಸಮತೋಲಿತ ಬದುಕು– ಬರಹದ ಹಿಂದಿ ಭಾಷೆಯ ಅಗ್ರಮಾನ್ಯ ಲೇಖಕಿ ಕೃಷ್ಣಾ ಸೋಬ್ತಿ ಅವರಿಗೆ 2017ರ ‘ಜ್ಞಾನಪೀಠ’ ಪ್ರಶಸ್ತಿ ಸಂದಿದೆ. ಹಿಂದಿಯಲ್ಲಿ ಜ್ಞಾನಪೀಠ ಪ್ರಶಸ್ತಿ ಪಡೆದವರಲ್ಲಿ ಕೃಷ್ಣ ಸೋಬ್ತಿ ಹನ್ನೊಂದನೆಯವರು.

ಪ್ರಸ್ತುತ ದೆಹಲಿಯಲ್ಲಿ ಪತಿ, ಡೋಗ್ರಿ ಭಾಷೆಯ ಲೇಖಕ ಶಿವನಾಥ್‌ರೊಂದಿಗೆ ನೆಲೆಸಿರುವ ಕೃಷ್ಣಾ ಸೋಬ್ತಿಯವರು ಮೂಲತಃ ಪಾಕಿಸ್ತಾನದ ಗುಜರಾತಿನವರು. 1925ರ ಫೆಬ್ರುವರಿ 18ರಂದು ಜನಿಸಿದ ಸೋಬ್ತಿಯವರದು ಒಂದರ್ಥದಲ್ಲಿ ಅಲೆದಾಟದ ಬದುಕು. ಶಿಕ್ಷಣಕ್ಕಾಗಿ ದೆಹಲಿ, ಶಿಮ್ಲಾ, ಲಾಹೋರ್ (ಫತೀಹ್ ಚಂದ್‌ ಕಾಲೇಜು) ಹೀಗೆ ಅಲೆದಾಡಿ, ಕೊನೆಗೆ ಹಿಂದೂಸ್ತಾನದಲ್ಲಿ ನೆಲೆನಿಂತರು. ತಮ್ಮ ಬಾಲ್ಯವನ್ನು ಶಿಮ್ಲಾದಲ್ಲಿ ಕಳೆದ ಇವರಿಗೆ, ಶಿಮ್ಲಾದ ನಂಟು ಮಾಸದ ನೆನಪು. ಅಲ್ಲಿನ ಬೆಟ್ಟಗುಡ್ಡಗಳ ಏರಿಳಿತದ ಕಡಿದಾದ ದಾರಿಗಳು, ಚುಮುಚುಮು ಚಳಿ, ಮಾಲ್ ಪ್ರದೇಶದ ಚರ್ಚಿನ ಘಂಟೆಯ ನಿನಾದ, ಸೂರ್ಯನಿಗೆ ಸವಾಲೊಡ್ಡುವ ಹಿಮದ ಹೊದಿಕೆ... ಈ ಎಲ್ಲವನ್ನೂ ಆತ್ಮೀಯರೊಂದಿಗೆ ಬಿಚ್ಚಿಡುತ್ತಾರೆ. 1980ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಪುರಸ್ಕಾರ ಪಡೆದ ಅವರ ಕೃತಿ ‘ಜಿಂದಗೀ ನಾಮ’ದಲ್ಲಿ ಶಿಮ್ಲಾದ ಬೆಚ್ಚನೆಯ ನೆನಪು ಅಲ್ಲಿನ ವಿಶಿಷ್ಟ ಪಾತ್ರಗಳ ಮುಖೇನ ತೆರೆದುಕೊಂಡಿದೆ.

1950ರಲ್ಲಿ ಅವರು ಬರೆದ ಮೊದಲ ಕಥೆ ‘ಲಾಮಾ’ದ ಮೂಲಕ ಸಾಹಿತ್ಯವನ್ನು ಪ್ರವೇಶ ಮಾಡಿದ ಸೋಬ್ತಿಯವರು ಮತ್ತೆ ಹಿಂತಿರುಗಿ ನೋಡಲೇ ಇಲ್ಲ. 92ರ ಇಳಿ ವಯಸ್ಸಿನಲ್ಲಿಯೂ ಸಾಹಿತ್ಯ ಕೃಷಿಯಲ್ಲಿ ತೊಡಗಿರುವ ಕೃಷ್ಣಾ ಸೋಬ್ತಿಯವರು ಇತ್ತೀಚೆಗಷ್ಟೇ ‘ಬುದ್ಧ್‌ ಕಾ ಕಮಂಡಲ್; ಲಡಾಖ್’ ಹಾಗೂ ‘ಗುಜರಾತ್ ಪಾಕಿಸ್ತಾನ್‌ ಸೇ ಗುಜರಾತ್ ಹಿಂದೂಸ್ತಾನ್’ ಎಂಬ ಎರಡು ಕೃತಿಗಳನ್ನು ಪ್ರಕಟಿಸಿದ್ದಾರೆ.

ಸೂರಜ್ ಮುಖೀ, ದಿಲೋದಾನೀಷ್, ಏ ಲಡಕೀ, ಡಾರ್‌ಸೇ ಬಿಛುಡೇ, ಜಿಂದಗೀ ನಾಮ, ಸಮಯ್ ಸರಗಮ್, ಮಿತ್ರೋ ಮರ್‌ಜಾನಿ, ಹಮ್ ಶಹಮತ್ ಮುಂತಾದ ಕಾದಂಬರಿಗಳನ್ನು ಹಾಗೂ ಬಾದಲೋಂಕೇ ಘೇರೇ, ತೀನ್ ಪಹಾಡ್, ಮೇರಿ ಮಾ, ಕಹಾಂ ಸಿಬ್‌ಕಾ ಬದಲ್ ಮುಂತಾದ ಕಥಾ ಸಂಗ್ರಹಗಳನ್ನು ಹಿಂದಿ ಸಾಹಿತ್ಯ ಲೋಕಕ್ಕೆ ನೀಡಿದ್ದಾರೆ.

ಸೋಬ್ತಿಯವರ ಎಲ್ಲ ರಚನೆಗಳಲ್ಲಿ ಅವರ ಪ್ರಖರವಾದ ವೈಚಾರಿಕತೆ, ಸ್ತ್ರೀಪರವಾದ ಗಟ್ಟಿ ನಿಲುವು, ಗಂಡು ಹೆಣ್ಣಿನ ಸಂಬಂಧ, ಶೀಲ–ಅಶ್ಲೀಲತೆಯ ಬಗ್ಗೆ ನೇರನುಡಿಗಳು ವ್ಯಕ್ತವಾಗುತ್ತವೆ. ಸಾಮಾಜಿಕ ಅಸಮಾನತೆ ವಿರುದ್ಧ ಸ್ಪಷ್ಟವಾದ ನಿಲುವು ವ್ಯಕ್ತವಾಗುವುದರಿಂದಲೇ ಪರ–ವಿರೋಧ ಅಭಿಪ್ರಾಯಗಳನ್ನು ಅವರು ನಿರಂತರವಾಗಿ ಎದುರಿಸುತ್ತಲೇ ಬಂದಿದ್ದಾರೆ. ಹಾಗಾಗಿ ಸೋಬ್ತಿಯವರ ಕೃತಿಗಳನ್ನು ಸಮಾಜ ಸದಾ ಎಚ್ಚರಿಕೆಯ ದೃಷ್ಟಿಯಿಂದಲೇ ನೋಡುತ್ತಾ ಬಂದಿದೆ.

ಹಿಂದಿಯ ಪ್ರಸಿದ್ಧ ಲೇಖಕ ಮತ್ತು ವಿಮರ್ಶಕ ನಾಮವರ್ ಸಿಂಗ್, ಸೋಬ್ತಿಯವರ ‘ಡಾರ್ ಸೇ ಬಿಛುಡೇ’ ಮತ್ತು ‘ಮಿತ್ರೋ ಮರ್‌ಜಾನಿ’ ಕೃತಿಗಳನ್ನು ಒಂದು ಕಡೆ ಉಲ್ಲೇಖಿಸುತ್ತಾ, ‘ಇವರ ರಚನೆಗಳಲ್ಲಿ ಒಂದು ಕಡೆ ವೈಯಕ್ತಿಕ ವಿವರಗಳಿದ್ದರೆ ಮತ್ತೊಂದು ಕಡೆ ಸಾಮಾಜಿಕ ಅಸಮಾನತೆಯ ಪ್ರಖರ ವಿರೋಧವಿರುತ್ತದೆ. ಆದ್ದರಿಂದಲೇ ವಿಮರ್ಶಾ ಪ್ರಪಂಚ ಸದಾ ಎಚ್ಚರದಿಂದ ಇರುತ್ತದೆ’ ಎಂದಿದ್ದಾರೆ. ಈ ಕಾರಣಕ್ಕಾಗಿಯೇ ‘ಜಿಂದಗೀ ನಾಮ’ ಕೃತಿಯನ್ನು ವಿಮರ್ಶಾ ಪ್ರಪಂಚದಲ್ಲಿ ಹೆಚ್ಚು ಪ್ರಚಾರ ಪಡೆದ ಶ್ರೇಷ್ಠ ರಚನೆ ಎಂದು ಪರಿಗಣಿಸಲಾಗಿದೆ.

ಕೃಷ್ಣಾ ಸೋಬ್ತಿಯವರ ಮೊಟ್ಟಮೊದಲ ಕಾದಂಬರಿ ‘ಚನ್ನಾ’ ಲೇಖಕಿಯ ನೇರನುಡಿ ಮತ್ತು ಬಿಚ್ಚು ಸ್ವಭಾವದ ಪ್ರತಿಬಿಂಬವಾಗಿ ಮೂಡಿಬಂದಿದೆ. ‘ಚನ್ನಾ ಕುರಿತಂತೆ ಉಂಟಾದ ವಾದ–ವಿವಾದಗಳು ಇಂದು ಸಹ ನನ್ನ ಕಿವಿಯಲ್ಲಿ ರಿಂಗಣಿಸುತ್ತಿವೆ’ ಎಂದಿದ್ದಾರೆ ಕೃಷ್ಣಾ ಸೋಬ್ತಿ.

ಸದ್ಯದ ರಾಜಕೀಯ ಪರಿಸ್ಥಿತಿ ಹಾಗೂ ಲೇಖಕನ ಸಂಬಂಧದ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾ ಸೋಬ್ತಿಯವರು, ‘ರಾಜಕೀಯ ವ್ಯವಸ್ಥೆ ಸಾಹಿತ್ಯ ಮತ್ತು ಸಾಹಿತಿಗಳನ್ನು ಸಂಶಯದ ದೃಷ್ಟಿಯಿಂದ ನೋಡಬಾರದು. ಸಾಹಿತ್ಯಕ ವಿಚಾರಧಾರೆಯನ್ನು ಹತ್ತಿಕ್ಕುವ ಅಥವಾ ದೂರವಿಡುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬಾರದು. ಶಬ್ದಸಂಸ್ಕೃತಿಗೆ ತನ್ನದೇ ಆದ ಅಸ್ಮಿತೆ ಇದೆ. ರಾಜಕೀಯ ಶಕ್ತಿಗಳು ಸಾಹಿತ್ಯಕ ವಿಚಾರಧಾರೆಗಳನ್ನು ದಮನಿಸುವ ಪ್ರಯತ್ನ ಮಾಡಿದರೆ ಸಾಮಾಜಿಕ ಅಸಮತೋಲನ ಉಂಟಾಗುತ್ತದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಹನನ ಯಾವುದೇ ದೇಶದ ಘನತೆಗೆ ತಕ್ಕುದಲ್ಲ. ಕಲಬುರ್ಗಿ, ದಾಬೋಲ್ಕರ್, ಪಾನ್ಸರೆ ಮುಂತಾದವರ ಹತ್ಯೆ ಯಾವುದೇ ಪ್ರಜಾಸತ್ತಾತ್ಮಕವಾದ ರಾಷ್ಟ್ರಕ್ಕೆ ನಾಚಿಕೆ ತರುವ ಸಂಗತಿ’ ಎಂದು ಸಂದರ್ಶನವೊಂದರಲ್ಲಿ ತಮ್ಮ ಸ್ಪಷ್ಟ ನಿಲುವನ್ನು ವ್ಯಕ್ತಪಡಿಸಿದ್ದಾರೆ.

ಸದ್ಯ ದೇಶದ ರಾಜಧಾನಿಯಲ್ಲಿ ನೆಲೆಸಿದ್ದರೂ, ತಮ್ಮ ಈ ಇಳಿವಯಸ್ಸಿನಲ್ಲಿಯೂ ಕುಂದದ ಜೀವನೋತ್ಸಾಹ ಹೊಂದಿರುವ ಸೋಬ್ತಿಯವರು ದೇಶದ ಎಲ್ಲ ಸಾಹಿತ್ಯಕ ಬೆಳವಣಿಗೆ, ರಾಜಕೀಯ ಹಾಗೂ ಸಾಮಾಜಿಕ ಮೇಲಾಟ, ಸ್ಥಿತ್ಯಂತರವನ್ನು ಬಲ್ಲವರಾಗಿದ್ದಾರೆ. ವರ್ತಮಾನದ ಬಗ್ಗೆ ಸದಾ ಜಾಗೃತರಾಗಿದ್ದಾರೆ. ಕೆಲವು ವರ್ಷಗಳ ಹಿಂದೆ ಕಾರ್ಯಕ್ರಮವೊಂದರ ನಿಮಿತ್ತ ನಾನು ಶಿಮ್ಲಾಕ್ಕೆ ಹೋಗಿದ್ದಾಗ ಸೋಬ್ತಿಯವರನ್ನು ಕಾಣುವ ಸಂದರ್ಭ ಒದಗಿ ಬಂದಿತ್ತು. ನನ್ನ ಪರಿಚಯವನ್ನು ಅವರಿಗೆ ಹೇಳುತ್ತಾ ‘ನಾನು ಮಂಗಳೂರಿನವನು’ ಎಂದೆ (ನಾನು ಆಗ ಸುಳ್ಯದಲ್ಲಿದ್ದೆ). ಕೂಡಲೇ ಅವರು ‘ಓಹ್.. ಮಂಗಳೂರ್! ಸಾಗರ್.. ಸಾಗರದಂತೆಯೇ ಬದುಕು ಕೂಡ ಆಳ–ಅಗಲ’ ಎಂದಿದ್ದರು. ಅವರ ಕಾದಂಬರಿ ‘ಜಿಂದಗೀ ನಾಮಾ’ ಆಕಾಶವಾಣಿಯ ರಾಷ್ಟ್ರೀಯ ನಾಟಕವಾಗಿ ಪ್ರಸಾರವಾದಾಗ ಅದನ್ನು ಕನ್ನಡಕ್ಕೆ ಅನುವಾದಿಸುವ ಅವಕಾಶವೂ ನನಗೆ ದೊರಕಿತ್ತು.

ಕೃಷ್ಣಾ ಸೋಬ್ತಿಯವರಿಗೆ ಹತ್ತಾರು ಪ್ರಶಸ್ತಿ–ಪುರಸ್ಕಾರಗಳು ಒಲಿದು ಬಂದಿವೆ. ಅವುಗಳಲ್ಲಿ ‘ಮೈಥಿಲೀ ಶರಣ್‌ ಗುಪ್ತಾ ಪುರಸ್ಕಾರ, ಚೂಡಾಮಣಿ ಪುರಸ್ಕಾರ, ಸಾಹಿತ್ಯ ಕಲಾ ಪರಿಷತ್ ಪುರಸ್ಕಾರ, ವ್ಯಾಸ ಸನ್ಮಾನ, ಪದ್ಮಭೂಷಣ, ಅಕಾಡೆಮಿ ಫೆಲೋಶಿಪ್’ ಮುಂತಾದವು ಮುಖ್ಯವಾದವುಗಳು.

ಸದಾ ಎಚ್ಚರದ ಮನಸ್ಸಿನಿಂದ ಭಾರತೀಯ ಸಮಾಜ, ಸ್ತ್ರೀಪರ ಚಿಂತನೆ, ಆಲೋಚನೆ ಹೊಂದಿ ದೇಶದ ಆಗುಹೋಗುಗಳನ್ನು ಸದಾ ಮುಕ್ತ ಮನಸ್ಸಿನಿಂದ ಗಮನಿಸುತ್ತ ಸಾಹಿತ್ಯ ಸೃಷ್ಟಿಯಲ್ಲಿ ತೊಡಗಿರುವ ಸೋಬ್ತಿಯವರು ಇಂದಿನ ಪೀಳಿಗೆಗೆ ಸ್ಫೂರ್ತಿಯ ಚಿಲುಮೆಯಾಗಿದ್ದಾರೆ. ಇವರ ಜೀವನೋತ್ಸವನ್ನು ಆವಾಹಿಸಿಕೊಳ್ಳುವುದಷ್ಟೇ ಜನಮನದ ಜವಾಬ್ದಾರಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT