ಗುರುವಾರ , ಮಾರ್ಚ್ 4, 2021
29 °C

ಸಹಜ ಸೌಂದರ್ಯಕ್ಕೆ ಹೊಸ ಮೆರುಗು

ಸುಮನಾ ಕೆ. Updated:

ಅಕ್ಷರ ಗಾತ್ರ : | |

ಸಹಜ ಸೌಂದರ್ಯಕ್ಕೆ ಹೊಸ ಮೆರುಗು

ನಾನು ಪ್ರಸಾಧನ ಕಲಾವಿದನಾಗಿ ಸಿನಿಮಾ ಕ್ಷೇತ್ರಕ್ಕೆ ಕಾಲಿರಿಸಿದ್ದು ತೀರಾ ಆಕಸ್ಮಿಕ. ನನಗೆ ಮೊದಲಿನಿಂದಲೂ ಫೋಟೊಗ್ರಫಿ ಬಗ್ಗೆ ಆಸಕ್ತಿ ಇತ್ತು. ಆದರೆ, ಅವಕಾಶಗಳು ಮತ್ತು ಸನ್ನಿವೇಶಗಳ ಕಾರಣದಿಂದ ಪ್ರಸಾಧನ ಕಲಾವಿದನಾದೆ. ಈಗ ಇದೇ ನನ್ನ ಕಾರ್ಯಕ್ಷೇತ್ರ ಮತ್ತು ಆಸಕ್ತಿ. 3 ವರ್ಷಗಳಿಂದ ನಟಿ ಶ್ರುತಿ ಹರಿಹರನ್‌ ಅವರ ‘ಪರ್ಸನಲ್‌ ಮೇಕಪ್‌ಮನ್’ ಆಗಿದ್ದೇನೆ.

ನನ್ನೂರು ಮಂಡ್ಯದ ಒಂದು ಹಳ್ಳಿ. ಹತ್ತನೇ ತರಗತಿ ಪರೀಕ್ಷೆ ಮುಗಿಯುತ್ತಿದ್ದಂತೆ ಬೆಂಗಳೂರಿಗೆ ಬಂದೆ. ಪಾಸಾದೆನೋ, ಫೇಲಾದೆನೋ ಇಂದಿಗೂ ಗೊತ್ತಿಲ್ಲ. ಕಾಲ್‌ಸೆಂಟರ್‌ನಲ್ಲಿ ಕೆಲಸ ಸಿಕ್ಕಿತ್ತು. ಅಲ್ಲೇ ಇದ್ದರೆ ಜೀವನದಲ್ಲಿ ಏನೂ ಸಾಧನೆ ಮಾಡುವುದಕ್ಕೆ ಆಗುವುದಿಲ್ಲ ಎಂದು ನನ್ನ ಸ್ನೇಹಿತ ಪ್ರಸಾಧನ ಕಲಾವಿದ ಶಿವರಾಜ್‌ ಅವರು ಈ ಕ್ಷೇತ್ರಕ್ಕೆ ಕರೆದುಕೊಂಡು ಬಂದರು.

ಫೋಟೊಗ್ರಫಿಯಲ್ಲಿ ಏನಾದರೂ ಸಾಧನೆ ಮಾಡಬೇಕು ಎಂದುಕೊಂಡಿದ್ದವನು ನಿಧಾನವಾಗಿ ಪ್ರಸಾಧನ ಕಲೆಯತ್ತ ಆಸಕ್ತಿ ಬೆಳೆಸಿಕೊಂಡೆ. ನಾನು ಈ ಕ್ಷೇತ್ರಕ್ಕೆ ಬಂದು 14 ವರ್ಷಗಳಾದವು. ಆರಂಭದಲ್ಲಿ ಐದು ವರ್ಷ ಸಹಾಯಕನಾಗಿದ್ದೆ. ಹಂತಹಂತವಾಗಿ ಸಾಧಾರಣ ಮೇಕಪ್‌, ಪೌರಾಣಿಕ ಪಾತ್ರ... ಹೀಗೆ ಸಂದರ್ಭಕ್ಕೆ ಅನುಗುಣವಾಗಿ ಮೇಕಪ್‌ ಮಾಡುವುದನ್ನು ಕಲಿತುಕೊಂಡೆ.

ರಕ್ಷಿತಾ, ಅಮೂಲ್ಯ, ಸಿಂಧು ಮೆನನ್‌, ಶ್ರುತಿ ಹರಿಹರನ್‌, ಶ್ರದ್ಧಾ ಶ್ರೀನಾಥ್‌ ಸೇರಿ 25ಕ್ಕೂ ಹೆಚ್ಚು ಸೆಲೆಬ್ರಿಟಿಗಳಿಗೆ ಮೇಕಪ್‌ ಮಾಡಿದ್ದೇನೆ. ಸಿನಿಮಾದಲ್ಲಿ ನಟ, ನಟಿಯರಿಗೆ ಮೇಕಪ್‌ ಮಾಡುವಾಗ ಸಂದರ್ಭ ಮತ್ತು ಹಿನ್ನೆಲೆಯನ್ನೂ ತಿಳಿದುಕೊಂಡಿರಬೇಕು. ಸಿನಿಮಾದಲ್ಲೂ ಮದುವೆ, ಪಾರ್ಟಿಯಂಥ ಪ್ರತ್ಯೇಕ ದೃಶ್ಯಗಳಿಗೆ ಅವುಗಳ ಭಾವನೆಗೆ ಧಕ್ಕೆಯಾಗದಂತೆ ಮೇಕಪ್ ಮಾಡಬೇಕು. ಕೆಲವೊಮ್ಮೆ ಲೈಟಿಂಗ್ ಅರಿತು ಮೇಕಪ್ ಹಚ್ಚಬೇಕಾಗುತ್ತದೆ. ಸಿನಿಮಾ ನಿರ್ಮಾಣಗೊಳ್ಳುವ ಒಟ್ಟಾರೆ ಪ್ರಕ್ರಿಯೆಯಲ್ಲಿ ನಮ್ಮ ಪಾತ್ರವೂ ಗಮನಾರ್ಹ.

ಮೇಕಪ್ ಮಾಡುವುದು ಸದಾ ಸವಾಲೊಡ್ಡುವ ಕೆಲಸ. ಸೆಲೆಬ್ರಿಟಿ ಎಂದು ಗುರುತಿಸಿಕೊಂಡವರಿಗೆ ಅಭಿಮಾನಿಗಳ ವರ್ಗ ಇರುತ್ತದೆ. ಅವರ ಕಣ್ಣಿನಲ್ಲಿ ಸದಾ ಅಂದವಾಗಿ ಕಾಣಬೇಕು ಎನ್ನುವುದು ಸೆಲೆಬ್ರಿಟಿಗಳ ನಿರೀಕ್ಷೆ. ತೆರೆಯ ಮೇಲಷ್ಟೇ ಅಲ್ಲ, ಸಾರ್ವಜನಿಕ ಕಾರ್ಯಕ್ರಮಗಳಲ್ಲಿಯೂ ಸೆಲೆಬ್ರಿಟಿಗಳು ಮೇಕಪ್ ಹಾಕಿಕೊಂಡೇ ಕಾಣಿಸಿಕೊಳ್ಳುತ್ತಾರೆ. ನಾವು ಸ್ವಲ್ಪ ಹೆಚ್ಚುಕಡಿಮೆ ಮಾಡಿದರೂ ಸೆಲಬ್ರಿಟಿಗಳು ನಗೆಪಾಟಲಿಗೆ ಈಡಾಗಬೇಕಾಗುತ್ತದೆ.

ನಾನು ಈಗ ಕೆಲ ಸಿನಿಮಾ ಸೆಲೆಬ್ರಿಟಿಗಳಿಗೆ ಪರ್ಸನಲ್‌ ಮೇಕಪ್‌ ಕಲಾವಿದ. ಹೇರ್‌ ಸ್ಟೈಲಿಸ್ಟ್‌, ಮೇಕಪ್‌ ಕಲಾವಿದರು, ವಸ್ತ್ರ ವಿನ್ಯಾಸಕರು ನನ್ನ ತಂಡದಲ್ಲಿದ್ದಾರೆ. ಮೇಕಪ್‌ಗೆ ಬಳಸುವ ಸೌಂದರ್ಯವರ್ಧಕಗಳ ಬಗ್ಗೆಯೂ ನಾನು ಬಹಳಷ್ಟು ಕಾಳಜಿ ವಹಿಸುತ್ತೇನೆ. ವಿದೇಶಗಳಿಗೆ ತೆರಳಿದಾಗ ಅಲ್ಲಿಂದಲೇ ಪ್ರತಿಷ್ಠಿತ ಕಂಪೆನಿಗಳ ಪ್ರಸಾಧನ ಸಾಮಗ್ರಿಗಳನ್ನು ಖರೀದಿಸಿ ತರುತ್ತೇನೆ. ಮ್ಯಾಕ್‌, ಬಾಬಿ ಬ್ರೌನ್‌, ನೆಕೆಡ್‌ ಹೀಗೆ ಹೆಸರಾಂತ ಕಂಪೆನಿಗಳ ಉತ್ಪನ್ನಗಳು ಸದಾ ನನ್ನ ಬ್ಯಾಗ್‌ನಲ್ಲಿರುತ್ತವೆ. ಅವೇ ನನ್ನ ಆಸ್ತಿ.

ಸಿನಿರಂಗದಲ್ಲಿ ಮಹಿಳೆಯರಿಗಷ್ಟೇ ಅಲ್ಲ, ಪುರುಷರಿಗೂ ನಾನು ಮೇಕಪ್ ಮಾಡಿದ್ದೇನೆ. ನಟರಿಗೆ ಮೇಕಪ್ ಮಾಡಲು 10 ನಿಮಿಷ ಸಾಕು. ಅವರಿಗೆ ಮೇಕಪ್ ಹಾಕುವಾಗ ಮುಖ ಮತ್ತು ಅವರು ಸಿನಿಮಾದ ದೃಶ್ಯಗಳಲ್ಲಿ ಧರಿಸುವ ವಸ್ತ್ರಗಳ ಬಗ್ಗೆ ಗಮನಕೊಟ್ಟರೆ ಸಾಕು. ಆದರೆ ನಟಿಯರ ವಿಷಯ ಹಾಗಲ್ಲ. ಕಣ್ಣು, ತುಟಿ, ಗಲ್ಲ, ಕುತ್ತಿಗೆ, ಕಿವಿ, ತಲೆಗೂದಲು ಹೀಗೆ ಎಲ್ಲವನ್ನೂ ಗಮನದಲ್ಲಿಟ್ಟುಕೊಳ್ಳಬೇಕು.

‘ಹೆಣ್ಣಿನ ಸೌಂದರ್ಯವೇ ಸೌಂದರ್ಯ’ ಎಂಬ ಪ್ರಸಿದ್ಧ ಉಕ್ತಿಯನ್ನು ನೀವೆಲ್ಲರೂ ಕೇಳಿಯೇ ಇರ್ತೀರಿ ಅಲ್ವಾ? ದೇವರು ಕೊಟ್ಟರೂಪಕ್ಕೆ ಮತ್ತಷ್ಟು ಮೆರುಗು ನೀಡುವುದು ನನ್ನಂಥ ಮೇಕಪ್‌ಮನ್‌ಗಳ ಕಾಯಕ.

**

ಹೆಸರಿನ ಹಿಂದಿನ ಕತೆ

ಶಿವು ಅವರ ನಿಜ ನಾಮ ಬೋರೇಗೌಡ. ಅವರು ಬೆಂಗಳೂರಿಗೆ ಬಂದು ಕಾಲ್‌ ಸೆಂಟರ್‌ ಕಂಪೆನಿಯಲ್ಲಿ ಕೆಲಸಕ್ಕೆ ಸೇರಿಕೊಂಡಾಗ ಅಲ್ಲಿ ವಿದೇಶಿಯರೇ ಇದ್ದರು. ಆಗ ಶಿವರಾಜ್‌ಕುಮಾರ್‌ ಕುಮಾರ್‌ ಅವರ ‘ಜೋಗಿ’  ಸಿನಿಮಾ ಬಿಡುಗಡೆಯಾಗಿತ್ತು. ಆಗ ಅವರೆಲ್ಲ ಚಿತ್ರ ನೋಡಿ ವಿದೇಶಿಯರು ಬೋರೇಗೌಡರನ್ನು  ಶಿವು ಎಂದು ಕರೆಯಲು ಆರಂಭಿಸಿದರು. ಈ ಹೆಸರೇ ಶಾಶ್ವತವಾಯಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.