ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ರಂಪ್‌, ನೈಜರ್‌ ಹಾಗೂ ಸೂಕ್ಷ್ಮಾವಲೋಕನ

Last Updated 4 ನವೆಂಬರ್ 2017, 19:30 IST
ಅಕ್ಷರ ಗಾತ್ರ

–ಥಾಮಸ್ ಎಲ್. ಫ್ರೀಡ್ಮನ್‌

ಮೆರಿಕದ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ನಾಲ್ಕು ಜನರನ್ನು ನೈಜರ್‌ನಲ್ಲಿ ಈಚೆಗೆ ಹತ್ಯೆ ಮಾಡಿದ್ದನ್ನು ನಿರ್ಲಕ್ಷಿಸುವುದು ಸುಲಭ. ಅದು ಮಧ್ಯ ಆಫ್ರಿಕಾದಲ್ಲಿರುವ ದೊಡ್ಡ ದೇಶ, ದೂರದ ದೇಶ. ಹತ್ಯೆ ನಡೆದ ಸಂದರ್ಭದ ಬಗ್ಗೆ ಹೆಚ್ಚಿನ ವಿವರ ಇಲ್ಲ. ಆದರೆ ಹಾಗೆ ನಿರ್ಲಕ್ಷಿಸಿಬಿಡುವುದು ದೊಡ್ಡ ತಪ್ಪಾದೀತು. ನೈಜರ್‌ನ ಘಟನೆಯು ಬಹುದೊಡ್ಡ ಸಮಸ್ಯೆಯೊಂದನ್ನು ಎತ್ತಿ ತೋರಿಸುತ್ತಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅವರು ಎಷ್ಟು ಮೂರ್ಖರೋ, ಮಾತನಾಡಲು ಅವರು ಎಷ್ಟರಮಟ್ಟಿಗೆ ಒಲ್ಲೆ ಎನ್ನುತ್ತಿದ್ದಾರೋ ಅಷ್ಟೇ ದೊಡ್ಡ ಸಮಸ್ಯೆ ಇದು.

ಬಿಡಿ ಘಟನೆಗಳನ್ನು ಹಾಗೂ ವಿದ್ಯಮಾನಗಳನ್ನು ನಿರ್ದಿಷ್ಟ ಪರಿಪ್ರೇಕ್ಷ್ಯದಲ್ಲಿಟ್ಟು ನೋಡುವ ಶಕ್ತಿ ಇಲ್ಲದ ವ್ಯಕ್ತಿ ಟ್ರಂಪ್‌. ಪರಿಸ್ಥಿತಿಯು ಕಣ್ಣೆದುರು ಬೃಹತ್ತಾಗಿ ಕಾಣುತ್ತಿರುವಾಗಲೂ ಅವರು ಅದರ ಹಿಂದಿನ ಚಿತ್ರಣ ಅರ್ಥ ಮಾಡಿಕೊಳ್ಳಲಾರರು. ಅವರು ತಮ್ಮ ಸರಳೀಕೃತ ಪ್ರೇರಣೆಗಳ ಆಧಾರದಲ್ಲಿ ತಾವೇ ನಿರ್ಮಿಸಿಕೊಂಡ ಕಿರು ಪೆಟ್ಟಿಗೆಯಲ್ಲಿ ಕುಳಿತು, ಜನರ ಚಪ್ಪಾಳೆ ಗಿಟ್ಟಿಸುವ ಚಿಂತನೆಗಳ ನೆಲೆಯಲ್ಲಿ ಆಲೋಚಿಸುತ್ತಾರೆ. ಅವರ ಈ ಪ್ರವೃತ್ತಿಯು ನಮ್ಮನ್ನು ಹೊರದೇಶಗಳಲ್ಲಿ ವಿರೋಧಾಭಾಸಗಳ ಬಲೆಯೊಂದರತ್ತ ಕರೆದೊಯ್ಯುತ್ತಿದೆ. ಇದಕ್ಕೆ ನೈಜರ್‌ ಒಂದು ಸೂಕ್ತ ಉದಾಹರಣೆ.

ನ್ಯಾಷನಲ್‌ ಜಿಯಾಗ್ರಫಿಕ್ ವಾಹಿನಿಯವರಿಗೆ ಹವಾಮಾನಕ್ಕೆ ಸಂಬಂಧಿಸಿದ ಸರಣಿಯೊಂದಕ್ಕೆ ನಾನು ಒಂದು ಸಾಕ್ಷ್ಯಚಿತ್ರವನ್ನು ಕಳೆದ ವರ್ಷ ಮಾಡಿಕೊಟ್ಟೆ. ಹಾಗಾಗಿ ನನಗೆ ನೈಜರ್ ಬಗ್ಗೆ ಸ್ವಲ್ಪ ಗೊತ್ತಿದೆ. ಅಲ್ಲದೆ, ‘ದಿ ನ್ಯೂಯಾರ್ಕ್‌ ಟೈಮ್ಸ್‌’ಗೆ ಅಲ್ಲಿನ ಬಗ್ಗೆ ಹಲವು ಅಂಕಣಗಳನ್ನೂ ಬರೆದಿದ್ದೇನೆ. ಮಧ್ಯ ಆಫ್ರಿಕಾದ ಈ ಪ್ರದೇಶದಲ್ಲಿ ಇಸ್ಲಾಮಿಕ್‌ ಸ್ಟೇಟ್‌ (ಐಎಸ್) ಹಾಗೂ ಅಲ್‌–ಕೈದಾದಂತಹ ಸಂಘಟನೆಗಳು ಏಕೆ ತಲೆ ಎತ್ತುತ್ತಿವೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ಕಣ್ಣಿಗೆ ಕಾಣುವಸಂಗತಿಗಳನ್ನುಅವಲೋಕಿಸಬೇಕು, ಬೇರೆ ಬೇರೆ ಸಮಸ್ಯೆಗಳ ನಡುವಿನ ಕೊಂಡಿಗಳನ್ನು ಗುರುತಿಸಬೇಕು. ಅಂದರೆ: ‘ಅಲ್ಲಿ ಕೆಟ್ಟ ವ್ಯಕ್ತಿಗಳು ಇದ್ದಾರೆ. ನಾನು ನನ್ನ ಸೇನೆಯ ಹಿರಿಯ ಅಧಿಕಾರಿಗಳನ್ನು ಕರೆಸುತ್ತೇನೆ. ಅವರು ಅಂಥವರನ್ನು ಕೊಲ್ಲುತ್ತಾರೆ. ಅದರ ಗರಿಮೆ ನನಗೆ ಸಿಗುತ್ತದೆ’ ಎಂಬ ನೆಲೆಯಲ್ಲಿ ಮಾತ್ರವೇ ಅರ್ಥ ಮಾಡಿಕೊಳ್ಳುವುದಲ್ಲ.

ರಕ್ಷಣಾ ವ್ಯವಸ್ಥೆಗಳ ತಜ್ಞ ಲಿನ್ ವೆಲ್ಸ್ ಅವರು ಒಂದು ಬಾರಿ ಹೇಳಿರುವಂತೆ: ‘ನೈಜರ್‌ನಂತಹ ಪ್ರದೇಶಗಳಲ್ಲಿನ ಪರಿಸ್ಥಿತಿ ಸುಧಾರಿಸಲು ನೀವು ಸಾಂಪ್ರದಾಯಿಕ ನೆಲೆಯಲ್ಲಿ ಯಾವತ್ತೂ ಆಲೋಚನೆ ಮಾಡಬಾರದು. ಅಸಾಂಪ್ರದಾಯಿಕ ನೆಲೆಯಲ್ಲೂ ಆಲೋಚಿಸಬಾರದು. ನೀವು ಯಾವತ್ತೂ ಚೌಕಟ್ಟುಗಳನ್ನು ಇಟ್ಟುಕೊಳ್ಳದೆಯೇ ಆಲೋಚನೆ ಮಾಡಬೇಕು’.

ಏಕೆ? ಏಕೆಂದರೆ ಆಫ್ರಿಕಾದ ಸಹೇಲ್ ಪ್ರದೇಶದ ಈ ದೇಶಗಳನ್ನು ಅಸ್ಥಿರಗೊಳಿಸುತ್ತಿರುವುದು, ಭಯೋತ್ಪಾದಕ ಸಂಘಟನೆಗಳನ್ನು ಹುಟ್ಟುಹಾಕುತ್ತಿರುವುದು, ಹವಾಮಾನ ಬದಲಾವಣೆ, ಸಹಾರಾ ಮರುಭೂಮಿ ದಕ್ಷಿಣದ ಕಡೆ ವಿಸ್ತಾರವಾಗುತ್ತಿರುವುದು, ಜನಸಂಖ್ಯಾ ಸ್ಫೋಟ ಹಾಗೂ ದುರಾಡಳಿತದ ಮಾರಕ ಮಿಶ್ರಣ.

ಮರುಭೂಮಿ ಮತ್ತಷ್ಟು ವಿಸ್ತಾರ ಆಗುತ್ತಿರುವುದು ಕಿಡಿ ಹೊತ್ತಿಕೊಳ್ಳಲು ಕಾರಣವಾದರೆ, ಹವಾಮಾನ ಬದಲಾವಣೆ ಹಾಗೂ ಜನಸಂಖ್ಯಾ ಸ್ಫೋಟ ಆ ಕಿಡಿ ಇನ್ನಷ್ಟು ಪ್ರಬಲವಾಗುವಂತೆ ಮಾಡುತ್ತಿವೆ. ಇದರ ಪರಿಣಾಮವಾಗಿ, ಆಫ್ರಿಕಾದ ಸಮುದಾಯಗಳ ನೆಲೆಗಟ್ಟಿನಂತೆ ಇರುವ ಸಣ್ಣ ಪ್ರಮಾಣದ ಕೃಷಿ ಚಟುವಟಿಕೆಗಳು ಕುಸಿದುಬೀಳುತ್ತಿರುವ ಪ್ರಮಾಣ ಹೆಚ್ಚಳ ಕಂಡಿದೆ. ‘ಈ ಚಟುವಟಿಕೆ ಕುಸಿಯುತ್ತಿರುವುದರಿಂದ ಆರ್ಥಿಕ ವಲಸೆ, ಅಂತರ್‌ ಜನಾಂಗೀಯ ಸಂಘರ್ಷ ಹಾಗೂ ತೀವ್ರವಾದದ ಹೆಚ್ಚಳಕ್ಕೆ ದಾರಿಯಾಗುತ್ತಿದೆ’ ಎಂದು ಮೊನಿಕ್ ಬಾರ್ಬಟ್ ನನ್ನ ಬಳಿ ಹೇಳಿದರು. ಮರುಭೂಮಿಯ ವಿಸ್ತಾರ ಹೆಚ್ಚಾಗುವುದನ್ನು ತಡೆಯಲು ವಿಶ್ವಸಂಸ್ಥೆ ರೂಪಿಸಿರುವ ಒಡಂಬಡಿಕೆಯ ಮುಖ್ಯಸ್ಥರು ಇವರು. ನನಗೆ ನೈಜರ್‌ನಲ್ಲಿ ಗೈಡ್‌ ರೀತಿ ಇದ್ದವರು.

ಇಲ್ಲಿ ಕೆಲವು ಅಂಕಿ– ಅಂಶಗಳನ್ನು ನೀಡುವೆ. ಬಡತನ ಹಾಗೂ ಸಂತಾನ ನಿಯಂತ್ರಣ ಸಾಧನಗಳು ಸುಲಭವಾಗಿ ಲಭ್ಯವಿಲ್ಲದ ನೈಜರ್‌ನ ಜನನ ಪ್ರಮಾಣ ಪ್ರತಿ ಮಹಿಳೆಗೆ 7.6 ಮಗು ಎಂಬಂತೆ ಇದೆ. ತನಗೆ 17 ಮಕ್ಕಳಿರುವುದಾಗಿ ಜಂಭ ಕೊಚ್ಚಿಕೊಳ್ಳುತ್ತಿದ್ದ ಗಂಡಸೊಬ್ಬನನ್ನು ನಾನು ಅಲ್ಲಿ ಭೇಟಿ ಮಾಡಿದೆ. ನೈಜರ್‌ನ ಪಕ್ಕದಲ್ಲಿರುವ ನೈಜೀರಿಯಾ ದೇಶದ ಜನಸಂಖ್ಯೆ ಅದೆಷ್ಟು ವೇಗವಾಗಿ ವೃದ್ಧಿಯಾಗುತ್ತಿದೆ ಎಂದರೆ, 2050ಕ್ಕೆ ಮೊದಲೇ ಅದು ಅಮೆರಿಕವನ್ನು ಹಿಂದಿಕ್ಕಿ ವಿಶ್ವದ ಮೂರನೆಯ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಲಿದೆ. ಅಂದಹಾಗೆ, ನೈಜೀರಿಯಾ ದೇಶವು ವಿಸ್ತೀರ್ಣದಲ್ಲಿ ಅಮೆರಿಕದ ಟೆಕ್ಸಾಸ್‌ ರಾಜ್ಯಕ್ಕಿಂತ ತುಸು ದೊಡ್ಡದಿದೆ.

ಈ ಪ್ರದೇಶದಲ್ಲಿನ ಹವಾಮಾನ ಬದಲಾವಣೆ ಕೂಡ ಗಂಭೀರವಾಗಿಯೇ ಇದೆ. ನೈಜರ್‌ಗೆ ಹತ್ತಿರದಲ್ಲಿರುವ ಸೆನೆಗಲ್‌ನ ರಾಷ್ಟ್ರೀಯ ಹವಾಮಾನ ಸಂಸ್ಥೆ ಹೇಳುವ ಪ್ರಕಾರ, 1950ರಿಂದ 2015ರ ನಡುವಿನ ಅವಧಿಯಲ್ಲಿ ಅಲ್ಲಿನ ಸರಾಸರಿ ತಾಪಮಾನದಲ್ಲಿ ಎರಡು ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಳ ಆಗಿದೆ, ವಾರ್ಷಿಕ ಸರಾಸರಿ ಮಳೆಯ ಪ್ರಮಾಣದಲ್ಲಿ ಎರಡು ಇಂಚುಗಳಷ್ಟು ಕಡಿಮೆ ಆಗಿದೆ. ವಿಶ್ವದ ಸರಾಸರಿ ತಾಪಮಾನದ ಹೆಚ್ಚಳವು 2100ನೆಯ ಇಸವಿಗೆ ಮೊದಲು, ಕೈಗಾರಿಕೀಕರಣದ ಮೊದಲಿನ ಸರಾಸರಿ ತಾಪಮಾನಕ್ಕಿಂತ 2 ಡಿಗ್ರಿ ಸೆಲ್ಸಿಯಸ್‌ಗಳಷ್ಟು ಹೆಚ್ಚಾಗದಂತೆ ತಡೆಯಲು ಪ್ಯಾರಿಸ್‌ ಹವಾಮಾನ ಒಪ್ಪಂದ ರೂಪಿಸಲಾಯಿತು.

ಆದರೆ, ಸಹಾರಾ ಮರುಭೂಮಿಯ ದಕ್ಷಿಣಕ್ಕೆ ಇರುವ ಕೆಲವು ಪ್ರದೇಶಗಳ ತಾಪಮಾನವು, ಪ್ಯಾರಿಸ್ ಒಪ್ಪಂದ ಈ ಶತಮಾನದ ಅಂತ್ಯದ ವೇಳೆಗೆ ಮಿತಿಗೊಳಿಸಲು ಉದ್ದೇಶಿಸಿದ್ದಕ್ಕಿಂತ ಹೆಚ್ಚಿನ ತಾಪಮಾನವನ್ನು ಈಗಾಗಲೇ ತಲುಪಿಯಾಗಿದೆ. ಈ ಪ್ರದೇಶದ ತಾಪಮಾನವು 4 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಳ ಆಗುವಂತಿದೆ. ಇದರ ಪರಿಣಾಮವಾಗಿ ಸಣ್ಣ ಪ್ರಮಾಣದ ರೈತಾಪಿ ಚಟುವಟಿಕೆಗಳು ಇನ್ನಷ್ಟು ಕಡಿಮೆ ಆಗಲಿವೆ, ಯುರೋಪಿನ ಕಡೆ ಜನರ ವಲಸೆ ಹೆಚ್ಚಲಿದೆ, ಆಹಾರಕ್ಕಾಗಿ ಸ್ಪರ್ಧೆ ಏರ್ಪಡಲಿದೆ. ತಿಂಗಳಿಗೆ ₹ 3,226 (50 ಅಮೆರಿಕನ್ ಡಾಲರ್) ಕೊಟ್ಟರೆ ಐಎಸ್‌ ಸೇರಲು ಸಿದ್ಧವಿರುವ ನಿರುದ್ಯೋಗಿ ಪುರುಷರ ಸಂಖ್ಯೆ ಕೂಡ ಹೆಚ್ಚಾಗಲಿದೆ.

ನಾನು ವರದಿ ಮಾಡಿರುವಂತೆ, ಬಾರ್ಬಟ್ ಅವರು ತಮ್ಮ ವಾದಕ್ಕೆ ಇಂಬು ನೀಡುವಂತೆ ನನಗೆ ಆಫ್ರಿಕಾದ ಮೂರು ನಕಾಶೆಗಳನ್ನು ತೋರಿಸಿದರು. ಆ ನಕಾಶೆಯಲ್ಲಿ, ಆಫ್ರಿಕಾದ ಮಧ್ಯಮ ಭಾಗದಲ್ಲಿ ಹಲವು ಚುಕ್ಕೆಗಳನ್ನು ತೋರಿಸಲಾಗಿತ್ತು. ಮೊದಲನೆಯದು: 2008ರಲ್ಲಿ, ಮರುಭೂಮಿಯ ವ್ಯಾಪ್ತಿ ಹೆಚ್ಚುತ್ತಿರುವುದರ ಪರಿಣಾಮವಾಗಿ ಸಮಸ್ಯೆಗೆ ಗುರಿಯಾದ ಪ್ರದೇಶಗಳು. ಎರಡನೆಯದು: 2007 ಮತ್ತು 2008ರಲ್ಲಿ ನಡೆದ ಸಂಘರ್ಷಗಳು ಹಾಗೂ ಆಹಾರಕ್ಕಾಗಿನ ದಂಗೆಗಳು. ಮೂರನೆಯದು: 2012ರಲ್ಲಿ ನಡೆದ ಭಯೋತ್ಪಾದಕ ದಾಳಿಗಳು. ಈ ಮೂರೂ ನಕಾಶೆಗಳಲ್ಲಿನ ಚುಕ್ಕೆಗಳು ನೈಜರ್ ಹಾಗೂ ಅದರ ನೆರೆಹೊರೆಯ ದೇಶಗಳಲ್ಲಿ ತುಂಬಿಕೊಂಡಿವೆ. ಕೇಳಿಸುತ್ತಿದೆಯಾ?

ಈ ವಾಸ್ತವದ ಬಗ್ಗೆ ಟ್ರಂಪ್ ಅವರ ಪ್ರತಿಕ್ರಿಯೆ ಏನು?
ಆಫ್ರಿಕಾದಲ್ಲಿನ ಭಯೋತ್ಪಾದಕರನ್ನು ಹತ್ಯೆ ಮಾಡಲು ಅಮೆರಿಕದ ಮಿಲಿಟರಿಯನ್ನು ಬಳಸುವುದಕ್ಕೆ ಮಾತ್ರ ಗಮನ ನೀಡುವುದು, ಸಂತಾನಶಕ್ತಿ ಹರಣ ಕಾರ್ಯಕ್ರಮಗಳಿಗೆ ಜಾಗತಿಕ ಮಟ್ಟದಲ್ಲಿ ಅಮೆರಿಕದ ಬೆಂಬಲ ಸ್ಥಗಿತಗೊಳಿಸುವಂತಹ ಬಜೆಟ್ ಮಂಡಿಸುವುದು, ಹವಾಮಾನ ಬದಲಾವಣೆ ಆಗುತ್ತಿದೆ ಎಂಬುದನ್ನೇ ಒಪ್ಪಿಕೊಳ್ಳದವರನ್ನು ಪರಿಸರಕ್ಕೆ ಸಂಬಂಧಿಸಿದ ಪ್ರಮುಖ ಹುದ್ದೆಗಳಿಗೆ ನೇಮಿಸುವುದು, ಹಸಿರು ಸ್ನೇಹಿ ಇಂಧನ ಮೂಲಗಳ ಬದಲು ಕಲ್ಲಿದ್ದಲಿಗೆ ಆದ್ಯತೆ ನೀಡುವುದು ಹಾಗೂ ಅಮೆರಿಕ ಸರ್ಕಾರ ನಡೆಸುವ ಹವಾಮಾನ ಕುರಿತ ಸಂಶೋಧನೆಗಳನ್ನು ಕಡಿಮೆ ಮಾಡುವುದು.

ಚಿಕ್ಕದಾಗಿ ಹೇಳಬೇಕು ಅಂದರೆ, ಹವಾಮಾನ ಹಾಗೂ ಜನಸಂಖ್ಯೆಯ ಕಾರಣದಿಂದಾಗಿ ಉಲ್ಬಣಗೊಳ್ಳುತ್ತಿರುವ ಒಂದು ಸಮಸ್ಯೆಯನ್ನು ಎದುರಿಸಲು ಟ್ರಂಪ್‌ ಅವರು ಸೈನಿಕರನ್ನುಕಳುಹಿಸುತ್ತಿದ್ದಾರೆ. ಆದರೆ, ಹವಾಮಾನ ಬದಲಾವಣೆ ಹಾಗೂ ಜನಸಂಖ್ಯಾ ಸ್ಫೋಟ ತಡೆಯಲು ಇರುವ ಪರಿಕರಗಳನ್ನೆಲ್ಲ ಅವರು ಹೆಸರಿಲ್ಲದಂತೆ ಮಾಡುತ್ತಿದ್ದಾರೆ.

ಹೀಗೆ ಮಾಡುವುದು ಮೂರ್ಖತನದ, ಪರಿಣಾಮಗಳ ಅರಿವಿಲ್ಲದ ಹಾಗೂ ಬೇಜವಾಬ್ದಾರಿಯ ಕೆಲಸ. ಬಿಡಿವಿದ್ಯಮಾನಗಳನ್ನು ನಿರ್ದಿಷ್ಟ ಪರಿಪ್ರೇಕ್ಷ್ಯದಲ್ಲಿ ಇಟ್ಟು ನೋಡುವ ಶಕ್ತಿ ಇಲ್ಲದ್ದನ್ನು, ಚೌಕಟ್ಟುಗಳಿಂದ ಆಚೆಗೆ ಆಲೋಚಿಸಲುಸಾಧ್ಯವಾಗದಿರುವುದನ್ನು ಇದು ತೋರಿಸುತ್ತದೆ.

ಇವೆಲ್ಲ ಆಗುತ್ತಿರುವುದು ಆಫ್ರಿಕಾದಲ್ಲಿ ಮಾತ್ರ ಅಲ್ಲ: ಎಷ್ಟು ಸಾಧ್ಯವೋ ಅಷ್ಟು ಕಡಿಮೆ ಸಂಖ್ಯೆಯಲ್ಲಿ ಅಮೆರಿಕದ ಸೈನಿಕರನ್ನು ಬಳಸಿಕೊಂಡು, ಸಿರಿಯಾ ಹಾಗೂ ಇರಾಕ್‌ನಲ್ಲಿ ಐಎಸ್‌ ಸಂಘಟನೆಯನ್ನು ಸೋಲಿಸುವುದು ಟ್ರಂಪ್‌ ಅವರ ತಲೆಯಲ್ಲಿ ತುಂಬಿಕೊಂಡಿತ್ತು. ಐಎಸ್‌ ಸಂಘಟನೆಯ ವಿರುದ್ಧ ಹೋರಾಡುತ್ತಿರುವ ಪ್ರಮುಖ ಶಕ್ತಿಗಳಾದ ಇರಾನ್‌, ಸಿರಿಯಾ ಸರ್ಕಾರ, ರಷ್ಯಾ, ಇರಾನ್‌ ಪರ ಇರುವ ಶಿಯಾ ಬಂಡುಕೋರರು ಮತ್ತು ಅಮೆರಿಕದ ಪರ ಇರುವ ಕುರ್ದ್‌ಗಳ ಜೊತೆ ರಹಸ್ಯವಾಗಿ ಒಪ್ಪಂದ ಮಾಡಿಕೊಂಡು ಈ ಕೆಲಸ ಸಾಧಿಸುವ ಒಂದೇ ಒಂದು ಮಾರ್ಗ ಇತ್ತು. ಇವರೆಲ್ಲರನ್ನೂ ಸೇರಿಸಿಕೊಳ್ಳದೆ ಐಎಸ್‌ ಸಂಘಟನೆಯನ್ನು ಸೋಲಿಸಲು ಅಥವಾ ಸಿರಿಯಾ ಮತ್ತು ಇರಾಕ್‌ನಲ್ಲಿ ಸ್ಥಿರತೆ ತರಲು ನಮ್ಮಿಂದ ಸಾಧ್ಯವಿಲ್ಲ.

ಈಗ ಟ್ರಂಪ್ ಅವರ ತಂತ್ರಗಾರಿಕೆ ಏನು? ನನಗೆ ಈ ಬಗ್ಗೆ ಯಾವ ಸುಳಿವೂ ಇಲ್ಲ. ನಾವು ಕುರ್ದ್‌ಗಳಿಂದ ದೂರ ಸರಿದಿದ್ದೇವೆ, ಇರಾನ್‌ ಜೊತೆಗಿನ ಅಣು ಒಪ್ಪಂದವನ್ನುಮುರಿದುಕೊಳ್ಳುವತ್ತ ಸಾಗಿದ್ದೇವೆ, ಅಫ್ಗಾನಿಸ್ತಾನದಲ್ಲಿ ಸೈನಿಕರ ಸಂಖ್ಯೆ ಹೆಚ್ಚಿಸಿದ್ದೇವೆ. ಅಫ್ಗಾನಿಸ್ತಾನದಲ್ಲಿ ಸ್ಥಿರತೆ ತರುವುದು ‍ನೆರೆಯ ಇರಾನ್‌ನ ಪರೋಕ್ಷ ನೆರವಿಲ್ಲದೆ ಸಾಧ್ಯವಿಲ್ಲ. ಇವೆಲ್ಲವೂ ಹೇಗೆ ಒಂದಕ್ಕೊಂದು ಸಂಬಂಧ ಹೊಂದಿವೆ ಎಂಬುದು ನಿಮಗೆ ಗೊತ್ತಿದ್ದರೆ, ದಯವಿಟ್ಟು ಬರೆಯಿರಿ.

ಅಲ್ಲದೆ, ಮೆಕ್ಸಿಕೊ ಜೊತೆಗಿನ ನಮ್ಮ ಗಡಿಯಲ್ಲಿ ಸ್ಥಿರತೆ ಮೂಡಿಸುವುದು ಹೇಗೆ? ಮೆಕ್ಸಿಕೊದ ಅರ್ಥ ವ್ಯವಸ್ಥೆಯನ್ನು ದುರ್ಬಲಗೊಳಿಸಿರುವ ನೀತಿಗಳನ್ನು ಉಳಿಸಿಕೊಂಡೇ, ಮಧ್ಯ ಅಮೆರಿಕದಿಂದ ಬರುತ್ತಿರುವ ಅಕ್ರಮ ವಲಸಿಗರನ್ನು ತಡೆಹಿಡಿಯಲು ಮೆಕ್ಸಿಕನ್ನರ ಸಹಕಾರ ಪಡೆಯಲು ಹೇಗೆ ಸಾಧ್ಯ? ನಮ್ಮ ವಾಣಿಜ್ಯ ನೀತಿಗಳು ಮೆಕ್ಸಿಕೊದಲ್ಲಿ ಅಮೆರಿಕ ವಿರೋಧಿ, ರಾಷ್ಟ್ರೀಯವಾದಿ ನಾಯಕ ಚುನಾಯಿತನಾಗುವುದಕ್ಕೆ ಕಾರಣವಾಗಬಹುದು.

ಟ್ರಂಪ್‌ ಅವರ ಮಾತುಗಳಲ್ಲಿ ಯಾವ ಸಂದರ್ಭದಲ್ಲೂ ಮುಂದಾಲೋಚನೆ ಎಂಬುದು ಇರುವುದೇ ಇಲ್ಲ. ಅವರು ಆಡುವ ಮಾತುಗಳೆಲ್ಲ ಮೊದಲ ಪ್ಯಾರಾಕ್ಕೇ ಕೊನೆಗೊಳ್ಳುತ್ತವೆ. ಗೋಡೆ ನಿರ್ಮಿಸಿ, ಇರಾನ್‌ ಜೊತೆಗಿನ ಒಪ್ಪಂದ ಮುರಿಯಿರಿ, ಐಎಸ್‌ ಸೋಲಿಸಿ, ಭಯೋತ್ಪಾದಕರನ್ನು ಹತ್ಯೆ ಮಾಡಲು ನೈಜರ್ ಹಾಗೂ ಅಫ್ಗಾನಿಸ್ತಾನಕ್ಕೆ ಸೇನೆ ಕಳುಹಿಸಿ, ಹವಾಮಾನ ನೀತಿಯನ್ನು ಮುಗಿಸಿಬಿಡಿ, ಕುಟುಂಬ ಯೋಜನೆಯನ್ನು ಕೊನೆಗೊಳಿಸಿ, ತೆರಿಗೆ ಕಡಿಮೆ ಮಾಡಿ, ಮಿಲಿಟರಿ ಮೇಲಿನ ವೆಚ್ಚ ಹೆಚ್ಚು ಮಾಡಿ... ಪ್ರತಿ ಮಾತು ಕೂಡ ಚುನಾಯಿತರಾಗಲು ಅಗತ್ಯವಿದ್ದ ಚಪ್ಪಾಳೆಗಳನ್ನು ಟ್ರಂಪ್‌ ಅವರಿಗೆ ತಂದುಕೊಟ್ಟಿತು. ಆದರೆ ಮಾತುಗಳ ನಡುವೆ ಸಂಬಂಧ ಇರಲಿಲ್ಲ – ಇದಕ್ಕೆ ನಾವು ಬೆಲೆ ತೆರಲಿದ್ದೇವೆ.

ಮುಂದಾಲೋಚನೆ ಇಲ್ಲದ, ಬಿಡಿ ಘಟನೆಗಳನ್ನು ಹಾಗೂ ವಿದ್ಯಮಾನಗಳನ್ನು ನಿರ್ದಿಷ್ಟ ಪರಿಪ್ರೇಕ್ಷ್ಯದಲ್ಲಿ ಇಟ್ಟು ನೋಡುವ ಶಕ್ತಿ ಇಲ್ಲದ ನಾಯಕನನ್ನು ಅನುಸರಿಸಿದರೆ ಏನಾಗುತ್ತದೆ ಎಂಬುದನ್ನು ಕಾಣಲು ಲಂಡನ್‌ಗೆ ಭೇಟಿ ನೀಡಬೇಕು. ನಾನು ಕಳೆದ ವಾರ ಅಲ್ಲಿದ್ದೆ. ಬ್ರಿಟನ್ನಿನ ರಾಜಕೀಯ ವ್ಯವಸ್ಥೆ
ಯಲ್ಲಿ ಅನಿಶ್ಚಿತತೆ ಮನೆ ಮಾಡಿದೆ, ಅಲ್ಲಿನ ಅರ್ಥ ವ್ಯವಸ್ಥೆಯ ಬೆಳವಣಿಗೆ ಇಳಿಜಾರಿನತ್ತ ಮುಖಮಾಡಿದೆ. ಏಕೆಂದರೆ, ಅಲ್ಲಿನ ಬಹುಸಂಖ್ಯಾತ ಮತದಾರರು ಮುಂದಿನದನ್ನು ಆಲೋಚಿಸಲು ಆಗದ ನಾಯಕರಿಗೆ ಮತ ಚಲಾಯಿಸಿದರು. ‘ನಾವು ಐರೋಪ್ಯ ಒಕ್ಕೂಟದಿಂದ ಹೊರ ನಡೆಯೋಣ, ಎಲ್ಲವೂ ಸರಿಯಾಗಿ
ಬಿಡುತ್ತದೆ’ ಎಂದಷ್ಟೇ ಆ ನಾಯಕರು ಹೇಳಿದ್ದರು.

ಅಲ್ಲಿನವರು ಈಗ ಚಿಕ್ಕ ಗೊಂದಲದಲ್ಲಿ ಸಿಲುಕಿದ್ದಾರೆ. ದೇಶದ ಭವಿಷ್ಯಕ್ಕೆ ಹೆಚ್ಚಿನ ಅಪಾಯ ತಂದೊಡ್ಡದೆಯೇ ಐರೋಪ್ಯ ಒಕ್ಕೂಟದಿಂದ ಹೊರ ನಡೆಯುವುದು ಹೇಗೆ ಎಂಬುದು ಆಡಳಿತಾರೂಢ ಕನ್ಸರ್ವೆಟಿವ್‌ ಪಕ್ಷದವರಿಗೆ ಗೊತ್ತಿಲ್ಲ. ಸಮಸ್ಯೆ ಸೃಷ್ಟಿಸುವವರ ಪರ ಮತ ಚಲಾಯಿಸಿದಾಗ ಆಗುವುದು ಇದೇ. ಹೀಗೆ ಸಮಸ್ಯೆ ಸೃಷ್ಟಿಸುವವರು, ತಾವು ಸೃಷ್ಟಿಸುವ ಸಮಸ್ಯೆಗಳು ಹೇಗೆ ಒಂದಕ್ಕೊಂದು ಹೆಣೆದುಕೊಳ್ಳುತ್ತವೆ ಎಂಬ ಬಗ್ಗೆ ಆಲೋಚನೆಯನ್ನೇ ಮಾಡಿರುವುದಿಲ್ಲ.

(ದಿ ನ್ಯೂಯಾರ್ಕ್‌ ಟೈಮ್ಸ್‌)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT