7

ಬಿಜೆಪಿ, ಕೇಂದ್ರ ಸರ್ಕಾರದ ಸಿದ್ಧಾಂತ ಏನು?

Published:
Updated:
ಬಿಜೆಪಿ, ಕೇಂದ್ರ ಸರ್ಕಾರದ ಸಿದ್ಧಾಂತ ಏನು?

ಪ್ರಧಾನ ಮಂತ್ರಿಯವರಿಗೆ ಒಂದು ಸಿದ್ಧಾಂತ ಇದೆಯೇ? ಇದೊಂದು ವಿಚಿತ್ರ ಪ್ರಶ್ನೆಯಂತೆ ಕಾಣಬಹುದು. ಅವರ ಪಕ್ಷದ ವೆಬ್‌ಸೈಟ್‌ ಒಂದು ಸಿದ್ಧಾಂತ ತನ್ನದು ಎಂದು ಹೇಳುತ್ತದೆ. ಅದಕ್ಕೆ 'ಹಿಂದುತ್ವ' ಎಂಬ ಹೆಸರು ನೀಡಿದೆ. ಆದರೆ, ನಮ್ಮ ಅತ್ಯಂತ ಚತುರ ರಾಜಕಾರಣಿಗಳಲ್ಲಿ ಒಬ್ಬರು 'ಈ ಪಕ್ಷಕ್ಕೆ ಒಂದು ಸರಿಯಾದ ಸಿದ್ಧಾಂತ ಎಂಬುದೇ ಇಲ್ಲ' ಎಂದು ಹೇಳಿರುವ ಕಾರಣ ಈ ಪ್ರಶ್ನೆಯನ್ನು ಕೇಳಬೇಕಾಗಿದೆ. ವಾಣಿಜ್ಯ ವಿಚಾರಗಳನ್ನು ವರದಿ ಮಾಡುವ ದೈನಿಕವೊಂದು ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಅವರಲ್ಲಿ ಒಂದು ಪ್ರಶ್ನೆ ಕೇಳಿತು. 'ಅಭಿವೃದ್ಧಿಗೆ ಇಂಬು ಕೊಡಲು ಹಾಗೂ ಸಮಾನತೆಯನ್ನು ಹರಡಲು ಶಿಕ್ಷಣ, ಆರೋಗ್ಯ ಸೇವೆಗಳನ್ನು ಒದಗಿಸುವಲ್ಲಿ ಪ್ರಭುತ್ವದ ಪಾತ್ರದ ಬಗ್ಗೆ ಬಿಜೆಪಿಯ ವ್ಯಾಖ್ಯಾನವನ್ನು ಪರಿಗಣಿಸಿ, ಆ ಪಕ್ಷವನ್ನು ಯಾವ ಸ್ಥಾನದಲ್ಲಿ ಇರಿಸಲು ಬಯಸುವಿರಿ? ಆ ಪಕ್ಷವು ಲೆಸ್ಸೆ ಫೇರ್‌ (Laissez-faire) ಮಾದರಿಯನ್ನು ಸಂಪೂರ್ಣವಾಗಿ ಅನುಸರಿಸುತ್ತಿದೆಯೇ' ಎಂಬುದು ಆ ಪ್ರಶ್ನೆ.

ಇದು ಸರಳವಾದ ಪ್ರಶ್ನೆಯಲ್ಲ. ಲೆಸ್ಸೆ ಫೇರ್‌ ಮಾದರಿಯಲ್ಲಿ ಸರ್ಕಾರವು ಆರ್ಥಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದಿಲ್ಲ. ಎಲ್ಲವನ್ನೂ ಖಾಸಗಿಯವರೇ ನಡೆಸಲು ಸರ್ಕಾರ ಅವಕಾಶ ಮಾಡಿಕೊಡುತ್ತದೆ. ಅಯನ್ ರ್‍ಯಾಂಡ್‌ ಅಂತಹ ಲೇಖಕರು ಚಿತ್ರಿಸಿರುವ ಸಮಾಜ ಇದು ಎಂದು ಸ್ಥೂಲವಾಗಿ ವಿವರಿಸಬಹುದು. ಇಂತಹ ವ್ಯವಸ್ಥೆಯಲ್ಲಿ ಬಂಡವಾಳಶಾಹಿ ಹೀರೊಗಳು ಸ್ಪರ್ಧೆಯ ಮೂಲಕ ವಿಶ್ವವನ್ನು ಮತ್ತಷ್ಟು ಉತ್ತಮಪಡಿಸುತ್ತಾರೆ, ಅಸಮರ್ಥ ಸರ್ಕಾರ ಮೂಗು ತೂರಿಸುವ ಕೆಲಸ ಮಾಡುವುದಿಲ್ಲ, ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರಗಳನ್ನೂ ಖಾಸಗಿಯವರಿಗೇ ಬಿಟ್ಟುಕೊಡಲಾಗುತ್ತದೆ, ಜನ ತಮ್ಮ ಯೋಗಕ್ಷೇಮವನ್ನು ತಾವೇ ನೋಡಿಕೊಳ್ಳುತ್ತಾರೆ.ಕಾಂಗ್ರೆಸ್ ಪ್ರತಿಪಾದಿಸುತ್ತಿದ್ದ 'ಸಮಾಜವಾದ'ಕ್ಕಿಂತ ಭಿನ್ನವಾದ, ಇಂತಹದ್ದೊಂದು ವ್ಯವಸ್ಥೆಯ ಪರವಾಗಿ ನರೇಂದ್ರ ಮೋದಿ ಅವರು ಮಾತನಾಡುತ್ತಿರಬಹುದು ಎಂದು 2014ರ ಲೋಕಸಭಾ ಚುನಾವಣೆಯ ಪ್ರಚಾರದ ವೇಳೆ ಹೇಳಲಾಯಿತು. ಆದರೆ, ಮೋದಿ ಅವರು ತಾವು ಬರ್ಖಾಸ್ತುಗೊಳಿಸುವುದಾಗಿ ಹೇಳುತ್ತಿದ್ದ 'ಸಮಾಜವಾದಿ' ಯೋಜನೆಗಳಾದ ನರೇಗಾ ಹಾಗೂ ಅದರಂತಹ ಇತರ ಯೋಜನೆಗಳನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ. ಪ್ರಭುತ್ವದ ಪಾತ್ರ ಏನಿರಬೇಕು ಎಂಬ ವಿಚಾರದಲ್ಲಿ ಮನಮೋಹನ್ ಸಿಂಗ್ ನೇತೃತ್ವದ ಸಂಯುಕ್ತ ಪ್ರಗತಿಪರ ಮೈತ್ರಿಕೂಟ (ಯುಪಿಎ) ಹಾಗೂ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟದ (ಎನ್‌ಡಿಎ) ಧೋರಣೆಗಳಲ್ಲಿ ವ್ಯತ್ಯಾಸಗಳೇನೂ ಇರುವಂತೆ ಕಾಣಿಸುತ್ತಿಲ್ಲ.

ಇದನ್ನು ಚಿದಂಬರಂ ಅವರು ತಮ್ಮ ಉತ್ತರದಲ್ಲಿ ಪ್ರಶ್ನಿಸಿದರು. ಅವರು ಹೇಳಿದ್ದು ಹೀಗಿತ್ತು: 'ಬಿಜೆಪಿಗೆ ಮೂಲ ಆರ್ಥಿಕ ಸಿದ್ಧಾಂತ ಅಥವಾ ತಾತ್ವಿಕತೆ ಇಲ್ಲ. ಬಿಜೆಪಿಯ ಮೂಲ ಸಿದ್ಧಾಂತ ಹಿಂದುತ್ವ ಮತ್ತು ಬಹುಸಂಖ್ಯಾತರ ಪರವಾದ ಸರ್ಕಾರ ನಡೆಸುವುದು. ಎಡತುದಿಯಿಂದ ಬಲತುದಿಯವರೆಗಿನ ಸಿದ್ಧಾಂತಗಳ ಪೈಕಿ ತಾನು ಪ್ರತಿನಿಧಿಸುವುದು ಏನನ್ನು ಎಂದು ಹೇಳುವಂತಹ ಮೂಲ ಆರ್ಥಿಕ ನೀತಿಯೊಂದು ಯಾವುದೇ ಸರ್ಕಾರಕ್ಕೆ ಇರಬೇಕು. ಆದರೆ, ಬಿಜೆಪಿಯು ಎಡತುದಿಯಿಂದ ಬಲತುದಿಯವರೆಗಿನ ಆರ್ಥಿಕ ನೀತಿಗಳಲ್ಲಿ ತನ್ನ ಸ್ಥಾನ ಎಲ್ಲಿ ಎಂಬುದರ ಬಗ್ಗೆ ಒಂದು ಪಕ್ಷವಾಗಿ ಯಾವತ್ತೂ ಆಲೋಚನೆ ನಡೆಸಿಲ್ಲ. ಹಾಗಾಗಿ ಆ ಪಕ್ಷವು ಎಲ್ಲೆಡೆಯೂ ಸುತ್ತುತ್ತ ಇದೆ'.ಇವು ರಾಜಕೀಯ ವಿರೋಧಿಯೊಬ್ಬರ ಬಾಯಿಂದ ಬಂದ ಕಟು ಪದಗಳು ಎಂದು ಓದಿಕೊಳ್ಳಬಹುದು. ಆದರೆ, ಈ ಮಾತುಗಳನ್ನು ಹೇಳುವ ಮೂಲಕ ಚಿದಂಬರಂ ಅವರು ಏನನ್ನು ಧ್ವನಿಸುತ್ತಿದ್ದಾರೆ ಎಂಬುದನ್ನು ಪರಿಶೀಲಿಸುವುದು ಮುಖ್ಯ ಎನ್ನುವುದು ಕಾಂಗ್ರೆಸ್ಸಿನ ಬೆಂಬಲಿಗನಲ್ಲದ ನನ್ನ ಭಾವನೆ. 'ಕಾಂಗ್ರೆಸ್ಸಿನ ನಡೆಗಳ ಜೊತೆ ಹೋಲಿಕೆ ಮಾಡಿ ನೋಡಿ, ನಮ್ಮ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಕುಂದುಕೊರತೆಗಳು ಇದ್ದವು ಎಂಬುದನ್ನು ಒಪ್ಪಿಕೊಳ್ಳುವವರಲ್ಲಿ ನಾನು ಮೊದಲಿಗನಾಗಿರುತ್ತೇನೆ. ಆದರೆ, ಕಾಂಗ್ರೆಸ್ ಪಕ್ಷವು ಮೂರು-ನಾಲ್ಕು ವಿಷಯಗಳ ಬಗ್ಗೆ ಆದ್ಯತೆ ನೀಡಿತು. ಈ ವಿಷಯಗಳು ನಮ್ಮ ಮೂಲ ತತ್ವ ಏನೆಂಬುದನ್ನು ಹೇಳಿದವು. ಯಾರೊಬ್ಬರೂ ಹಸಿವಿನಿಂದ ಸಾಯಬಾರದು ಎಂಬುದು ಮೊದಲನೆಯದು. ಆ ಕಾರಣಕ್ಕಾಗಿಯೇ ನಾವು ನರೇಗಾ ಹಾಗೂ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯನ್ನು ಜಾರಿಗೆ ತಂದೆವು'.

ಗರ್ಭಿಣಿಯರು, ಬಾಣಂತಿಯರು, ಶಿಶುಗಳು, ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗಾಗಿನ ಯೋಜನೆಗಳು, ರೋಗ ನಿರೋಧಕ ಔಷಧಗಳನ್ನು ನೀಡುವ ಕಾರ್ಯಕ್ರಮ ಮತ್ತು ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷನ್ ಸೇರಿದಂತೆ ಆರೋಗ್ಯ ಕ್ಷೇತ್ರದಲ್ಲಿ ಜಾರಿಗೆ ತಂದ ಯೋಜನೆಗಳ ಬಗ್ಗೆಯೂ ಚಿದಂಬರಂ ಹೇಳಿದರು. 'ಈ ಯೋಜನೆಗಳು ಕಾಂಗ್ರೆಸ್ಸಿನ ಮೂಲ ನಂಬಿಕೆಗಳು ಹಾಗೂ ತಾತ್ವಿಕತೆಯನ್ನು ವಿವರಿಸುತ್ತವೆ' ಎಂದು ಅವರು ಹೇಳಿದರು. ನಿರ್ದಿಷ್ಟ ದಿಕ್ಕಿನೆಡೆಗೆ ಸಾಗುವ ಇಂತಹ ಯೋಜನೆಗಳು ಮೋದಿ ಅವರ ಮುನ್ನೋಟಗಳಲ್ಲಿ ಕಾಣುತ್ತಿಲ್ಲ ಎಂದೂ ಅವರು ಹೇಳಿದರು.

ಗೋರಖಪುರದಲ್ಲಿ 282 ಮಕ್ಕಳು ಮೃತಪಟ್ಟವು ಎಂಬ ವರದಿಗಳನ್ನು ಉಲ್ಲೇಖಿಸಿ ಚಿದಂಬರಂ ಅವರು, 'ಇದು ಕೇಂದ್ರ ಸರ್ಕಾರದ ಮೇಲೆ ಪರಿಣಾಮ ಬೀರುತ್ತಿಲ್ಲ. ಇದು ಉತ್ತರ ಪ್ರದೇಶ ಸರ್ಕಾರದ ಮೇಲೆಯೂ ಪರಿಣಾಮ ಉಂಟುಮಾಡುತ್ತಿಲ್ಲ. ಇದು ಯಾರ ಮನಸ್ಸನ್ನೂ ಕಲಕುತ್ತಿಲ್ಲ... ಅವರ ಪಾಲಿಗೆ ದೀಪಾವಳಿಯ ದಿನ ವಾರಾಣಸಿಯನ್ನು ದೀಪಗಳಿಂದ ಅಲಂಕರಿಸುವುದು, ಅವರ ಹಿಂದುತ್ವ ಸಿದ್ಧಾಂತವನ್ನು ಪ್ರತಿನಿಧಿಸುವ ದೇವಸ್ಥಾನ ನಿರ್ಮಿಸುವುದು ಶಿಶುಗಳ ಮರಣ ಅಥವಾ ಹಸಿವಿಗಿಂತಲೂ ಹೆಚ್ಚು ಮುಖ್ಯ' ಎಂದರು.ಆಡಳಿತದ ವಿಚಾರದಲ್ಲಿ ಯುಪಿಎ ಸರ್ಕಾರವು ಎನ್‌ಡಿಎ ಸರ್ಕಾರಕ್ಕಿಂತ ಉತ್ತಮವಾಗತ್ತೇ ಎಂಬುದಲ್ಲ ಇಲ್ಲಿರುವ ಪ್ರಶ್ನೆ. ಏಕೆಂದರೆ ಚಿದಂಬರಂ ಅವರು ತಮ್ಮ ಸರ್ಕಾರದ ಲೋಪಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಕ್ರಿಯೆಯನ್ನು ಉಂಟುಮಾಡುವಂತಹ ಸಿದ್ಧಾಂತ ಹಾಗೂ ಮುನ್ನೋಟ ಬಿಜೆಪಿ ಮತ್ತು ಪ್ರಧಾನಿಯವರಿಗೆ ಇದೆಯೇ ಎಂಬುದು ಇಲ್ಲಿರುವ ಪ್ರಶ್ನೆ. ಈ ಸರ್ಕಾರದ ಎಲ್ಲ ಉಪಕ್ರಮಗಳನ್ನು ಏಕಸೂತ್ರದಲ್ಲಿ ಹಿಡಿದಿಡುವ ಸುಸಂಬದ್ಧ ವಿವರಣೆಯೇ ಇಲ್ಲ ಎಂದು ಚಿದಂಬರಂ ಹೇಳುತ್ತಿರುವುದು ಸತ್ಯವೇ?

ಭಾರತದಲ್ಲೇ ತಯಾರಿಸಿ, ಸ್ವಚ್ಛ ಭಾರತ, ನೋಟು ರದ್ದತಿ, ನಿರ್ದಿಷ್ಟ ದಾಳಿ, ಬುಲೆಟ್ ರೈಲು, ಸ್ಟಾರ್ಟ್ ಅಪ್ ಇಂಡಿಯಾ, ಜಿಎಸ್‌ಟಿ... ಇವೆಲ್ಲ ಕ್ರಮಗಳು ಬೃಹತ್‌ ಆದ ಒಂದೇ ಆಲೋಚನೆಯ ಭಾಗಗಳೇ? ಅಥವಾ ಅರ್ಥವೇ ಇಲ್ಲದ, ಒಂದಕ್ಕೊಂದು ಸಂಬಂಧವೇ ಇಲ್ಲದ ಬಿಡಿ ತುಣುಕುಗಳೇ? ಸಮಸ್ಯಾತ್ಮಕವಾದ ಈ ಪ್ರಶ್ನೆಯನ್ನು ಬಿಜೆಪಿಯ ಬೆಂಬಲಿಗರೂ ಸೇರಿದಂತೆ ನಾವೆಲ್ಲರೂ ಕೇಳಬೇಕು.

ಕೆಲವು ನಿರ್ದಿಷ್ಟ ಸಮಸ್ಯೆಗಳ ಮೇಲೆ ಗಮನ ಕೇಂದ್ರೀಕರಿಸಲು ಯತ್ನಿಸಿದ್ದಾಗಿ ಕಾಂಗ್ರೆಸ್ ಹೇಳುತ್ತಿದೆ. ಆದರೆ ಅಂದುಕೊಂಡಿದ್ದನ್ನು ಅನುಷ್ಠಾನದಲ್ಲಿ ತರುವಲ್ಲಿ ತಾನು ಸಮರ್ಥನಾಗಿದ್ದೇನೆ ಎಂದು ನಮ್ಮನ್ನು ಒಪ್ಪಿಸುವಲ್ಲಿ ಕಾಂಗ್ರೆಸ್ ವಿಫಲವಾಯಿತು. ಕಾಂಗ್ರೆಸ್ಸಿನ ಯೋಜನೆಗಳ ಉದ್ದೇಶ ಒಳ್ಳೆಯದಿದ್ದಿರಬಹುದು ಎಂಬುದು ಬೇರೆಯದೇ ವಿಚಾರ. ಈಗ ಅವೆಲ್ಲವೂ ಇತಿಹಾಸ. ತಾನು ಮಾಡಲು ಹೊರಟಿರುವುದು ಏನು, ತನ್ನ ಬೃಹತ್ ಆಲೋಚನೆ ಏನು ಎಂಬುದನ್ನು ಈಗ ಹೇಳಬೇಕಿರುವುದು ಬಿಜೆಪಿ. ಚಿದಂಬರಂ ಮಾತುಗಳು ತಪ್ಪಾಗಲಿ ಎಂದು ಆಶಿಸುವೆ. ಏಕೆಂದರೆ ಐದು ವರ್ಷಗಳ ಹಾಗೂ ಹತ್ತು ವರ್ಷಗಳ ತನ್ನ ಸಾಧನೆ ಏನಿರಬೇಕು ಎಂಬ ಬಗ್ಗೆ ಎನ್‌ಡಿಎ ಆಲೋಚನೆ ನಡೆಸುತ್ತಿದೆ ಎಂದು ನಾನು ವೈಯಕ್ತಿಕವಾಗಿ ನಂಬಿದ್ದೇನೆ. ಅವರ ಸಿದ್ಧಾಂತವು ಗೋಹತ್ಯೆ, ಮಂದಿರ, ಲವ್ ಜಿಹಾದ್ ಕುರಿತ ಹಿಂದುತ್ವ ಮಾತ್ರವೇ ಆಗಿದ್ದು, ಅಲ್ಲಿ-ಇಲ್ಲಿ ಎಂಬಂತೆ ಅರ್ಥ ವ್ಯವಸ್ಥೆ ಹಾಗೂ ವಿದೇಶಾಂಗ ವ್ಯವಹಾರಗಳ ವಿಚಾರದಲ್ಲಿ ಒಂದೆರಡು ಕ್ರಮಗಳನ್ನು ಕೈಗೊಳ್ಳುವುದು ಮಾತ್ರವೇ ಆಗಿದ್ದಲ್ಲಿ, ನಾವು ಅಂದುಕೊಂಡಿರುವುದಕ್ಕಿಂತ ಹೆಚ್ಚಿನ ಸಮಸ್ಯೆಯಲ್ಲಿ ಸಿಲುಕುತ್ತೇವೆ.

(ಲೇಖಕ ಅಂಕಣಕಾರ ಹಾಗೂ ಆಮ್ನೆಸ್ಟಿ ಇಂಟರ್ ನ್ಯಾಷನಲ್ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry