ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಟೂನ್ ವಿವಾದ: ಸ್ವಯಂ ಬೆತ್ತಲಾದ ಅಧಿಕಾರಶಾಹಿ

Last Updated 7 ನವೆಂಬರ್ 2017, 19:30 IST
ಅಕ್ಷರ ಗಾತ್ರ

ತಮಿಳುನಾಡು ಮುಖ್ಯಮಂತ್ರಿ ಮತ್ತು ಸರ್ಕಾರಿ ಅಧಿಕಾರಿಗಳನ್ನು ಅಶ್ಲೀಲವಾಗಿ ಚಿತ್ರಿಸಿದ ಕಾರಣಕ್ಕಾಗಿ ಕಾನೂನು ಕ್ರಮ ಎದುರಿಸಬೇಕಾಗಿ ಬಂದಿರುವ ವ್ಯಂಗ್ಯಚಿತ್ರಕಾರ ಬಾಲಾ (ಜಿ. ಬಾಲಕೃಷ್ಣನ್) ಅವರ ಪ್ರಕರಣ, ಸರ್ಕಾರ ಹಾಗೂ ಅಧಿಕಾರಶಾಹಿಗೆ ಅಭಿವ್ಯಕ್ತಿ ಸ್ವಾತಂತ್ರ್ಯದ ಕುರಿತು ಇರುವ ಅಸಹನೆಗೆ ಹೊಸ ಉದಾಹರಣೆ. ತನ್ನ ಹುಳುಕುಗಳನ್ನು ಸಮಾಜದ ಎದುರು ಬಹಿರಂಗಪಡಿಸುವ ಕಲಾಭಿವ್ಯಕ್ತಿಗಳ ಕುರಿತು ಕಣ್ಣಕಿಸುರು ಹೊಸತೇನೂ ಅಲ್ಲ. ಸರ್ವಾಧಿಕಾರ ಹಾಗೂ ಮೂಲಭೂತವಾದಿ ಧೋರಣೆಗಳು ಮೇಲುಗೈ ಸಾಧಿಸಿರುವಲ್ಲಿ ಇಂಥ ನಡವಳಿಕೆಗಳನ್ನು ನೋಡುತ್ತಲೇ ಬಂದಿದ್ದೇವೆ. ಇಸ್ಲಾಂ ಧರ್ಮವನ್ನು ಅವಹೇಳನ ಮಾಡಲಾಗಿದೆ ಎನ್ನುವ ಆರೋಪದ ಹಿನ್ನೆಲೆಯಲ್ಲಿ ಫ್ರಾನ್ಸ್‌ನ ‘ಚಾರ್ಲಿ ಹೆಬ್ದೊ’ ನಿಯತಕಾಲಿಕೆ ಕಚೇರಿ ಮೇಲೆ 2015ರಲ್ಲಿ ದಾಳಿ ನಡೆಸಿ ಪತ್ರಿಕಾ ಸಿಬ್ಬಂದಿಯನ್ನು ಕೊಲ್ಲಲಾಗಿತ್ತು. ಇಂಥ ಅತಿರೇಕ ಬಾಲಾ ಅವರ ಪ್ರಕರಣದಲ್ಲಿ ಆಗಿಲ್ಲವಾದರೂ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಲು ಆಡಳಿತಶಾಹಿ ಪ್ರಯತ್ನಿಸುವುದು ಅಸಮರ್ಥನೀಯ.

ಬಾಲಾರ ವ್ಯಂಗ್ಯಚಿತ್ರ ಅಶ್ಲೀಲತೆಯಿಂದ ಕೂಡಿದೆ ಎಂದು ಜಿಲ್ಲಾಧಿಕಾರಿ ಸಂದೀಪ್ ನಂದೂರಿ ತಮ್ಮ ದೂರಿನಲ್ಲಿ ಆಪಾದಿಸಿದ್ದಾರೆ. ಆದರೆ, ಆ ವ್ಯಂಗ್ಯಚಿತ್ರವನ್ನು ನೋಡಿದ ಯಾರಿಗಾದರೂ ಮಗುವೊಂದರ ದುರಂತ ಸಾವು ಹಾಗೂ ಅದಕ್ಕೆ ವ್ಯವಸ್ಥೆಯ ಭ್ರಷ್ಟತೆ ಕಣ್ಣಿಗೆ ಕಾಣಿಸುತ್ತದೆಯೇ ಹೊರತು, ಅಶ್ಲೀಲತೆಯಲ್ಲ. ಸಾಲಗಾರರ ಕಿರುಕುಳದಿಂದ ರೋಸಿದ್ದ ಇಸಾಕಿಮುತ್ತು ಎನ್ನುವ ದಿನಗೂಲಿ ಕಾರ್ಮಿಕ ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ತಿರುನಲ್ವೇಲಿ ಜಿಲ್ಲಾಧಿಕಾರಿ ಕಚೇರಿ ಎದುರು ಅ. 23ರಂದು ಆತ್ಮಹತ್ಯೆಗೆ ಪ್ರಯತ್ನಿಸಿದ್ದ. ಈ ಘಟನೆಯಲ್ಲಿ ಮಗುವೊಂದು ಮೃತಪಟ್ಟಿದ್ದು, ಸಂತ್ರಸ್ತ ಕುಟುಂಬಕ್ಕೆ ಸರ್ಕಾರ ಯಾವುದೇ ಪರಿಹಾರ ನೀಡದಿರುವುದನ್ನು ವಿರೋಧಿಸಿ ಬಾಲಾ ವ್ಯಂಗ್ಯಚಿತ್ರ ರಚಿಸಿದ್ದರು. ಬೆತ್ತಲೆಯಾಗಿರುವ ಮುಖ್ಯಮಂತ್ರಿ ಪಳನಿಸ್ವಾಮಿ, ತಿರುನಲ್ವೇಲಿಯ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿ, ತಮ್ಮ ಕಣ್ಣೆದುರಿಗೆ ಮಗುವೊಂದು ಉರಿದು ಸಾಯುತ್ತಿದ್ದರೂ ನೋಟಿನ ಕಂತೆಗಳಿಂದ ತಮ್ಮ ಮರ್ಮಾಂಗಗಳನ್ನು ಮುಚ್ಚಿಕೊಳ್ಳುತ್ತಿರುವಂತೆ ಚಿತ್ರಿಸಿದ್ದಾರೆ. ಜನಸಾಮಾನ್ಯರ ಒಡಲುರಿಯ ಅಭಿವ್ಯಕ್ತಿಯಂತಿರುವ ಈ ಕಾರ್ಟೂನ್, ಪ್ರಕರಣಕ್ಕೆ ಸಂಬಂಧಿಸಿದವರ ಆತ್ಮವಿಶ್ಲೇಷಣೆಗೆ ಕಾರಣವಾಗಬೇಕಿತ್ತು. ವ್ಯಂಗ್ಯಚಿತ್ರ ರೂಕ್ಷವಾಗಿದೆ ಎಂಬ ಅಭಿಪ್ರಾಯ ಇದ್ದಿದ್ದಲ್ಲಿ ಭಿನ್ನಾಭಿಪ್ರಾಯ ವ್ಯಕ್ತಪಡಿಸಲು ಪ್ರಜಾಪ್ರಭುತ್ವದಲ್ಲಿ ಅವಕಾಶ ಇದ್ದೇ ಇದೆ. ವ್ಯಕ್ತಿಯ ಬಂಧನ ಇದಕ್ಕೆ ಉತ್ತರವಲ್ಲ. ವ್ಯವಸ್ಥೆಯ ನಗ್ನತೆಯನ್ನು ವೈಯಕ್ತಿಕವೆಂದು ಭಾವಿಸುವ ಮನಸ್ಥಿತಿಯ ಹಿಂದೆ ಸರ್ವಾಧಿಕಾರ ಮನಸ್ಥಿತಿಯೇ ಕೆಲಸ ಮಾಡುತ್ತಿರುತ್ತದೆ.

ಬಾಲಾ ಅವರ ವ್ಯಂಗ್ಯಚಿತ್ರಕ್ಕೆ ನಾಗರಿಕ ಸಮಾಜ ಸ್ಪಂದಿಸಿರುವ ರೀತಿ ಸಮಾಧಾನ ತರುವಂತಹದ್ದು. ಫೇಸ್‌ಬುಕ್‌ನಲ್ಲಿ ಪ್ರಕಟವಾದ ವ್ಯಂಗ್ಯಚಿತ್ರವನ್ನು ಸಾವಿರಾರು ಜನ ಹಂಚಿಕೊಂಡಿದ್ದಾರೆ. ಬಾಲಾ ಅವರ ಮೇಲಿನ ಕಾನೂನುಕ್ರಮದ ಕುರಿತು ಜನಸಾಮಾನ್ಯರು ಧ್ವನಿಯೆತ್ತಿದ್ದಾರೆ. ಚೆನ್ನೈನ ಪ್ರೆಸ್‌ ಕ್ಲಬ್, ವಿವಾದಿತ ಕಾರ್ಟೂನ್‌ನ ಎರಡು ಬೃಹತ್ ಬ್ಯಾನರ್‌ಗಳನ್ನು ತನ್ನ ಕಚೇರಿಯ ಕಟ್ಟಡದ ಮೇಲೆ ಪ್ರದರ್ಶಿಸುವ ಮೂಲಕ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನಗಳ ಕುರಿತು ಪ್ರತಿಭಟನೆ ವ್ಯಕ್ತಪಡಿಸಿದೆ. ನ. 5ರಂದು ಬಂಧನಕ್ಕೊಳಗಾಗಿ, ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಬಾಲಾ, ‘ನಾನು ಕೊಲೆ ಮಾಡಿಲ್ಲ. ಈ ಕಾರ್ಟೂನ್ ನನ್ನ ಕೋಪದ ಆತ್ಯಂತಿಕ ಅಭಿವ್ಯಕ್ತಿ. ವ್ಯಂಗ್ಯಚಿತ್ರಗಳ ಮೂಲಕ ಸರ್ಕಾರದ ಹುಳುಕುಗಳನ್ನು ಎತ್ತಿಹಿಡಿಯುವ ಕೆಲಸವನ್ನು ಮುಂದುವರೆಸುತ್ತೇನೆ’ ಎಂದು ಹೇಳಿರುವುದು ಸೃಜನಶೀಲ ಸ್ವಾತಂತ್ರ್ಯವನ್ನು ಹತ್ತಿಕ್ಕಲು ಬಯಸುವ ಶಕ್ತಿಗಳಿಗೆ ನೀಡಿರುವ ದಿಟ್ಟ ಉತ್ತರವಾಗಿದೆ.

ಮುದ್ರಣ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ ಮಾಡಿರುವ ಬಾಲಾ, ಸಾಮಾಜಿಕ ಕಾರ್ಯಕರ್ತನ ರೂಪದಲ್ಲಿ ವ್ಯವಸ್ಥೆ ಯನ್ನು ಟೀಕಿಸುವ ಕೆಲಸವನ್ನು ನಿರಂತರವಾಗಿ ಮಾಡಿಕೊಂಡು ಬಂದಿದ್ದಾರೆ. ಕರುಣಾನಿಧಿ ಹಾಗೂ ಜಯಲಲಿತಾ ಆಡಳಿತಾವಧಿಯಲ್ಲಿ ಪ್ರಸ್ತುತ ವಿವಾದಕ್ಕೀಡಾಗಿರುವ ವ್ಯಂಗ್ಯಚಿತ್ರಕ್ಕಿಂತಲೂ ಹೆಚ್ಚು ತೀವ್ರತೆಯ ಕಾರ್ಟೂನ್‌ಗಳನ್ನು ರಚಿಸಿದ್ದರೂ ಈ ಮಟ್ಟಿಗಿನ ಪ್ರತಿರೋಧವನ್ನು ಹಿಂದೆಂದೂ ಎದುರಿಸಿರಲಿಲ್ಲ ಎಂದವರು ಹೇಳಿದ್ದಾರೆ. ಜಯಲಲಿತಾ ಆಡಳಿತ ಅವಧಿಯಲ್ಲೂ ಪತ್ರಕರ್ತರ ವಿರುದ್ಧ ಮಾನನಷ್ಟ ಮೊಕದ್ದಮೆಗಳ ಮೂಲಕ ಅಭಿವ್ಯಕ್ತಿ ಸ್ವಾತಂತ್ರ್ಯ ಹತ್ತಿಕ್ಕುವ ಪ್ರಯತ್ನಗಳು ತೀವ್ರತರದಲ್ಲಿ ನಡೆದಿದ್ದವು ಎಂಬುದನ್ನೂ ಇಲ್ಲಿ ಸ್ಮರಿಸಬಹುದು. ಟೀಕೆಗಳಿಗೆ ಆಡಳಿತಗಾರರು ಮುಕ್ತವಾಗಿರಬೇಕಾದುದು ಆರೋಗ್ಯಕರ ಪ್ರಜಾಪ್ರಭುತ್ವದ ಲಕ್ಷಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT