ಶುಕ್ರವಾರ, ಮಾರ್ಚ್ 5, 2021
30 °C

ಸೋಲಾರ್‌ ವಿದ್ಯುತ್ ಬಳಸಿ ಯಶಸ್ವಿ ಕೃಷಿ

ಮನ್ಮಥಪ್ಪ ಸ್ವಾಮಿ Updated:

ಅಕ್ಷರ ಗಾತ್ರ : | |

ಸೋಲಾರ್‌ ವಿದ್ಯುತ್ ಬಳಸಿ ಯಶಸ್ವಿ ಕೃಷಿ

ಔರಾದ್: ತಾಲ್ಲೂಕಿನ ರೈತರೊಬ್ಬರು ಸೋಲಾರ್‌ ವಿದ್ಯುತ್ ಬಳಸಿಕೊಂಡು ಉತ್ತಮ ಬೆಳೆ ಬೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲಾಪುರ ಗ್ರಾಮದ ರೈತ ಹಣಮಂತ ಯರನಾಳೆ ಎಸ್‌.ಸಿ.ಪಿ–ಟಿ.ಎಸ್‌.ಪಿ ಯೋಜನೆಯಡಿ ಕೊಳವೆಬಾವಿ ಮತ್ತು ಸೋಲಾರ್‌ ವಿದ್ಯುತ್ ಸೌಲಭ್ಯ ಪಡೆದು ಬದುಕಿಗೆ ಆಸರೆ ಮಾಡಿಕೊಂಡಿದ್ದಾರೆ.

ಕೇವಲ ಎರಡು ಎಕರೆ ಜಮೀನು ಹೊಂದಿರುವ ಯರನಾಳೆ ಅವರು ವರ್ಷಕ್ಕೆ ₹2.5 ಲಕ್ಷದಿಂದ ₹3 ಲಕ್ಷದ ವರೆಗೆ ಆದಾಯ ಪಡೆಯುತ್ತಾರೆ. ಎರಡು ವರ್ಷದ ಹಿಂದೆ ಸರ್ಕಾರ ಇವರಿಗೆ ₹6 ಲಕ್ಷ ಖರ್ಚು ಮಾಡಿ ಕೊಳವೆಬಾವಿ ಕೊರೆದು ಅದರ ಮೋಟರ್‌ ಗೆ ಸೋಲಾರ್‌ ವಿದ್ಯುತ್ ಅಳವಡಿಸಿದ್ದಾರೆ.

ಹೆಚ್ಚಿನ ಖರ್ಚು ಇಲ್ಲದೆ ಯರನಾಳೆ ಅವರು ವರ್ಷಕ್ಕೆ ಮೂರು ಬೆಳೆ ಪಡೆಯುತ್ತಾರೆ. ಈ ವರ್ಷ ಮಳೆ ಕೊರತೆ ನಡೆವೆಯೂ 20 ಕ್ವಿಂಟಲ್ ಉದ್ದು ಬೆಳೆದಿದ್ದಾರೆ. ಈಗ ಮತ್ತೆ ಬಿಳಿ ಜೋಳ ಬಿತ್ತನೆ ಮಾಡಿದ್ದು, 25ರಿಂದ 30 ಕ್ವಿಂಟಲ್ ಇಳುವರಿ ನಿರೀಕ್ಷೆಯಲ್ಲಿದ್ದಾರೆ. ಇನ್ನು ಬೇಸಿಗೆಯಲ್ಲಿ ₹60ರಿಂದ ₹70 ಸಾವಿರ ಮೌಲ್ಯದ ತರಕಾರಿ ಬೆಳೆದು ಬದುಕು ಕಟ್ಟಿಕೊಂಡಿದ್ದಾರೆ.

‘ನಾವು ಏಳು ಜನ ಸಹೋದರರು. ಇಬ್ಬರು ಹೈದರಾಬಾದ್‌ ನಲ್ಲಿ ಕೆಲಸ ಮಾಡಿ ಉಪಜೀವನ ನಡೆಸುತ್ತಾರೆ. ಉಳಿದ ಐವರು ಇಲ್ಲಿ ಒಟ್ಟಾಗಿ ಇದ್ದೇವೆ. ಮೂವರು ಸಹೋದರರು ಬೇರೆಯವರ ಜಮೀನು ಬಾಡಿಗೆ ಪಡೆದು ಅಲ್ಲಿ ಕೆಲಸ ಮಾಡುತ್ತಾರೆ.

ನಾನು ಮತ್ತು ನನ್ನ ತಂದೆ ಎರಡು ಎಕರೆ ಸ್ವಂತ ಜಮೀನಿನಲ್ಲಿ ಹಗಲಿರುಳು ದುಡಿಯುತ್ತೇವೆ. ದುಡಿಮೆಯ ಫಲವಾಗಿ ಇಷ್ಟು ದೊಡ್ಡ ಕುಟುಂಬ ನಿರ್ವಹಿಸುವ ಜತೆಗೆ 4 ಎಕರೆ ಜಮೀನು ಖರೀದಿಸಿದ್ದೇವೆ’ ಎನ್ನುತ್ತಾರೆ ರೈತ ಮಲ್ಲಿಕಾರ್ಜುನ ಯರನಾಳೆ.

‘ಮಕ್ಕಳು ಮತ್ತು ಸೊಸೆಯಂದಿರು ಹಾಗೂ 12 ಮೊಮ್ಮಕ್ಕಳು ಇದ್ದರೂ ಭಾರ ಎನಿಸುವುದಿಲ್ಲ. ಎಲ್ಲರೂ ಮೈಮುರಿದು ಕೆಲಸ ಮಾಡುತ್ತಾರೆ. ಮೊಮ್ಮಕ್ಕಳ ಶಾಲೆಗೆ ಹಣ, ಬಟ್ಟೆ–ಬರೆ ಖರ್ಚು ಸೇರಿದಂತೆ ಕುಟುಂಬದ ಆಗು–ಹೋಗು ಜವಾಬ್ದಾರಿಯನ್ನು ಹೊತ್ತುಕೊಂಡಿದ್ದೇನೆ ’ಎಂದು ಹೇಳುತ್ತಾರೆ ಈ ಅವಿಭಕ್ತ ಕುಟುಂಬದ ಯಜಮಾನ ಹಣಮಂತ ಯರನಾಳೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.