ನೀರಿನ ಮಿತ ಬಳಕೆಗೆ ವಾಟರ್‌ ಆನ್‌...

7

ನೀರಿನ ಮಿತ ಬಳಕೆಗೆ ವಾಟರ್‌ ಆನ್‌...

Published:
Updated:
ನೀರಿನ ಮಿತ ಬಳಕೆಗೆ ವಾಟರ್‌ ಆನ್‌...

ಮಗಳು ಸ್ನಾನ ಮಾಡಿ ಬರುತ್ತಿದ್ದಂತೆ, ‘ಏನಮ್ಮ, ನೀರು ಎಷ್ಟು ಪೋಲು ಮಾಡ್ತಾ ಇದೀಯಾ, ಇಂದು ನೀನು ನಿನ್ನ ಅಕ್ಕನಿಗಿಂತ ಹೆಚ್ಚು ನೀರು ಖರ್ಚು ಮಾಡಿದ್ದೀಯಾ ನೋಡು’ ಎಂದು ಅಪ್ಪ ಮಗಳನ್ನು ಪ್ರಶ್ನಿಸುತ್ತಿದ್ದಂತೆ ಚಿಕ್ಕ ಮಗಳು, ’ಏನಪ್ಪಾ, ನೀವು ನೀರಿನ ಬಳಕೆ ಮೇಲೆ ನಿಗಾ ಇಡುವ ವಾಟರ್‌ ಆನ್‌ ಮೀಟರ್‌ ಅಳವಡಿಸಿ, ಮೊಬೈಲ್‌ನಲ್ಲಿ ಆ್ಯಪ್‌ ಹಾಕಿಕೊಂಡ ನಂತರ ನೀರನ್ನೂ ರೇಷನ್‌ನಂತೆ ಬಳಸಬೇಕಾಗಿ ಬಂತಲ್ಲ’ ಎಂದು ಹುಸಿಮುನಿಸು ತೋರಿಸುತ್ತಾಳೆ...

ಮನೆಯ ಸದಸ್ಯರು ಬಳಸುವ ನೀರಿನ ಮೇಲೆ ನಿಗಾ ಇಡುವ ಇಂತಹ ಸೂಕ್ಷ್ಮ ಸ್ವಭಾವದವರೂ ಇದ್ದಾರೆ. ಬಿಲ್‌ ಎಷ್ಟಾದರೂ ಬರಲಿ, ಅದರ ಬಗ್ಗೆ ತಲೆಕೆಡಿಸಿಕೊಳ್ಳದೇ ನೀರನ್ನು ಬೇಕಾಬಿಟ್ಟಿಯಾಗಿ ಬಳಸುವವರೂ ಇದ್ದಾರೆ. ನಾವೇ ನೀರನ್ನು ಕಡಿಮೆ ಬಳಸುವವರು ಎಂದು ಎದೆತಟ್ಟಿಕೊಂಡು ಹೇಳುವವರೂ ವಾಟರ್‌ಆನ್‌ ಮೀಟರ್‌ ಅಳವಡಿಸಿಕೊಂಡ ನಂತರ ತೆಪ್ಪಗಾದವರೂ ಇದ್ದಾರೆ.

ಧಾವಂತದಲ್ಲಿ ಅನೇಕರು ಮನೆಯಲ್ಲಿನ ನೀರಿನ ನಲ್ಲಿಯನ್ನು ಬಂದ್‌ ಮಾಡದೇ ಹೋಗಿರುತ್ತಾರೆ. ಇದರಿಂದ ಟ್ಯಾಂಕ್‌ನಲ್ಲಿನ ನೀರೆಲ್ಲ ಖಾಲಿಯಾಗಿ ಇತರರಿಗೆ ಹನಿ ನೀರೂ ದೊರಕದ ಪರಿಸ್ಥಿತಿ ಉದ್ಭವಿಸಿರುತ್ತದೆ. ಮನೆಯ ಹೊರಗೆ ಇದ್ದರೂ ಮೊಬೈಲ್‌ ಮೂಲಕವೇ ನಲ್ಲಿ ಬಂದ್‌ ಮಾಡುವ ಸೌಲಭ್ಯ ಇದ್ದರೆ ಚೆನ್ನಾಗಿತ್ತಲ್ಲ ಎನ್ನುವ ಅನೇಕರ ಹಂಬಲವೂ ಈಗ ಸಾಧ್ಯವಾಗಿದೆ.

ಹೌದು ವಾಟರ್‌ ಆನ್‌ ಮೀಟರ್ ಅಳವಡಿಸಿಕೊಂಡ ಅಪಾರ್ಟ್‌ಮೆಂಟ್‌ ನಿವಾಸಿಗಳಲ್ಲಿ ನೀರಿನ ಬಳಕೆ ಬಗ್ಗೆ ಹೆಚ್ಚಿನ ಅರಿವು ಮೂಡುತ್ತಿದೆ. ‘ನೀವು ಹೆಚ್ಚು ನೀರು ಬಳಸುತ್ತೀರಿ, ನಾನು ಕಡಿಮೆ ಬಳಸುತ್ತಿರುವೆ, ನಾನೇಕೆ ಇಷ್ಟು ದುಡ್ಡು ಕೊಡಲಿ’ ಎಂದು ಪರಸ್ಪರ ದೂರುವವರ ದನಿ ನಿಧಾನವಾಗಿ ಕ್ಷೀಣಿಸತೊಡಗಿದೆ.

(ವಾಟರ್‌ಆನ್‌ ಮೀಟರ್‌)

ನಗರದ ಹೊರ ವಲಯಗಳಲ್ಲಿ ಅಪಾರ್ಟ್‌ಮೆಂಟ್‌ಗಳಲ್ಲಿ ನೀರು ಪೂರೈಸುವ ಟ್ಯಾಂಕರ್‌ಗಳನ್ನೇ ನೆಚ್ಚಿಕೊಂಡಿರುವ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು ನೀರು ಪೂರೈಕೆ ಮೇಲೂ ನಿಗಾ ಇರಿಸಲು ಈ ವಾಟರ್ ಆನ್‌ ಮೀಟರ್‌ಗಳನ್ನು ಅಳವಡಿಸಿಕೊಳ್ಳುತ್ತಿವೆ. ಇದರಿಂದ ಸಂಘದ ಸದಸ್ಯರಲ್ಲಿ ಮೂಡುವ ಹತ್ತಾರು ಅನುಮಾನಗಳಿಗೆ ಕೊನೆ ಹಾಡಿವೆ.

ನಗರದ ಸ್ಮಾರ್ಟರ್ ಹೋಮ್ಸ್ ಟೆಕ್ನಾಲಜೀಸ್ ಸ್ಟಾರ್ಟ್‌ಅಪ್‌ ಅಭಿವೃದ್ಧಿಪಡಿಸಿರುವ ವಾಟರ್‌ ಆನ್‌ (Water On ) ಮೀಟರ್‌ ಮತ್ತು ಆ್ಯಪ್‌ನಿಂದಾಗಿ ಇದೆಲ್ಲ ಸಾಧ್ಯವಾಗಿದೆ. ನೀರಿನ ಬಳಕೆ ಮೇಲೆ ನಿಗಾ ಇರಿಸುವ, ಬಳಸಿದ ಪ್ರಮಾಣ ತಿಳಿಸುವ, ಬಳಕೆ ಮೇಲೆ ನಿಯಂತ್ರಣಕ್ಕೆ ಅವಕಾಶ ಇರುವ, ಬಿಲ್‌ ನೀಡುವ ಮತ್ತು ಬಾಡಿಗೆಗೂ ಲಭ್ಯ ಇರುವ ಮೀಟರ್‌ಗಳನ್ನು ಒದಗಿಸುವ ವಿಶಿಷ್ಟ ಸ್ಟಾರ್ಟ್‌ಅಪ್‌ ಇದು.

ವಿಪ್ರೊದ ಸಹೋದ್ಯೋಗಿ ಮಿತ್ರರಾದ ಕನ್ನಡಿಗ ಕಸ್ತೂರಿ ರಂಗನ್‌ ಮತ್ತು ಲಖನೌದ ವಿವೇಕ್‌ ಶುಕ್ಲಾ ಅವರು ಜತೆಯಾಗಿ ಈ ಸ್ಟಾರ್ಟ್‌ಅಪ್‌ ಆರಂಭಿಸಿದ್ದಾರೆ. 2014ರ ಫೆಬ್ರುವರಿಯಲ್ಲಿ ಅಸ್ತಿತ್ವಕ್ಕೆ ಬಂದ ಈ ನವೋದ್ಯಮದ ವಹಿವಾಟು ಈಗ ಬೆಂಗಳೂರಿನ ಆಚೆಗೂ ಹಬ್ಬಿದೆ. ಹೈದರಾಬಾದ್‌ ಮತ್ತು ಚೆನ್ನೈಗಳಲ್ಲಿಯೂ ವಹಿವಾಟು ಕುದುರುತ್ತಿದೆ.

ಇವರಿಬ್ಬರೂ ಅಪಾರ್ಟ್‌ಮೆಂಟ್‌ವೊಂದರಲ್ಲಿ ನೆರೆಹೊರೆಯವರೂ ಆಗಿದ್ದರು. ಕಚೇರಿಗೆ ಒಂದೇ ಕಾರ್‌ನಲ್ಲಿ ಹೋಗಿ ಬರುತ್ತಿದ್ದರು. ಅಪಾರ್ಟ್‌ಮೆಂಟ್‌ನ ಕೆಲವರು ನೀರಿನ ಬಳಕೆಗೆ ಕ್ಯಾತೆ ತೆಗೆಯುತ್ತಿರುವುದನ್ನು ಕಂಡು ಇದಕ್ಕೊಂದು ಏನಾದರೂ ಪರಿಹಾರ ಕಂಡುಕೊಳ್ಳಬೇಕಲ್ಲ ಎನ್ನುವ ಜಂಟಿ ಚಿಂತನೆಯೇ ಸ್ಮಾರ್ಟ್‌ರ್‌ಹೋಮ್ಸ್‌ ಸ್ಟಾರ್ಟ್‌ಅಪ್‌ ಸ್ಥಾಪನೆಗೆ ಪ್ರೇರಣೆಯಾಗಿತ್ತು.

ಏನಾದರೂ ಹೊಸತನ್ನು ಮಾಡಬೇಕು ಎನ್ನುವ ತುಡಿತವು ಅವರನ್ನು ಈ ನವೋದ್ಯಮಕ್ಕೆ ಕಾಲಿಡುವಂತೆ ಪ್ರೇರೆಪಿಸಿತ್ತು. ಹತ್ತಾರು ಚಿಂತನೆಗಳನ್ನು ಚರ್ಚಿಸಿ, ಪರಾಮರ್ಶಿಸಿದ ನಂತರ ನೀರಿನ ಬಳಕೆ ಮೇಲೆ ನಿಗಾ ಇಡುವ ಮೀಟರ್ ಮತ್ತು ಆ್ಯಪ್‌ ಅಭಿವೃದ್ಧಿಪಡಿಸಿದರೆ ಹೆಚ್ಚಿನ ಪ್ರಯೋಜನ ಇರುವುದನ್ನು ಅವರಿಬ್ಬರೂ ಕಂಡುಕೊಂಡಿದ್ದರು. ತಮ್ಮ ಪರಿಕಲ್ಪನೆಗೆ ಉದ್ಯಮದ ಸ್ವರೂಪ ಕೊಡುವ ಮೊದಲು ಅವರಿಬ್ಬರೂ ಈ ನಿಟ್ಟಿನಲ್ಲಿ ಹಲವಾರು ಪ್ರಯೋಗಗಳನ್ನು ನಡೆಸಿದ್ದರು. ಅಲ್ಲಿ ಕಂಡು ಬಂದ ಯಶಸ್ಸಿನಿಂದ ಉತ್ತೇಜಿತರಾಗಿ ಈ ಸ್ಟಾರ್ಟ್‌ಅಪ್‌ಗೆ ಚಾಲನೆ ನೀಡಿದ್ದರು.

ಅಪಾರ್ಟ್‌ಮೆಂಟ್‌ಗಳಲ್ಲಿ ಎರಡು ಮೂರು ಪಾಯಿಂಟ್‌ಗಳಿಂದ ನೀರು ಪೂರೈಸಲಾಗುತ್ತಿದೆ. ಆದರೆ ಒಂದೇ ಮೀಟರ್‌ ಅಳವಡಿಸಲಾಗಿರುತ್ತದೆ. ಹೀಗಾಗಿ ಪ್ರತಿಯೊಂದು ಕುಟುಂಬ ಬಳಸುವ ನೀರಿನ ಪ್ರಮಾಣ ಎಷ್ಟು ಎಂಬುದು ನಿಖರವಾಗಿ ಲೆಕ್ಕಕ್ಕೆ ಸಿಗುವುದಿಲ್ಲ.

ಸ್ಮಾರ್ಟ್‌ರ್‌ಹೋಮ್‌ ಅಭಿವೃದ್ಧಿಪಡಿಸಿರುವ ‘ವಾಟರ್‌ಆನ್‌’ ಮೀಟರ್‌ಗಳನ್ನು ಪ್ರತಿಯೊಂದು ಮನೆಗೂ ಪ್ರತ್ಯೇಕವಾಗಿ ಅಳವಡಿಸುವುದರಿಂದ ಪ್ರತಿಯೊಂದು ಮನೆಯ ನೀರಿನ ಬಳಕೆಯ ಪ್ರಮಾಣದ ಖಚಿತ ಮಾಹಿತಿ ದೊರೆಯಲಿದೆ. ಇದು ನೀರಿನ ಮಿತವ್ಯಯದ ಬಳಕೆಗೂ ನೆರವಾಗುತ್ತಿದೆ. ಮೀಟರ್‌ ಅಳವಡಿಸಿದ ಅಪಾರ್ಟ್‌ಮೆಂಟ್‌ಗಳಲ್ಲಿ ನೀರಿನ ಬಳಕೆ ಪ್ರಮಾಣವು ಶೇ 30 ರಿಂದ ಶೇ 35 ರಷ್ಟು ಕಡಿಮೆ ಆಗಿದೆ. "ಕಾವೇರಿ ನೀರು ಪೂರೈಕೆಯಾಗುವ ಕಡೆಗಳಲ್ಲಿ ನೀರಿಗೆ ಹೆಚ್ಚು ವೆಚ್ಚವಾಗುತ್ತಿಲ್ಲ. ನಗರದ ಹೊರ ವಲಯದ ಅಪಾರ್ಟ್‌ಮೆಂಟ್‌ಗಳು ನೀರಿಗಾಗಿ ಟ್ಯಾಂಕರ್‌ಗಳನ್ನೇ ಹೆಚ್ಚಾಗಿ ನೆಚ್ಚಿಕೊಂಡಿವೆ. ಕೆಲ ಮನೆಗಳಲ್ಲಿ ವಿದ್ಯುತ್‌ ಬಿಲ್‌ಗಿಂತ ನೀರಿನ ಬಿಲ್‌ ಹೆಚ್ಚಾದ ನಿದರ್ಶನಗಳಿವೆ. ಅಂತಹ ಕಡೆಗಳಲ್ಲಿ ಈ ಮೀಟರ್‌ ಆನ್‌ ಪ್ರಯೋಜನ ಹೆಚ್ಚಿಗೆ ಇದೆ. ವಾಟರ್‌ ಆನ್‌ ಮೀಟರ್‌ಗೆ ಸಂಸ್ಥೆಯು ಪೇಟೆಂಟ್‌ ಪಡೆದುಕೊಂಡಿದೆ.

ಕಟ್ಟಡಗಳಲ್ಲಿ ಸುಲಭವಾಗಿ ಅಳವಡಿಸುವ ಪ್ರತಿಯೊಂದು ಮೀಟರ್‌ ಪರಸ್ಪರ ಸಂಪರ್ಕ ಹೊಂದಿರುತ್ತವೆ. ಕಟ್ಟಡದ ಮೇಲ್ಭಾಗದಲ್ಲಿ ಅಳವಡಿಸಿರುವ ಮತ್ತು ಕ್ಲೌಡ್‌ನಲ್ಲಿ ಇರುವ ಸ್ಮಾರ್ಟರ್ ಹೋಮ್ಸ್‌ನ ಸರ್ವರ್‌ಗೆ ನಿರಂತರ ಸಂಪರ್ಕ ಕಲ್ಪಿಸುವ ನ್ಯೂಕ್ಸಿಯಸ್‌ಗೆ ನೀರಿನ ಬಳಕೆ ಮಾಹಿತಿ ನಿರಂತರವಾಗಿ ರವಾನೆ ಆಗುತ್ತಿರುತ್ತದೆ. ಇದರ ಮೂಲಕ ನೀರಿನ ಪೂರೈಕೆ ಮತ್ತು ಬಳಕೆಯ ಮಾಹಿತಿಯನ್ನು ಅಪಾರ್ಟ್‌ಮೆಂಟ್ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಕ್ಕೆ ನೀಡಲಾಗುತ್ತದೆ. ಪ್ರತಿ ಲೀಟರ್‌ಗೆ 10, 8 ಪೈಸೆ ನಿಗದಿಪಡಿಸಲಿ ಅಥವಾ ‘ಬೆಸ್ಕಾಂ’ ಬಿಲ್‌ನಂತೆ ನಿಗದಿತ ಪ್ರಮಾಣದ ನಂತರ ಹೆಚ್ಚುವರಿ ದರ ನಿಗದಿಪಡಿಸಲಿ. ಆ ಎಲ್ಲ ಮಾಹಿತಿಯನ್ನು ಈ ಮೀಟರ್‌ನಿಂದ ಪಡೆಯಲು ಸಾಧ್ಯವಾಗುತ್ತಿದೆ’ ಎಂದು ಸಹ ಸ್ಥಾಪಕ ಕಸ್ತೂರಿ ರಂಗನ್‌ ಹೇಳುತ್ತಾರೆ.

‘ಮೀಟರ್‌ ಕಾರ್ಯನಿರ್ವಹಣೆ ಬಗ್ಗೆಯೇ ಅನುಮಾನ ಪಡುವವರು, 5 ಲೀಟರ್ ಕ್ಯಾನ್‌ನಲ್ಲಿನ ನೀರನ್ನು ಮೀಟರ್‌ನಲ್ಲಿ ಅಳತೆ ಮಾಡಿಕೊಂಡು ಖಚಿತಪಡಿಸಿಕೊಳ್ಳಬಹುದು. ಸಂಸ್ಥೆಯ ಅಸ್ತಿತ್ವದ ಬಗ್ಗೆ ಅನುಮಾನ ತಳೆದವರಲ್ಲಿ ಈಗ ವಿಶ್ವಾಸ ಮೂಡುತ್ತಿದೆ. ಬಳಕೆದಾರರ ಮನದಲ್ಲಿ ಮೂಡುವ ಇಂತಹ ಅನುಮಾನಗಳನ್ನು ನಾವೇ ಪ್ರಸ್ತಾಪಿಸಿ ಅದಕ್ಕೆ ಸೂಕ್ತ ಸಮಜಾಯಿಷಿ ನೀಡುತ್ತೇವೆ.

₹9,499 ಕ್ಕೆ ಮೀಟರ್‌ ಖರೀದಿಸಲು ಹಿಂದೇಟು ಹಾಕುವವರಿಗೆ ಈಗ ತಿಂಗಳ ಬಾಡಿಗೆ ಲೆಕ್ಕದಲ್ಲಿ ಮೀಟರ್‌ ಅಳವಡಿಸುತ್ತಿದ್ದೇವೆ. ಮೀಟರ್‌ ಬಾಡಿಗೆ ದರ ₹ 100 ರಿಂದ ₹120 ವರೆಗೆ ಇದೆ. ನಮ್ಮ ಕೆಲಸ ನಿಮಗೆ ತೃಪ್ತಿ ನೀಡದಿದ್ದರೆ ಬಾಡಿಗೆಯನ್ನೇ ನೀಡಬೇಡಿ ಎನ್ನುವ ಮಾತು ಬಳಕೆದಾರರಿಗೆ ಈ ಸ್ಟಾರ್ಟ್‌ಅಪ್‌ ಬಗ್ಗೆ ಭರವಸೆ ಮೂಡಿಸಿದೆ’ ಎಂದು ರಂಗನಾಥ್‌ ಹೇಳುತ್ತಾರೆ.

‘ಅಪಾರ್ಟ್‌ಮೆಂಟ್‌ ನಿವಾಸಿಗಳ ಸಂಘದ ಪದಾಧಿಕಾರಿಗಳು ಸಾಕಷ್ಟು ಅಳೆದು ಸುರಿದೇ ನಮ್ಮ ಮೀಟರ್ ಅಳವಡಿಕೆಗೆ ಮನಸ್ಸು ಮಾಡುತ್ತಾರೆ. ಸದಸ್ಯರ ಹತ್ತಾರು ಅನುಮಾನಗಳಿಗೆ ನಮ್ಮ ಮೀಟರ್‌ ಸೂಕ್ತ ಉತ್ತರ ನೀಡುತ್ತಿದೆ. ಮುಂಬರುವ ದಿನಗಳಲ್ಲಿ ಬೆಂಗಳೂರಿನ ಜಲ ಮೂಲಗಳೇ ಶೇ 30ರಷ್ಟು ಕಡಿಮೆ ಆಗಲಿದೆ ಎನ್ನುವ ಅಂದಾಜಿದೆ. ನೀರಿನ ಬಳಕೆಯನ್ನೇ ನಿಯಂತ್ರಿಸುವ ಮೂಲಕ ಆ ಕೊರತೆಯನ್ನು ಸಮರ್ಥವಾಗಿ ನಿವಾರಿಸಿಕೊಳ್ಳಬಹುದು.

‘ಗೃಹ ನಿರ್ಮಾಣ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಅನೇಕರು ನಮ್ಮ ಈ ಮೀಟರ್‌ಗಳ ಬಗ್ಗೆ ಒಲವು ತೋರಿದ್ದಾರೆ. ಹೊಸ ಯೋಜನೆಗಳಲ್ಲಿ ಈ ವೆಚ್ಚವನ್ನೂ ಸೇರ್ಪಡೆ ಮಾಡಿ ನಿಮ್ಮನ್ನೂ ಜತೆಯಾಗಿರಿಸಿಕೊಳ್ಳುತ್ತೇವೆ ಎಂದು ಕೆಲವರು ಭರವಸೆ ನೀಡಿದ್ದಾರೆ. ಮೀಟರ್‌ ಖರೀದಿಸಲು ಮುಂದಾಗದಿದ್ದರೂ ಪ್ರತಿಯೊಂದು ಮನೆಗೂ ಪ್ರತ್ಯೇಕ ಮೀಟರ್‌ ಅಳವಡಿಸಲು ಅವಕಾಶ ಮಾಡಿಕೊಡಿ ಎಂದೂ ನಾವು ಕೆಲವರಿಗೆ ಮನವಿ ಮಾಡಿಕೊಂಡಿದ್ದೇವೆ’ ಎಂದು ರಂಗನಾಥ್‌ ಹೇಳುತ್ತಾರೆ.

‘ಜಲ ಮಂಡಳಿ ಅಳವಡಿಸುವ ಮೀಟರ್‌ಗಳ ಬದಲಿಗೆ "ವಾಟರ್‌ ಆನ್‌' ಮೀಟರ್‌ ಅಳವಡಿಸುವ ಬಗ್ಗೆಯೂ ಸಂಸ್ಥೆ ಚಿಂತನೆ ನಡೆಸುತ್ತಿದೆ. ಈ ನಿಟ್ಟಿನಲ್ಲಿ ಮಾತುಕತೆ ಪ್ರಗತಿಯಲ್ಲಿ ಇದೆ. ಹೊಸದಾಗಿ ಅಸ್ತಿತ್ವಕ್ಕೆ ಬರುತ್ತಿರುವ ಸ್ಮಾರ್ಟ್‌ ಸಿಟಿಗಳಲ್ಲಿ ಈ ಮೀಟರ್‌ಗಳ ಅಳವಡಿಕೆ ಹೆಚ್ಚು ಉಪಯುಕ್ತವಾಗಿರಲಿದೆ’ ಎಂದೂ ಅವರು ಹೇಳುತ್ತಾರೆ.

https://smarterhomes.com

 

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry