ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರೇಕಳ ಹಾಜಬ್ಬಗೆ ಹುಣ್ಣಿಮೆಹಾಡು ಪ್ರಶಸ್ತಿ

ಕಾಡುಮಲ್ಲೇಶ್ವರ ಗೆಳೆಯರ ಬಳಗ ನೇತೃತ್ವದಲ್ಲಿ 100ನೇ ಹುಣ್ಣಿಮೆಹಾಡು ಕಾರ್ಯಕ್ರಮ
Last Updated 4 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕಾಡುಮಲ್ಲೇಶ್ವರ ಗೆಳೆಯರ ಬಳಗದ ಪ್ರಸಕ್ತ ಸಾಲಿನ ‘ಕಾಡುಮಲ್ಲೇಶ್ವರ ಹುಣ್ಣಿಮೆಹಾಡು’ ಪ್ರಶಸ್ತಿಯನ್ನು ಕನ್ನಡಶಾಲೆ ಕಟ್ಟಿದ ಮಂಗಳೂರು ಸಮೀಪದ ಹರೇಕಳದ ಹಾಜಬ್ಬ ಅವರಿಗೆ ಶನಿವಾರ ಇಲ್ಲಿ ಪ್ರದಾನ ಮಾಡಲಾಯಿತು.

100ನೇ ಹುಣ್ಣಿಮೆಹಾಡು ಸಮಾರಂಭದಲ್ಲಿ ಮಲ್ಲೇಶ್ವರ ಶಾಸಕ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಮತ್ತು ಬಳಗದ ಅಧ್ಯಕ್ಷ ಬಿ.ಕೆ.ಶಿವರಾಂ ಅವರು ಹಾಜಬ್ಬಗೆ ಪ್ರಶಸ್ತಿ ನೀಡಿ ಗೌರವಿಸಿದರು. ಬಳಗದ ವತಿಯಿಂದ ಹಿರಿಯ ಜಾನಪದ ಕಲಾವಿದೆ ಸುಕ್ರಿ ಬೊಮ್ಮಗೌಡ ಮತ್ತು ಹಾಜಬ್ಬ ಅವರಿಗೆ ತಲಾ ₹12,500 ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು.

ಶಾಸಕ ಅಶ್ವತ್ಥನಾರಾಯಣ, ‘ಅನಕ್ಷರಸ್ಥರಾದ ಹಾಜಬ್ಬ ಕಿತ್ತಳೆ ಹಣ್ಣು ಮಾರಾಟ ಮಾಡಿ, ಸಂಪಾದಿಸಿದ ಹಣ ಕೂಡಿಟ್ಟು, ಕನ್ನಡ ಶಾಲೆ ಕಟ್ಟಿರುವುದು ಸಾಮಾನ್ಯದ ಸಂಗತಿಯಲ್ಲ. ಬ್ಯಾರಿ ಭಾಷಿಕರಾದ ಅವರು ಕನ್ನಡಕ್ಕೆ ಸಲ್ಲಿಸಿದ ಸೇವೆ ಅವೀಸ್ಮರಣೀಯ. ಅವರ ಮಾಡಿರುವ ಅನನ್ಯ ಸಾಧನೆ ಎಲ್ಲರಿಗೂ ಪ್ರೇರಣೆ’ ಎಂದು ಶ್ಲಾಘಿಸಿದರು.

ಬಿ.ಕೆ.ಶಿವರಾಂ ‘ಗೆಳೆಯರ ಬಳಗ ಸಾಂಸ್ಕೃತಿಕ ರಾಜಕಾರಣ ಮಾಡುತ್ತಿಲ್ಲ. ಸಾಂಸ್ಕೃತಿಕ ರಾಜಕಾರ್ಯ ಮಾಡುತ್ತಿದೆ. ಜನಪ್ರತಿನಿಧಿಗಳು ಹೇಳಿದರೆ ಬಂಡೆ ಮೇಲೂ ಗಿಡ ನೆಡುತ್ತೇವೆ ಎನ್ನುವ ಬಿಬಿಎಂಪಿ ಅಧಿಕಾರಿಗಳ ಧೋರಣೆಗೆ ಉತ್ತರವಾಗಿ ನಮ್ಮ ಬಳಗ ನಿಜವಾದ ವನಮಹೋತ್ಸವ ನಡೆಸುತ್ತಿದೆ’ ಎಂದರು.

ಉಸ್ತಾದ್‌ ಹಫೀಜ್‌ ಬಾಲೇಖಾನ್‌, ಉಸ್ತಾದ್‌ ರಹೀಜ್‌ ಬಾಲೇಖಾನ್‌ ಹಾಗೂ 25 ಸಿತಾರ್‌ ಕಲಾವಿದರು ನಡೆಸಿಕೊಟ್ಟ ಸಿತಾರ್‌ ತರಂಗ– ದಾಸ ಶರಣ ಮಾಧುರ್ಯ ಕಾರ್ಯಕ್ರಮ ಸಂಗೀತಾಸಕ್ತರನ್ನು ಮಂತ್ರಮುಗ್ಧಗೊಳಿಸಿತು. ಮಂಗಳೂರಿನ ಶಾರದಾ ಚಂಡೆ ತಂಡದ ಕಲಾವಿದರ ಚಂಡೆ ವಾದ್ಯ, ಮಂಡ್ಯದ ಮಹಿಳಾ ತಂಡದ ನಗಾರಿ, ಭೂಮ್ತಾಯಿ ಬಳಗದ ಗಾಯಕರ ಪರಿಸರ ಜಾಗೃತಿ ಗೀತೆಗಳು ಸಭಿಕರ ಹೃನ್ಮನ ಸೆಳೆದವು.

‘ಕಾಡುಮಲ್ಲೇಶ್ವರ’ಕ್ಕೆ ಹಸಿರು ಚೈತನ್ಯ

ಸಂಪಿಗೆ ರಸ್ತೆ, ತೆಂಗಿನ ಕಾಯಿ ಮರದ ರಸ್ತೆ, ಮಾರ್ಗೋಸಾ (ಬೇವಿನ ಮರ) ರಸ್ತೆ, ಸೀಗೇ ಬೇಲಿ ರಸ್ತೆ... ಕಾಡುಮಲ್ಲೇಶ್ವರದಲ್ಲಿರುವ ಪ್ರಮುಖ ರಸ್ತೆಗಳ ಹೆಸರುಗಳಿವು. ಇಲ್ಲಿನ ರಸ್ತೆಗಳಲ್ಲೀಗ ದೇಸಿ ಸಸ್ಯಗಳನ್ನು ಹುಡುಕಬೇಕಾದ ಸ್ಥಿತಿ ಇದೆ.

ದೇಸಿ ಸಸ್ಯಗಳನ್ನು ಮತ್ತೆ ಬೆಳೆಸುವ ಮೂಲಕ ‘ಕಾಡುಮಲ್ಲೇಶ್ವರ’ದ ಗತ ವೈಭವವನ್ನು ಮರುಕಳಿಸುವ ನಿಟ್ಟಿನಲ್ಲಿ ಕಾಡುಮಲ್ಲೇಶ್ವರ ಗೆಳೆಯರ ಬಳಗ ‘ಹಸಿರು ಚೈತನ್ಯೋತ್ಸವ’ ಹಮ್ಮಿಕೊಂಡಿದೆ.

’ಹುಣ್ಣಿಮೆ ಹಾಡು’ ಕಾರ್ಯಕ್ರಮದ ಶತಕದ ಸಂಭ್ರಮದ ಅಂಗವಾಗಿ ಕಾಡುಮಲ್ಲೇಶ್ವರದಲ್ಲಿ ಶನಿವಾರ ಬೇವು, ಪಾರಿಜಾತ ಹಾಗೂ ಸಂಪಿಗೆ ಜಾತಿಯ 208 ಸಸಿಗಳನ್ನು ನೆಡಲಾಯಿತು. ಈ ಸಸಿಗಳನ್ನು ಪಲ್ಲಕ್ಕಿಯಲ್ಲಿಟ್ಟು ಮೆರವಣಿಗೆಯಲ್ಲಿ ತಂದು, ಅವುಗಳಿಗೆ ಪೂಜೆಯನ್ನೂ ಸಲ್ಲಿಸಲಾಯಿತು. ಮಂಗಳೂರಿನ ತಂಡದ ಚೆಂಡೆ ವಾದನ, ನಾಗಸ್ವರ ವಾದನ, ಮಂಡ್ಯದ ‘ಮಹಿಳಾ ಮುನ್ನಡೆ’ ತಂಡದ ನಗಾರಿ ಸದ್ದು ಕಾರ್ಯಕ್ರಮಕ್ಕೆ ವಿಶೇಷ ಮೆರುಗು ತಂದವು.

‘ಕಾಡುಮಲ್ಲೇಶ್ವರದ ಹೆಸರಿಗೆ ಅನ್ವರ್ಥವಾಗಿ ಇಲ್ಲಿ ಹಸಿರು ಸಮೃದ್ಧಿ ಆಗಬೇಕು ಎಂಬುದು ನಮ್ಮ ಉದ್ದೇಶ. ನೆಟ್ಟ ಗಿಡಗಳ ಬಗ್ಗೆ ಜನರು ದೈವೀ ಭಾವ ಹೊಂದಬೇಕು ಎಂಬ ಆಶಯದಿಂದ ಅವುಗಳಿಗೆ ಪೂಜೆ ಮಾಡಿಸಿದ್ದೇವೆ. ಸ್ಥಳೀಯರು ಜಾತಿ, ಮತ ಹಾಗೂ ಪಕ್ಷ ಭೇದ ಮರೆತು ಈ ಕೈಂಕರ್ಯದಲ್ಲಿ ಕೈ ಜೋಡಿಸಿದ್ದಾರೆ’ ಎಂದು ಕಾಡುಮಲ್ಲೇಶ್ವರ ಗೆಳೆಯರ ಬಳಗದ ಪ್ರಧಾನ ಕಾರ್ಯದರ್ಶಿ ರಕ್ಷಿತ್‌ ಶಿವರಾಂ ‘ಪ್ರಜಾವಾಣಿ’ಗೆ ತಿಳಿಸಿದರು.

’ಪ್ರತಿ ತಿಂಗಳೂ ಹುಣ್ಣಿಮೆ ಹಾಡು ಕಾರ್ಯಕ್ರಮದ ಸಲುವಾಗಿ ಗೆಳೆಯರೆಲ್ಲ ಒಂದಾಗಿ ವನಭೋಜನ ನಡೆಸುತ್ತೇವೆ. ಈ ಸಂದರ್ಭದಲ್ಲಿ ಗಿಡಗಳ ಆರೈಕೆ ಬಗ್ಗೆಯೂ ನಿಗಾ ವಹಿಸುತ್ತೇವೆ. ಕೆಲವು ಸಸಿಗಳನ್ನು ನೋಡಿಕೊಳ್ಳಲು ಸಮೀಪದ ಅಂಗಡಿಯವರೇ ಮುಂದೆಬಂದಿದ್ದಾರೆ.  ಗಿಡಗಳಿಗೆ ಪಾಲಿಕೆ ವತಿಯಿಂದ ರಕ್ಷಾಕವಚವನ್ನು ಒದಗಿಸುವುದಾಗಿ ಮೇಯರ್‌ ಆರ್‌.ಸಂಪತ್‌ರಾಜ್‌ ಭರವಸೆ ನೀಡಿದ್ದಾರೆ’ ಎಂದರು.

ನಗರದ ಹೆಚ್ಚಿನ ಕಡೆ ಮಳೆ ಮರ, ಗುಲ್‌ಮೊಹರ್‌ಗಳಂತಹ ವಿದೇಶಿ ತಳಿಯ ಸಸ್ಯಗಳನ್ನೇ ಬೆಳೆಸಲಾಗಿದೆ. ಆದರೆ, ಮಲ್ಲೇಶ್ವರ ಪರಿಸರದಲ್ಲಿ ಆಲ, ಹೊಂಗೆ, ರುದ್ರಾಕ್ಷಿ, ಬನ್ನಿ, ಬಸವನಪಾದ, ಅರಳಿ ಕುಂಕುಮದ ಮರಗಳು ಹೇರಳವಾಗಿದ್ದವು. ಇತ್ತೀಚೆಗೆ ಅವುಗಳ ಸಂಖ್ಯೆ ಕ್ಷೀಣಿಸುತ್ತಿದೆ. ಗೆಳೆಯರ ಬಳಗದವರು ದೇಸಿ ಸಸಿಗಳನ್ನು ಬೆಳೆಸಲು ಮುಂದಾಗಿರುವುದು ಸ್ವಾಗತಾರ್ಹ ಎಂದು ವೃಕ್ಷಾ ಸಮಿತಿಯ ವಿಜಯ್‌ ನಿಶಾಂತ್‌ ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT