ಶುಕ್ರವಾರ, ಮಾರ್ಚ್ 5, 2021
29 °C

ಬೆಂಗಳೂರಿನಲ್ಲಿ ಕನ್ನಡ ಪರ ಒಲವು–ನಿಲುವು

ಜೆ.ಪಿ. ಕೋಲಾರ Updated:

ಅಕ್ಷರ ಗಾತ್ರ : | |

ಬೆಂಗಳೂರಿನಲ್ಲಿ ಕನ್ನಡ ಪರ ಒಲವು–ನಿಲುವು

ಬೆಂಗಳೂರು ಇಂದು ವಿಶ್ವದ ನಕಾಶೆಯಲ್ಲಿ ಹಲವು ಸಂಗತಿಗಳಿಗಾಗಿ ಗಮನ ಸೆಳೆಯುತ್ತಿರುವ ಮಹಾನಗರ.

ಸ್ವಾತಂತ್ರ್ಯಾನಂತರ ಭಾರತವನ್ನು ಭಾಷಾವಾರು ಪ್ರಾಂತ್ಯಗಳಾಗಿ ವಿಂಗಡಿಸಿದ ಸಂದರ್ಭದಲ್ಲಿ ಮೈಸೂರು ರಾಜ್ಯದ ರಾಜಧಾನಿಯಾದ ಬೆಂಗಳೂರು ಉಳಿದೆಲ್ಲ ರಾಜಧಾನಿಗಳಿಗಿಂತ ವಿಭಿನ್ನವಾಗಿ ಗುರುತಿಸಿಕೊಂಡಿತ್ತು. ಬೇರೆ ರಾಜ್ಯಗಳ ರಾಜಧಾನಿಗಳಲ್ಲಿ ಸ್ಥಳೀಯ ಭಾಷೆ, ಸಂಸ್ಕೃತಿ, ಜನತೆಗೆ ಸಹಜವಾಗಿ ಮೇಲುಗೈ ಇತ್ತು. ಆದರೆ ಬೆಂಗಳೂರಿನಲ್ಲಿ ಆ ವಾತಾವರಣ ಇರಲಿಲ್ಲ.

ಕೆಂಪೇಗೌಡ ಕಟ್ಟಿದ ಬೆಂಗಳೂರಿನಲ್ಲಿ ಕನ್ನಡಿಗರಿಗೆ ಆದ್ಯತೆ ಇತ್ತು. ಕಾಲಕ್ರಮೇಣ ಇದೊಂದು ಮಾರುಕಟ್ಟೆ ನಗರವಾಗಿ ಬೆಳೆಯತೊಡಗಿದಾಗ ಅನ್ಯಭಾಷಿಕ ವ್ಯಾಪಾರಿಗಳು, ಉದ್ದಿಮೆದಾರರು ಇಲ್ಲಿಗೆ ವಲಸೆ ಬಂದರು.

ಬ್ರಿಟಿಷರು ಟಿಪ್ಪುವನ್ನು ಸೋಲಿಸಿ ತಮ್ಮ ಆಡಳಿತ ಕೇಂದ್ರವನ್ನು ಶ್ರೀರಂಗಪಟ್ಟಣದಿಂದ ಬೆಂಗಳೂರಿಗೆ ಬದಲಿಸಿ ಇಲ್ಲಿ ದಂಡಿಗಾಗಿ ಹೊಸ ವಸತಿ ಪ್ರವೇಶವನ್ನು ನಿರ್ಮಿಸಿದ ಮೇಲೆ ಪರಭಾಷಿಕರ ಪಾರಮ್ಯ ಹೆಚ್ಚಾಯಿತು.

ಆ ವೇಳೆಗಾಗಲೇ ಕನ್ನಡಿಗರ ಧ್ವನಿ ಅಡಗಿಹೋಗಿತ್ತು. ಇದು ಬೆಂಗಳೂರಿನ ಸ್ಥಿತಿ ಮಾತ್ರ ಆಗಿರಲಿಲ್ಲ. ಕನ್ನಡ ಮಾತನಾಡುವ ಎಲ್ಲಾ ಭಾಗಗಳಲ್ಲೂ ಕನ್ನಡಿಗರು ಅನಾಥರಾಗಿದ್ದರು. ಕನ್ನಡ ಸಾಹಿತ್ಯ ಪರಿಷತ್ತು ‘ಕನ್ನಡಿಗರಲ್ಲಿ ಸ್ವಾಭಿಮಾನ’ ಮೂಡಿಸುವ ಉದ್ದೇಶದಿಂದ ಬೆಂಗಳೂರಿನಲ್ಲಿ ಆರಂಭಗೊಂಡಿತು. ಹಲವು ಸಂಘ ಸಂಸ್ಥೆಗಳು ಕನ್ನಡಿಗರು–ಕನ್ನಡ ಪ್ರದೇಶಗಳನ್ನು ಒಗ್ಗೂಡಿಸುವ ಕರ್ನಾಟಕ ಏಕೀಕರಣ ಹೋರಾಟಕ್ಕೆ ಮುಂದಾದವು.

ಕನ್ನಡ ನೆಲದಲ್ಲಿ ಸ್ವಾತಂತ್ರ್ಯ ಆಂದೋಲನ ಹಾಗೂ ಕರ್ನಾಟಕ ಏಕೀಕರಣ ಚಳವಳಿ ಒಟ್ಟಾಗಿ ನಡೆದಿದ್ದು 1956ರಲ್ಲಿ. ಹೋರಾಟ ನಡೆಸಿ ಪ್ರತ್ಯೇಕ ರಾಜ್ಯವನ್ನು ಗಳಿಸಿಕೊಂಡ ಕನ್ನಡಿಗರು ತಮ್ಮ ರಾಜ್ಯದ ರಾಜಧಾನಿಯಲ್ಲಿ ಅತಂತ್ರರಾಗಿದ್ದು ವಿಪರ್ಯಾಸ. ಕನ್ನಡ ಸಂಸ್ಕೃತಿಯನ್ನು ಇಲ್ಲಿ ಉಳಿಸಿ, ಬೆಳೆಸಲು, ಸಾಹಿತಿ, ಕಲಾವಿದರು, ಸಾರ್ವಜನಿಕ ಮುಖಂಡರು ಪ್ರಯತ್ನಗಳನ್ನು ಆರಂಭಿಸಿದ್ದರೂ ಅವು ಬಿರುಸಾಗಿ ನಡೆದಿರಲಿಲ್ಲ.

1950ರ ದಶಕದಲ್ಲಿ ಕನ್ನಡಿಗರ ವಾತಾವರಣಕ್ಕೆ ಬೆಂಗಳೂರಿನಲ್ಲಿ ಅನೇಕ ಶೈಕ್ಷಣಿಕ ಸಂಸ್ಥೆಗಳು ನೆರವು ನೀಡಿದವು. ಕೆಲವು ಸಂಘಟನೆಗಳು ‘ಕನ್ನಡ ಜಾಗೃತಿ’ಗಾಗಿ ಸಕ್ರಿಯಗೊಂಡವು. ಬೇರೆ ಭಾಷೆಯನ್ನು ಕನ್ನಡಿಗರ ಮೇಲೆ ಹೇರುವುದನ್ನು ಪ್ರತಿರೋಧಿಸಿ ಕನ್ನಡ ಚಳವಳಿ ಶುರುವಾಯಿತು. ಕನ್ನಡ ರಾಜ್ಯೋತ್ಸವ ಆಚರಣೆ. ತಾಯಿ ಭುವನೇಶ್ವರಿ ಮೆರವಣಿಗೆ– ಸಮ್ಮೇಳನಗಳು ಬೆಂಗಳೂರಿನಲ್ಲಿ ಆರಂಭಗೊಂಡವು.

ವ್ಯಾಪಾರ–ವಹಿವಾಟುಗಳಲ್ಲಿ, ಆಗಷ್ಟೇ ಶುರುವಾದ ಕೈಗಾರಿಕೆಗಳಲ್ಲಿ ತಳವೂರಿದ್ದ ಅನ್ಯಭಾಷಿಕರು ಬೆಂಗಳೂರಿನ ಕೆಲವು ಬಡಾವಣೆಗಳಲ್ಲಿ ಕನ್ನಡದ ವಾತಾವರಣಕ್ಕೆ ಅಡ್ಡಿ ಮಾಡುತ್ತಿರುವುದನ್ನು ಪ್ರತಿಭಟಿಸುವ ಘಟನೆಗಳು ನಡೆದವು. ಕನ್ನಡ ಸಾಹಿತ್ಯ ಪರಿಷತ್‌ ಸಮ್ಮೇಳನಗಳಲ್ಲೂ ಬೆಂಗಳೂರಿನ ಕನ್ನಡ ಜಾಗೃತಿ ಪರಿಸ್ಥಿತಿ ಪ್ರತಿಧ್ವನಿತವಾಗುತ್ತಿತ್ತು.

ನಾಡು–ನುಡಿಯ ಬಗೆಗೆ ಜಾಗೃತಿ ಪರ್ವ ನಡೆದಿರುವಾಗಲೇ ಬೆಂಗಳೂರಿನ ಚಾಮರಾಜಪೇಟೆ ರಾಮಸೇವಾ ಮಂಡಳಿಯ ರಾಮೋತ್ಸವದಲ್ಲಿ ಅನ್ಯಭಾಷಿಕರಿಗೆ ಹೆಚ್ಚಿನ ಅವಕಾಶ ನೀಡುವುದರ ವಿರುದ್ಧ ಪ್ರತಿಭಟನೆ ನಡೆಯಿತು. ಅದೂ ಪ್ರಸಿದ್ಧ ಗಾಯಕಿ ಎಂ.ಎಸ್‌. ಸುಬ್ಬಲಕ್ಷ್ಮಿ ಅವರ ಗಾಯನದ ದಿನ (ಮೇ 27, 1962) ಕೆಲವು ಅಹಿತಕರ ಘಟನೆಗಳೂ ನಡೆದವು. ಅನೇಕರ ಬಂಧನವೂ ಆಯಿತು. ಈ ಘಟನೆಯ ಬಳಿಕ ಕನ್ನಡ ದನಿ ಹೆಚ್ಚಿತು. ಕನ್ನಡ ಸಂಘಗಳು ಮತ್ತು ಕನ್ನಡ ಕಾರ್ಯಕರ್ತರ ಸಂಖ್ಯೆಯೂ ಏರತೊಡಗಿತು.

ಕನ್ನಡ ಚಳವಳಿಗೆ ಹೊಸ ಹುರುಪು ಬಂದರೂ ಕನ್ನಡ ಸಂಘಟನೆಗಳು ಒಂದಾಗಿರಲಿಲ್ಲ. ಸಾಹಿತ್ಯ ಲೋಕದಲ್ಲಿ ಖ್ಯಾತರಾಗಿದ್ದ ಅ.ನ.ಕೃ., ಮ.ರಾಮಮೂರ್ತಿ, ನಾಡಿಗೇರ್‌ ಕೃಷ್ಣರಾವ್‌ ಮೊದಲಾದವರ ನೇತೃತ್ವದಲ್ಲಿ ಅಸ್ತಿತ್ವಕ್ಕೆ ಬಂದ ‘ಕರ್ನಾಟಕ ಸಂಯುಕ್ತ ರಂಗ’ದ ಮೂಲಕ (1962) ಕನ್ನಡ ಕಾರ್ಯಕ್ರಮಗಳು ನಗರದಾದ್ಯಂತ ವ್ಯಾಪಿಸಿದವು.

ಚಾಲುಕ್ಯ ದೊರೆ ಇಮ್ಮಡಿ ಪುಲಿಕೇಶಿಯನ್ನು ತಮಿಳು ಚಿತ್ರವೊಂದರಲ್ಲಿ ಅವಹೇಳನ ಮಾಡಿದ್ದನ್ನು, ಆತನ ಧ್ವಜವನ್ನು ಅವಮಾನಿಸಿದ್ದನ್ನು ಕಂಡು ಕನ್ನಡ ಹೋರಾಟಗಾರರು ಕುಪಿತರಾದರು. ‘ಕರ್ನಾಟಕ ಸಂಯುಕ್ತ ರಂಗ’ದ ನೇತೃತ್ವದಲ್ಲಿ ಈ ಚಿತ್ರದ ವಿರುದ್ಧ ಶುರುವಾದ ಹೋರಾಟ ರಾಜ್ಯದಾದ್ಯಂತ ವ್ಯಾಪಿಸಿತು. ಅದೇ ಸಂದರ್ಭದಲ್ಲಿ ತಮಿಳು ಬಾವುಟಕ್ಕೆ ಪ್ರತಿಯಾಗಿ ಕನ್ನಡ ಧ್ವಜ (ಹಳದಿ–ಕೆಂಪು) ರೂಪುಗೊಂಡು ಎಲ್ಲೆಡೆ ಹಾರಾಡಿತು.

ಕನ್ನಡ ಹಾಡು–ನುಡಿ ರಕ್ಷಣೆಗೆ ವೇದಿಕೆಯೊಂದು ರೂಪುಗೊಳ್ಳುತ್ತಿರುವ ಸಮಯದಲ್ಲಿ ಪ್ರಖರ ವಾಗ್ಮಿ ವಾಟಾಳ್‌ ನಾಗರಾಜ್‌ ಯುವ ಪಡೆಯೊಡನೆ ಕನ್ನಡಪರ ಆಂದೋಲನಕ್ಕೆ ಕಾಲಿಟ್ಟರು. ಕೈಗಾರಿಕಾ ಸ್ವಾಮ್ಯದ ಸಂಸ್ಥೆಗಳಲ್ಲಿ ಕನ್ನಡಿಗರ ನೇಮಕಾತಿ, ಜಲವಿವಾದಗಳಲ್ಲಿ ರಾಜ್ಯದ ಹಿತರಕ್ಷಣೆ, ಸ್ವತಂತ್ರ ದೂರದರ್ಶನ ಕೇಂದ್ರಕ್ಕೆ ಆಗ್ರಹ, ಹಿಂದಿ ಹೇರಿಕೆಗೆ ವಿರೋಧ. ಹೀಗೆ ಕರ್ನಾಟಕ– ಕನ್ನಡಿಗರ ಹಿತರಕ್ಷಣೆಗಾಗಿ ಹತ್ತಾರು ಚಳವಳಿಗಳು ನಡೆದವು.

ಕನ್ನಡ ಚಿತ್ರಗಳನ್ನು ಪ್ರದರ್ಶಿಸುವಲ್ಲಿ ತಾರತಮ್ಯ ತೋರುತ್ತಿದ್ದ ಚಿತ್ರಮಂದಿರಗಳಿಗೆ ಕಡಿವಾಣ ಹಾಕುವುದರಲ್ಲಿ ಕನ್ನಡ ಚಳವಳಿಯ ಪಾತ್ರವಿದೆ. ಕನ್ನಡ ಭಾಷೆಯನ್ನು ಆಡಳಿತದಲ್ಲಿ, ಶಿಕ್ಷಣದಲ್ಲಿ ಅಳವಡಿಸಿಕೊಳ್ಳುವುದರಿಂದ ಹಿಡಿದು ಕನ್ನಡ ನಾಮಫಲಕಗಳು, ಕನ್ನಡ ವ್ಯವಹಾರ. ಕೇಂದ್ರೋದ್ಯಮಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ವಿಷಯಗಳಲ್ಲೂ ಒತ್ತಾಯ ಆರಂಭಿಸಿದವು.

‘ಗೋಕಾಕ್‌ ಚಳವಳಿ’ ಕನ್ನಡ ಪರ ಹೋರಾಟಗಳಲ್ಲಿ ದೊಡ್ಡ ಮಟ್ಟದ ಪರಿಣಾಮ ಬೀರಿದ ಚಳವಳಿ. ಇದರಲ್ಲಿ ಕವಿ–ಸಾಹಿತಿ ಕಲಾವಿದರೊಂದಿಗೆ ನಟ ರಾಜಕುಮಾರ್‌ ಕೈ ಜೋಡಿಸಿದ್ದರಿಂದ ಬೆಂಗಳೂರಿನಲ್ಲಿ ಹೋರಾಟದ ಕಾವು ಹೆಚ್ಚಿತು.

ಕನ್ನಡ ಭಾಷೆಯ ಅಭಿಮಾನಕ್ಕಾಗಿ ಏಕೀಕರಣದ ನಂತರದಲ್ಲಿ ಪ್ರಾರಂಭಗೊಂಡ ಕನ್ನಡ ಪರ ಚಳವಳಿ ಕರ್ನಾಟಕದ ಸಮಸ್ಯೆಗಳ ಇತ್ಯರ್ಥದ ವೇದಿಕೆಯಾಯಿತು. ಮೊದಲ ಬಾರಿಗೆ ‘ಪ್ರಜಾವಾಣಿ’ ದೈನಿಕ ಆರಂಭಿಸಿದ ‘ಕನ್ನಡ ರಾಜ್ಯೋತ್ಸವ’, ಬೆಂಗಳೂರಿನಲ್ಲಿ ದೊಡ್ಡ ಮಟ್ಟದಲ್ಲಿ ರಾಜ್ಯೋತ್ಸವ ಆಚರಣೆ ನಡೆಸಲು, ವಿವಿಧ ಸಂಘಟನೆಗಳು ವಾರಗಟ್ಟಲೆ ಕಾರ್ಯಕ್ರಮ ನಡೆಸಲು ನಾಂದಿಹಾಡಿತು. ಸಾರ್ವಜನಿಕ ರಜೆ ನೀಡುವುದರ ಜೊತೆಗೆ ತಾನೇ ರಾಜ್ಯೋತ್ಸವ ಆಚರಿಸುವ ಪರಿಪಾಠ ಆರಂಭಿಸಿದ ರಾಜ್ಯ ಸರ್ಕಾರ ‘ರಾಜ್ಯೋತ್ಸವ ಪ್ರಶಸ್ತಿ’ಗಳನ್ನು ಪ್ರದಾನ ಮಾಡಲು ಆರಂಭಿಸಿತು.

ಕನ್ನಡಪರ ಹೋರಾಟಗಳ ಪರಿಣಾಮ, ಸಾಂಸ್ಕೃತಿಕ ಜಗತ್ತಿನಲ್ಲೂ ನಾಲ್ಕಾರು ಮಹತ್ವದ ಬದಲಾವಣೆಗಳಿಗೆ ಕಾರಣವಾಯಿತು. ರಾಜಧಾನಿಯಲ್ಲಿ ಕನ್ನಡ ವಾತಾವರಣ ಸ್ಥಾಪನೆಗೂ ಅವಕಾಶ ನೀಡಿತು. ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕೇಂದ್ರ ಸರ್ಕಾರದ ಉದ್ಯಮ, ಬ್ಯಾಂಕ್‌ಗಳು, ಸರ್ಕಾರ ಹೀಗೆ ಎಲ್ಲೆಡೆ ಕನ್ನಡದ ಅಸ್ಮಿತೆ ಹರಡಲು ರಾಜಧಾನಿ ಬೆಂಗಳೂರು ಮೊದಲ ಮೆಟ್ಟಿಲಾಯಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.