ಶುಕ್ರವಾರ, ಮಾರ್ಚ್ 5, 2021
21 °C

ಗಗನಕ್ಕೇರಿದ ತರಕಾರಿ ದರ; ಗ್ರಾಹಕರಿಗೆ ಹೊರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗಗನಕ್ಕೇರಿದ ತರಕಾರಿ ದರ; ಗ್ರಾಹಕರಿಗೆ ಹೊರೆ

ಹೊಳೆನರಸೀಪುರ: ತಾಲ್ಲೂಕಿನಲ್ಲಿ ತರಕಾರಿ ಬೆಲೆ ಗಗನಕ್ಕೇರಿದ್ದು, ಗ್ರಾಹಕರಿಗೆ ಬಿಸಿ ತಟ್ಟಿದೆ. ಸೇವಂತಿಗೆ ಹೂವಿನ ಬೆಲೆ ಕುಸಿದಿದ್ದರೂ ಕೊಳ್ಳುವವರು ಇಲ್ಲದೆ ಮಾರುಕಟ್ಟೆ ಬಿಕೋ ಎನ್ನುತ್ತಿದೆ. ‘ಮಳೆ ಇಲ್ಲದೆ ತರಕಾರಿ ಬೆಳೆಯೂ ಕಡಿಮೆ ಆಗಿದೆ. ಅಕ್ಕ ಪಕ್ಕದ ಗ್ರಾಮಗಳಿಂದ ತರಕಾರಿ ಖರೀದಿಸಲು ಜನರು ತಾಲ್ಲೂಕಿಗೆ ಬರುತ್ತಿರುವುದರಿಂದ ತರಕಾರಿ ಬೆಲೆ ಹೆಚ್ಚಾಗಿದೆ’ ಎನ್ನುತ್ತಾರೆ ವ್ಯಾಪಾರಿಗಳಾದ ಸ್ವಾಮಿ, ಅಶೋಕ, ಮಂಜ. ಸಲೀಂ ಪಾಷ.

ಭಾನುವಾರ ಮಾರುಕಟ್ಟೆಯಲ್ಲಿ ಹಸಿ ಬಟಾಣಿ ಕೆ.ಜಿ.ಗೆ ₹ 180, ನುಗ್ಗೇಕಾಯಿ ₹ 120, ಗೆಡ್ಡೆಕೋಸು ₹ 140, ದಪ್ಪ ಮೆಣಸಿನ ಕಾಯಿ ₹ 120, ಬಾಳೆಕಾಯಿ ₹ 90, ಟೊಮೆಟೊ ₹ 50, ಈರುಳ್ಳಿ ₹ 50, ಕ್ಯಾರೆಟ್ ₹ 60, ಬೀನ್ಸ್ ₹ 50, ಅವರೆಕಾಯಿ ₹ 50, ತೊಗರಿ ಕಾಯಿ ₹ 60, ಹಾಗಲಕಾಯಿ ₹ 60 ಕ್ಕೆ ಮಾರಾಟವಾಯಿತು.

ಜತೆಗೆ ಸೊಪ್ಪಿನ ಬೆಲೆ ಕೂಡ ಹೆಚ್ಚಾಗಿದ್ದು, ಪಾಲಕ್, ಮೆಂತ್ಯ, ಸಬಸಿಗೆ ಸೊಪ್ಪು ಕಂತೆಗೆ ₹ 10ಕ್ಕೆ ಮಾರಾಟವಾಗುತ್ತಿದೆ. ಕೆಲ ದಿನಗಳ ಹಿಂದೆ ₹ 10ಕ್ಕೆ 3–4 ಕಂತೆ ಸಿಗುತ್ತಿದ್ದವು.

‘ಪುಟ್ಟ ಬಾಳೆ ಹಣ್ಣು ಕೆ.ಜಿ ₹ 80ಕ್ಕೆ ಮಾರಾಟವಾದರೆ ಪಚ್ಚಬಾಳೆ ಹಣ್ಣು ₹ 50 ಕ್ಕೆ ಮಾರಾಟವಾಗುತ್ತಿದೆ. ತಮಿಳುನಾಡಿನಿಂದ ನಿರೀಕ್ಷಿತ ಪ್ರಮಾಣ ದಲ್ಲಿ ಹಣ್ಣು ಬರದ ಕಾರಣ ಬೆಲೆ ಹೆಚ್ಚಾಗಿದೆ’ ಎನ್ನುತ್ತಾರೆ ಬಾಳೆಹಣ್ಣು ಸಗಟು ವ್ಯಾಪಾರಿ ಅಶೋಕ ಹಾಗೂ ರಾಮಚಂದ್ರ.

ತೆಂಗಿನಕಾಯಿ ದರ ಸಹ ಹೆಚ್ಚಾಗಿದ್ದು, ಸಾಮಾನ್ಯ ಗಾತ್ರದ ತೆಂಗಿನ ಕಾಯಿ ಒಂದಕ್ಕೆ ₹ 25, ದಪ್ಪ ತೆಂಗಿನಕಾಯಿಗೆ ₹ 30 ರಿಂದ 35 ಕ್ಕೆ ಮಾರಾಟವಾಗುತ್ತಿತ್ತು.

‘ಚನ್ನರಾಯಪಟ್ಟಣ ಮತ್ತು ಅರಸೀಕೆರೆ ಮಾರುಕಟ್ಟೆಯಲ್ಲಿ ತೆಂಗಿನ ಕಾಯಿ ಬೆಲೆ ಹೆಚ್ಚಾಗಿರುವುದರಿಂದ ಇಲ್ಲಿ ಬೆಲೆ ಏರಿಕೆಯಾಗಿದೆ’ ಎನ್ನುತ್ತಾರೆ ತೆಂಗಿನಕಾಯಿ ವ್ಯಾಪಾರಿ ಸೀನ.

ದೀಪಾವಳಿ ಬಳಿಕ ಸೇವಂತಿಗೆ ಹೂವಿನ ಬೆಲೆ ಕುಸಿದಿದ್ದು, ಮತ್ತೆ ಚೇತರಿಕೆಯಾಗಿಲ್ಲ. ಹಬ್ಬಕ್ಕೂ ಮುನ್ನ ಒಂದು ಮಾರಿಗೆ ₹ 40 ರಿಂದ ₹ 50 ಕ್ಕೆ ಮಾರಾಟವಾಗುತ್ತಿದ್ದ ಹಳದಿ ಸೇವಂತಿಗೆ, ಈಗ ₹10 ಕ್ಕೆ ಕುಸಿದಿದೆ.

‘ದರ ಕುಸಿತದಿಂದ ರೈತರು ಮತ್ತು ವ್ಯಾಪಾರಿಗಳಿಗೆ ನಷ್ಟ ಉಂಟಾಗುತ್ತಿದೆ. ಎಲ್ಲರೂ ಹೂವನ್ನೇ ಬೆಳೆದು ಬೆಲೆ ಕಡಿಮೆ ಆಗಿದೆ’ ಎನ್ನುತ್ತಾರೆ ಹೂವಿನ ವ್ಯಾಪಾರಿ ಯೋಗ.

ತಾಲ್ಲೂಕಿನ ಸೌತೆಕಾಯಿಗೆ ಎಲ್ಲಿಲ್ಲದ ಬೇಡಿಕೆ ಇದೆ. ನಾಟಿ ಸೌತೆಕಾಯಿ ₹ 10 ಕ್ಕೆ ಮಾರಾಟವಾಗುತ್ತಿದ್ದರೆ, ಫಾರಂ ಸೌತೆಕಾಯಿ ₹ 5 ಕ್ಕೆ ಮಾರಾಟ ಆಗುತ್ತಿದೆ.

‘ತಾಲ್ಲೂಕಿನಲ್ಲಿ ತರಕಾರಿ ಬೆಳೆಯುವವರು ಹೆಚ್ಚಾಗಿದ್ದಾರೆ. ಬೆಳೆಯುವ ತರಕಾರಿ ನಮ್ಮೂರಿನಲ್ಲೇ ಮಾರಾಟವಾದರೆ ಬೆಲೆ ಹೆಚ್ಚು ಆಗುವುದಿಲ್ಲ. ಹೊರ ಊರುಗಳಿಂದ ತರಕಾರಿ ಖರೀದಿಸಲು ಬರುತ್ತಿರುವ ಕಾರಣ ಬೆಲೆ ಹೆಚ್ಚಾಗಿದೆ’ ಎನ್ನುತ್ತಾರೆ ಕೃಷಿ ಇಲಾಖೆ ಅಧಿಕಾರಿ ಬಸವರಾಜಪ್ಪ.

ಎಚ್.ವಿ. ಸುರೇಶ್‌ಕುಮಾರ್‌

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.