ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಸಿಯುತ್ತಿದೆ ಟಿಪ್ಪು ಕಟ್ಟಿಸಿದ ಕೋಟೆ!

Last Updated 6 ನವೆಂಬರ್ 2017, 19:30 IST
ಅಕ್ಷರ ಗಾತ್ರ

ರಂಗಪಟ್ಟಣವನ್ನು ರಾಜಧಾನಿ ಮಾಡಿಕೊಂಡು 17 ವರ್ಷಗಳ ಕಾಲ ಮೈಸೂರು ರಾಜ್ಯವನ್ನಾಳಿದ ಟಿಪ್ಪು ಸುಲ್ತಾನ್‌ (1750–1799) ರಕ್ಷಣೆಗೆಂದು ಇಲ್ಲಿ ನಿರ್ಮಿಸಿದ್ದ ಕೋಟೆ ಜೀರ್ಣಾವಸ್ಥೆಯಲ್ಲಿದೆ. ಹೌದು, ಕೇವಲ 12 ದಿನಗಳ ಅಂತರದಲ್ಲಿ ಐದು ಕಡೆ ಕೋಟೆ ಕುಸಿತ ಕಂಡಿದೆ. ಪಟ್ಟಣದ ಪೂರ್ವಕ್ಕಿರುವ ಬೆಂಗಳೂರು ಗೇಟ್‌ ಕೋಟೆ, ಆಂಜನೇಯ ದೇಗುಲಕ್ಕೆ ಹೊಂದಿಕೊಂಡ ಕೋಟೆ, ಸೆಂದಲ್‌ ಕೋಟೆ, ಜಿಬಿ ಹೊಳೆಗೆ ಹೊಂದಿಕೊಂಡ ಕೃಷ್ಣಗೇಟ್‌ ಕೋಟೆ ಮತ್ತು ಶಂಭುಲಿಂಗಯ್ಯನ ಕಟ್ಟೆಗೆ ತೆರಳುವ ಮಾರ್ಗದ ಎಡ ಕೋಟೆಯ ಭಾಗ ಕುಸಿದು ಬಿದ್ದಿದೆ.

ಈಚೆಗೆ ಸುರಿದ ಭಾರಿ ಮಳೆಯ ನಂತರ ಕೋಟೆ ಮತ್ತು ಬುರುಜುಗಳು ಒಂದೊಂದಾಗಿ ಕುಸಿಯುತ್ತಿವೆ. ನಾಲ್ಕಾರು ಯುದ್ಧಗಳು, ಸೋಲು–ಗೆಲುವುಗಳು, ಪ್ರಾಕೃತಿಕ ಘಟನಾವಳಿ ಗಳಿಗೆ ಸಾಕ್ಷಿಯಾಗಿರುವ ಇಲ್ಲಿನ ಕೋಟೆ ದಿನದಿಂದ ದಿನಕ್ಕೆ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಿದೆ. ಬೃಹತ್‌ ಕಲ್ಲುಗಳು, ಉದ್ದನೆಯ ಚಪ್ಪಡಿಗಳು, ಸುಟ್ಟ ಇಟ್ಟಿಗೆಗಳು ಕಂದಕಕ್ಕೆ ತುಪು ತುಪು ಉದುರುತ್ತಿವೆ. ರಾಜ್ಯ ಪ್ರಾಚ್ಯವಸ್ತು ಇಲಾಖೆ ಮೂರು ವರ್ಷಗಳ ಹಿಂದಷ್ಟೇ ಅಭಿವೃದ್ಧಿ ಮಾಡಿದ್ದ ಪುರಸಭೆ ಕಚೇರಿ ಬಳಿಯ ಕೋಟೆ ಕೂಡ ಕುಸಿದಿದೆ.

ಬಹುತೇಕ ಕಡೆ ಕೋಟೆ ಮತ್ತು ಬುರುಜು ಗಿಡ, ಗಂಟಿಗಳಿಂದ ಮುಚ್ಚಿಹೋಗಿವೆ. ಕಂದಕಗಳು ಕೂಡ ಗಿಡಗಳಿಂದ ಭಾಗಶಃ ಮುಚ್ಚಿವೆ. ಅರಳಿ, ಆಲದ ಮರ ಬೆಳೆದು ತಳಗುಂಟ ಬೇರು ಬಿಟ್ಟು ಕಗ್ಗಲ್ಲಿನ ಕೋಟೆಯನ್ನೇ ಅಲುಗಾಡಿಸಿ ಉರುಳಿಸುತ್ತಿವೆ. ಸ್ಮಾರಕಗಳ ನಡುವೆ ಇರುವ ಕೊರಕಲುಗಳಲ್ಲಿ ಕೊಳಚೆ ನೀರು ಮಡುಗಟ್ಟಿ ನಿಂತಿದ್ದು, ಸ್ಮಾರಕ ಗಳಿಗೆ ಸಂಚಕಾರ ತಂದಿದೆ. ನಿರ್ವಹಣೆಯ ಕೊರತೆಯಿಂದ ಸ್ಮಾರಕಗಳ ತಾಣ ಹಾವು, ಹಲ್ಲಿಗಳ ಆವಾಸ ಸ್ಥಾನವಾಗಿದೆ. ‘ಆನೆ ಬಾಗಿಲು’ ದ್ವಾರವನ್ನು ಹೊರತುಪಡಿಸಿದರೆ ಈ ಪಟ್ಟಣದಲ್ಲಿ ‘ಕೋಟೆ ಎಲ್ಲಿದೆ’ ಎಂದು ತಡಕಾಡುವ ಪರಿಸ್ಥಿತಿ ಬಂದೊದಗಿದೆ.

(ಕುಸಿದುಹೋಗಿರುವ ‘ಬೆಂಗಳೂರು ಗೇಟ್‌’ ಬಳಿಯ ಕೋಟೆ)

ಮೊದಲ ಹಾನಿ: ನಾಲ್ಕನೇ ಆಂಗ್ಲೋ–ಮೈಸೂರು ಯುದ್ಧದಲ್ಲಿ ಶ್ರೀರಂಗಪಟ್ಟಣ ಪತನಗೊಂಡ (ಮೇ 4, 1799) ಬಳಿಕ ಜನರಲ್‌ ಹ್ಯಾರಿಸ್‌ ನೇತೃತ್ವದ ಆಂಗ್ಲ ಸೇನೆ ಪಟ್ಟಣವನ್ನು ಸೂರೆ ಮಾಡಿದ ಸಂದರ್ಭದಲ್ಲಿ ಟಿಪ್ಪು ಸುಲ್ತಾನನ ಲಾಲ್‌ಮಹಲ್‌ ಅರಮನೆ ಮತ್ತು ಕೋಟೆಯನ್ನು ಭಾಗಶಃ ಹಾನಿ ಮಾಡಿತ್ತು. ತದನಂತರ ಸುಮಾರು 150 ವರ್ಷಗಳವರೆಗೆ ಕೋಟೆ ಇತರ ಸ್ಮಾರಕಗಳು ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾದವು. ಕೆಲವೆಡೆ ಕಂದಕಗಳು ತೋಟಗಳಾಗಿದ್ದರೆ, ಮತ್ತೆ ಕೆಲವೆಡೆ ಕೋಟೆಯ ಗೋಡೆಗೆ ಅಂಟಿಕೊಂಡೇ ಮನೆಗಳು ಎದ್ದಿವೆ.

ಕೋಟೆಯ ರಚನೆ: ಪಟ್ಟಣವನ್ನು ಯಾವ ದಿಕ್ಕಿನಿಂದ ಪ್ರವೇಶಿಸಬೇಕಾದರೂ ಮೂರು ವರಸೆಯ ಕೋಟೆಯನ್ನು ದಾಟಿಯೇ ಒಳಗೆ ಹೋಗಬೇಕು. ನದಿಗೆ ಹೊಂದಿಕೊಂಡಿರುವ ಮೊದಲ ಸುತ್ತಿನ ಕೋಟೆಯನ್ನು ಸೈಜುಕಲ್ಲು ಮತ್ತು ಮಣ್ಣಿ ನಿಂದ ನಿರ್ಮಾಣ ಮಾಡಿರುವುದು ಗೋಚರಿಸುತ್ತದೆ. ಎರಡನೇ ಸುತ್ತಿನ ಕೋಟೆ ನಿರ್ಮಾಣದಲ್ಲಿ (ಒಡೆಯರ್‌ ದೊರೆಗಳ ಕಾಲ) ಕಲ್ಲುಗಳ ಜತೆಗೆ ಸುಟ್ಟ ಇಟ್ಟಿಗೆ, ಚುರಕಿ ಗಾರೆ ಬಳಸಲಾಗಿದೆ. ಮೂರನೇ ಸುತ್ತಿನ ಕೋಟೆಗೆ ಚುರಕಿ ಗಾರೆ ಜತೆಗೆ ಇಟ್ಟಿಗೆ ಮತ್ತು ದಪ್ಪ ಗಾತ್ರದ ಕಪ್ಪು ಕಲ್ಲುಗಳನ್ನು ಹೆಚ್ಚು ಬಳಸಲಾಗಿದೆ. ಕೈದಿ ಗಳನ್ನು ಬಳಸಿಕೊಂಡು ಟಿಪ್ಪು ಸುಲ್ತಾನ್‌ ಈ ಕೋಟೆ ಜತೆಗೆ ಬುರುಜು, ಸುರಂಗ, ಶಸ್ತ್ರಾಗಾರ, ಜೈಲುಗಳನ್ನು ನಿರ್ಮಿಸಿದ್ದ ಎನ್ನುತ್ತವೆ ದಾಖಲೆಗಳು.

‘ಪಟ್ಟಣದ ಸುತ್ತಲೂ, ಕಾವೇರಿ ನದಿಗೆ ಹೊಂದಿಕೊಂಡಂತಿರುವ 6.5 ಕಿ.ಮೀ. ಉದ್ದದ ಕೋಟೆಯ ಕಾವಲಿಗೆ ಟಿಪ್ಪು 10 ಸಾವಿರ ಸೈನಿಕರನ್ನು ಇರಿಸಿದ್ದ. ಎತ್ತರದ ಬುರುಜುಗಳ ಮೇಲೆ ಫಿರಂಗಿ ದಳ ಸದಾ ಕಟ್ಟೆಚ್ಚರ ವಹಿಸುತ್ತಿತ್ತು. ಕೋಟೆಗೆ ಹೊಂದಿಕೊಂಡ ಕಂದಕಗಳಿಗೆ ನೀರು ತುಂಬಿಸಿ ಮೊಸಳೆಗಳನ್ನು ಬಿಟ್ಟು ವೈರಿಗಳಲ್ಲಿ ಭಯ ಹುಟ್ಟಿಸಿದ್ದ’ ಎಂದು ಹೆಸರಾಂತ ಇತಿಹಾಸಕಾರ ಗಿದ್ವಾನಿ ತಮ್ಮ ‘ಸ್ವೋರ್ಡ್‌ ಆಫ್‌ ಟಿಪ್ಪು ಸುಲ್ತಾನ್‌’ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.

(ಜಾಮಿಯಾ ಮಸೀದಿ ಎದುರಿನ ಐತಿಹಾಸಿಕ ಬುರುಜಿನ ಮೇಲೆ ಮರ ಬೆಳೆದಿದೆ)

‘ಶ್ರೀರಂಗಪಟ್ಟಣದಲ್ಲಿ ನೆಲೆಸಿ ಕೋಟೆ ನಿರ್ಮಿಸುತ್ತಿರುವ ವಿಜಯನಗರದ ರಾಜಪ್ರತಿನಿಧಿ ನಮಗೆ ಮನೆ ಹಾಗೂ ಚರ್ಚ್‌ ನಿರ್ಮಿಸಿಕೊಳ್ಳಲು ಭೂಮಿ ನೀಡುವುದಾಗಿ ಭರವಸೆ ನೀಡುತ್ತಿದ್ದಾನೆ’ ಎಂದು ಮೈಸೂರು ಪ್ರಾಂತ್ಯಕ್ಕೆ ರೋಮ್‌ ಪ್ರತಿನಿಧಿಯಾಗಿ ಬಂದಿದ್ದ ಜೆಸ್ಯುಯಿಟ್‌ ಮಿಷನರಿಯ ಫಾ.ಕುಟಿನೊ ಎಂಬವರು ರೋಮ್‌ನ ಪರಮೋಚ್ಛ ಧರ್ಮ ಗುರು ಫೀಮೆಂಟಾ ಅವರಿಗೆ 1606ರಲ್ಲಿ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

‘ವಿಜಯನಗರದ ಸಾಮ್ರಾಟ ಎರಡನೇ ದೇವರಾಯನ ಪ್ರತಿನಿಧಿ ನಾಗಮಂಗಲದ ತಿಮ್ಮಣ್ಣ ಹೆಬ್ಬಾರ್‌ 1454ರಲ್ಲಿ ಇಲ್ಲಿ ಪಟ್ಟಣದ ಪಶ್ಚಿಮ ಭಾಗದಲ್ಲಿ ಮೊದಲು ಮಣ್ಣಿನ ಕೋಟೆಯನ್ನು ನಿರ್ಮಿಸಿದ. ಹೈದರ್‌ ಮತ್ತು ಟಿಪ್ಪು ಈ ಕೋಟೆಯನ್ನು ಪುನರ್‌ ನಿರ್ಮಾಣ ಮಾಡಿದರು. ಅರಮನೆ ಮಂದಿ ಕಾವೇರಿ ನದಿಗೆ ತೆರಳಲು ವಾಟರ್‌ ಗೇಟ್‌, ಕೃಷ್ಣ ದೇವಾಲಯದ ಬಳಿ ಜಿಬಿ ಅಥವಾ ಕೃಷ್ಣ ಗೇಟ್‌, ಪೂರ್ವ ಕೋಟೆ ದ್ವಾರದಲ್ಲಿ ಬೆಂಗಳೂರು ಗೇಟ್‌ ಮತ್ತು ಈಗಿನ ರೈಲ್ವೆ ನಿಲ್ದಾಣ ಬಳಿ ಡೆಲ್ಲಿ ಗೇಟ್‌–ಈ ನಾಲ್ಕೂ ಬೃಹತ್‌ ದ್ವಾರಗಳು ಟಿಪ್ಪು ಕಾಲದ ವಿಶಿಷ್ಟ ರಚನೆಗಳು’ ಎಂದು ಭಾರತೀಯ ಪುರಾತತ್ವ ಮತ್ತು ಸರ್ವೇಕ್ಷಣ ಪ್ರಕಟಿಸಿರುವ ಪುಸ್ತಕದಲ್ಲಿ ದಾಖಲಾಗಿದೆ.

(ಜಿ.ಬಿ ಹೊಳೆ ಎಂಬಲ್ಲಿ (ಕೃಷ್ಣ ಗೇಟ್‌) ಕುಸಿದು ಬಿದ್ದಿರುವ ಕೋಟೆ)

ಹೊಯ್ಸಳರ ದೊರೆ ಉದಯಾದಿತ್ಯ 11ನೇ ಶತಮಾನದಲ್ಲಿ ಈ ದ್ವೀಪ ಪಟ್ಟಣವನ್ನು ಅಭಿವೃದ್ಧಿಪಡಿಸಿದ್ದಾಗಿ ಇತಿಹಾಸದ ಪುಟಗಳಿಂದ ತಿಳಿದು ಬರುತ್ತದೆಯಾದರೂ ಆತನ ಕಾಲದಲ್ಲಿ ಕೋಟೆ ಇತ್ತು ಎಂಬುದರ ಬಗ್ಗೆ ಎಲ್ಲಿಯೂ ಉಲ್ಲೇಖ ಇಲ್ಲ. ಯದು ವಂಶದ ಒಡೆಯರ್‌ ದೊರೆಗಳಲ್ಲಿ ಮೊದಲಿಗರಾದ ರಾಜ ಒಡೆಯರ್‌ (1610–17) ಮೊದಲ ಸುತ್ತಿನ ಕೋಟೆಯನ್ನು ನಿರ್ಮಿಸಿದ ಬಳಿಕ ಕಂಠೀರವ ನರಸರಾಜ ಒಡೆಯರ್‌ (1638–59) ಎರಡನೇ ಸುತ್ತಿನ ಪ್ರಬಲ ಕೋಟೆಯನ್ನು ಕಟ್ಟಿಸಿ ರಾಜಧಾನಿ ರಕ್ಷಣೆಗೆ ಕ್ರಮ ವಹಿಸಿದರು. ನದಿಯ ಸುತ್ತಲೂ ಇದ್ದ ಮೊದಲ ಮತ್ತು ಎರಡನೇ ಸುತ್ತಿನ ಕೋಟೆ ಜತೆಗೆ ಟಿಪ್ಪು ಇಲ್ಲಿ ಮೂರನೇ ಸುತ್ತಿನ ಬಲಿಷ್ಠ ಕೋಟೆಯನ್ನು ನಿರ್ಮಿಸಿದ.

ಫ್ರೆಂಚ್‌ ತಂತ್ರಜ್ಞರನ್ನು ಕರೆಸಿ ರಾಜಧಾನಿಯ ನಾಲ್ಕು ಪ್ರಮುಖ ದ್ವಾರಗಳ ಜತೆಗೆ ಶತ್ರುಗಳು ಒಳ ನುಸುಳದಂತೆ ಅಭೇದ್ಯ ಕೋಟೆಯನ್ನು ಆತ ನಿರ್ಮಿಸಿದ. ಫ್ರಾನ್ಸ್‌ನ ಹ್ಯೂಬನ್‌ ಎಂಬಾತನ ನೇತೃತ್ವದಲ್ಲಿ ಹತ್ತಾರು ಮಂದಿ ಪಾಶ್ಚಾತ್ಯ ತಂತ್ರಜ್ಞರು ಈ ಕೋಟೆಯನ್ನು ಬಲಪಡಿಸಿದ್ದಾರೆ. ಕೋಟೆ ಮತ್ತು ಕಂದಕಗಳಿಗೆ ಹೊಂದಿಕೊಂಡಂತೆ ವಿವಿಧ ದಿಕ್ಕುಗಳಲ್ಲಿ ಇರುವ 40ರಿಂದ 50 ಅಡಿ ಎತ್ತರದ ಬುರುಜುಗಳು ಕೂಡ ಟಿಪ್ಪು ಕಾಲದ ನಿರ್ಮಾಣಗಳೇ ಆಗಿವೆ. ಹಾಗಾಗಿ ಇಲ್ಲಿನ ಕೋಟೆ ದೇಶ, ವಿದೇಶಗಳಲ್ಲಿ ‘ಟಿಪ್ಪು ಕೋಟೆ’ ಎಂದೇ ಹೆಸರಾಗಿದೆ.

(ಶ್ರೀರಂಗನಾಥಸ್ವಾಮಿ ದೇವಾಲಯದ ಪೂರ್ವ ದಿಕ್ಕಿನಲ್ಲಿರುವ ಸೆಂದಲ್‌ ಕೋಟೆಯ ಸ್ಥಿತಿ)

‘ಟಿಪ್ಪು ಕಾಲದಲ್ಲೇ ನಿರ್ಮಾಣಗೊಂಡಿರುವ ಕೇರಳದ ಪಾಲಕ್ಕಾಡ್‌ ಬಳಿಯ ಬೇಕಲ್‌ ಕೋಟೆ, ಸಕಲೇಶಪುರದ ಮಂಜ್ರಾಬಾದ್‌ ಕೋಟೆ ಹಾಗೂ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ಬಳಿಯ ಜಮನಾಬಾದ್‌ ಕೋಟೆಗಳಿಗಿಂತ ಶ್ರೀರಂಗಪಟ್ಟಣ ಕೋಟೆ ಅಭೇದ್ಯವಾದುದು. ಮೂರು ಸುತ್ತಿನ ಈ ಕೋಟೆ, ನಿರ್ವಹಣೆಯ ಕೊರತೆಯಿಂದ ತೀರಾ ದುಸ್ಥಿತಿ ತಲುಪಿದೆ. ಕೇಂದ್ರ ಮತ್ತು ರಾಜ್ಯ ಪ್ರಾಚ್ಯವಸ್ತು ಇಲಾಖೆಗಳು ಆಸ್ಥೆ ವಹಿಸದಿದ್ದರೆ ಮುಂದಿನ ಮಳೆಗಾಲದ ಹೊತ್ತಿಗೆ ಕೋಟೆಯ ಇನ್ನಷ್ಟು ಭಾಗ ನೆಲಸಮವಾಗುತ್ತದೆ’ ಎಂದು ಸಾಹಿತಿ ಎಸ್‌. ವೆಂಕಟರಮಣಸ್ವಾಮಿ ಕಳವಳ ವ್ಯಕ್ತಪಡಿಸುತ್ತಾರೆ.

‘ಪ್ರವಾಸೋದ್ಯಮ ಇಲಾಖೆಯಿಂದ ಶ್ರೀರಂಗಪಟ್ಟಣದ ಐತಿಹಾಸಿಕ ಕೋಟೆ ಇತರ ಸ್ಮಾರಕಗಳ ಸಂರಕ್ಷಣೆಗಾಗಿ ರಾಜ್ಯ ಸರ್ಕಾರ ₹19 ಕೋಟಿ ಹಣವನ್ನು ಮೀಸಲಿಟ್ಟಿದೆ. ರಾಜ್ಯ ಪ್ರಾಚ್ಯವಸ್ತು ಇಲಾಖೆ ಸ್ವಚ್ಛತೆ ಮತ್ತು ಪುನರ್‌ ನಿರ್ಮಾಣದ ಬಗ್ಗೆ ಅಂದಾಜು ಸಿದ್ಧಪಡಿಸಿ ಸಲ್ಲಿಸಿದರೆ ಅದರ ಪ್ರಯೋಜನ ಪಡೆದುಕೊಳ್ಳಬಹುದು’ ಎಂದು ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಹರೀಶ್‌ ಹೇಳುತ್ತಾರೆ.

‘200–300 ವರ್ಷಗಳ ಹಿಂದಿನ ಕೋಟೆ ಸತತ ಮಳೆಯಿಂದಾಗಿ ಕುಸಿಯುತ್ತಿದೆ. ಮಳೆಗಾಲ ಮುಗಿದ ನಂತರ ಕೋಟೆಯ ದುರಸ್ತಿ ಕಾರ್ಯ ಆರಂಭಿಸುವ ಕುರಿತು ಉನ್ನತ ಅಧಿಕಾರಿಗಳ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ’ ಎಂಬುದು ರಾಜ್ಯ ಪ್ರಾಚ್ಯವಸ್ತು ಇಲಾಖೆ ಎಂಜಿನಿಯರ್‌ ಮೋಹನಕುಮಾರ್‌ ಮಾಹಿತಿ ನೀಡುತ್ತಾರೆ.

(ವಾಟರ್‌ ಗೇಟ್‌ (ಸಾರಂಗ ವನ) ಕೋಟೆ ಪ್ರದೇಶ ಗಿಡ ಗಂಟಿಗಳಿಂದ ಮುಚ್ಚಿ ಹೋಗಿದೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT