ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಂಗ ಅಸಮಾನತೆ: 21 ಸ್ಥಾನ ಕುಸಿದ ಭಾರತ

ವಿಶ್ವ ಆರ್ಥಿಕ ವೇದಿಕೆಯಿಂದ ಸೂಚ್ಯಂಕ ಬಿಡುಗಡೆ, ದೇಶಕ್ಕೆ 108ನೇ ರ‍್ಯಾಂಕ್‌
Last Updated 5 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಜಿನೀವಾ/ನವದೆಹಲಿ: ವಿಶ್ವ ಆರ್ಥಿಕ ವೇದಿಕೆ (ಡಬ್ಲ್ಯುಇಎಫ್‌) ಪ್ರಕಟಿಸಿರುವ ಜಾಗತಿಕ ಲಿಂಗ ಅಸಮಾನತೆ (ಗ್ಲೋಬಲ್‌ ಜೆಂಡರ್‌ ) ಸೂಚ್ಯಂಕದಲ್ಲಿ ಭಾರತವು ಈ ವರ್ಷ 21 ಸ್ಥಾನಗಳಷ್ಟು ಕುಸಿದಿದೆ.

ಲಿಂಗ ಅಸಮಾನತೆಗೆ ಸಂಬಂಧಿಸಿದ ಸೂಚ್ಯಂಕವನ್ನು ಡಬ್ಲ್ಯುಇಎಫ್‌ ಗುರುವಾರ ಪ್ರಕಟಿಸಿದ್ದು, ಭಾರತ 108ನೇ ರ‍್ಯಾಂಕ್‌ ಗಳಿಸಿದೆ.

ನೆರೆಯ ರಾಷ್ಟ್ರಗಳಾದ ಬಾಂಗ್ಲಾದೇಶ, ಚೀನಾಗಳು ಕೂಡ ಭಾರತಕ್ಕಿಂತ ಮೇಲಿನ ಸ್ಥಾನದಲ್ಲಿವೆ.

2006ರಲ್ಲಿ ಡಬ್ಲ್ಯುಇಎಫ್‌ ಈ ಸೂಚ್ಯಂಕ ನೀಡಲು ಆರಂಭಿಸಿತ್ತು. ಭಾರತದ ಈಗಿನ ಸ್ಥಾನವು ಮೊದಲ ಬಾರಿ ಪಡೆದಿದ್ದಕ್ಕಿಂತಲೂ 10 ಸ್ಥಾನಗಳಷ್ಟು ಕೆಳಗಿದೆ.

ಅರ್ಥವ್ಯವಸ್ಥೆಯಲ್ಲಿ ಮಹಿಳೆಯರ ಭಾಗವಹಿಸುವಿಕೆ ಕಡಿಮೆಯಾಗಿರುವುದು ಮತ್ತು ಅವರಿಗೆ ಕಡಿಮೆ ಸಂಬಳ ನೀಡುತ್ತಿರುವುದು ಇದಕ್ಕೆ ಪ್ರಮುಖ ಕಾರಣ ಎಂದು ಡಬ್ಲ್ಯುಇಎಫ್‌ ವಿಶ್ಲೇಷಿಸಿದೆ.
*

ಜಾಗತಿಕ ಲಿಂಗ ಅಸಮಾನತೆ ಸೂಚ್ಯಂಕಕ್ಕಾಗಿ ಡಬ್ಲ್ಯುಇಎಫ್‌ ಸಮೀಕ್ಷೆ ನಡೆಸಿದ ರಾಷ್ಟ್ರಗಳು 144‌

ಸೂಚ್ಯಂಕದಲ್ಲಿ ಭಾರತ ಪಡೆದಿರುವ ರ‍್ಯಾಂಕ್‌ 108

ನೆರೆಯ ಬಾಂಗ್ಲಾದೇಶ ಪಡೆದಿರುವ ರ‍್ಯಾಂಕ್‌ 47

ಚೀನಾಕ್ಕೆ ಸಿಕ್ಕಿರುವ ಸ್ಥಾನ 100

*

ಸಮೀಕ್ಷೆ ನಡೆಸಿದ ನಾಲ್ಕು ಕ್ಷೇತ್ರ

ವಿಶ್ವ ಆರ್ಥಿಕ ವೇದಿಕೆಯು ನಾಲ್ಕು ಕ್ಷೇತ್ರಗಳಲ್ಲಿ ಮಹಿಳೆಯರ ಪ್ರಾತಿನಿಧ್ಯವನ್ನು ವಿಶ್ಲೇಷಿಸಿ ಈ ಸೂಚ್ಯಂಕ ಸಿದ್ಧಪಡಿಸಿದೆ. ನಾಲ್ಕು ಕ್ಷೇತ್ರಗಳು...

1. ಆರೋಗ್ಯ

2. ಶಿಕ್ಷಣ

3. ಉದ್ಯೋಗ ಕ್ಷೇತ್ರ

4. ರಾಜಕೀಯ ಪ್ರಾತಿನಿಧ್ಯ

*

ಅಸಮಾನತೆ ನಿವಾರಣೆಯಲ್ಲೂ ಕಳಪೆ ಸಾಧನೆ
ಉಳಿದ ರಾಷ್ಟ್ರಗಳಿಗೆ ಹೋಲಿಸಿದರೆ, ಲಿಂಗ ಅಸಮಾನತೆ ನಿವಾರಣೆಯಲ್ಲೂ ಭಾರತದ ಸಾಧನೆ ಕಳಪೆಯಾಗಿದೆ. ಡಬ್ಲ್ಯುಇಎಫ್‌ ವರದಿಯ ಪ್ರಕಾರ ಭಾರತವು ಶೇ 67ರಷ್ಟು ಅಸಮಾನತೆಯನ್ನು ನಿವಾರಿಸಿದೆ.

*

ಜಾಗತಿಕ‌ ಪರಿಸ್ಥಿತಿಯೂ ಭಿನ್ನವೇನಲ್ಲ
ಜಾಗತಿಕ ಮಟ್ಟದ ಪರಿಸ್ಥಿತಿ ಭಿನ್ನವಾಗಿಲ್ಲ. ಡಬ್ಲ್ಯುಇಎಫ್‌, ಲಿಂಗ ಅಸಮಾನತೆ ಅಳೆಯಲು ಆರಂಭಿಸಿದ ನಂತರ ಇದೇ ಮೊದಲ ಬಾರಿಗೆ ಲಿಂಗತ್ವ ಅಂತರದಲ್ಲಿ ಹೆಚ್ಚಳವಾಗಿದೆ.

‘2006ರ ನಂತರ ಮಹಿಳೆಯರು ಮತ್ತು ಪುರುಷರ ನಡುವೆ ಸಮಾನತೆ ತರುವ ನಿಟ್ಟಿನಲ್ಲಿ ನಿಧಾನವಾಗಿಯಾದರೂ ಸ್ಥಿರವಾದ ಪ್ರಗತಿಯಾಗುತ್ತಾ ಬಂದಿತ್ತು. ಆದರೆ, 2017ರಲ್ಲಿ ಅದು ನಿಂತಿದೆ’ ಎಂದು ವರದಿ ಹೇಳಿದೆ.

ಜಾಗತಿಕ ಮಟ್ಟದಲ್ಲಿ ಲಿಂಗ ಅಸಮಾನತೆಯ ಅಂತರ ಶೇ 68ರಷ್ಟು ನಿವಾರಣೆಯಾಗಿದೆ. ಕಳೆದ ವರ್ಷ ಈ ಪ್ರಮಾಣ ಶೇ 68.3ರಷ್ಟಿತ್ತು.

*

ವರ್ಷಗಳೇ ಬೇಕು...
ಅಸಮಾನತೆ ನಿವಾರಣೆ ಪ್ರಗತಿ ಈಗಿನಂತೆಯೇ ಮುಂದುವರಿದರೆ, ಮಹಿಳೆಯರು ಮತ್ತು ಪುರುಷರ ನಡುವೆ ಪೂರ್ಣ ಪ್ರಮಾಣದಲ್ಲಿ ಸಮಾನತೆ ತರಲು 100 ವರ್ಷಗಳು ಬೇಕು. ಕಳೆದ ವರ್ಷ, 83 ವರ್ಷಗಳು ಸಾಕು ಎಂದು ಲೆಕ್ಕಾಚಾರ ಹಾಕಲಾಗಿತ್ತು.

*

ಐಸ್‌ಲ್ಯಾಂಡ್‌ಗೆ ಮೊದಲ ಸ್ಥಾನ
ಸೂಚ್ಯಂಕ ಪಟ್ಟಿಯಲ್ಲಿ ಐಸ್‌ಲ್ಯಾಂಡ್‌ ಮೊದಲ ಸ್ಥಾನದಲ್ಲಿದೆ. ಈ ಪುಟ್ಟ ದೇಶವು ನಿವಾರಣೆ ಮಾಡಿದ ಅಸಮಾನತೆ ಪ್ರಮಾಣ ಶೇ 88ರಷ್ಟು. ಅತ್ಯಂತ ಹೆಚ್ಚು ಲಿಂಗ ಸಮಾನತೆ ಇರುವ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಅದು 9 ವರ್ಷಗಳಿಂದ ಪಾತ್ರವಾಗುತ್ತಾ ಬಂದಿದೆ.

*

ಮೊದಲ 10 ರಾಷ್ಟ್ರಗಳು

1. ಐಸ್‌ಲ್ಯಾಂಡ್‌

2. ನಾರ್ವೆ

3.ಫಿನ್‌ಲ್ಯಾಂಡ್

4. ರುವಾಂಡ

5. ಸ್ವೀಡನ್‌

6. ನಿಕರಾಗುವ

7. ಸ್ಲೊವೇನಿಯಾ

8. ಐರ್ಲೆಂಡ್‌

9. ನ್ಯೂಜಿಲೆಂಡ್‌

10. ಫಿಲಿಪ್ಪೀನ್ಸ್‌

*
ಭಾರತದ ಮುಂದಿದೆ ಭಾರಿ ಸವಾಲು
ಆರ್ಥಿಕ ಚಟುವಟಿಕೆ, ಉದ್ಯೋಗ, ಆರೋಗ್ಯ ಕ್ಷೇತ್ರದಲ್ಲಿ ಮಹಿಳೆಯರ ಭಾಗವಹಿಸುವಿಕೆ ವಿಚಾರದಲ್ಲಿ ಭಾರತದ ಮುಂದೆ ಬಹುದೊಡ್ಡ ಸವಾಲು ಇದೆ ಎಂದು ಸೂಚ್ಯಂಕ ವರದಿ ಹೇಳಿದೆ.

ಉದ್ಯೋಗ ಕ್ಷೇತ್ರದಲ್ಲಿ ಭಾರತ 139ನೇ ರ‍್ಯಾಂಕ್‌ ಗಳಿಸಿದ್ದರೆ, ಆರೋಗ್ಯ ಕ್ಷೇತ್ರದಲ್ಲಿ ಸಿಕ್ಕಿದ್ದು 141ನೇ ರ‍್ಯಾಂಕ್‌.

ರಾಜಕೀಯ ಅಧಿಕಾರ, ಆರೋಗ್ಯಕರ ಜೀವನ ನಿರೀಕ್ಷೆ ಮತ್ತು ಕನಿಷ್ಠ ಸಾಕ್ಷರತೆ ವಿಚಾರಗಳಲ್ಲಿ ಲಿಂಗ ಅಸಮಾನತೆ ಹೆಚ್ಚಿರುವುದೇ ಜಾಗತಿಕ ಸೂಚ್ಯಂಕದಲ್ಲಿ ಭಾರತದ ಸ್ಥಾನ ಕುಸಿಯಲು ಕಾರಣ ಎಂದು ವರದಿ ಹೇಳಿದೆ.

‘ರಾಜಕೀಯ ಕ್ಷೇತ್ರದಲ್ಲಿ ಮಹಿಳಾ ಪ್ರಾತಿನಿಧ್ಯದ ಜಾಗತಿಕ ಉಪ ಸೂಚ್ಯಂಕದಲ್ಲಿ ಮೊದಲ 20ರ ಒಳಗೆ ಪಡೆದಿರುವ ಸ್ಥಾನವನ್ನು ಉಳಿಸಿಕೊಳ್ಳಲು ಭಾರತವು ರಾಜಕಾರಣದಲ್ಲಿ ಹೊಸ ಪೀಳಿಗೆಯ ಮಹಿಳಾ ನಾಯಕತ್ವಕ್ಕೆ ಉತ್ತೇಜನ ನೀಡುವ ಅವಶ್ಯಕತೆ ಇದೆ’ ಎಂದು ಅದು ಹೇಳಿದೆ.

ಶೇ 66ರಷ್ಟು ಮಹಿಳೆಯರಿಗೆ ವೇತನವೇ ಇಲ್ಲ!
ಭಾರತದ ಅರ್ಥವ್ಯವಸ್ಥೆಯಲ್ಲಿ ಮಹಿಳೆಯರ ಭಾಗವಹಿಸುವಿಕೆ ಭಾರಿ ಪ್ರಮಾಣದಲ್ಲಿ ಕಡಿಮೆ ಇರುವುದರಿಂದ ಮತ್ತು ಉದ್ಯೋಗದಲ್ಲಿರುವ ಮಹಿಳೆಯರಿಗೆ ಕಡಿಮೆ ವೇತನ ನೀಡುತ್ತಿರುವುದರಿಂದ ಉದ್ಯೋಗ ಕ್ಷೇತ್ರದಲ್ಲಿ ಲಿಂಗ ಅಸಮಾನತೆ ಹೆಚ್ಚಾಗಿದೆ. ಕೆಲಸ ಮಾಡುತ್ತಿರುವ ಮಹಿಳೆಯರಲ್ಲಿ ಸರಾಸರಿ ಶೇ 68 ಮಂದಿಗೆ ವೇತನವೇ ನೀಡಲಾಗುತ್ತಿಲ್ಲ. ಪುರುಷರಲ್ಲಿ  ಶೇ 12ರಷ್ಟು ಮಂದಿಗೆ ಸಂಬಳ ಸಿಗುತ್ತಿಲ್ಲ’ ಎಂದು ಡಬ್ಲ್ಯುಇಎಫ್‌ ವಿವರಿಸಿದೆ.

*

ಶಿಕ್ಷಣ ಕ್ಷೇತ್ರದಲ್ಲಿ ಸಾಧಿಸಿದೆ ಸಮಾನತೆ
ಭಾರತದ ಬಗ್ಗೆ ಡಬ್ಲ್ಯುಇಎಫ್‌ ವರದಿಯಲ್ಲಿರುವ ಸಕಾರಾತ್ಮಕ ಅಂಶ ಎಂದರೆ, ಮಕ್ಕಳ ಶಿಕ್ಷಣದಲ್ಲಿ ಲಿಂಗ ಅಸಮಾನತೆ ಇಲ್ಲ ಎಂಬುದು. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣದ ನೋಂದಣಿ ವಿಚಾರದಲ್ಲಿ ಎರಡನೇ ವರ್ಷವೂ ಭಾರತ ಲಿಂಗ ಸಮಾನತೆ ಕಾಯ್ದುಕೊಂಡಿದೆ. ಇದೇ ಮೊದಲ ಬಾರಿಗೆ, ಉನ್ನತ ಶಿಕ್ಷಣದಲ್ಲಿ ಅಸಮಾನತೆ ತೊಲಗಿಸಲು ಅದು ಯಶಸ್ವಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT