ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖುಷಿ ನೀಡಿದ ಕಲೆ

Last Updated 5 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಕಣ್ಸೆಳೆಯುವ ಆಭರಣಗಳು, ಚಿತ್ತಾಕರ್ಷಕ ಹೂಗೂಚ್ಛ, ಬಗೆಬಗೆ ಆಕಾರದಲ್ಲಿರುವ ರುಚಿರುಚಿ ಕೇಕ್‌, ಮನಮೋಹಕ ಕರಕುಶಲ ವಸ್ತುಗಳು...

ಇವಿಷ್ಟನ್ನೂ ಸಿದ್ಧಪಡಿಸಿದವರು ಜೆ.ಪಿ.ನಗರದ ಸರಿತಾ. ಮನಸಿನ ಖುಷಿಗೆಂದು ಹವ್ಯಾಸದ ಮೊರೆ ಹೋಗಿರುವ ಸರಿತಾ ಅವರ ಕೈಯಲ್ಲಿ ರೂಪುಪಡೆದ ವಸ್ತುಗಳು.

ರೇಷ್ಮೆದಾರ, ಟೆರ್ರಾಕೊಟ ಆಭರಣಗಳ ಬೇಡಿಕೆ ಹೆಚ್ಚುತ್ತಿರುವುದನ್ನು ಕಂಡುಕೊಂಡ ಹಲವರು ಆಭರಣ ತಯಾರಿಕೆಯನ್ನು ಕಲಿತು, ಅದನ್ನೇ ಹವ್ಯಾಸವಾಗಿ ರೂಢಿಸಿಕೊಂಡಿದ್ದಾರೆ. ಸರಿತಾ ಸಹ ಇದೇ ಹಾದಿ ಹಿಡಿದವರು. ಬೇಡಿಕೆಗೆ ಅನುಗುಣವಾಗಿ ಚಂದದ ಕಿವಿಯೋಲೆ, ಬಣ್ಣಬಣ್ಣದ ಮಣಿಗಳ ಸುಂದರ ಹಾರವನ್ನು ಸರಾಗವಾಗಿ ಮಾಡಬಲ್ಲರು.

ಸ್ನಾತಕೋತ್ತರ ಪದವಿ ಪಡೆದಿರುವ ಇವರು, ಮಾನಸಿಕ ನೆಮ್ಮದಿಗಾಗಿ ಹವ್ಯಾಸದ ಮೊರೆ ಹೋದವರು. ‘ನಿಗದಿತ ಸಮಯಕ್ಕೆ ಅನುಗುಣವಾಗಿ ಕೆಲಸಕ್ಕೆ ಹೋಗಿ, ಅಲ್ಲಿ ಶಿಸ್ತಿನಿಂದ ಕೂರುವುದು ಸಾಧ್ಯವಾಗಲಿಲ್ಲ. ಹೀಗಾಗಿ ಬಾಲ್ಯದಿಂದಲೂ ಇಷ್ಟವಾಗುತ್ತಿದ್ದ ಕರಕುಶಲ ಕಲೆಗಳ ಆಸಕ್ತಿಯನ್ನೇ ಬೆಳೆಸಿಕೊಳ್ಳಲು ನಿರ್ಧರಿಸಿದೆ’ ಎನ್ನುತ್ತಾರೆ ಇವರು.

‘ಸಣ್ಣ ವಯಸ್ಸಿನಿಂದಲೂ ನನಗೆ ಕಲೆ ಬಗ್ಗೆ ಸೆಳೆತ. ಯಾವುದಾದರೂ ಚಿತ್ರ ಇಷ್ಟವಾದರೆ ಮನೆಗೆ ಬಂದು ಅದನ್ನು ಬಿಡಿಸಲು ಯತ್ನಿಸುತ್ತಿದ್ದೆ. ನಾನು ಹಳ್ಳಿಯಲ್ಲಿ ಬೆಳೆದವಳು. ನದಿ ತೀರದಲ್ಲಿ ಸಿಗುವ ಮಣ್ಣಿನಿಂದ ಗೊಂಬೆ, ಕುಂಡ, ಮನುಷ್ಯನ ಆಕೃತಿ ಮಾಡುತ್ತಿದ್ದೆ. ಕರಕುಶಲ ವಸ್ತುಗಳ ಪ್ರದರ್ಶನಕ್ಕೆ ಹೋಗುವುದೆಂದರೂ, ನನಗೆ ಇಷ್ಟ. ಮದುವೆಯಾದ ಬಳಿಕ ಬೆಂಗಳೂರಿಗೆ ಬಂದೆ. ಪತಿ, ಮಕ್ಕಳ ಕೆಲಸದಲ್ಲಿ ಬ್ಯುಸಿಯಾಗಿಬಿಟ್ಟೆ. ಆದರೂ ಬಿಡುವು ಮಾಡಿಕೊಂಡು ಒಂದೊಂದೇ ಕರಕುಶಲ ಕಲೆಗಳನ್ನು ಕಲಿಯಲು ಆರಂಭಿಸಿದೆ’ ಎಂದು ಕಲೆಯ ಮೋಹದ ಬಗ್ಗೆ ತಿಳಿಸುತ್ತಾರೆ.

‘ಕೆಲಸದಿಂದ ಹಣ ಗಳಿಸಬಹುದು. ಹವ್ಯಾಸದಿಂದ ಮನಸ್ಸಿಗೆ ಖುಷಿ ಸಿಗುತ್ತದೆ. ನಾವು ರೂಪಿಸಿದ ಕಲಾಕೃತಿಗಳನ್ನು ನೋಡುವಾಗ ಹೆಮ್ಮೆ ಎನಿಸುತ್ತದೆ’ ಎಂದು ಸಂತಸ ಹಂಚಿಕೊಳ್ಳುತ್ತಾರೆ.

ಪೇಂಟಿಂಗ್‌, ಪಂಚ್‌ ಕ್ರಾಫ್ಟ್‌, ಡಿಸೈನರ್‌ ಎನ್ವಿಲಪ್‌, ಬೇಕಿಂಗ್‌, ಕುಕ್ಕಿಂಗ್‌, ಸ್ಟಾಕಿಂಗ್‌ ಫ್ಲವರ್ಸ್‌, ಕ್ವಿಲಿಂಗ್‌ ಜ್ಯುವೆಲ್ಲರ್‌, ಡಿಸೈನರ್‌ ಬಾಕ್ಸ್‌... ಹೀಗೆ ಹಲವು ಹವ್ಯಾಸಗಳನ್ನು ರೂಢಿಸಿಕೊಂಡಿದ್ದಾರೆ. ಇವರು ಈ ಪ್ರತಿಭೆಯನ್ನು ತರಗತಿಗೆ ಹೋಗಿ ಕಲಿತಿಲ್ಲ. ತಮ್ಮ ಸಾಮರ್ಥ್ಯ

ದಿಂದಲೇ ಸಿದ್ಧಿಸಿಕೊಂಡಿದ್ದಾರೆ. ಅಂಗಡಿ, ಜನರು ತೊಟ್ಟ ಆಭರಣಗಳನ್ನು ನೋಡುತ್ತಲೇ ಅದನ್ನು ಪ್ರಯೋಗಕ್ಕಿಳಿಸಿದ್ದಾರೆ.

‘ಚಿತ್ರಕಲೆಯನ್ನು ಬಿಡಿಸುವುದರಿಂದ ಬಣ್ಣಗಳ ಸಂಯೋಜನೆಯ ಅರಿವಿದೆ. ಆಭರಣ ವಿನ್ಯಾಸದಲ್ಲಿ ಆ ಕೌಶಲ ಉಪಯೋಗಕ್ಕೆ ಬರುತ್ತದೆ. ಬಗೆಬಗೆ ಚಿತ್ತಾರಗಳ ಜೊತೆಗೆ ಬಣ್ಣಗಳ ಉಪಯೋಗವೂ ಜನರಿಗೆ ಇಷ್ಟವಾಗಬೇಕು. ನಾನು ಬಳಸುವ ಬಣ್ಣಗಳೇ ನನ್ನ ಪ್ಲಸ್‌ ಪಾಯಿಂಟ್‌’ ಎನ್ನುತ್ತಾರೆ ಇವರು. ಇದಲ್ಲದೆ ಕುಂಡಗಳ ಮೇಲೆ ಸೆರಾಮಿಕ್‌ ವಿನ್ಯಾಸ, ಹೂದಾನಿ ರಚನೆ, ಬಟ್ಟೆಗಳ ಮೇಲೆ ಕಸೂತಿಯನ್ನು ಮಾಡುತ್ತಾರೆ.

ವಿಭಿನ್ನ ಪರಿಕಲ್ಪನೆಯ ಆಕರ್ಷಕ ಕೇಕ್‌ ತಯಾರಿಕೆಯೂ ಇವರ ವಿಶೇಷ. ‘ಹವ್ಯಾಸಕ್ಕೆಂದು ಹೊಸ ರೀತಿಯ ಕೇಕ್‌ಗಳನ್ನು ಮಾಡಲು ಆರಂಭಿಸಿದೆ. ಕ್ರಿಯಾಶೀಲವಾಗಿ ಏನೇನೋ ಪ್ರಯೋಗಗಳನ್ನು ಮಾಡಿದೆ. ನಂತರ ಈ ಹವ್ಯಾಸ ಮುಂದುವರೆಯಿತು. ಕೇಕ್‌ಗೆ ಬಳಸುವ ಸಾಮಾಗ್ರಿಗಳ ಬಗ್ಗೆ ಚೆನ್ನಾಗಿ ತಿಳಿದುಕೊಂಡಿರಬೇಕು. ನಾನು ಮಾಡುವ ಕೇಕ್‌ ತಿನ್ನಲು ರುಚಿಯಾಗಿರುವುದರ ಜೊತೆಗೆ ಆರೋಗ್ಯಕ್ಕೂ ಹಿತವಾಗಿರುತ್ತದೆ.  ಡಾಲ್ಡಾ ಬಳಕೆ ಕಡಿಮೆಯಿರುತ್ತದೆ. ಬೆಣ್ಣೆ, ಕೋಕೊ ಸೇರಿದಂತೆ ಆದಷ್ಟು ನೈಸರ್ಗಿಕ ಸಾಮಗ್ರಿಗಳನ್ನು ಬಳಸುತ್ತೇನೆ’ ಎಂದು ವಿವರಿಸುತ್ತಾರೆ.

(ಜೆ.ಪಿ.ನಗರದ ಸರಿತಾ)

ತಾವು ಕಲಿತ ಈ ಕಲೆಯನ್ನು ಇವರು ಆಸಕ್ತರಿಗೆ ಕಲಿಸುತ್ತಾರೆ. ‘ವ್ಯರ್ಥವಾಗಿ ಸಮಯ ಕಳೆಯುವುದು ನನಗೆ ಇಷ್ಟವಿಲ್ಲ. ಹಾಗಾಗಿ ಅನೇಕ ಹವ್ಯಾಸ ಬೆಳೆಸಿಕೊಂಡೆ. ಇದು ಆರ್ಥಿಕವಾಗಿ ನೆರವಾಗುವುದರ ಜೊತೆಗೆ, ಸಂತೋಷವನ್ನು ನೀಡುತ್ತದೆ’ ಎನ್ನುತ್ತಾರೆ ಸರಿತಾ.

ಸಂಪರ್ಕಕ್ಕೆ: 9880890489

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT