ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮದು ‘ಸಾಧನಾ ಪರ್ವ’– ಸಿದ್ದರಾಮಯ್ಯ

Last Updated 7 ನವೆಂಬರ್ 2017, 3:54 IST
ಅಕ್ಷರ ಗಾತ್ರ

ಬೆಂಗಳೂರು: ಬಿಜೆಪಿಯವರು ‘ಪರಿವರ್ತನಾ ಯಾತ್ರೆ’ ಹೊರಟಿದ್ದಾರೆ. ಮತ್ತೊಬ್ಬರು ‘ಕುಮಾರ ಪರ್ವ’ ಮಾಡುತ್ತಿದ್ದಾರೆ. ಆದರೆ ನಮ್ಮದು ‘ಸಾಧನಾ ಪರ್ವ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಾದಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಿಧಾನಸೌಧದ ಮುಂಭಾಗ ಸೋಮವಾರ ಏರ್ಪಡಿಸಿದ್ದ ಸಂತ ಶ್ರೇಷ್ಠ ಕನಕದಾಸರ ಜಯಂತಿಯಲ್ಲಿ ಅವರು ಮಾತನಾಡಿದರು.

‘ಐದು ವರ್ಷಗಳಿಂದ ನಮ್ಮ ಸರ್ಕಾರ ನುಡಿದಂತೆ ನಡೆದುಕೊಂಡಿದೆ. ರಾಜ್ಯದ ಶೇ 90ರಷ್ಟು ಜನರಿಗೆ ಸಾಮಾಜಿಕ ಮತ್ತು ಆರ್ಥಿಕವಾಗಿ ಶಕ್ತಿ ತುಂಬುವ ಕೆಲಸ ಮಾಡಿದ್ದೇವೆ. ಅದನ್ನು ಸಹಿಸಿಕೊಳ್ಳಲು ಬಿಜೆಪಿಯವರಿಗೆ ಆಗುತ್ತಿಲ್ಲ. ಪರಿವರ್ತನಾ ಯಾತ್ರೆ ಮಾಡುವ ಬದಲು, ಕೋಮುವಾದಿಗಳಾದ ಅವರು ಜಾತ್ಯತೀತರಾಗಿ ಪರಿವರ್ತನೆ ಆಗಲಿ’ ಎಂದರು.

‘ಕನಕದಾಸರ 500ನೇ ಜಯಂತಿಯನ್ನು 1988ರಲ್ಲಿ ಮೊದಲ ಬಾರಿಗೆ ಸರ್ಕಾರ ಆಚರಿಸಿತು. ಆಗ ನಾನು ಸಾರಿಗೆ ಸಚಿವ ಆಗಿದ್ದೆ. ವರ್ಷ ಪೂರ್ತಿ ರಾಜ್ಯದಾದ್ಯಂತ ಕಾರ್ಯಕ್ರಮಗಳನ್ನು ನಡೆಸಲಾಯಿತು. ಕನಕ ಗುರುಪೀಠದ ಸ್ಥಾಪನೆಗೂ ಆ ವರ್ಷ ಮಾಡಿದ ಜಯಂತ್ಯುತ್ಸವ ಪ್ರೇರಣೆಯಾಯಿತು’ ಎಂದು ಸಿದ್ದರಾಮಯ್ಯ ನೆನಪಿಸಿಕೊಂಡರು.

ಜನಕ್ಕಾಗಿ ಧರ್ಮ:
‘ಧರ್ಮಕ್ಕಾಗಿ ಜನ ಅಲ್ಲ. ಬದಲಿಗೆ ಜನರಿಗಾಗಿ ಧರ್ಮ ಇರುತ್ತದೆ. ಯಾವ ಧರ್ಮ ಜಡತ್ವದಿಂದ ಕೂಡಿರುತ್ತದೋ ಅಲ್ಲಿ ಬದಲಾವಣೆ ಸಾಧ್ಯವಾಗುವುದಿಲ್ಲ. ಅದಕ್ಕಾಗಿಯೇ ಸಮಾಜದಲ್ಲಿ ಜಾತಿ ವ್ಯವಸ್ಥೆ ಇನ್ನೂ ಇದೆ. ಬಸವಣ್ಣ 800 ವರ್ಷಗಳ ಹಿಂದೆ, ಕನಕದಾಸ 500 ವರ್ಷಗಳ ಹಿಂದೆ ಜಾತಿ ವ್ಯವಸ್ಥೆ ವಿರುದ್ಧ ಹೋರಾಡಿದರೂ ಸಮಾಜದಲ್ಲಿ ಜಾತಿ ಇನ್ನೂ ಗಟ್ಟಿಯಾಗಿ ಬೇರೂರಿದೆ’ ಎಂದರು.

‘ಕನಕದಾಸರು ಕೇವಲ ಭಕ್ತಿ ಮತ್ತು ದೇವರ ವರ್ಣನೆಗೆ ಸೀಮಿತ ಆಗಿರಲಿಲ್ಲ. ಸಮಾಜದಲ್ಲಿನ ಅಸಮಾನತೆ ತೊಡೆದು ಹಾಕಲು ಶ್ರಮಿಸಿದರು. ಬಸವಣ್ಣನಂತೆ ಪರ್ಯಾಯ ಧರ್ಮದ ಚಿಂತನೆಯನ್ನೂ ಮಾಡಲಿಲ್ಲ. ಹಿಂದೂ ಧರ್ಮದಲ್ಲಿ ಇದ್ದುಕೊಂಡೇ ಇಲ್ಲಿನ ಜಾತೀಯತೆ, ಅಸಮಾನತೆ, ಅಸ್ಪೃಶ್ಯತೆಯ ಕೊಳಕು ತೆಗೆಯಲು ಪ್ರಯತ್ನಿಸಿದರು’ ಎಂದು ಹೇಳಿದರು.

‘ಹಿಂದಿನ ಯಾವ ಸರ್ಕಾರಗಳೂ ಮಾಡದಂತಹ ಅನೇಕ ಜಯಂತಿಗಳನ್ನು ನಮ್ಮ ಸರ್ಕಾರ ಮಾಡಿದೆ. ಮಹಾಪುರುಷರು ಯಾವುದೋ ಜಾತಿಯಲ್ಲಿ ಹುಟ್ಟಿರುತ್ತಾರೆ ನಿಜ. ಆದರೆ, ಅವರನ್ನು ಆ ಜಾತಿಗೆ ಕಟ್ಟಿ ಹಾಕಬಾರದು. ಅವರ ವಿಚಾರಧಾರೆಗಳು ಸಮಾಜದ ಎಲ್ಲ ಜನರಿಗೂ ತಿಳಿಯಬೇಕು ಎಂಬ ಉದ್ದೇಶದಿಂದ ಜಯಂತಿಗಳ ಆಚರಣೆ ಮಾಡಲಾಗುತ್ತಿದೆ. ಇದರಲ್ಲಿ ರಾಜಕೀಯ ಉದ್ದೇಶ ಇಲ್ಲ. ಜಯಂತಿಗಳ ಆಚರಣೆಯನ್ನು ಕೆಲವರು ವಿರೋಧಿಸುತ್ತಾರೆ. ಕಾಮಾಲೆ ಕಣ್ಣಿನವರ ಮಾತುಗಳಿಗೆ ಸೊಪ್ಪು ಹಾಕಬಾರದು’ ಎಂದರು.

ಕಾಗಿನೆಲೆ ಹೊಸದುರ್ಗ ಶಾಖಾಮಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ, ‘ಒಬ್ಬ ವ್ಯಕ್ತಿಯನ್ನು ಅಳೆಯಲು ಜಾತಿ ಮಾನದಂಡ ಆಗಬಾರದು. ಅವನ ಜ್ಞಾನ, ಪ್ರತಿಭೆ ಮೂಲಕ ವ್ಯಕ್ತಿಯನ್ನು ಗುರುತಿಸುವಂತಾಗಬೇಕು. ದಲಿತ, ಅಸ್ಪೃಶ್ಯ ಎಂಬ ಸಾಮಾಜಿಕ ಪಿಡುಗು ನಿವಾರಣೆಯಾಗಬೇಕು’ ಎಂದು ಹೇಳಿದರು.

ಪ್ರಶಸ್ತಿ ಪ್ರದಾನ:
ಕಾರ್ಯಕ್ರಮದಲ್ಲಿ ಕೆ. ಗೋಕುಲನಾಥ್ ಅವರಿಗೆ ‘ಕನಕ ಶ್ರೀ’, ಡಾ.ಕಬ್ಬಿನಾಲೆ ವಸಂತ ಭಾರದ್ವಾಜ್ ಅವರಿಗೆ ‘ಕನಕ ಗೌರವ’ ಮತ್ತು ಡಾ.ಗವಿಸಿದ್ದಪ್ಪ ಎಚ್. ಪಾಟೀಲ ಅವರಿಗೆ ‘ಕನಕ ಯುವ ಪುರಸ್ಕಾರ’ ನೀಡಿ ಗೌರವಿಸಲಾಯಿತು.

***

ಮುಖ್ಯಮಂತ್ರಿ ಮುಂದೆ ವಿಷ ಕುಡಿಯಲು ಪ್ರಯತ್ನ

ಸರ್ಕಾರಿ ಹುದ್ದೆ ಸಿಗದೆ ತನಗೆ ಅನ್ಯಾಯವಾಗಿದೆ ಎಂದು ಮೈಸೂರು ಮೂಲದ ಪರಶುರಾಮ್ ಎಂಬುವರು ಮುಖ್ಯಮಂತ್ರಿ ಸಮ್ಮುಖದಲ್ಲಿಯೇ ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ ಪ್ರಸಂಗ ನಡೆಯಿತು.

ಕನಕದಾಸ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಭಾಷಣ ಮಾಡಲು ಮೈಕ್‌ ಬಳಿ ಬರುತ್ತಿದ್ದಂತೆ, ‘ನನಗೆ ಅನ್ಯಾಯವಾಗಿದೆ’ ಎಂದು ಕೂಗುತ್ತಾ  ಕೈಯಲ್ಲಿ ವಿಷದ ಬಾಟಲಿ ಹಿಡಿದು ಬಂದ ಓಡಿಬಂದ ಪರಶುರಾಮ್‌, ಅಲ್ಲಿಯೇ ವಿಷ ಕುಡಿಯಲು ಪ್ರಯತ್ನಿಸಿದರು. ಸ್ಥಳದಲ್ಲಿದ್ದ ಪೊಲೀಸರು ಅವರನ್ನು ತಡೆದು, ಠಾಣೆಗೆ ಕರೆದೊಯ್ದರು.

1994ನೇ ಬ್ಯಾಚ್‌ನ ಗೆಜೆಟೆಡ್ ಪ್ರೊಬೇಷನರಿ ಅಭ್ಯರ್ಥಿಯಾಗಿರುವ ಪರಶುರಾಮ್‌, ಸರ್ಕಾರ ತನಗೆ ಹುದ್ದೆ ನೀಡುತ್ತಿಲ್ಲ ಎಂದು ಆರೋಪಿಸಿ, ಈ ಪ್ರತಿಭಟನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT