ಡ್ರೋನ್ ಬಳಕೆಗೂ ವಿಶಿಷ್ಟ ಗುರುತು ಸಂಖ್ಯೆ

7

ಡ್ರೋನ್ ಬಳಕೆಗೂ ವಿಶಿಷ್ಟ ಗುರುತು ಸಂಖ್ಯೆ

Published:
Updated:
ಡ್ರೋನ್ ಬಳಕೆಗೂ ವಿಶಿಷ್ಟ ಗುರುತು ಸಂಖ್ಯೆ

ದೇಶದಲ್ಲಿ ವಿದೇಶಿ ಕಂಪೆನಿಗಳು ಇಲ್ಲವೇ ಪ್ರಜೆಗಳು ನಾಗರಿಕ ಡ್ರೋನ್‌ ಬಳಕೆಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ಸಂಬಂಧ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಕರಡು ನಿಯಮ ರೂಪಿಸಲಿದೆ. ವಾಣಿಜ್ಯ ಬಳಕೆಗೆ ಡ್ರೋನ್ ಬಳಕೆ ಮಾಡಲು ಅನುಮತಿ ನೀಡಲು ಮುಂದಾಗಿರುವ ಸರ್ಕಾರ, ಕರಡು ನಿಯಮಕ್ಕೆ ಸಾರ್ವಜನಿಕರಿಂದ ಸಲಹೆಗಳನ್ನು ಆಹ್ವಾನಿಸಿದೆ. ರಿಮೋಟ್ ಮೂಲಕ ನಿಯಂತ್ರಿಸಬಹುದಾದ ಸಾಧನದ ಬಳಕೆಗೆ ಕೆಲವು ಕಠಿಣ ನಿಯಮಗಳನ್ನು ಜಾರಿ ಮಾಡಲಾಗುತ್ತದೆ.

ಯಾವುದೇ ಕಂಪೆನಿಯಲ್ಲಿ ಮೂರನೇ ಒಂದರಷ್ಟು ನಿರ್ದೇಶಕರು ಭಾರತೀಯ ಪ್ರಜೆಗಳಾಗಿದ್ದರೆ ಅಂತಹವರಿಗೆ ಡ್ರೋನ್‌ ಯುಐಎಎನ್‌ (ವಿಶಿಷ್ಟ ಗುರುತು ಸಂಖ್ಯೆ) ನೀಡಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿದೆ. ಒಂದು ವೇಳೆ ಕಂಪೆನಿ ಭಾರತದಿಂದ ಹೊರಗೆ ನೋಂದಣಿಯಾಗಿದ್ದರೆ ಅವರಿಗೂ ಯುಐಎನ್‌ ನೀಡಲಾಗುವುದು. ಆದರೆ, ಯುಐಎನ್‌ಗೆ ಅರ್ಹತೆ ಹೊಂದಿರುವ ಕಂಪೆನಿಗೆ ಡ್ರೋನ್‌ ಅನ್ನು ಗುತ್ತಿಗೆ ನೀಡಬೇಕು ಅಷ್ಟೇ. ದೇಶದಲ್ಲಿ ವಿದೇಶಿ ಸಂಸ್ಥೆಗಳು ನೇರವಾಗಿ ಡ್ರೋನ್‌ ಬಳಕೆ ಮಾಡುವುದನ್ನು ತಡೆಯುವುದೇ ಇದರ ಪ್ರಮುಖ ಉದ್ದೇಶ.

ಮನೆಬಾಗಿಲಿಗೆ ವಿತರಣೆ

ಸರಕು ಸರಂಜಾಮುಗಳನ್ನು ಗ್ರಾಹಕರ ಮನೆಬಾಗಿಲಿಗೆ ಡ್ರೋನ್‌ ಮೂಲಕ ಪೂರೈಸುವ ತಂತ್ರಜ್ಞಾನವನ್ನು  ಹಲವು ದೇಶಗಳು ಬಳಸಿಕೊಳ್ಳುತ್ತಿವೆ. ರುವಾಂಡದಂತಹ ದೇಶದಲ್ಲಿ ವೈದ್ಯಕೀಯ ಸೇವೆಗೆ ಡ್ರೋನ್‌ ಬಳಸಲಾಗುತ್ತದೆ. ನಾಗರಿಕ ವಿಮಾನಯಾನ ನಿರ್ದೇಶನಾಲಯ ಒಂದು ಬಾರಿ ಕರಡು ನಿಯಮ ಅಂತಿಮಗೊಳಿಸಿ ಜಾರಿಗೆ ತಂದರೆ ವಾಣಿಜ್ಯ ಬಳಕೆಗೆ, ಸರಕನ್ನು ಮನೆಬಾಗಿಲಿಗೆ ಸರಬರಾಜು ಮಾಡಲು ಡ್ರೋನ್‌ ಬಳಸಬಹುದು.

ಒಳ್ಳೆಯ ಉದ್ದೇಶಗಳಿಗೆ ಮಾತ್ರ ಡ್ರೋನ್ ಬಳಸುವಂತಾಗಬೇಕು ಮತ್ತು ‘ಡ್ರೋನ್‌ರಹಿತ ಪ್ರದೇಶ’ ಇರಬೇಕು ಎಂಬ ಕಾರಣಕ್ಕೆ ಈ ಕರಡು ನಿಯಮ ರೂಪಿಸಲಾಗುತ್ತಿದೆ ಎಂದು ಡಿಜಿಸಿಎ ಹೇಳಿದೆ.

ಕಳಪೆ ಡ್ರೋನ್‌ಗಳಿಗೆ ತಡೆ

ಹೊಸ ನಿಯಮ ಜಾರಿಯಾದರೆ ಕಳಪೆ ಗುಣಮಟ್ಟದ ಡ್ರೋನ್‌ಗಳ ಹಾರಾಟಕ್ಕೆ ತಡೆ ಬೀಳಲಿದೆ. ಅನುಮತಿ ನೀಡಿದ ಪ್ರದೇಶದಿಂದ ಹೊರಗೆ ಹಾರಾಟ ನಡೆಸುವ ಇವು ಭದ್ರತೆ ಮತ್ತು ಸುರಕ್ಷತೆಗೆ ತೊಂದರೆ ನೀಡುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ

ಏರ್ ರಿಕ್ಷಾ

ಡಿಜಿಸಿಎ ನಿಯಮದ ಅಡಿಯಲ್ಲೇ ಪ್ರಯಾಣಿಕ ಡ್ರೋನ್‌ ಅರ್ಥಾತ್‌ ಏರ್‌ ರಿಕ್ಷಾಗಳ ಅನ್ವೇಷಣೆಗೂ ಅವಕಾಶ ಸಿಗಲಿದೆ. ಡ್ರೋನ್‌ ವಿನ್ಯಾಸಕರು ಮತ್ತು ನಿರ್ವಾಹಕರು ಸಂಶೋಧನೆ ನಡೆಸಬೇಕಿದೆ. ಭವಿಷ್ಯದ ಬೇಡಿಕೆ ಗಮನದಲ್ಲಿಟ್ಟುಕೊಂಡು ಇದಕ್ಕೆ ಅವಕಾಶ ನೀಡಲಾಗುವುದು.

ಸಣ್ಣ ವರ್ಗದ ಡ್ರೋನ್‌ಗಳಿಗೆ ಆರ್‌ಎಫ್‌ಐಡಿ/ ಸಿಮ್‌ ಇರಬೇಕು. ಹಾರಾಟ ನಡೆಸಿದ ಸ್ಥಳಕ್ಕೆ ಬರುವ ಡ್ರೋನ್‌ಗಳು ಪರಸ್ಪರ ಡಿಕ್ಕಿ ಹೊಡೆಯುವುದನ್ನು ತಡೆಯುವ ಬೆಳಕಿನ ವ್ಯವಸ್ಥೆ ಇರಬೇಕು.

ಸಣ್ಣ ವರ್ಗದ ಡ್ರೋನ್‌ಗಳು ವಿಮಾನ ನಿಲ್ದಾಣ ವ್ಯಾಪ್ತಿಯಿಂದ 5 ಕಿ.ಮೀ ಒಳಗೆ ಹಾರಾಟ ನಡೆಸುವಂತಿಲ್ಲ. ಹಾಗೆಯೇ ಅಂತರರಾಷ್ಟ್ರೀಯ ಗಡಿಯಿಂದ 50 ಕಿ.ಮೀ ಮತ್ತು ಕರಾವಳಿಯಿಂದ 500 ಮೀಟರ್ ದೂರದಲ್ಲೇ ಹಾರಾಟ ಮಾಡಬೇಕು.

ಸದ್ಯ ಜಾರಿಯಲ್ಲಿರುವ ನಾಗರಿಕ ವಿಮಾನಯಾನ ನಿಯಮಗಳಲ್ಲಿ ಡ್ರೋನ್‌ ಬಳಕೆ ಬಗ್ಗೆ ಯಾವುದೇ ಪ್ರಸ್ತಾಪವಿಲ್ಲ. ಇದೀಗ ಸರ್ಕಾರ ಹೊಸ ನಿಯಮಗಳನ್ನು ಜಾರಿಗೆ ತರಲು ಮುಂದಾಗಿದೆ. 2014 ರ ಅಕ್ಟೋಬರ್‌ನಲ್ಲಿ ಡಿಜಿಸಿಎ ಡ್ರೋನ್‌ ಮತ್ತು ಮಾನವರಹಿತ ಏರ್‌ಕ್ರಾಫ್ಟ್‌ಗಳನ್ನು ನಾಗರಿಕರು ಹಾರಿಸಬಾರದು ಎಂಬ ನಿಯಮ ಜಾರಿಗೆ ತಂದಿದೆ.

ಅಮೆರಿಕದಲ್ಲಿ ವಾಣಿಜ್ಯ ಉದ್ದೇಶದ ಡ್ರೋನ್‌ ಬಳಕೆಗೆ ಅನುಮತಿ ಇದೆ. ಆದರೆ, ಕೆಲವು ನಿಬಂಧನೆಗಳನ್ನು ಪಾಲಿಸಬೇಕಷ್ಟೇ. ಗರಿಷ್ಠ ಎತ್ತರ 121 ಮೀಟರ್‌, ವಿಶೇಷ ಅನುಮತಿ ಇಲ್ಲದೆ 25 ಕೆ.ಜಿ ಸಾಗಿಸಬಹುದು. ರಾತ್ರಿ ವೇಳೆಯಲ್ಲಿ ಹಾರಾಟಕ್ಕೆ ಅವಕಾಶ ಇಲ್ಲ. ಡ್ರೋನ್‌ಗೆ ವಿಮೆ ಅಗತ್ಯವಿಲ್ಲದಿದ್ದರೂ, ಮಾಡಿಸಬೇಕು ಎಂಬ ಶಿಫಾರಸು ಮಾಡಲಾಗಿದೆ.

**

ಅಂಕಿ ಅಂಶ

250 ಗ್ರಾಂಗಿಂತ ಕಡಿಮೆ ತೂಕದ, ಕೇವಲ 50 ಅಡಿ ಎತ್ತರ ಹಾರಾಟ ನಡೆಸುವ ಹಾಗೂ ಸರ್ಕಾರಿ ಭದ್ರತಾ ಏಜೆನ್ಸಿಗಳ ಡ್ರೋನ್‌ಗಳಿಗೆ ಯುಐಎನ್‌ ಅವಶ್ಯವಿಲ್ಲ

200 ಅಡಿ ಒಳಗೆ ಶಾಲಾ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ಹಾರಾಟ ನಡೆಸುವ ಮಾದರಿ ಡ್ರೋನ್‌ಗಳಿಗೆ ಯುಐಎನ್‌ ಅಗತ್ಯವಿಲ್ಲ

**

ಒಳಾವರಣ ಹಾರಾಟಕ್ಕೂ ನಿರ್ಬಂಧ

ಏರೋ ಮಾದರಿ, ಮನರಂಜನೆಗಾಗಿ ಹಾರಾಟ ನಡೆಸುವ ವಸ್ತುಗಳ ಜವಾಬ್ದಾರಿ ಅವುಗಳನ್ನು ಹಾರಾಟ ಮಾಡಿದವರಿಗೇ ಸೇರಿದೆ. ಅವುಗಳ ಭದ್ರತೆ ಮತ್ತು ಸುರಕ್ಷತೆಯತ್ತ ಗಮನ ನೀಡಬೇಕು. ಹಾರಾಟದ ಬಗ್ಗೆ ಸ್ಥಳೀಯ ಪೊಲೀಸ್‌ ಠಾಣೆಗಳಿಂದ ಅನುಮತಿ ಪಡೆದಿರಬೇಕು. ಇದು ಒಳಾವರಣದಲ್ಲಿ ಹಾರಾಟ ಮಾಡಿದ್ದರೂ ಅನ್ವಯವಾಗುತ್ತದೆ.

ಚೀನಾದಲ್ಲಿ ಬೇಹುಗಾರಿಕಾ ಡ್ರೋನ್‌ ಪರೀಕ್ಷೆ

ಬಾವಲಿ ಗಾತ್ರ ಭಾರಿ ಎತ್ತರದಲ್ಲಿ ಹಾರಾಡಬಹುದಾದ ಡ್ರೋನ್‌ ಅನ್ನು ಚೀನಾ ಇತ್ತೀಚೆಗೆ ಯಶಸ್ವಿಯಾಗಿ ಪರೀಕ್ಷೆ ಮಾಡಿದೆ. ಇದನ್ನು ಸೇನಾ ಉದ್ದೇಶಗಳಿಗೆ ಬಳಸುವ ತಯಾರಿಯನ್ನು ಚೀನಾ ಮಾಡುತ್ತಿದೆ. ‘ಡೆತ್‌ ಝೋನ್‌’ ಎಂದು ಕರೆಯಲಾಗುವ ಪ್ರದೇಶದಲ್ಲಿ ಈ ಹಾರಾಟ ನಡೆದಿದೆ. ಸಮುದ್ರ ಮಟ್ಟದಿಂದ 20 ಕಿ.ಮೀ ಎತ್ತರದಲ್ಲಿ ಈ ಡ್ರೋನ್‌ಗಳು ಹಾರಾಡಿವೆ. ಕಳೆದ ತಿಂಗಳು ಮಂಗೋಲಿಯಾದಲ್ಲಿ 25 ಕಿ.ಮೀ ಎತ್ತರದಲ್ಲಿ ಡ್ರೋನ್‌ ಪರೀಕ್ಷೆ ನಡೆಸಲಾಗಿದೆ.

**

ಕರಡು ನಿಯಮಗಳೇನು

ಡ್ರೋನ್‌ಗಳಿಗೆ ವಿಶಿಷ್ಟ ಗುರುತಿನ ಸಂಖ್ಯೆ ಕಡ್ಡಾಯ (ಯುಐಎನ್‌)

ಯುಐಎನ್‌ಗೆ ಅನುಮತಿ ಡ್ರೋನ್‌ಗಳ ಮಾಲೀಕತ್ವಕ್ಕೆ ಸಂಬಂಧಿಸಿದೆ

ಯುಐಎನ್ ಅನ್ನು ಕೇವಲ ಭಾರತೀಯ ಪ್ರಜೆಗೆ ನೀಡಲಾಗುವುದು

ಕೇಂದ್ರ, ರಾಜ್ಯ ಸರ್ಕಾರಗಳಿಗೆ ಅವಕಾಶವಿದೆ

ರಾಜ್ಯ ಸರ್ಕಾರಿ ಸ್ವಾಮ್ಯದ ಮತ್ತು ನಿಯಂತ್ರಣದ ಕಂಪೆನಿಗೆ ಅವಕಾಶ

ಕಂಪೆನಿಗಳು ಭಾರತದಲ್ಲಿ ಮಾತ್ರ ವ್ಯವಹಾರ ನಡೆಸುತ್ತಿರಬೇಕು

**

ಡ್ರೋನ್‌ನಲ್ಲಿ ಐದು ವರ್ಗ

1.250 ಗ್ರಾಂ ತೂಕ– ನ್ಯಾನೊ 

2. 250 ಗ್ರಾಂನಿಂದ 2 ಕೆ.ಜಿ–ಮೈಕ್ರೊ 

3. 2 ಕೆ.ಜಿಗಿಂತ ಹೆಚ್ಚು–ಮಿನಿ

4. 150 ಕೆ.ಜಿ.–ಸಣ್ಣ

5. 150 ಕೆ.ಜಿಗಿಂತ ಹೆಚ್ಚು– ದೊಡ್ಡ ಡ್ರೋನ್‌

**

ಡ್ರೋನ್‌ ಸಂಬಂಧಿತ ಕರಡು ಒಮ್ಮೆ ಅಂತಿಮಗೊಂಡು ಜಾರಿಯಾದರೆ ವಾಣಿಜ್ಯ ಬಳಕೆಗೆ ಅನುಕೂಲ ಮಾಡಿಕೊಡಲಾಗುವುದು. ಆದಷ್ಟೂ ಬಳಕೆಸ್ನೇಹಿ ನಿಯಮಗಳನ್ನೇ ಜಾರಿ ಮಾಡಲಾಗುವುದು.

–ಆರ್.ಎನ್‌.ಚೌಬೆ, ನಾಗರಿಕ ವಿಮಾನಯಾನ ಕಾರ್ಯದರ್ಶಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry