ಗುರುವಾರ , ಮಾರ್ಚ್ 4, 2021
19 °C

ಹತ್ತು ವರ್ಷಗಳಲ್ಲಿ ಯುಪಿಎ ಮಾಡಿದ್ದು ಸಂಘಟಿತ ಲೂಟಿ: ವಿಜಯ್ ರೂಪಾನಿ ತಿರುಗೇಟು

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಹತ್ತು ವರ್ಷಗಳಲ್ಲಿ ಯುಪಿಎ ಮಾಡಿದ್ದು ಸಂಘಟಿತ ಲೂಟಿ: ವಿಜಯ್ ರೂಪಾನಿ ತಿರುಗೇಟು

ಅಹಮದಾಬಾದ್: ನೋಟು ರದ್ದತಿ ನಿರ್ಧಾರ ಸಂಘಟಿತ ಲೂಟಿ ಎಂಬ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ಹೇಳಿಕೆಗೆ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರು ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.

‘ಮನಮೋಹನ್ ಸಿಂಗ್ ಅವರು ಭಾರತದ ಇತಿಹಾಸದಲ್ಲೇ ಅತ್ಯಂತ ಭ್ರಷ್ಟ ಸರ್ಕಾರದ ಪ್ರಧಾನಿಯಾಗಿದ್ದರು’ ಎಂದು ರೂಪಾನಿ ಟೀಕಿಸಿದ್ದಾರೆ. ಅಲ್ಲದೆ, ಕಾಂಗ್ರೆಸ್ ನಾಯಕರು ಗುಜರಾತ್ ವಿರೋಧಿ ಧೋರಣೆ ಹೊಂದಿದ್ದಾರೆ ಎಂದು ಆರೋಪಿಸಿದ್ದಾರೆ.

ಉದ್ಯಮಿಗಳು ಮತ್ತು ವಹಿವಾಟುದಾರರ ಜತೆ ‘ಆರ್ಥಿಕತೆಯ ಪ್ರಸಕ್ತ ಸ್ಥಿತಿಗತಿ’ ವಿಷಯದ ಬಗ್ಗೆ ಇಲ್ಲಿ ಸಂವಾದ ನಡೆಸಿದ್ದ ಮನಮೋಹನ್ ಸಿಂಗ್ ಅವರು, ನೋಟು ರದ್ದತಿಯ ಯಾವೊಂದು ಉದ್ದೇಶವೂ ಈವರೆಗೆ ಈಡೇರಿಲ್ಲ. ಜಿಎಸ್‌ಟಿಯು ಸಣ್ಣ ಉದ್ದಿಮೆದಾರರಿಗೆ ದುಸ್ವಪ್ನವಾಗಿ ಪರಿಣಮಿಸಿದೆ ಎಂದು ಹೇಳಿದ್ದರು. ಇದಕ್ಕೆ ಸರಣಿ ಟ್ವೀಟ್‌ಗಳ ಮೂಲಕ ರೂಪಾನಿ ಪ್ರತಿಕ್ರಿಯಿಸಿದ್ದಾರೆ.

‘ಸ್ಪೀಕ್‌ಅಪ್‌ಎಂಎಂಎಸ್‌’ ಎಂಬ ಹ್ಯಾಷ್‌ಟ್ಯಾಗ್‌ನೊಂದಿಗೆ ಸರಣಿ ಟ್ವೀಟ್‌ಗಳನ್ನು ಪ್ರಕಟಿಸಿರುವ ರೂಪಾನಿ, ಸಿಂಗ್ ಅವರ ಸರ್ಕಾರ ಪಾಕಿಸ್ತಾನದ ‍ಪರ ಧೋರಣೆ ಹೊಂದಿತ್ತು ಎಂದು ಟೀಕಿಸಿದ್ದಾರೆ.

‘10 ವರ್ಷಗಳ ಅಧಿಕಾರಾವಧಿಯಲ್ಲಿ ಯುಪಿಎ ಮಾಡಿದ್ದು ಸಂಘಟಿತ ಲೂಟಿ. ಯುಪಿಎ ಸರ್ಕಾರ ಒಂದು ಕುಟುಂಬದ ಬಗ್ಗೆ ಯೋಚಿಸುವ ಬದಲು ದೇಶದ ಬಗ್ಗೆ ಗಮನಹರಿಸಿದ್ದರೆ ಪರಿಸ್ಥಿತಿಯೇ ಬೇರೆ ಇರುತ್ತಿತ್ತು’ ಎಂದು ರೂಪಾನಿ ಹೇಳಿದ್ದಾರೆ.

‘ನರ್ಮದಾ ಅಣೆಕಟ್ಟೆ’ ಕಾಮಗಾರಿಯನ್ನು 10 ವರ್ಷಗಳ ಕಾಲ ಯುಪಿಎ ತಡೆಹಿಡಿಯಿತು. ಇದಕ್ಕಾಗಿ ಡಾ. ಸಿಂಗ್ ಅವರು ಕ್ಷಮೆಯಾಚಿಸಬೇಕು’ ಎಂದು ರೂಪಾನಿ ಟ್ವೀಟ್ ಮಾಡಿದ್ದಾರೆ.

‘ಕಾಂಗ್ರೆಸ್‌ ನಾಯಕರು ಚುನಾವಣೆ ಸಂದರ್ಭದಲ್ಲಿ ಗುಜರಾತ್‌ಗೆ ಬಂದು ಸರ್ದಾರ್ ಪಟೇಲ್ ಅವರನ್ನು ಸ್ಮರಿಸಿಕೊಳ್ಳುತ್ತಾರೆ. ಗುಜರಾತ್‌ ಜನತೆ ಅವರ ಮಾತನ್ನು ನಂಬಲಾರರು’ ಎಂದು ಅವರು ಮತ್ತೊಂದು ಟ್ವೀಟ್‌ನಲ್ಲಿ ಹೇಳಿದ್ದಾರೆ.

‘ಭಾರತದ ಇತಿಹಾಸದಲ್ಲೇ ಅತಿ ಭ್ರಷ್ಟ ಸರ್ಕಾರದ ಪ್ರಧಾನಿಯಾಗಿದ್ದಕ್ಕೆ ಡಾ. ಸಿಂಗ್ ಅವರು 125 ಕೋಟಿ ಭಾರತೀಯರ ಕ್ಷಮೆ ಕೇಳಬೇಡವಬೇ?’ ಎಂದು ಇನ್ನೊಂದು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ...

ನೋಟು ರದ್ದತಿ ಸಂಘಟಿತ ಲೂಟಿ: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಟೀಕೆ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.