ಶುಕ್ರವಾರ, ಫೆಬ್ರವರಿ 26, 2021
26 °C

ಹದಗೆಟ್ಟ ರಸ್ತೆ; ಸವಾರರು ಸುಸ್ತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹದಗೆಟ್ಟ ರಸ್ತೆ; ಸವಾರರು ಸುಸ್ತು

ಹಾಸನ: ನಗರದ ಸಂತೆಪೇಟೆ ಮತ್ತು ತಣ್ಣೀರು ಹಳ್ಳ ರಸ್ತೆ ತುಂಬಾ ಗುಂಡಿಗಳು ಬಿದ್ದು, ವಾಹನ ಸವಾರರು ಪರದಾಡುವಂತಾಗಿದೆ. ಪ್ರತಿನಿತ್ಯ ಈ ರಸ್ತೆಯಲ್ಲಿ ನೂರಾರು ವಾಹನಗಳು ಸಂಚರಿಸುತ್ತವೆ. ಮಳೆ ಬಂದರಂತೂ ವಾಹನ ಸವಾರರ ಪಾಡು ಹೇಳತೀರದರು. ನೀರು ತುಂಬಿ ನಿಂತಿರುವ ದೊಡ್ಡ ಗುಂಡಿಗಳಿಂದ ಅಪಾಯ ಎದುರಿಸುವಂತಾಗಿದೆ.

ಹಲವು ಬಾರಿ ಗುಂಡಿ ತಪ್ಪಿಸಲು ಹೋಗಿ ವಾಹನ ಸವಾರರು ಕೆಳಗೆ ಬಿದ್ದು ಗಾಯಗೊಂಡಿರುವ ಉದಾಹರಣೆಯೂ ಉಂಟು. ಐದು ವರ್ಷಗಳ ಹಿಂದೆ ಹಾಕಿದ್ದ ಡಾಂಬರು ಸಹ ಕಿತ್ತು ಬಂದಿದೆ. ನಗರದ ರಸ್ತೆಗಳನ್ನು ಗುಂಡಿ ಮುಕ್ತ ಮಾಡುವುದಾಗಿ ನಗರಸಭೆ ಘೋಷಿಸಿತ್ತು. ಆದರೆ ಗುಂಡಿಗಳು ಮಾತ್ರ ಹಾಗೇ ಬಾಯ್ದೆರೆದು ಕುಳಿತಿವೆ.

ಸಂತೆಪೇಟೆ ರಸ್ತೆಯಲ್ಲಿ ದ್ವಿಚಕ್ರ ವಾಹನ, ಕಾರು ಶೋ ರೂಂಗಳು, ಎಸ್‌ಡಿಎಂ ಆಯುರ್ವೇದ ಆಸ್ಪತ್ರೆ ಇದೆ. ಜತೆಗೆ ಮಂಗಳವಾರದ ಸಂತೆಯಿಂದ ವ್ಯಾಪಾರ, ವಹಿವಾಟು ಜೋರಾಗಿ ನಡೆಯುತ್ತದೆ. ಸಮೀಪದಲ್ಲಿಯೇ ಎಪಿಎಂಸಿ ಮಾರುಕಟ್ಟೆ ಇದ್ದು, ಗ್ರಾಮೀಣ ಪ್ರದೇಶದಿಂದ ವ್ಯಾಪಾರಕ್ಕಾಗಿ ನೂರಾರು ವರ್ತಕರು ಹಾಗೂ ರೈತರು ಬರುತ್ತಾರೆ. ಅಲ್ಲದೇ ಹಾಸನದಿಂದ ಆಲೂರು, ಬೇಲೂರು, ಸಕಲೇಶಪುರ, ಮೂಡಿಗೆರೆ, ಧರ್ಮಸ್ಥಳ, ಚಿಕ್ಕಮಗಳೂರು, ಕುಂದಾಪುರ, ಮಂಗಳೂರು, ಶೃಂಗೇರಿಗೆ ಈ ರಸ್ತೆ ಮೂಲಕವೇ ಹಾದು ಹೋಗಬೇಕು.

ಗುಂಡಿಗಳನ್ನು ಮುಚ್ಚುವಂತೆ ವರ್ತಕರು ಹಾಗೂ ಸಾರ್ವಜನಿಕರು ಹಲವು ಬಾರಿ ನಗರಸಭೆಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಗುಂಡಿ ಬಿದ್ದ ರಸ್ತೆಯಲ್ಲಿಯೇ ನಿತ್ಯ ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

‘ಸಂತೆಪೇಟೆ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಡಾಂಬರು ಕಿತ್ತು ಬಂದಿದ್ದು, ದೊಡ್ಡಗಾತ್ರದ ಗುಂಡಿಗಳು ಬಿದ್ದಿವೆ. ಈ ರಸ್ತೆಯಲ್ಲಿ ಪ್ರಯಾಣಿಕರನ್ನು ಕರೆದುಕೊಂಡು ಹೋಗುವುದೇ ಒಂದು ಸಾಹಸ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಗಮನಕ್ಕೆ ತಂದರೂ ದುರಸ್ತಿ ಮಾಡಿಲ್ಲ’ ಎಂದು ಅಟೊ ಚಾಲಕ ಯೋಗೇಶ್ ಆಕ್ರೋಶ ವ್ಯಕ್ತಪಡಿಸಿದರು.

ಇನ್ನು ಸಂತೆಪೇಟೆಯಿಂದ ಅರಕಲಗೂಡು ತಾಲ್ಲೂಕಿಗೆ ಸಂಪರ್ಕ ಕಲ್ಪಿಸುವ ರಸ್ತೆಯೂ ಗುಂಡಿಗಳಿಂದ ಮುಕ್ತವಾಗಿಲ್ಲ. ಕಳೆದ ತಿಂಗಳು ಸುರಿದ ಜೋರು ಮಳೆಗೆ ರಸ್ತೆ ಡಾಂಬಾರು ಕಿತ್ತು ಬಂದಿದ್ದು, ವಾಹನ ಸಂಚಾರ ದುಸ್ತರವಾಗಿದೆ.

‘ರಸ್ತೆಯಲ್ಲಿ ದಿಢೀರನೆ ಎದುರಾಗುವ ಗುಂಡಿ ತಪ್ಪಿಸಿಕೊಳ್ಳಲು ಹೋಗಿ ಅಪಘಾತವಾಗುತ್ತಿದೆ. ಇಂತಹ ರಸ್ತೆಯಲ್ಲಿ ಸಂಚರಿಸಿದರೆ ವಾಹನಗಳು ಬೇಗ ರಿಪೇರಿಗೆ ಬರುತ್ತವೆ’ ಎಂದು ದ್ವಿಚಕ್ರ ವಾಹನ ಸವಾರ ಕಿರಣ್‌  ಹೇಳಿದರು.

ಹಾಸನ ಶಿಲ್ಪಕಲೆಗಳ ತವರೂರು. ಜಿಲ್ಲೆಯ ಪ್ರವಾಸಿ ತಾಣಗಳಿಗೆ ಪ್ರತಿನಿತ್ಯ ಸಾವಿರಾರು ಮಂದಿ ಪ್ರವಾಸಿಗರು ಭೇಟಿ ನೀಡುತ್ತಾರೆ. ಆದರೆ, ನಗರಕ್ಕೆ ಕಾಲಿಡುತ್ತಿದ್ದಂತೆ ಗುಂಡಿಬಿದ್ದ ರಸ್ತೆಗಳನ್ನು ನೋಡಿ ಜನರು ಹೈರಾಣಾಗುತ್ತಿದ್ದಾರೆ.  

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.