7

ಗರಿಗರಿ ಬೆಂಡೆ, ತಿನ್ನಲು ಸಿದ್ಧ!

Published:
Updated:
ಗರಿಗರಿ ಬೆಂಡೆ, ತಿನ್ನಲು ಸಿದ್ಧ!

ಕೆಲವು ತರಕಾರಿಗಳನ್ನು ಹಸಿಯಾಗಿಯೂ ತಿನ್ನಬಹುದು. ಆದರೆ, ಈ ಪಟ್ಟಿಯಲ್ಲಿ ಬೆಂಡೆಕಾಯಿಗೆ ಜಾಗವಿಲ್ಲ. ಅದನ್ನು ಜಗಿದು ತಿಂದವರ ಮುಖ ಹೇಗಾದೀತು?

ತರಕಾರಿಯಾಗಿ ಬೆಂಡೆ ನಿಮಗೆ ಇಷ್ಟವೋ ಇಲ್ಲವೋ ಗೊತ್ತಿಲ್ಲ. ಆದರೆ ಈಗ ನೋಡಿ, ಅದು ಕಚಕಚನೆ ಜಗಿದು ತಿನ್ನಬಹುದಾದ ರೂಪದಲ್ಲಿ ಮಾರುಕಟ್ಟೆಗಿಳಿದಿದೆ!

ಕುಂದಾಪುರದ ಗೋಕುಲ್ ಫ್ರುಟ್ಸ್ ಬೆಂಡೆಯನ್ನು ‘ಬಾಯಿಗೆ ಸಿದ್ಧ’ ರೂಪದಲ್ಲಿ ತಂದ ಕಂಪನಿ. ಈವರೆಗೆ ತಿಂದವರು ‘ಒಳ್ಳೆ ರುಚಿ’ ಅಂತ ಬಾಯಿ ಚಪ್ಪರಿಸುತ್ತಲೂ ಇದ್ದಾರಂತೆ. ‘ಬೆಂಡೆ ವ್ಯಾಕ್ಯೂಮ್ ಫ್ರೈಡ್ ರೂಪದಲ್ಲಿ ಬರುತ್ತಿರುವುದು ಭಾರತದಲ್ಲೇ ಬಹುಶಃ ಇದು ಪ್ರಥಮ’ ಎನ್ನುತ್ತಾರೆ ಕಂಪನಿಯ ಮಾಲೀಕ ಕಿಶೋರ್ ಕೊಡ್ಗಿ.

ವ್ಯಾಕ್ಯೂಮ್ ಫ್ರೈ ತಂತ್ರಜ್ಞಾನ ನಮ್ಮಲ್ಲಿಗೆ ಸ್ವಲ್ಪ ಹೊಸದು. ಬೇರೆ ಬೇರೆ ಹಣ್ಣು-ತರಕಾರಿಗಳನ್ನು ಸ್ವಯಂ ಚಾಲಿತ ಯಂತ್ರಗಳಲ್ಲಿ ಅತಿ ಕನಿಷ್ಠ ಎಣ್ಣೆಯಲ್ಲಿ ಒಂದೇ ರೀತಿ ಹುರಿದು ಗರಿಗರಿಯಾಗಿಸುವುದು ಈ ತಂತ್ರಜ್ಞಾನದ ವಿಶೇಷ. ಹಲಸು, ಬಾಳೆಹಣ್ಣು, ಅನಾನಸುಗಳಿಂದ ಹಿಡಿದು ಯಾವುದೇ ಹಣ್ಣು-ತರಕಾರಿಯನ್ನು ವ್ಯಾಕ್ಯೂಮ್ ಫ್ರೈ ಮಾಡಬಹುದು. ಜನಸ್ವೀಕೃತಿಯ ವಿಚಾರ ಬೇರೆ.

ಈ ತಂತ್ರಜ್ಞಾನದಲ್ಲಿ, ಯಂತ್ರ ಮತ್ತು ಚಿಪ್ಸ್ ತಯಾರಿಯಲ್ಲಿ ವಿಯೆಟ್ನಾಂ ಬಹು ಮುಂದಿದೆ. ಉಳಿದಂತೆ ಚೀನಾ, ಇಂಡೋನೇಷ್ಯಾದಲ್ಲಿ ಪ್ರಚಲಿತದಲ್ಲಿದೆ. ಭಾರತದಲ್ಲಿ ಇನ್ನೂ ಅಂಬೆಗಾಲಿಕ್ಕುತ್ತಿದೆ, ಅಷ್ಟೇ.

ಗೋಕುಲ್ ಫ್ರುಟ್ಸ್ ಆರಂಭವಾದದ್ದು 2005ರಲ್ಲಿ. ಜಪಾನಿನಲ್ಲಿ ಈ ಯಂತ್ರದ ಡೆಮೋ ಕಂಡು ಪ್ರಭಾವಿತರಾದ ಕೊಡ್ಗಿ ಸೋದರರು ಅದನ್ನು ಖರೀದಿಸಿದರು. ಹತ್ತು ಹಲವು ಉತ್ಪನ್ನ ಮಾಡಿನೋಡಿದರು; ದೀವಿಹಲಸಿನಿಂದ ಹಿಡಿದು ಬಟಾಟೆವರೆಗೆ. ಇದರಲ್ಲಿ ಕೈ ಹಿಡಿದು ಮುಂದುವರಿದದ್ದು ಕಾಬೂಲಿ ಕಡ್ಲೆ ಮತ್ತು ಸ್ವಲ್ಪ ಮಟ್ಟಿಗೆ ಹಲಸಿನ ಹಣ್ಣು. ಆದರೆ ಹಲಸಿನ ಹಣ್ಣಿಗೆ ಗೊತ್ತಲ್ಲಾ, ಸೊಳೆ ಬಿಡಿಸುವುದೇ ಬಹು ದೊಡ್ಡ ಕೆಲಸ.

ಕಿಶೋರ್‍, ಹಾಗಲಕಾಯಿ, ಬಟಾಟೆ, ಸಿಹಿಗೆಣಸು, ಬಜ್ಜಿ ಮೆಣಸು – ಇವೆಲ್ಲದರ ವ್ಯಾಕ್ಯೂಮ್ ಫ್ರೈ ಪ್ರಯೋಗ ಮಾಡಿ ನೋಡಿದ್ದಾರೆ. ಒಂದೊಂ ದಕ್ಕೆ ಒಂದೊಂದು ಲೋಪ. ಯಾವುದೂ ಮಾರುಕಟ್ಟೆಯಲ್ಲಿ ಹಿಡಿದು ನಿಲ್ಲುವಂಥದ್ದಲ್ಲ. ‘ಬೆಂಡೆಕಾಯಿ ಬಹುಕಾಲದಿಂದ ಮನಸ್ಸಿನಲ್ಲಿತ್ತು. ಜಪಾನಿನಲ್ಲಿ ಅವರು ಬೆಂಡೆಯ ಪ್ರಾತ್ಯಕ್ಷಿಕೆ ಮಾಡಿ ತೋರಿಸಿದ್ದರು. ನಾನಿಲ್ಲಿ ಮಾಡಿಯೂ ಇದ್ದೆ. ಆದರೆ ದಶಕದ ಹಿಂದೆ ಇಲ್ಲಿ ಈ ವಿಧಾನದ ಬಗ್ಗೆ ಅರಿವೇ ಇರಲಿಲ್ಲವಲ್ಲಾ? ಈಗ ಒಂದಷ್ಟು ಜನರಿಗೆ ಗೊತ್ತಾಗಲು ಶುರುವಾಗಿದೆ. ಬಹುಶಃ ಕಾಲ ಪಕ್ವವಾಗಿದೆ’ ಎನ್ನುತ್ತಾರೆ.

ಈವರೆಗಿನ ಪ್ರಯೋಗದಲ್ಲಿ ಗೋಕುಲ್ ಫ್ರುಟ್ಸ್‌ ಕಂಪನಿಗೆ ಮಾರುಕಟ್ಟೆಯಲ್ಲಿ ನಸುನಕ್ಕು ಭರವಸೆ ಸೂಸಿರುವುದು ಬೆಂಡೆಯೇ. ಇದನ್ನು ಮಾರುಕಟ್ಟೆಗಿಳಿಸಿ ಒಂದು ತಿಂಗಳಷ್ಟೇ ಆಗಿದೆ. ಈಗ ಬೆಂಗಳೂರು, ಮುಂಬಯಿ, ಮಂಗಳೂರು, ಮಣಿಪಾಲ, ಪುತ್ತೂರು (ದ.ಕ ಜಿಲ್ಲೆ) ಮತ್ತು ತ್ರಿಶೂರುಗಳಿಗೆ ತಲುಪಿದೆ. ನೂರು ಗ್ರಾಮಿನ ಪ್ಯಾಕೆಟಿಗೆ ₹ 100 ಬೆಲೆ. ದ.ಕ.ದಲ್ಲಿ ₹ 85.

ಕಂಪನಿ ಎಲ್ಲಾ ಬಿಟ್ಟು ಏಕೆ ಬೆಂಡೆಯ ಉತ್ಪನ್ನಕ್ಕೆ ಆದ್ಯತೆ ಕೊಟ್ಟಿತು? ತಿಂಗಳುಗಳ ಹಿಂದೆ ಇವರು ಮುಂಬಯಿಯ ಒಂದು ಏಜೆನ್ಸಿಗೆ ಅರ್ಧ ಟನ್ ‘ಬೆಂಡೆ ಫ್ರೈ’ ಮಾಡಿ ಕಳಿಸಿದ್ದರು. ಅಲ್ಲಿಂದ ಶಹಬ್ಬಾಸ್‌ಗಿರಿ ಬಂತು. ಇಲ್ಲಿ ಉತ್ಸಾಹ ಗರಿಗೆದರಿತು. ಮುಂದೆ ಮೈಸೂರಿನ ಏಜೆಂಟರಿಗೆ ರವಾನೆ. ಅಲ್ಲೂ ಕ್ಲಿಕ್ ಆಯಿತು. ಒಂದಷ್ಟು ಐಟಿ ಮಂದಿ ಇದನ್ನು ತಿಂದವರೇ ಸಾಮಾಜಿಕ ಮಾಧ್ಯಮಗಳಲ್ಲಿ ಫೋಟೊ ಹಾಕಿ ಹೊಗಳಿದರು. ಹೋದಲ್ಲೆಲ್ಲಾ ಜನರಿಗೆ ಇಷ್ಟ ಆಯಿತು! ‘ಬೆಂಡೆ ಫ್ರೈ’ ಜನರ ಬಾಯಲ್ಲಿ ನೀರು ಹರಿಸಿತು.

‘ಹಲಸಿನ ಹಣ್ಣು ಚಿಪ್ಸ್ ಬ್ಯಾಚ್ ತಯಾರಾಗಲು 90 ನಿಮಿಷ ಸಾಕು. ಆದರೆ ಬೆಂಡೆಗೆ ಹಾಗಲ್ಲ. ಹೊರಗಿನಿಂದ ಗೊತ್ತೇ ಆಗುವುದಿಲ್ಲ. ನೀರಿನಂಶ ಹೆಚ್ಚೇ ಇರುತ್ತದೆ. ಅದಕ್ಕೆ ಎರಡೂಕಾಲು ಗಂಟೆ ಬೇಕು. ಆದರೆ ಹಲಸು ಕತ್ತರಿಸಿ ಸೊಳೆ ತೆಗೆದು ಸಿದ್ಧ ಮಾಡಲು ಸಿಕ್ಕಾಪಟ್ಟೆ ಶ್ರಮ ಬೇಕು. ಇದರ ಕೆಲಸ ಹಗುರ’ ಎನ್ನುತ್ತಾರೆ ಕಿಶೋರ್‌.

ಚಿಕ್ಕ ಪ್ರಮಾಣದಲ್ಲಿ ಹಾಗಲಕಾಯಿಯದೂ ವ್ಯಾಕ್ಯೂಮ್ ಫ್ರೈ ಚಿಪ್ಸ್ ತಯಾರಿಸುತ್ತಾರೆ. ಆದರೆ ಕಡ್ಲೆಹಿಟ್ಟಿನಲ್ಲಿ ಅದ್ದಿದ ಸಾಂಪ್ರದಾಯಿಕ ರೀತಿಯಲ್ಲಿ ಬಾಣಲೆಯಲ್ಲಿ ಹುರಿದ ಹಾಗಲ (ಓಪನ್ ಫ್ರೈಡ್) ಬೇರೆ ಹಲವೆಡೆಗಳಿಂದ ಬರುತ್ತಿದೆ. ಅದು ಅಗ್ಗ ಕೂಡ. ವ್ಯಾಕ್ಯೂಮ್ ಫ್ರೈಗೆ ಉತ್ಪಾದನೇ ವೆಚ್ಚವೇ ಹೆಚ್ಚಿದೆ. ‘ರುಚಿಯಲ್ಲಿ ಓಪನ್ ಫ್ರೈಯ ಹಾಗಲಕಾಯಿ ಮುಂದೆ. ಎಣ್ಣೆ ಕನಿಷ್ಠ ಆದ ಕಾರಣ ಆರೋಗ್ಯ ಮತ್ತು ಶುಚಿತ್ವದಲ್ಲಿ ನಮ್ಮದು ಮುಂದೆ’ ಎಂದು ಬಣ್ಣಿಸುತ್ತಾರೆ.

ಹಗುರ ಎಂದರೂ, ತಲೆನೋವು ಇಲ್ಲದಿಲ್ಲ. ಪ್ಯಾಕಿಂಗ್ ಅನುಕೂಲಕ್ಕೆ ಬೆಂಡೆ ನಾಕಿಂಚಿಗಿಂತ ಚಿಕ್ಕದು ಬೇಕು. ಇವರು ತರಿಸಿದ ಕಚ್ಚಾ ಬೆಂಡೆಯಲ್ಲಿ ಕೆಲವದರಲ್ಲಿ ಒಳಗೆ ಹುಳ ಕಂಡುಬಂತು. ‘ಈಗ ನಮ್ಮ ಸಿಬ್ಬಂದಿ ಎಣ್ಣೆಯಲ್ಲಿ ಕಣ್ಣಿಟ್ಟು ಪರೀಕ್ಷಿಸುತ್ತಾರೆ. ಎಲ್ಲಾದರೂ ಚಿಕ್ಕ ತೂತು ಇದೆಯೋ, ಒಳಗೆ ಹುಳ ಇದೆಯೆಂದೇ ಲೆಕ್ಕ’ ಎಂದು ಹೇಳುತ್ತಾರೆ.

ಗೋಕುಲ್ ಫ್ರುಟ್ಸ್‌ಗೆ ಇನ್ನೂ ಸರಿಯಾದ ಬೆಂಡೆಕಾಯಿ ಸರಬರಾಜುದಾರರು ಸೆಟ್ ಆಗಿಲ್ಲವಂತೆ. ಅವರು ಬಹುದೂರದ ಆಂಧ್ರದಿಂದ ತರಿಸಬೇಕಾಗುತ್ತಿದೆಯಂತೆ. ‘ಸತತವಾಗಿ ಗುಣಮಟ್ಟದ ಬೆಂಡೆ ಪೂರೈ ಸುವ ಮಂದಿಗಾಗಿ ಹುಡುಕುತ್ತಿದ್ದೇನೆ. ದಿನಕ್ಕೆ ಅರ್ಧ ಟನ್‌ವರೆಗೂ ನಮಗೆ ಬೇಕು’ ಎನ್ನುತ್ತಾರೆ ಕಿಶೋರ್.

ವ್ಯಾಕ್ಯೂಮ್ ಫ್ರೈಯದು ಬ್ಯಾಚ್ ಪ್ರೊಡಕ್ಷನ್. ಇಂಡೋನೇಷ್ಯಾದಲ್ಲಿ ಚಿಕ್ಕ ಪ್ರಮಾಣದ ಯಂತ್ರಗಳು ಧಾರಾಳ. ಅಲ್ಲಿ ಕಂಪೆನಿಗಳ ನಡುವೆ ಪೈಪೋಟಿಯಿದೆ. ವ್ಯಾಕ್ಯೂಮ್ ಫ್ರೈ ತಂತ್ರಜ್ಞಾನ ಒಂದು ಗೃಹ ಉದ್ದಿಮೆಯ ಥರ ಆಗಿಬಿಟ್ಟಿದೆ. ಬ್ರಾಂಡಿಂಗ್, ಹೆಸರೇ ಇಲ್ಲದ ನೂರಾರು ಕಂಪನಿಗಳು ಬೇರೆ ಬೇರೆ ಚಿಪ್ಸ್ ಮಾಡಿ ಮಾರುತ್ತಿವೆ. ಮಲೇಷ್ಯಾ, ಫಿಲಿಪ್ಪೀನ್ಸ್ ಕೃಷಿಕುಟುಂಬಗಳು ಅಥವಾ ಗುಂಪುಗಳು ತಮ್ಮ ಬೆಳೆಯ ಒಂದು ಪಾಲನ್ನು ಹೀಗೆ ವ್ಯಾಕ್ಯೂಮ್ ಫ್ರೈ ಚಿಪ್ಸ್ ಮಾಡಿ ಮಾರುತ್ತಿವೆ.

ನಮ್ಮಲ್ಲೂ ಕಾಲಕ್ರಮದಲ್ಲಿ ಈ ತಂತ್ರಜ್ಞಾನ ಜನಪ್ರಿಯತೆ ಪಡೆಯಬಹುದು. ಕೃಷಿಕರ ಆದಾಯ ದುಪ್ಪಟ್ಟು ಆಗಬೇಕಾದರೆ ನಮ್ಮ ಕೃಷಿ ಸಂಶೋಧನೆಯ ಧೋರಣೆಯೂ ಬದಲಾಗಬೇಕು. ಉತ್ಪಾದನೆಯೊಂದಿಗೆ ಕೃಷಿಕರ ಕೆಲಸ ಮುಗಿಯಿತು ಎಂದು ನಿರ್ಧರಿಸುವ ರೀತಿಯೇ ಬದಲಾಗಬೇಕು. ಬದಲಿಗೆ, ತಾವು ಬೆಳೆದದ್ದರ ಒಂದು ಪಾಲು ಬೆಳೆಯನ್ನು ಅಲ್ಲೇ ಹಳ್ಳಿಯಲ್ಲೇ ಮೌಲ್ಯವರ್ಧನೆ ಮಾಡಲು ದಾರಿ ತೋರಿಸಬೇಕು. ಚಿಕ್ಕ ಚಿಕ್ಕ ಯಂತ್ರ, ಸವಲತ್ತು, ಮಾರ್ಗದರ್ಶನ ಮತ್ತು ವಿಕೇಂದ್ರೀಕೃತ ಮಾರುಕಟ್ಟೆ ಒದಗಿಸಿ ಉತ್ತೇಜಿಸಬೇಕು. ಇಂಥ ವ್ಯವಸ್ಥೆಯಲ್ಲಿ ವ್ಯಾಕ್ಯೂಮ್ ಫ್ರೈಗೂ ಸ್ಥಾನ ಸಿಗಬಲ್ಲುದು.

ಗೋಕುಲ್ ಫ್ರುಟ್ಸ್ – 99729 85627

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry