ಭಾನುವಾರ, ಮಾರ್ಚ್ 7, 2021
19 °C

ಇಂಡಿಯಾ ಫೌಂಡೇಶನ್ ವಿರುದ್ಧ ಅವ್ಯವಹಾರ ಆರೋಪ; ವಿಪಕ್ಷಗಳಿಂದ ತನಿಖೆಗೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಂಡಿಯಾ ಫೌಂಡೇಶನ್ ವಿರುದ್ಧ ಅವ್ಯವಹಾರ ಆರೋಪ; ವಿಪಕ್ಷಗಳಿಂದ ತನಿಖೆಗೆ ಒತ್ತಾಯ

ನವದೆಹಲಿ: ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿರುವ ಅಜಿತ್‌ ಡೊಭಾಲ್‌ ಪುತ್ರ ಶೌರ್ಯ ಡೊಭಾಲ್‌ ಅವರಿಗೆ ಸೇರಿದ ‘ಇಂಡಿಯಾ ಫೌಂಡೇಷನ್‌’ ಸಂಸ್ಥೆಯಲ್ಲಿ ಅವ್ಯವಹಾರ ನಡೆದಿದೆ ಎಂದು ದಿ ವೈರ್ ಸುದ್ದಿ ಪ್ರಕಟಿಸಿದ್ದು, ಈ ಆರೋಪದ ಬಗ್ಗೆ ತನಿಖೆ ನಡೆಸುವಂತೆ ವಿಪಕ್ಷ  ಒತ್ತಾಯಿಸಿದೆ.

ಕೇಂದ್ರ ಸಚಿವರಾದ ಸುರೇಶ್‌ ಪ್ರಭು, ನಿರ್ಮಲಾ ಸೀತಾರಾಮನ್‌, ಎಂ.ಜೆ. ಅಕ್ಬರ್‌, ಜಯಂತ್‌ ಸಿನ್ಹಾ, ಬಿಜೆಪಿ ನಾಯಕ ರಾಮ್‌ ಮಾಧವ್‌ ಮತ್ತು ಶೌರ್ಯ ಡೊಭಾಲ್‌ ಅವರು ಇಂಡಿಯಾ ಫೌಂಡೇಶನ್‌ ನಿರ್ದೇಶಕರಾಗಿರುವುದಿಂದ ಸಂಸ್ಥೆಯ ಕಾರ್ಯನಿರ್ವಹಣೆಯಲ್ಲಿ ಹಿತಾಸಕ್ತಿ ಸಂಘರ್ಷ ಉಂಟಾಗುತ್ತಿದೆ ಎಂದು ‘ದಿ ವೈರ್‌’ ಆನ್‌ಲೈನ್‌ ಸುದ್ದಿ ತಾಣ ವರದಿ ಮಾಡಿತ್ತು.

ದೇಶದ ರಕ್ಷಣೆ ಮತ್ತು ಆರ್ಥಿಕ ಕ್ಷೇತ್ರದಲ್ಲಿನ ನೀತಿ ನಿರೂಪಣೆಗೆ ಸಂಬಂಧಪಟ್ಟ ಚರ್ಚೆ ಮತ್ತು ಸೆಮಿನಾರ್‍‍ಗಳನ್ನು ಆಯೋಜಿಸುವ ಚಿಂತಕರ ಚಾವಡಿಯಾಗಿದೆ ಇಂಡಿಯಾ ಫೌಂಡೇಷನ್. ಶೌರ್ಯ ಡೊಭಾಲ್‌ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಂ ಮಾಧವ್ ಜತೆಯಾಗಿ ನಿರ್ವಹಿಸುತ್ತಿರುವ ಈ ಫೌಂಡೇಶನ್‍ನ ನಿರ್ದೇಶಕರಲ್ಲಿ ನಿರ್ಮಲಾ ಸೀತಾರಾಮ್ ಮಾತ್ರವಲ್ಲದೆ ಕೇಂದ್ರ ಸಚಿವರಾದ ಸುರೇಶ್ ಪ್ರಭು, ಜಯಂತ್ ಸಿನ್ಹಾ, ಎಂ.ಜೆ ಅಕ್ಬರ್ ಮೊದಲಾದವರಿದ್ದಾರೆ.

ಆದಾಗ್ಯೂ, ಲಾಭದಾಯಕ ಹುದ್ದೆ ಹೊಂದಿರುವ ಮತ್ತು ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ (ಎಫ್‍ಸಿಆರ್‍ಎ) ಉಲ್ಲಂಘಿಸುತ್ತಿರುವ ಕೇಂದ್ರ ಸಚಿವರ ವಿರುದ್ಧ ಸಿಬಿಐ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್‌ ಹಿರಿಯ ಮುಖಂಡ ಕಪಿಲ್‌ ಸಿಬಲ್‌ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಗ್ರಹಿಸಿದ್ದಾರೆ.

ರಾಜಕೀಯ ಪಕ್ಷ, ರಾಜಕೀಯ ನಾಯಕ, ವಿಧಾನಸಭಾ ಸದಸ್ಯರು ಮತ್ತು ಮಾಧ್ಯಮದವರು ವಿದೇಶಿ ದೇಣಿಗೆ ಪಡೆಯಬಾರದು ಎಂದು ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆಯ ಸೆಕ್ಷನ್ 3 ರಲ್ಲಿ ಹೇಳಲಾಗಿದೆ, ಹೀಗಿದ್ದರೂ ನಿರ್ಮಲಾ ಸೀತಾರಾಮನ್, ಸುರೇಶ್ ಪ್ರಭು, ಎಂ.ಜೆ ಅಕ್ಬರ್, ಜಯಂತ್ ಸಿನ್ಹಾ, ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಮತ್ತು ಪತ್ರಕರ್ತ ಸ್ವಪನ್ ದಾಸ್ ಗುಪ್ತಾ, ರಾಜ್ಯಸಭಾ ಸಚಿವ ಎ.ಸೂರ್ಯಪ್ರಕಾಶ್ ( ಪ್ರಸಾರ ಭಾರತಿಯ ಮುಖ್ಯಸ್ಥ )- ಇವರೆಲ್ಲರೂ ಶೌರ್ಯ ಅವರ ಚಿಂತಕರ ಚಾವಡಿಯ ನಿರ್ದೇಶಕರಾಗಿದ್ದಾರೆ. ಈ ವ್ಯಕ್ತಿಗಳು ಕಾಯ್ದೆ ಉಲ್ಲಂಘನೆ ಮಾಡಿರುವುದರಿಂದ ಅವರನ್ನು ತನಿಖೆಗೊಳಪಡಿಸಿ ಕಾಯ್ದೆಯಲ್ಲಿ ಹೇಳಿರುವ ಶಿಕ್ಷೆ ವಿಧಿಸಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಬಲ್ ಹೇಳಿದ್ದಾರೆ.

[related]

ಇಂಡಿಯಾ ಫೌಂಡೇಶನ್ ಎಂಬುದು  ಉದ್ಯಮ ಮತ್ತು ರಾಜಕೀಯದ ಮಿಶ್ರಣ ಎಂದು ಹೇಳಿದ ಸಿಬಲ್, ಈ ಚಿಂತಕರ ಚಾವಡಿಯಲ್ಲಿ ಬಿಜೆಪಿಯ ಹಿರಿಯ ಸಚಿವರು, ನಾಯಕರು ಭಾಗಿಯಾಗಿರುವುದು  ಬಂಡವಾಳಶಾಹಿ ಧೋರಣೆಗೆ ಸ್ಪಷ್ಟ ಉದಾಹರಣೆ ಎಂದಿದ್ದಾರೆ.

ಇಂಡಿಯಾ ಫೌಂಡೇಷನ್‌  ನಿರ್ದೇಶಕರಾಗಿರುವ ನಾಲ್ವರು ಕೇಂದ್ರ ಸಚಿವರನ್ನು ವಜಾ ಮಾಡುವಂತೆ ಸಿಬಲ್ ಪ್ರಧಾನಿ ಮೋದಿಯವರಲ್ಲಿ ಒತ್ತಾಯಿಸಿದ್ದಾರೆ. ಸರ್ಕಾರರದ್ದೇ ಆದ ರಾಷ್ಚ್ರೀಯ ಸಲಹಾ ಮಂಡಳಿಯಲ್ಲಿ ಸೋನಿಯಾ ಗಾಂಧಿಯವರು  ಭಾಗಿಯಾಗಿದ್ದಕ್ಕೆ ಬಿಜೆಪಿ ಕೋಲಾಹಲವೆಬ್ಬಿಸಿದ್ದನ್ನು ಯಾರೂ ಮರೆತಿಲ್ಲ. ಆಗ ಸೋನಿಯಾ ಅವರು  ಸಂಸದೆಯಾಗಿದ್ದರು. ಆದರೆ ಅವರು ರಾಜೀನಾಮೆ ನೀಡಿದರು. ಇದೀಗ ಚಿಂತಕರ ಚಾವಡಿಯಲ್ಲಿ ನಿರ್ದೇಶಕರಾಗಿರುವ ಕೇಂದ್ರ ಸಚಿವರ ವಿರುದ್ಧ ಸಿಬಿಐ ತನಿಖೆ ನಡೆಸವಂತೆ ಆದೇಶಿಸಲು ಮೋದಿಯವರಿಗೆ ಸಾಧ್ಯವೆ?

ತೀಸ್ತಾ ಸೆಟಲ್ವಾಡ್ ಅಥವಾ ಇಂದಿರಾ ಜೈಸಿಂಗ್ ಅವರ ಸರ್ಕಾರೇತರ ಸಂಸ್ಥೆ (ಎನ್‌ಜಿಒ) ಮಂಡಳಿಯಲ್ಲಿ ನಮ್ಮ ಸಚಿವರೊಬ್ಬರು ಅಂಗವಾಗಿದ್ದಕ್ಕೆ ಬಿಜೆಪಿ ಎಷ್ಟೊಂದು ಗದ್ದಲ ಮಾಡಿತ್ತು! ಇಂಡಿಯಾ ಫೌಂಡೇಶನ್‍ಗೆ ವಿದೇಶಿ ದೇಣಿಗೆ ಹರಿದುಬರುತ್ತಿದ್ದು, ಕೇಂದ್ರದ ಸಚಿವರು ಇಲ್ಲಿ ನಿರ್ದೇಶಕರಾಗಿದ್ದರೂ  ಬಿಜೆಪಿ ಮೌನವಾಗಿದೆ ಎಂದು  ಕಾಂಗ್ರೆಸ್ ದೂರಿದೆ.

ಮೋದಿ ಸರ್ಕಾರ ವಿರುದ್ಧ ಆರ್‍‍ಜೆಡಿ, ಸಿಪಿಐ(ಎಂ) ಕಿಡಿ

ಇಂಡಿಯಾ ಫೌಂಡೇಷನ್‌ ಬಗ್ಗೆ  ಪ್ರಕಟವಾದ ಸುದ್ದಿ ಮತ್ತು ಈ ಬಗ್ಗೆ ಉಂಟಾಗಲಿರುವ ಹಿತಾಸಕ್ತಿ ಸಂಘರ್ಷದ ಬಗ್ಗೆ ಮುಂಜಾಗ್ರತೆ ವಹಿಸಬೇಕಾಗಿದೆ ಎಂದು ಆರ್‍‍ಜೆಡಿ ಪಕ್ಷ ಹೇಳಿದೆ. ಅದೇ ವೇಳೆ ಅಂತರರಾಷ್ಟ್ರೀಯ ರಕ್ಷಣಾ ಕಂಪೆನಿಗಳಿಂದ ದೇಣಿಗೆ ಪಡೆದ ಇಂಡಿಯಾ ಫೌಂಡೇಶನ್ ದೇಶದ ಭದ್ರತೆಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿದೆ ಎಂದು ಸಿಪಿಐ (ಎಂ) ನೇತಾರ ಮೊಹಮ್ಮದ್ ಸಲೀಂ ಆರೋಪಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.