ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಅಧ್ಯಯನ: ಸಬಲೀಕರಣದೆಡೆಗೆ ಹೊಸ ಹೆಜ್ಜೆ

Last Updated 5 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಘಟನೆ1: ಕಾಲೇಜಿನಿಂದ ಮರಳುವ ದಾರಿಯಲ್ಲಿ ಯಾರೋ ಚುಡಾಯಿಸುತ್ತಾರೆಂದು ಹೆದರಿ ರೇಖಾ ಖಿನ್ನತೆಗೆ ಒಳಗಾಗಿದ್ದಾಳೆ. ಕಾಲೇಜಿಗೆ ಹೋಗಲು ಹೆದರುತ್ತಾಳೆ. ಅವಳ ಪೋಷಕರು ಕಾನೂನಿನ ಸಹಾಯ ಮರ್ಯಾದೆಗೆ ಕುಂದು ತಂದೀತೆಂದು ಸುಮ್ಮನಿದ್ದಾರೆ.

ಘಟನೆ 2: ದುಡಿಯುವ ಮಹಿಳೆಯಾದ ಸಂಧ್ಯಾಗೆ ಮನೆಯವರ ಕಿರುಕುಳ ತಪ್ಪಿದ್ದಲ್ಲ. ‘ಜಾಸ್ತಿ ಮಾತನಾಡಿದರೆ ನಿನ್ನ, ನಿನ್ನ ಮಗೂನ ಆಚೆ ಹಾಕಿಬಿಡ್ತೀನಿ’ – ಎಂಬ ಗಂಡನ ಬೆದರಿಕೆಗೆ ತತ್ತರಿಸುತ್ತಾ ಮನೆಯಲ್ಲಿ ಮಾನಸಿಕ ಹಿಂಸೆ ಅನುಭವಿಸುತ್ತಿದ್ದಾಳೆ.

ಘಟನೆ 3: ಫೇಸ್‌ಬುಕ್‌ನಲ್ಲಿ ಹಾಕಿದ ಫೋಟೋವನ್ನು ಯಾರೋ ಕಿಡಿಗೇಡಿಯೊಬ್ಬ ತಿರುಚಿ ಸವಿತಾಗೆ ಕರೆ ಮಾಡಿ ಬೆದರಿಸುತ್ತಿದ್ದಾನೆ. ಇದನ್ನು ಯಾರ ಬಳಿ ಹಂಚಿಕೊಳ್ಳುವುದು ಎಂದು ತಿಳಿಯದೇ ಸವಿತಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

**

ಇಂತಹ ಘಟನೆಗಳು ನಮ್ಮ ಸುತ್ತ ನಡೆಯುತ್ತಲೇ ಇವೆ. ಮಹಿಳೆಯರು ಇಂದಿಗೂ ಸಮಸ್ಯೆಗಳನ್ನು ಮನೆಯವರ ಜೊತೆ ಹೇಳಿಕೊಳ್ಳಲು, ಕಾನೂನಿನ ಸಹಾಯ ಪಡೆಯಲು ಹಿಂಜರಿಯುತ್ತಲೇ ಇದ್ದಾರೆ.

ಹೆಣ್ಣಿನ ಸ್ಥಾನಮಾನದ ಕುರಿತಾದ ಚರ್ಚೆ ದಶಕಗಳಿಂದಲೂ ಕೇಳಿ ಬರುತ್ತದೆ. ಹೆಣ್ಣು ಸಬಲೆ, ಪುರುಷನ ಸಮಕ್ಕೆ ನಿಲ್ಲಬಲ್ಲಳು – ಎನ್ನುವಂತಹ ಮಾತುಗಳು ನಮ್ಮ ಸುತ್ತ ಇದ್ದಾಗಲೂ ಹೆಣ್ಣಿನ ಮೇಲಾಗುತ್ತಿರುವ ಶೋಷಣೆ, ಅಪರಾಧಗಳು ಹೆಚ್ಚುತ್ತಲೇ ಹೋಗಿವೆ. ಶತಮಾನಗಳಿಂದ ಬಂದ ಲಿಂಗ ತಾರತಮ್ಯ ಒಂದು ಕಾರಣವಾದರೆ ಮಹಿಳೆ ತನ್ನನ್ನು ತಾನು ಅರಿಯದೇ ಇರುವುದು, ತನ್ನ ಶಕ್ತಿಯನ್ನು ಸಕಾರಾತ್ಮವಾಗಿ ಬಳಸಿಕೊಳ್ಳದಿರುವುದು ಇಂತಹ ಅಪರಾಧಗಳಿಗೆ ಕಾರಣವಾಗಿವೆ.

ಮಹಿಳೆ ಹಾಗೂ ಪುರುಷಸಮಾಜದ ಎರಡು ಮುಖ್ಯ ಅಂಗಗಳು. ಮಹಿಳೆಯರು ಎಷ್ಟೇ ಮುಂದುವರಿದಿದ್ದರೂ ಅವರ ಮೇಲಾಗುತ್ತಿರುವ ಶೋಷಣೆ, ದೌರ್ಜನ್ಯ ಹೆಚ್ಚುತ್ತಲೇ ಇದೆ. ತನ್ನ ಕುಟುಂಬ, ಕಾರ್ಯಕ್ಷೇತ್ರ, ಎಲ್ಲಾ ಕ್ಷೇತ್ರದಲ್ಲಿಯೂ ಮಹಿಳೆಯ ಮೇಲೆ ದಬ್ಬಾಳಿಕೆ ನಡೆಯುತ್ತಲೇ ಇದೆ. ಇಂತಹ ಪರಿಸ್ಥಿತಿಯಲ್ಲಿ ಪ್ರತಿಯೊಂದು ಅಪರಾಧಕ್ಕೂ ಕಾನೂನಾತ್ಮಕ ಪರಿಹಾರ ನೀಡುವುದರ ಜೊತೆಜೊತೆಗೆ ಒಂದು ಆರೋಗ್ಯವಂತ ಸಮಾಜದ ಅಭಿವೃದ್ದಿ ಬಹಳ ಮುಖ್ಯವಾದುದು. ಮಹಿಳೆಯರನ್ನು ಸಬಲರನ್ನಾಗಿಸುವುದು ಎಷ್ಟು ಮುಖ್ಯವೋ ಪುರುಷರನ್ನು ಸಂವೇದನಾಶೀಲರಾಗಿಸುವುದು ಕೂಡ ಅಷ್ಟೇ ಮುಖ್ಯ. ಮಹಿಳೆಯರನ್ನು ನೋಡುವ ದೃಷ್ಟಿಕೋನ, ಆಕೆಯೊಂದಿಗೆ ನಡೆದುಕೊಳ್ಳುವ ರೀತಿ ಬಹಳ ಆರೋಗ್ಯಯುತವಾಗಬೇಕು.

ಲಿಂಗತಾರತಮ್ಯದ ವಿರುದ್ಧ ಹಲವಾರು ಧ್ವನಿಗಳು ಮೊಳಗುತ್ತಿವೆ. ಅದರ ವಿರುದ್ಧ ಪ್ರತಿಭಟನೆಗಳು, ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ನಡೆಯುತ್ತಲೇ ಇವೆ. ಇವುಗಳ ನಡುವೆ ಗಮನಿಸಬೇಕಾದ ಅಂಶವೆಂದರೆ ವಿದ್ಯಾವಂತ ಮಹಿಳೆಯರು ಕೂಡ ಕೌಟುಂಬಿಕ ದೌರ್ಜನ್ಯ, ಅತ್ಯಾಚಾರ, ದಬ್ಬಾಳಿಕೆ, ಬೆದರಿಕೆಗಳಿಗೆ ತುತ್ತಾಗುತ್ತಿರುವುದು. ನಗರ ಪ್ರದೇಶಗಳಲ್ಲಿ ಇಂತಹ ಅಪರಾಧಗಳು ಹೆಚ್ಚಿದಂತೆ ಮಹಿಳೆಯರನ್ನು ಈ ನಿಟ್ಟಿನಲ್ಲಿ ಸಬಲರನ್ನಾಗಿಸುವ ಪ್ರಯತ್ನ ಅತ್ಯವಶ್ಯಕ. ಮಹಿಳಾ ಅಧ್ಯಯನ ಈ ಸಮಯದಲ್ಲಿ ಅತ್ಯಂತ ಪ್ರಸ್ತುತ ವಿಷಯವಾಗಿದೆ.

ಮಹಿಳಾ ಅಧ್ಯಯನ ಶಿಕ್ಷಣಕ್ರಮದಲ್ಲಿ ಮಹತ್ವಪೂರ್ಣ ಎಂಬ ಅರಿವು ಸಮಾಜದಲ್ಲಿ ಕಡಿಮೆ. ಮಹಿಳಾ ಅಧ್ಯಯನದ ವಿದ್ಯಾರ್ಥಿಗಳನ್ನು ‘ನೀವು ಸ್ತ್ರೀವಾದಿಗಳೇ? ಪುರುಷರನ್ನು ದ್ವೇಷಿಸುತ್ತೀರೇ?’ – ಇಂಥ ಪ್ರಶ್ನೆಗಳನ್ನು ಕೇಳುವುದುಂಟು. ಗೃಹವಿಜ್ಞಾನದಂತೆ ಇದು ಕೂಡ ಮಹಿಳೆಯರಿಗೆ ಮೀಸಲು ಎಂಬ ತಪ್ಪು ಕಲ್ಪನೆ ಹಲವರಿಗಿದ್ದರೆ ಮಹಿಳೆಯರು ಇಂತಹ ವಿಷಯಗಳನ್ನು ಅಭ್ಯಸಿಸಿದಾಗ ಪುರುಷನ ವಿರುದ್ಧ ನಿಲ್ಲುತ್ತಾಳೆ. ‘ಸಂಸಾರಸ್ಥರಾಗುವ ಹುಡುಗಿಯರಿಗೆ ಇದರ ಅಗತ್ಯ ಇಲ್ಲ’ ಎನ್ನುತ್ತಾರೆ ಕೆಲವರು. ಮಹಿಳಾ ಅಧ್ಯಯನ ವಿದ್ಯಾರ್ಥಿನಿಯರನ್ನು ‘ನಿಮ್ಮ ಸ್ತ್ರೀವಾದ ಏನಿದ್ದರೂ ಕಾಲೇಜಿನಲ್ಲಷ್ಟೇ ಇರಲಿ, ಮನೆಗೆ ತರಬೇಡ’ ಎನ್ನುವವರೂ ಇದ್ದಾರೆ. ಇವೆಲ್ಲವೂ ಆ ವಿಷಯದ ಕುರಿತಾದ ಅಜ್ಞಾನದ ಫಲಗಳು.

ತೀವ್ರಗಾಮಿ ಸ್ತ್ರೀವಾದವೂ ಅಲ್ಲದೆ, ಸಂಪ್ರದಾಯವಾದವೂ ಅಲ್ಲದೆ ಮಹಿಳೆಯರಿಗೆ ವಸ್ತುಸ್ಥಿತಿಯ ಅರಿವು ಮೂಡಿಸುತ್ತಲೇ ಅವರನ್ನು ಗಟ್ಟಿಯಾಗಿಸುವ ದೃಷ್ಟಿಕೋನವೇ ಮಹಿಳಾ ಅಧ್ಯಯನ. ಪುರುಷ ವಿರೋಧಿಯೂ ಅಲ್ಲದೇ, ಅವನ ಕೈಗೊಂಬೆಯೂ ಆಗದೇ ಅವನ ಸಮವಾಗಿ ನಿಂತು ಪರಸ್ಪರ ಗೌರವಿಸುತ್ತಲೇ ಹೊಸ ಸಮಾಜದ ಪರಿಕಲ್ಪನೆಯಲ್ಲಿ ವಿದ್ಯಾರ್ಥಿಗಳನ್ನು ಕರೆದೊಯ್ಯುವ ವಿಷಯವಾಗಿ ಇಂದು ಮಹಿಳಾ ಅಧ್ಯಯನ ಬೆಳೆಯುತ್ತಿದೆ. ಮಹಿಳಾ ಅಧ್ಯಯನ ಸ್ತ್ರೀವಾದದ ತತ್ವಗಳನ್ನು ಪ್ರತಿಪಾದಿಸುವುದಿಲ್ಲ, ಅದು ಒಂದು ಮಹಿಳಾ ಸಂವೇದನೆ, ಮಹಿಳೆ ಹಾಗೂ ಪುರುಷನ ಬಗೆಗಿನ ಸಮಾನ ಗೌರವ, ಸ್ವಾಭಿಮಾನದ ಬದುಕು ಹಾಗೂ ಸೌಹಾರ್ದಯುತ ಸಮಾಜವನ್ನು ಪ್ರತಿಬಿಂಬಿಸುತ್ತದೆ. ಮಹಿಳೆಯರಿಗೆ ತಮ್ಮ ಇತಿಹಾಸದ, ಸಮಸ್ಯೆಗಳ, ಸುತ್ತಮುತ್ತಲಿನ ಸವಾಲುಗಳ ಅರಿವನ್ನು ಮೂಡಿಸುತ್ತಲೇ ಅದನ್ನು ಬಗೆಹರಿಸಿಕೊಳ್ಳುವ ರೀತಿಯನ್ನೂ ತಿಳಿಸುತ್ತದೆ. ಮಹಿಳೆಯರಿಗಾಗಿ ಮೀಸಲಿರುವ ಕಾನೂನಾತ್ಮಕ ವಿಷಯಗಳ ಅಧ್ಯಯನವನ್ನೂ ಮಾಡಲಾಗುತ್ತದೆ.

ಕಾನೂನು ತಮ್ಮ ಸಹಾಯಕ್ಕಾಗಿ ಇರುವುದು ಎಂದು ಅರಿತು ಅದನ್ನು ಸದುಪಯೋಗಪಡಿಸಿಕೊಳ್ಳುವ ಅರಿವು ಮೂಡಿದಾಗ ವಿದ್ಯಾವಂತ ಮಹಿಳೆಯರು ತಮ್ಮ ಮೇಲಾಗುತ್ತಿರುವ ಅನೇಕ ರೀತಿಯ ಶೋಷಣೆಗಳ ವಿರುದ್ಧ ನಿಲ್ಲುವುದಕ್ಕೆ ಸಾಧ್ಯ. ತಮಗೆ ಕಾನೂನು ಹೇಗೆ ಸಹಾಯ ಮಾಡುತ್ತದೆ, ಸರ್ಕಾರದಿಂದ ತಮ್ಮ ಸಬಲೀಕರಣಕ್ಕೆ ಇರುವ ಯೋಜನೆಗಳೇನು, ಹೇಗೆ ಅನೇಕ ಸಂಘಟನೆಗಳು ಮಹಿಳಾಪರ ಅಭಿವೃದ್ಧಿ ಕಾರ್ಯಗಳನ್ನು ನಡೆಸುತ್ತಿವೆ ಎಂಬುದರ ಅರಿವು ಇರದ ಮಹಿಳೆಯರು ಹೆಚ್ಚಾಗಿ ಕೌಟುಂಬಿಕ ದೌರ್ಜನ್ಯ, ಸೈಬರ್ ಅಪರಾಧ, ಬೆದರಿಕೆ, ಮಾನಸಿಕ ಹಿಂಸೆ ಮುಂತಾದುವುಗಳಿಗೆ ಬಲಿಯಾಗುತ್ತಿದ್ದಾರೆ.

ಮಹಿಳಾ ಅಧ್ಯಯನ ತನ್ನ ವಿದ್ಯಾರ್ಥಿ/ವಿದ್ಯಾರ್ಥಿನಿಯರನ್ನು ತಮ್ಮ ಸುತ್ತಲಿನ ಸಾಮಾಜಿಕ ಶೋಷಣೆಗಳನ್ನು, ಲಿಂಗತಾರತಮ್ಯವನ್ನು ಗುರುತಿಸುತ್ತಾ ತಮ್ಮ ತಮ್ಮ ಕಾರ್ಯಕ್ಷೇತ್ರಗಳಲ್ಲಿ ಅವುಗಳನ್ನು ಎದುರಿಸುತ್ತಾ, ಬದಲಾವಣೆಯನ್ನು ತರುವುದಕ್ಕೆ ಪ್ರೇರೇಪಿಸುತ್ತದೆ. ಲಿಂಗ ತಾರತಮ್ಯದ ಕುರಿತಾದ ಸಮಸ್ಯೆ, ಸವಾಲುಗಳ ಕುರಿತಾಗಿ ಹೊಸ ಹೊಸ ಆಯಾಮಗಳತ್ತ ಬೆಳಕು ಚೆಲ್ಲುವ ಈ ವಿಷಯವು ಮಹಿಳೆ ಹಾಗೂ ಪುರುಷರನ್ನು ಹೆಚ್ಚಿನ ಸಂವೇದನಾಶೀಲ ಬದಲಾವಣೆಗೆ ಒಳಪಡಿಸುತ್ತದೆ. ತಮ್ಮ ಸುತ್ತಲಿನ ಮಹಿಳೆಯರನ್ನು ಅವರ ಸಾಧನೆಗಳನ್ನು, ಅನುಭವಗಳನ್ನು ಅರಿಯುವ ಪ್ರಕ್ರಿಯೆಯಲ್ಲಿ ತಮ್ಮ ಸುತ್ತಲಿನ ಮಹಿಳೆಯರನ್ನು ಗೌರವಿಸುವ, ಅವರಿಗೆ ಪ್ರೋತ್ಸಾಹದಾಯಕವಾಗಿ ನಿಲ್ಲುವ ಮಾದರಿಗೆ ದಾರಿಯಾಗುತ್ತದೆ.

ತಮ್ಮ ಸಮಾಜದ ವಿವಿಧ ಮಜಲುಗಳಲ್ಲಿ ಮಹಿಳೆಯರ ಸ್ಥಿತಿಗತಿಗಳನ್ನು ಅರಿಯುತ್ತಾ ತಮ್ಮ ಸ್ವಂತ ಜೀವನದ ಆಗುಹೋಗುಗಳನ್ನು ಮಹಿಳೆಯರು ಹೊಸ ಆಯಾಮದಿಂದ ನೋಡುವುದನ್ನು ಕಲಿಯುತ್ತಾರೆ. ತಮ್ಮ ಅಕ್ಕ-ತಂಗಿ-ತಾಯಿ-ಸ್ನೇಹಿತೆ-ನೆರೆಮನೆಯವರು – ಹೀಗೆ ಅನೇಕ ಮಹಿಳೆಯರ ಸಮಸ್ಯೆಗಳನ್ನು ಸ್ತ್ರೀಸಂವೇದನಾ ದೃಷ್ಟಿಯಿಂದ ನೋಡುತ್ತಾ ಅವರನ್ನು ಸಬಲೀಕರಣಗೊಳಿಸುವುದರತ್ತ ಹೆಜ್ಜೆ ಇಡುತ್ತಾರೆ. ಇಲ್ಲಿ ಮಹಿಳೆಯರಷ್ಟೇ ಅಲ್ಲ, ಪುರುಷರ ದೃಷ್ಟಿಕೋನವೂ ಬದಲಾಗುತ್ತದೆ. ತಮ್ಮ ತಾಯಿ, ಪತ್ನಿ ಹಾಗೂ ಇನ್ನಿತರ ಮನೆಯ ಸದಸ್ಯರಿಗೆ, ಕಾರ್ಯಕ್ಷೇತ್ರದ ಮಹಿಳೆಯರ ಸವಾಲುಗಳಿಗೆ ಪರಿಹಾರ ನೀಡುವ ಪ್ರಕ್ರಿಯೆ ಇಲ್ಲಿ ಆರಂಭವಾಗುತ್ತದೆ.

ಮಹಿಳೆಯರ ದೈಹಿಕ ಸಾಮರ್ಥ್ಯ, ಮಾನಸಿಕ ಸಂವೇದನೆಗಳು, ಅದನ್ನು ನಿಭಾಯಿಸುವ ರೀತಿ, ಮಹಿಳೆಯರು ಸಾಮಾಜಿಕ, ಆರ್ಥಿಕ, ರಾಜಕೀಯ, ಕ್ರೀಡೆ ಇನ್ನಿತರ ಕ್ಷೇತ್ರದಲ್ಲಿ ಮಾಡಿರುವ ಸಾಧನೆಗಳ ಕುರಿತಾಗಿ ಬೆಳಕು ಚೆಲ್ಲುತ್ತಲೇ ಸಬಲರಾಗುವುದಕ್ಕೆ ಮಹಿಳಾ ಅಧ್ಯಯನ ಪ್ರೋತ್ಸಾಹಿಸುತ್ತದೆ. ಲಿಂಗತಾರತಮ್ಯವನ್ನು ಮೆಟ್ಟಿ ನಿಲ್ಲುವ ರೀತಿ, ತಮ್ಮ ಮನೆಯ ಸದಸ್ಯರಿಂದಲೇ ಮಹಿಳೆಯರನ್ನು ಗೌರವಿಸುವುದನ್ನು ಕಲಿಸುತ್ತಾ, ಪುರುಷರ, ಮಹಿಳೆಯರ ಮನೋಭಾವಗಳ ವ್ಯತ್ಯಾಸವನ್ನು ತಿಳಿಸುತ್ತಾ ಸಮಾಜವನ್ನು ನೋಡುವ ಹೊಸ ಆಯಾಮವನ್ನು ನೋಡುವುದರಿಂದ ಹದಿಹರೆಯದವರಲ್ಲಿ ಸಾಮಾಜಿಕ ಸ್ವಾಸ್ಥ್ಯದ ಅರಿವು ಮೂಡುತ್ತದೆ.

ಹುಟ್ಟಿನಿಂದಲೇ ಬಂದ ಜೈವಿಕ ವ್ಯತ್ಯಾಸ ಹೇಗೆ ಲಿಂಗತಾರತಮ್ಯವಾಗಿ ಮಾರ್ಪಟ್ಟು ತಮ್ಮ ಬೌದ್ಧಿಕ ಗುರುತಿಸಿಕೊಳ್ಳುವಿಕೆಯಲ್ಲಿ ಪ್ರಮುಖ ಸವಾಲಾಗುತ್ತದೆ, ಬೆಳೆಯುವ ಹಾದಿಯಲ್ಲಿ ಮಹಿಳೆಯರಿಗಿರುವ ಸಮಸ್ಯೆಗಳೇನು ಎನ್ನುವುದರತ್ತ ಬೆಳಕು ಚೆಲ್ಲುತ್ತಾ, ಇತಿಹಾಸದುದ್ದಕ್ಕೂ ಮಹಿಳೆಯರ ಪಾತ್ರ, ಅವರ ಅನುಭವಗಳೂ, ಅವರ ಹೋರಾಟದ ಹೆಜ್ಜೆ-ಹಾದಿಗಳನ್ನು ವಿವರಿಸುವ ಈ ಪಠ್ಯಕ್ರಮವು ನಂತರದಲ್ಲಿ ಮಹಿಳೆಯು ಇಂದಿನ ಸಮಾಜದಲ್ಲಿ ಎದುರಿಸುತ್ತಿರುವ ಸಾಮಾಜಿಕ ಸವಾಲುಗಳತ್ತ ಬೆಳಕು ಚೆಲ್ಲುತ್ತದೆ. ಮಹಿಳೆಯರಲ್ಲಿ ಹೆಚ್ಚುತ್ತಿರುವ ಅಪೌಷ್ಟಿಕತೆ, ರಕ್ತಹೀನತೆ ಮುಂತಾದ ಆರೋಗ್ಯ ಸಮಸ್ಯೆಗಳು ಅದಕ್ಕೆ ಕಾರಣ. ಪರಿಹಾರ ಹಾಗೂ ಸರ್ಕಾರಿ ಸೌಲಭ್ಯಗಳ ಮಾಹಿತಿಯನ್ನೂ ನೀಡುತ್ತದೆ. ವಿವಿಧ ರಂಗಗಳಲ್ಲಿ ಮಹಿಳೆಯರ ಸಕ್ರಿಯ ಭಾಗವಹಿಸುವಿಕೆಗೆ ಅನೇಕ ಉದಾಹರಣೆಗಳನ್ನು ನೀಡುತ್ತಾ ಪ್ರೋತ್ಸಾಹಿಸುತ್ತದೆ.

ಕಾನೂನಿನಲ್ಲಿ ಮಹಿಳೆಯರಿಗಾಗಿ ಏನೇನು ಸೌಲಭ್ಯಗಳಿವೆ ಎಂದು ವಿವರಿಸುತ್ತಾ, ಹಿಂದೂ, ಮುಸ್ಲಿಂ, ಹಾಗೂ ಕ್ರೈಸ್ತವಿವಾಹ ಕಾಯ್ದೆಗಳು, ಅದರಲ್ಲಿ ಮಹಿಳೆಯರಿಗಾಗುವ ಅನ್ಯಾಯಗಳು, ಅವುಗಳಿಗೆ ಕಾನೂನಿನ ಮುಖಾಂತರ ದೊರೆಯುವ ಸೌಲಭ್ಯಗಳು, ವರದಕ್ಷಿಣೆ, ಲೈಂಗಿಕ ಕಿರುಕುಳ, ಅತ್ಯಾಚಾರ, ಕೌಟುಂಬಿಕ ದೌರ್ಜನ್ಯ, ವಿಚ್ಛೇದನ, ಮಾನಸಿಕ ಹಾಗೂ ದೈಹಿಕ ಹಿಂಸೆ, ಆಸಿಡ್ ದಾಳಿ, ಬೆದರಿಕೆ, ಸೈಬರ್ ಕ್ರೈಮ್, ಚುಡಾಯಿಸುವಿಕೆ ಮುಂತಾದ ಹಲವಾರು ಸಮಸ್ಯೆಗಳಿಗೆ ಕಾನೂನು ಹಾಗೂ ಮಹಿಳಾ ಪರ ಸಂಘಟನೆಗಳು ಹೇಗೆ ಸಹಾಯ ಮಾಡಬಲ್ಲವು, ಅಂತಹ ಸಮಯದಲ್ಲಿ ಮಹಿಳೆ ಹೇಗೆ ಸಬಲಳಾಗಿ ನಿಂತು ಇವನ್ನು ಎದುರಿಸಬೇಕು ಎಂಬುದರ ಮಾಹಿತಿ ಹಾಗೂ ತರಬೇತಿ ನೀಡಲಾಗುತ್ತದೆ. ಮಹಿಳೆಯರಿಗೆ ಮಾನಸಿಕ ಧೃಢತೆಯನ್ನು ನೀಡುವುದರಲ್ಲಿ ಸಹಕರಿಸುವ ಈ ಪಠ್ಯಕ್ರಮವು ಮಹಿಳೆಯರು ತಮ್ಮ ಮುಂದಿನ ಜೀವನದ ಹೆಜ್ಜೆಗಳನ್ನು ಜಾಣ್ಮೆಯಿಂದ ದೃಢವಾಗಿ ಆಯ್ಕೆ ಮಾಡಿಕೊಳ್ಳುವುದರಲ್ಲಿ ಮುಖ್ಯ ಪಾತ್ರ ವಹಿಸುತ್ತದೆ.

ಸುಮಾರು ಇನ್ನೂರಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಉದ್ಯೋಗವಕಾಶವಿರುವ ಈ ಪಠ್ಯವಿಷಯದ ಮೇಲೆ ಗಮನ ಹರಿಸಬೇಕಾದುದು ವಿದ್ಯಾ ಸಂಸ್ಥೆಗಳಿಗೆ ಮಾತ್ರವಲ್ಲದೇ ವಿದ್ಯಾರ್ಥಿಗಳಿಗೂ ಕೂಡ ಪ್ರಸ್ತುತ. ಈಗ ಪದವಿ ಪೂರ್ವ ಶಿಕ್ಷಣದಲ್ಲಿ ಕಡ್ಡಾಯವಾಗಿರುವ ಪರಿಸರ ವಿಜ್ಞಾನ, ಭಾರತದ ಸಂವಿಧಾನದ ಜೊತೆಗೆ ಮಹಿಳಾ ಅಧ್ಯಯನದ ಆಯ್ದ ಭಾಗಗಳನ್ನು ಕೂಡ ಕಡ್ಡಾಯಗೊಳಿಸಿದರೆ ಇಂದು ಮಹಿಳೆಯರ ಸಮಸ್ಯೆಗಳ ಅರಿವು ಪ್ರತಿಯೊಬ್ಬ ಪುರುಷನಿಗೂ ಆಗುವುದಲ್ಲದೆ, ಮಹಿಳೆಯರನ್ನು ಗೌರವಿಸುವ ಮಾನಸಿಕ ಸ್ವಾಸ್ಥ್ಯವೂ ಬೆಳೆಯುತ್ತದೆ. ಮಹಿಳೆಯರ ಮೇಲಾಗುವ ಶೋಷಣೆ ಅಪರಾಧಗಳ ಸಂಖ್ಯೆ ಕಡಿಮೆಯಾಗುತ್ತದೆ.

ಇಂದಿನ ಹದಿಹರೆಯದ ಯುವಕ ಯುವತಿಯರಿಗೆ ಇಂತಹ ಪಠ್ಯವಿಷಯಗಳು ಮಹಿಳೆಯರ ಕುರಿತಾಗಿ ಹೊಸ ದೃಷ್ಟಿಕೋನವನ್ನು ತೋರುತ್ತಾ, ಸಂವೇದನಾಶೀಲ ಮನೋಭಾವವನ್ನು ಬೆಳೆಸುತ್ತಾ ಮಹಿಳೆಯರ ಸಮಗ್ರ ಅಭಿವೃದ್ಧಿಯೆಡೆಗೆ ದಾರಿ ಮಾಡಿಕೊಡುತ್ತದೆ. ಉದ್ಯೋಗಾವಕಾಶಗಳೂ ಸಾಕಷ್ಟಿರುವ ಈ ಕ್ಷೇತ್ರದತ್ತ ಯುವಪೀಳಿಗೆ ಆಸಕ್ತಿ ತೋರಿದಲ್ಲಿ ಮಹಿಳಾ ಸಬಲೀಕರಣ ಸಾಧ್ಯ. ತಮ್ಮ ಎದುರಿರುವ ಅನೇಕ ಸವಾಲುಗಳನ್ನು ಎದುರಿಸುವುದರೊಂದಿಗೆ ಮಹಿಳೆಯರು ತಮ್ಮನ್ನು ತಾವು ಗೌರವಿಸುವುದನ್ನು ಕಲಿತರೆ ಸಬಲೀಕರಣದತ್ತ ಈ ಹೆಜ್ಜೆ ಯಶಸ್ವಿಯಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT