ಮಂಗಳವಾರ, ಮಾರ್ಚ್ 2, 2021
23 °C

ಪ್ರಾಣಿ–ಮಾನವ ಸಂಘರ್ಷ ತಪ್ಪಿಸಿ: ಸಿ.ಎಂ.

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ರಾಣಿ–ಮಾನವ ಸಂಘರ್ಷ ತಪ್ಪಿಸಿ: ಸಿ.ಎಂ.

ಕಮಲಾಪುರ(ಹೊಸಪೇಟೆ ತಾಲ್ಲೂಕು): ‘ಪ್ರಾಣಿಗಳು ಮತ್ತು ಮನುಷ್ಯರ ನಡುವಿನ ಸಂಘರ್ಷಗಳನ್ನು ಅರಣ್ಯ ಇಲಾಖೆ ನಿಯಂತ್ರಿಸಬೇಕು. ಪ್ರಾಣಿಗಳಿಗೆ ಬೇಕಾದ ಸೌಕರ್ಯಗಳನ್ನು ಕಾಡಿನಲ್ಲೇ ವ್ಯವಸ್ಥೆ ಮಾಡಬೇಕು. ಅವು ಕಾಡು ದಾಟಿ ಬರದಂತೆ ಎಚ್ಚರಿಕೆ ವಹಿಸಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಹಂಪಿ ಉತ್ಸವ ಉದ್ಘಾಟನೆಗೆ ಮುನ್ನ, ಇಲ್ಲಿ ಅರಣ್ಯ ಇಲಾಖೆ ಮತ್ತು ಕರ್ನಾಟಕ ಮೃಗಾಲಯ ಪ್ರಾಧಿಕಾರವು ನಿರ್ಮಿಸಿರುವ ಅಟಲ್‌ ಬಿಹಾರಿ ವಾಜಪೇಯಿ ಜೂವಾಲಾಜಿಕಲ್‌ ಪಾರ್ಕ್‌ ಮತ್ತು ಇಂದಿರಾ ಪ್ರಿಯದರ್ಶಿನಿ ಜಿಂಕೆ ಸಫಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ‘ರಾಜ್ಯದಲ್ಲಿ ಎಂಟು ಮೃಗಾಲಯಗಳಿದ್ದು, 354 ಎಕರೆ ಪ್ರದೇಶ ವ್ಯಾಪ್ತಿಯ ಈ ಪಾರ್ಕ್‌ ಅನ್ನು ಮೈಸೂರಿನ ಚಾಮರಾಜೇಂದ್ರ ಮೃಗಾಲಯದ ರೀತಿಯಲ್ಲೇ ಇನ್ನಷ್ಟು ಅಭಿವೃದ್ಧಿ ಪಡಿಸಲಾಗುವುದು. ಹಂಪಿಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೂ ಈ ಪಾರ್ಕ್‌ ಅನುಕೂಲ ಕಲ್ಪಿಸಲಿದೆ’ ಎಂದರು.

‘354 ಎಕರೆ ಪ್ರದೇಶ ವ್ಯಾಪ್ತಿಯ ಪಾರ್ಕ್‌ ಅಭಿವೃದ್ಧಿಗೆ ವಿನಿಯೋಗಿಸಿದ್ದ ₹ 65 ಕೋಟಿಯ ಬಿಡುಗಡೆಗೆ ಸಚಿವ ಸಂಪುಟ ಇತ್ತೀಚೆಗೆ ಅನುಮೋದನೆ ನೀಡಿದ್ದು ಸಂತಸದ ವಿಚಾರ. ₹ 20 ಕೋಟಿ ವೆಚ್ಚದಲ್ಲಿ ಆರಂಭವಾದ ಮೃಗಾಲಯ ಅಭಿವೃದ್ಧಿ ಕಾರ್ಯಕ್ಕೆ ಹೆಚ್ಚುವರಿಯಾಗಿ ₹33 ಕೋಟಿ ವಿನಿಯೋಗಿಸಲಾಗಿದೆ.ಹೈದರಾಬಾದ್‌ ಕರ್ನಾಟಕ ಪ್ರದೇಶದಲ್ಲೇ ಈ ಪಾರ್ಕ್‌ ವಿಶಿಷ್ಟ ಗಮನ ಸೆಳೆಯಲಿದೆ’ ಎಂದು ಅರಣ್ಯ ಸಚಿವ ಬಿ.ರಮಾನಾಥ ರೈ ಅಭಿಪ್ರಾಯಪಟ್ಟರು.

ಅನುದಾನ:‘ರಾಜ್ಯದ ಮೃಗಾಲಯಗಳ ನಿರ್ವಹಣೆಗೆ ₹20 ಕೋಟಿ ಬಿಡುಗಡೆ ಮಾಡಬೇಕು. ವಾಜಪೇಯಿ ಪಾರ್ಕ್‌ ನಿರ್ವಹಣೆಗಾಗಿ ತುಂಗಭದ್ರಾ ನಾಲೆಯಿಂದ 0.2 ಟಿಎಂಸಿ ನೀರನ್ನು ಪೂರೈಸಬೇಕು’ ಎಂದು ಪ್ರಾಧಿಕಾರದ ಅಧ್ಯಕ್ಷೆ ಮಲ್ಲಿಗೆ ವೀರೇಶ್‌ ಮನವಿ ಮಾಡಿದರು.

‘ಪಾರ್ಕ್‌ನಲ್ಲಿ 150 ಕೃಷ್ಣಮೃಗಗಳು, ಚಿಕ್ಕೆ ಜಿಂಕೆಗಳು, ನೀಲಗಾಯಿ ಮತ್ತು ಸಂಬಾರ್‌ ತಳಿಯ ಜಿಂಕೆಗಳು ಇವೆ. ಮುಂದಿನ ದಿನಗಳಲ್ಲಿ ಮಾಂಸಾಹಾರಿ ಪ್ರಾಣಿಗಳನ್ನೂ ಇಲ್ಲಿಗೆ ತರಲಾಗುವುದು’ ಎಂದರು. ಶಾಸಕ ಬಿ.ಆನಂದ್‌ ಸಿಂಗ್‌ ಅಧ್ಯಕ್ಷತೆ ವಹಿಸಿದ್ದರು. ಉಸ್ತುವಾರಿ ಸಚಿವ ಸಂತೋಷ್‌ ಲಾಡ್‌. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸಿ.ಭಾರತಿ, ಶಾಸಕರಾದ ಇ.ತುಕಾರಾಂ, ಅಲ್ಲಂ ವೀರಭದ್ರಪ್ಪ, ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಪಿ.ರವಿ, ಎಸ್‌.ವಿ.ಘೋರ್ಪಡೆ ಇದ್ದರು. ಕಾರ್ಯಕ್ರಮದ ಆರಂಭದಲ್ಲಿ ಕೃಷ್ಣದೇವರಾಯ ಮಾದರಿ ಪೇಟವನ್ನು ಮುಖ್ಯಮಂತ್ರಿಗೆ ತೊಡಿಸಿದ್ದು ವಿಶೇಷವಾಗಿತ್ತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.