ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌದಿ ಅರೇಬಿಯಾದ 11 ರಾಜಕುಮಾರರು, ಕೆಲ ಸಚಿವರ ಬಂಧನ

Last Updated 5 ನವೆಂಬರ್ 2017, 19:30 IST
ಅಕ್ಷರ ಗಾತ್ರ

ರಿಯಾದ್ (ಎಎಫ್‌ಪಿ): ಸೌದಿಯ 11 ರಾಜಕುಮಾರರು ಹಾಗೂ 12 ಮಂದಿ ಹಾಲಿ, ಮಾಜಿ ಸಚಿವರನ್ನು ಶನಿವಾರ ರಾತ್ರಿ ಬಂಧಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಬಂಧಿತರಲ್ಲಿ ಸೌದಿಯ ರಾಜಕುಮಾರ ಹಾಗೂ ಕೋಟ್ಯಧಿಪತಿ ಅಲ್ ವಲೀದ್ ಬಿನ್ ತಲಾಲ್‌ ಕೂಡಾ ಸೇರಿದ್ದಾರೆ.

ಸೌದಿಯ ರಾಷ್ಟ್ರೀಯ ಭದ್ರತಾ ಪಡೆ ಮುಖ್ಯಸ್ಥ ಹಾಗೂ ಈ ಹಿಂದೆ ಸೌದಿ ಸಿಂಹಾಸನದ ಆಕಾಂಕ್ಷಿಯಾಗಿದ್ದ ಮಿತೆಬ್ ಬಿನ್ ಅಬ್ದುಲ್ಲಾ ಅವರನ್ನು ವಜಾಗೊಳಿಸಿ ಆ ಸ್ಥಾನಕ್ಕೆ ಬೇರೊಬ್ಬರನ್ನು ನೇಮಿಸಲಾಗಿದೆ. ಜೊತೆಗೆ ನೌಕಾ ಮುಖ್ಯಸ್ಥ, ಹಣಕಾಸು ಸಚಿವರನ್ನೂ ಬದಲಾಯಿಸಲಾಗಿದ್ದು, ಕ್ಷಿಪ್ರ ರಾಜಕೀಯ ಬೆಳವಣಿಗೆಗೆ ಸೌದಿ ಅರೇಬಿಯಾ ಸಾಕ್ಷಿಯಾಗಿದೆ.

ಸೌದಿಯ ಯುವರಾಜ ಮಹಮ್ಮದ್ ಬಿನ್ ಸಲ್ಮಾನ್ ನೇತೃತ್ವದ ಭಯೋತ್ಪಾದನಾ ನಿಗ್ರಹ ಆಯೋಗವನ್ನು ರಚನೆ ಮಾಡಿದ ಕೆಲ ಹೊತ್ತಿನಲ್ಲೇ ಈ ಎಲ್ಲ ಬೆಳವಣಿಗೆಗಳು ನಡೆದಿವೆ.

2009ರಲ್ಲಿ ಪ್ರವಾಹ ಸಂತ್ರಸ್ತರಿಗೆ ಪರಿಹಾರ ನೀಡಿಕೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪದಲ್ಲಿ ರಾಜಕುಮಾರರು, ಸಚಿವರನ್ನು ಬಂಧಿಸಲಾಗಿದೆ ಎಂದು ಅಲ್ ಅರೇಬಿಯಾ ಸುದ್ದಿವಾಹಿನಿ ವರದಿ ಮಾಡಿದೆ.

ಗಣ್ಯರು ದೇಶದಿಂದ ಹೊರಹೋಗುವುದನ್ನು ತಡೆಯುವ ಉದ್ದೇಶದಿಂದ ಜೆಡ್ಡಾದಲ್ಲಿ ಖಾಸಗಿ ವಿಮಾನಗಳ ಹಾರಾಟ ಸ್ಥಗಿತಗೊಳಿಸಲಾಗಿದೆ ಎಂದು ವಿಮಾನಯಾನ ಸಚಿವಾಲಯದ ಮೂಲಗಳು ತಿಳಿಸಿವೆ.

ತಲಾಲ್ ಅವರ ಬಂಧನವು ದೃಢಪಟ್ಟರೆ, ದೇಶೀಯ ಹಾಗೂ ಅಂತರರಾಷ್ಟ್ರೀಯ ಉದ್ಯಮ ವಲಯಕ್ಕೆ ಆಘಾತಕಾರಿ ಸಂದೇಶ ರವಾನೆಯಾಗುತ್ತದೆ ಎಂದು ರೈಸ್ ವಿಶ್ವವಿದ್ಯಾಲಯದ ಕ್ರಿಸ್ಟಿಯಾನ್ ಉಲ್ರಿಚ್‌ಸನ್ ಹೇಳಿದ್ದಾರೆ.

3 ವರ್ಷಗಳಲ್ಲಿ ದೊರೆಯ ದರ್ಬಾರ್

ಅಬ್ದುಲ್ಲಾಹ್ ಅವರ ನಿಧನದ ಬಳಿಕ 2015ರ ಜನವರಿಯಲ್ಲಿ ತಮ್ಮ 79ನೇ ವಯಸ್ಸಿನಲ್ಲಿ ಸಲ್ಮಾನ್ ಸೌದಿಯ ದೊರೆಯಾದರು. ಈ ಮೂರು ವರ್ಷಗಳ ಅವಧಿಯಲ್ಲಿ ದೇಶದಲ್ಲಿ ಸಾಕಷ್ಟು ಬದಲಾವಣೆಗೆ ಅವರು ಕಾರಣರಾಗಿದ್ದಾರೆ.

ತಮ್ಮ ಸೋದರಳಿಯ ಮೊಹಮ್ಮದ್ ಬಿನ್ ನಯೀಫ್ ಅವರನ್ನು ಉಪ ಯುವರಾಜನನ್ನಾಗಿ ಆಗಿ ನೇಮಿಸಿದರು. ತಮ್ಮ ಮಗ ಮೊಹಮ್ಮದ್ ಬಿನ್ ಸಲ್ಮಾನ್ ಅವರನ್ನು ರಕ್ಷಣಾ ಸಚಿವರಾಗಿ ನೇಮಿಸಿದರು.

ಇದೇ ಜೂನ್‌ನಲ್ಲಿ ಮಗ ಸಲ್ಮಾನ್ ಅವರನ್ನು ಯುವರಾಜನನ್ನಾಗಿ ನೇಮಿಸಿದರು. ನಯೀಫ್ ಅವರಿಂದ ಅಧಿಕಾರ ಕಿತ್ತುಕೊಳ್ಳುವ ಯತ್ನವನ್ನು ಈ ಮೂಲಕ ಆರಂಭವಾಯಿತು.

2015ರಲ್ಲಿ ಯೆಮನ್‌ನಲ್ಲಿ ಸೇನಾದಾಳಿ ಆರಂಭಿಸಿದರು. ಮಿತ್ರಪಡೆಗಳೂ ಇದಕ್ಕೆ ಕೈ ಜೋಡಿಸಿದವು.

ಶಿಯಾ ವಿದ್ವಾಂಸ ನಿಮ್ರ್‌ ಅಲ್–ನಿಮ್ರ್‌ ಅವರೂ ಸೇರಿದಂತೆ 2016ರಲ್ಲಿ ಭಯೋತ್ಪಾದನೆ ಆರೋಪದಲ್ಲಿ 47 ಜನರನ್ನು ಗಲ್ಲಿಗೇರಿಸಲಾಯಿತು. ಇದು ನೆರೆಯ ಇರಾನ್ ಜೊತೆ ರಾಜತಾಂತ್ರಿಕ ಸಂಘರ್ಷಕ್ಕೆ ಕಾರಣವಾಯಿತು.

ತೈಲ ಘಟಕಗಳನ್ನುಭಾಗಶಃ ಖಾಸಗೀಕರಣಗೊಳಿಸುವ ಉದ್ದೇಶದಿಂದ ಏಪ್ರಿಲ್ 2016ರಲ್ಲಿ ‘ವಿಷನ್ 2030‘ ಘೋಷಣೆ.

ಜಾಗತಿಕ ತೈಲ ಬೆಲೆ ಏರಿಕೆಯಾಗಬೇಕಾದರೆ ತೈಲೋತ್ಪಾದನೆಯನ್ನು ಕಡಿಮೆ ಮಾಡುವ ತೀರ್ಮಾನವನ್ನು 2016ರ ಡಿಸೆಂಬರ್‌ನಲ್ಲಿ ಸೌದಿ ಸರ್ಕಾರ ತೆಗೆದುಕೊಂಡಿತು.

ದೋಹಾ ಜೊತೆ ಎಲ್ಲ ರೀತಿಯ ಸಂಪರ್ಕ ಕಡಿತಗೊಳಸುವ ನಿರ್ಣಯ ತೆಗೆದುಕೊಂಡಿತು.

2015ರಲ್ಲಿ ಮಹಿಳೆಯರಿಗೂ ಮತದಾನದ ಹಕ್ಕನ್ನು ಮೊದಲ ಬಾರಿಗೆ ನೀಡಲಾಯಿತು.

2018ರಿಂದ ಮಹಿಳೆಯರಿಗೂ ವಾಹನ ಚಾಲನೆಗೆ ಅವಕಾಶ ನೀಡುವ ನಿರ್ಧಾರ ಪ್ರಕಟಿಸಲಾಗಿದೆ. ಜೊತೆಗೆ ಕ್ರೀಡಾ ಮೈದಾನಗಳಿಗೆ ಮಹಿಳೆಯರೂ ಪ್ರವೇಶಿಸುವ ಅವಕಾಶ ನೀಡಲಾಗುತ್ತಿದೆ.

ಟ್ರಂಪ್ ಅಧಿಕಾರ ವಹಿಸಿಕೊಂಡ ಬಳಿ ಸೌದಿಗೆ ಮೊದಲ ವಿದೇಶಿ ಪ್ರವಾಸ ಕೈಗೊಂಡಿದ್ದರು. ಭಯೋತ್ಪಾದನೆ ವಿರುದ್ಧ ಜಂಟಿ ಹೋರಾಟಕ್ಕೆ ಅಮೆರಿಕದ ಜೊತೆ ಪಣ ತೊಡಲಾಯಿತು.

ಸಾರ್ವಜನಿಕ ವಲಯದಲ್ಲಿ ಸುಧಾರಣಾವಾದಿ ಎಂದು ಬಿಂಬಿಸಿಕೊಳ್ಳಲು ಬಯಸಿರುವ ದೊರೆ ಸಲ್ಮಾನ್, ಸೌದಿಯನ್ನು ಆಧುನಿಕ ಇಸ್ಲಾಂ ಅಳವಡಿಸಿಕೊಂಡ ದೇಶವಾನ್ನಾಗಿ ಮಾಡುವ ಪ್ರತಿಜ್ಞೆ ತೊಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT