ಗುರುವಾರ , ಮಾರ್ಚ್ 4, 2021
29 °C

ಜೋಡಿ ರೈಲು ಮಾರ್ಗದ ಸುರಕ್ಷತೆ ಪರಿಶೀಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜೋಡಿ ರೈಲು ಮಾರ್ಗದ ಸುರಕ್ಷತೆ ಪರಿಶೀಲನೆ

ಶ್ರೀರಂಗಪಟ್ಟಣ: ಬೆಂಗಳೂರು– ಮೈಸೂರು ಜೋಡಿ ರೈಲು ಮಾರ್ಗ ಕಾಮಗಾರಿ ಪೂರ್ಣಗೊಂಡಿದ್ದು, ರೈಲ್ವೆ ಇಲಾಖೆಯ ಉನ್ನತ ಅಧಿಕಾರಿಗಳ ತಂಡ ಸೋಮವಾರ ಪಟ್ಟಣದಲ್ಲಿ ಕಾಮಗಾರಿಯ ಗುಣಮಟ್ಟದ ಪರಿಶೀಲನೆ ನಡೆಸಿತು.

ರೈಲ್ವೆ ಸುರಕ್ಷತಾ ಆಯುಕ್ತ (ಸಿಆರ್‌ಎಸ್‌) ಮನೋಹರ್‌, ನೈರುತ್ಯ ರೈಲ್ವೆ ವಿಭಾಗೀಯ ವ್ಯವಸ್ಥಾಪಕ (ಡಿಆರ್‌ಎಂ) ಆರ್‌.ಎಸ್‌.ಸೆಕ್ಸೇನಾ, ಮುಖ್ಯ ಆಡಳಿತಾಧಿಕಾರಿ (ನಿರ್ಮಾಣ) ಅಶೋಕ್‌ ಗುಪ್ತಾ ನೇತೃತ್ವದ ತಂಡ ಪರಿಶೀಲನೆ ನಡೆಯಿತು.

ಕಾವೇರಿ ನದಿಯ ಎರಡೂ ಸೇತುವೆಗಳ ನಡುವಿನ 1.5 ಕಿ.ಮೀ ಉದ್ದದ ಹೊಸ ರೈಲು ಮಾರ್ಗದಲ್ಲಿ ಟ್ರ್ಯಾಲಿ ಮೂಲಕ ಸಂಚಾರ ನಡೆಸಿ ಗುಣಮಟ್ಟ ಪರೀಕ್ಷಿಸಿತು. ಮನೋಹರ್‌ ಅವರಿಗೆ ನೈರುತ್ಯ ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದರು.

‘ರೈಲ್ವೆ ಸುರಕ್ಷತಾ ಆಯುಕ್ತರು ಕಾಮಗಾರಿ ಪರಿಶೀಲನೆ ನಡೆಸಿದ್ದು, ಈ ಮಾರ್ಗದಲ್ಲಿ ಶೀಘ್ರ ರೈಲುಗಳು ಓಡಾಡಲಿವೆ. ಕೆಂಗೇರಿಯಿಂದ ಯಲಿಯೂರು ವರೆಗೆ ವಿದ್ಯುದೀಕರಣ ಕಾರ್ಯ ಪೂರ್ಣಗೊಂಡಿದೆ. ಯಲಿಯೂರು– ಮೈಸೂರು ನಡುವೆ ವಿದ್ಯುದೀಕರಣ ಕಾಮಗಾರಿ ಬಾಕಿ ಇದ್ದು, ತಿಂಗಳಾಂತ್ಯಕ್ಕೆ ಪೂರ್ಣಗೊಳ್ಳುವ ಸಾಧ್ಯತೆ ಇದೆ’ ಎಂದು ಅಧಿಕಾರಿಗಳು ತಿಳಿಸಿದರು.

ಬೆಂಗಳೂರು– ಮೈಸೂರು ನಡುವಿನ 140 ಕಿ.ಮೀ ಉದ್ದ ಜೋಡಿ ರೈಲು ಮಾರ್ಗದ ಪೈಕಿ ಶ್ರೀರಂಗ ಪಟ್ಟಣದಲ್ಲಿ 1.5 ಕಿ.ಮೀ ರೈಲು ಮಾರ್ಗದ ಕಾಮಗಾರಿ ಕೆಲಕಾಲ ನನೆಗುದಿಗೆ ಬಿದ್ದಿತ್ತು. ಟಿಪ್ಪು ಸುಲ್ತಾನ್‌ ಕಾಲದ ಶಸ್ತ್ರಾಗಾರ ಸ್ಥಳಾಂತರ ಪ್ರಕ್ರಿಯೆ ಕಾರಣದಿಂದಾಗಿ ಕಾಮಗಾರಿ ವಿಳಂಬವಾಗಿತ್ತು. ಇದನ್ನು ಸ್ಥಳಾಂತರಿಸಿದ ನಂತರ ಕೆಲಸ ಪೂರ್ಣಗೊಂಡಿದೆ.

***

ರೈಲುಗಳ ನಿಲುಗಡೆಗೆ ಮನವಿ

ಶ್ರೀರಂಗಪಟ್ಟಣ ಪ್ರಸಿದ್ಧ ಪ್ರವಾಸಿ ತಾಣವಾಗಿದ್ದು ದೇಶ, ವಿದೇಶಗಳ ಪ್ರವಾಸಿಗರು ಭೇಟಿ ನೀಡುವುದರಿಂದ ಹಂಪಿ ಎಕ್ಸ್‌ಪ್ರೆಸ್‌, ತುತುಕುಡಿ ಎಕ್ಸ್‌ಪ್ರೆಸ್‌, ತಂಜಾವೂರ್‌ ಎಕ್ಸ್‌ಪ್ರೆಸ್‌, ಬಸವ ಎಕ್ಸ್‌ಪ್ರೆಸ್‌ ಹಾಗೂ ಕಾವೇರಿ ಎಕ್ಸ್‌ಪ್ರೆಸ್‌ ರೈಲುಗಳು ಇಲ್ಲಿ ನಿಲ್ಲುವಂತೆ ಕ್ರಮ ವಹಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಮತ್ತು ಸ್ಥಳೀಯ ಪ್ರಮುಖರು ರೈಲ್ವೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.