ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೊಂದಲದ ಗೂಡಾದ ಜಿಎಸ್‌ಟಿ

Last Updated 7 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆ ಜಾರಿಗೆ ಬಂದು ಈಗಾಗಲೇ ನಾಲ್ಕು ತಿಂಗಳು ಕಳೆದಿದೆ. ದೇಶದ ತೆರಿಗೆ ವ್ಯವಸ್ಥೆಯಲ್ಲಿಯೇ ಸಂಪೂರ್ಣ ಬದಲಾವಣೆ ಆಗಿರುವುದರಿಂದ ಇದಕ್ಕೆ ಹೊಂದಿಕೊಳ್ಳಲು ತೆರಿಗೆ ಅಧಿಕಾರಿಗಳು ಮತ್ತು ವಹಿವಾಟುದಾರರಿಗೆ ಸಮಯಾವಕಾಶದ ಅಗತ್ಯವಿದೆ. ಹೊಸ ವ್ಯವಸ್ಥೆಯಲ್ಲಿ ಲೆಕ್ಕಪತ್ರ ಸಲ್ಲಿಕೆ ಸರಳವಾಗಲಿದ್ದು, ವಹಿವಾಟು ವೃದ್ಧಿಗೆ ನೆರವಾಗಲಿದೆ ಎಂದು ವರ್ತಕರ ಸಮುದಾಯ ಬಹಳಷ್ಟು ನಿರೀಕ್ಷೆ ಇಟ್ಟುಕೊಂಡಿತ್ತು. ಆದರೆ, ವ್ಯವಸ್ಥೆಯಲ್ಲಿನ ಲೋಪ–ದೋಷಗಳು ದೊಡ್ಡ ಹೊರೆಯಾಗಿ ಪರಿಣಮಿಸಿವೆ.

ಸರ್ಕಾರ ದಿನಕ್ಕೊಂದು ಹೊಸ ಆದೇಶ ಹೊರಡಿಸುವ ಮೂಲಕ ಗೊಂದಲ ಮೂಡಿಸುತ್ತಿದೆ, ನಿತ್ಯದ ವಹಿವಾಟು ನಡೆಸುವ ಬದಲಾಗಿ ಖರೀದಿ ಮತ್ತು ವೆಚ್ಚದ ಲೆಕ್ಕಪತ್ರ (ರಿಟರ್ನ್) ಇಡುವುದಕ್ಕೇ ಹೆಚ್ಚು ಸಮಯ ವ್ಯಯಿಸುವಂತಾಗಿದೆ ಎಂಬುದು ವರ್ತಕರ ಅಸಮಾಧಾನದ ಮೂಲ ಕಾರಣವಾಗಿದೆ.

ಸಂವಹನ- ಮಾಹಿತಿ ಕೊರತೆ

ಹೊಸ ವ್ಯವಸ್ಥೆ ಬಗ್ಗೆ ಯಾರಿಗೂ ವಿರೋಧ ಇಲ್ಲ. ಆದರೆ ಸಂವಹನ, ಮಾಹಿತಿ ಕೊರತೆಯಿಂದ ಗೊಂದಲ ಹೆಚ್ಚಾಗಿದೆ. ಜಿಎಸ್‌ಟಿಗೆ ಸಂಬಂಧಪಟ್ಟಂತೆ ಮಾಹಿತಿ ತಂತ್ರಜ್ಞಾನ ಸೇವೆ, ನಿಯಮಾವಳಿಗಳ ಅರ್ಥೈಸುವಿಕೆ, ವಹಿವಾಟಿನ ವಿವರ, ತೆರಿಗೆ ಪಾವತಿ, ತೆರಿಗೆ ದರಗಳ ಬಗ್ಗೆ ಗೊಂದಲ ಬಗೆಹರಿದಿಲ್ಲ. ಇದು ವಹಿವಾಟಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ವ್ಯವಸ್ಥೆಯನ್ನು ಆದಷ್ಟೂ ಸರಳಗೊಳಿಸಿ ಎಂದು ವರ್ತಕರು ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ.

ಸಮಸ್ಯೆಯ ಆರಂಭ

ವರ್ತಕರು ಪ್ರತಿ ತಿಂಗಳೂ ಜಿಎಸ್‌ಟಿಆರ್‌–3ಬಿ, ಜಿಎಸ್‌ಟಿಆರ್-1, ಜಿಎಸ್‌ಟಿಆರ್ 2, ಜಿಎಸ್‌ಟಿಆರ್-3 ಎಂದು ಒಟ್ಟು 4 ಲೆಕ್ಕ ಪತ್ರ ವರದಿಗಳನ್ನು ಸಲ್ಲಿಸಬೇಕು. ಜುಲೈ ತಿಂಗಳ ರಿಟರ್ನ್‌ ಸಲ್ಲಿಕೆಗೆ ಆಗಸ್ಟ್ 20 ಅಂತಿಮ ದಿನವಾಗಿತ್ತು. ಆಗಸ್ಟ್ 19ರಂದು ಜಾಲತಾಣದಲ್ಲಿ ತಾಂತ್ರಿಕ ದೋಷ ಕಂಡು ಬಂದಿತ್ತು. ಇದರಿಂದ ಅರ್ಧ ದಿನದವರೆಗೂ ರಿಟರ್ನ್ ಸಲ್ಲಿಕೆ ಮತ್ತು ಇನ್‌ವೈಸ್ ಅಪ್‌ಲೋಡ್‌ ಮಾಡಲು ಸಾಧ್ಯವಾಗಿರಲಿಲ್ಲ. ಹೀಗಾಗಿ ರಿಟರ್ನ್ ಸಲ್ಲಿಕೆ ಅವಧಿಯನ್ನು ಆಗಸ್ಟ್ 25ರವರೆಗೆ ವಿಸ್ತರಣೆ ಮಾಡಲಾಗಿತ್ತು. ಆ ಬಳಿಕವೂ ಜಾಲತಾಣ ಸರಿಯಾಗಿ ಕೆಲಸ ಮಾಡುತ್ತಿಲ್ಲ.

ಜಾಲತಾಣದ ಸಮಸ್ಯೆಗಳ ಬಗ್ಗೆ ವರ್ತಕರಿಂದ ಬರುವ ದೂರುಗಳು ಹೆಚ್ಚಾಗತೊಡಗಿವೆ. ಸೆಪ್ಟೆಂಬರ್ 12 ರಂದು ನಡೆದ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಜಾಲತಾಣದ ಸಮಸ್ಯೆಗಳ ಪರಿಶೀಲನೆ ಮತ್ತು ಅದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಮಂಡಳಿಯು ಐವರು ಸದಸ್ಯರಿರುವ ಸಚಿವರ ತಂಡ ರಚನೆ ಮಾಡಿತ್ತು. ಸಚಿವರ ತಂಡ ಇದುವರೆಗೂ ಮೂರು ಸಭೆ ನಡೆಸಿದೆ. ಸೆಪ್ಟೆಂಬರ್ 16ರಂದು ನಡೆದ ಸಭೆಯಲ್ಲಿ ಅಕ್ಟೋಬರ್‌ 30ರ ಒಳಗಾಗಿ ಶೇ 80ರಷ್ಟು ಸಮಸ್ಯೆಗಳು ಬಗೆಹರಿಯಲಿವೆ ಎನ್ನುವ ಭರವಸೆಯನ್ನು ತಂಡ ನೀಡಿತ್ತು. ಆದರೆ, ಬಹಳಷ್ಟು ಸಮಸ್ಯೆಗಳು ಹಾಗೆಯೇ ಉಳಿದಿವೆ. ಇನ್‌ವೈಸ್‌ ಅಪ್‌ಲೋಡ್‌ ಮಾಡುವ ಕೆಲಸವೇ ಆಗುತ್ತಿಲ್ಲ. ಹೀಗಿರುವಾಗ ಅಂತಿಮ ರಿಟರ್ನ್ ಸಲ್ಲಿಕೆ ಹೇಗೆ ಸಾಧ್ಯ ಎಂದು ವರ್ತಕರು ಪ್ರಶ್ನಿಸುತ್ತಿದ್ದಾರೆ.

(ರಮೇಶ್‌ ಚಂದ್ರ ಲಹೋಟಿ)

ಜಿಎಸ್‌ಟಿಎನ್‌ ಜಾಲತಾಣದಲ್ಲಿ ಇರುವ ಸಮಸ್ಯೆಗಳನ್ನು ಹಂತ ಹಂತವಾಗಿ ಬಗೆಹರಿಸಲಾಗುತ್ತಿದೆ. ಇನ್ಫೊಸಿಸ್‌ನ ತಜ್ಞರ ತಂಡ ಈ ಬಗ್ಗೆ ಹೆಚ್ಚಿನ ಶ್ರಮ ವಹಿಸಿ ಕೆಲಸ ಮಾಡುತ್ತಿದೆ. ಸಮಸ್ಯೆಗಳು ಹೆಚ್ಚು ಸಂಕೀರ್ಣವಾಗಿರುವುದರಿಂದ ಇನ್ನಷ್ಟು ಕಾಲಾವಕಾಶದ ಅಗತ್ಯವಿದೆ. ಜಿಎಸ್‌ಟಿಎನ್‌ನಲ್ಲಿ ಇರುವ 47 ಸಮಸ್ಯೆಗಳನ್ನು ಇನ್ಫೊಸಿಸ್‌ ಗಮನಕ್ಕೆ ತರಲಾಗಿತ್ತು. ಅದರಲ್ಲಿ 27 ಸಮಸ್ಯೆಗಳನ್ನು ಸೆಪ್ಟೆಂಬರ್‌ ತಿಂಗಳ ಒಳಗೆ ಪರಿಹರಿಸುವ ಗಡುವು ನೀಡಲಾಗಿತ್ತು. ಆದರೆ, ಇದುವರೆಗೆ ಅದರಲ್ಲಿ 18 ಸಮಸ್ಯೆಗಳನ್ನು ಮಾತ್ರ ಬಗೆಹರಿಸುವಲ್ಲಿ ತಜ್ಞರ ತಂಡ ಯಶಸ್ವಿಯಾಗಿದೆ.

ಹೆಚ್ಚು ಸಮಸ್ಯೆ ಆಗುತ್ತಿರುವುದೆಲ್ಲಿ?

ಜಿಎಸ್‌ಟಿಯಲ್ಲಿ ಪೂರೈಕೆದಾರ ಮತ್ತು ಖರೀದಿದಾರರ ಮಾಹಿತಿಗಳನ್ನು ಹೋಲಿಸಿ ನೋಡಬೇಕು. ಇದು ದೊಡ್ಡ ಸವಾಲಿನ ಕೆಲಸ. ಇದೇ ಮೊದಲ ಬಾರಿಗೆ ಈ ರೀತಿ ಮಾಹಿತಿಗಳನ್ನು ಹೋಲಿಸಿ ನೋಡಿ ಅಂತಿಮ ರಿಟರ್ನ್‌ ಪಡೆಯಲಾಗುತ್ತಿದೆ. ಈ ಹಂತದಲ್ಲಿ ಸಮಸ್ಯೆ ಎದುರಾಗಿದೆ. ಜಿಎಸ್‌ಟಿಆರ್‌–1ರಲ್ಲಿ ಮಾರಾಟಕ್ಕೆ ಸಂಬಂಧಿಸಿದಂತೆ 45 ಕೋಟಿ ಇನ್‌ವೈಸ್‌ ಅಪ್‌ಲೋಡ್‌ ಆಗಿದೆ. ಜಿಎಸ್‌ಟಿಆರ್‌–2ನಲ್ಲಿ ಖರೀದಿಗೆ ಸಂಬಂಧಿಸಿದ ಇನ್‌ವೈಸ್‌ ಜತೆ ಹೋಲಿಕೆ ಮಾಡಬೇಕು. ಈ ಹಂತದಲ್ಲಿ ಸಮಸ್ಯೆ ಎದುರಾಗುತ್ತಿದೆ. ಹಾಗಾಗಿ ಇದುವರೆಗೆ ಕೇವಲ 12 ಲಕ್ಷ ಜಿಎಸ್‌ಟಿಆರ್‌–2 ರಿಟರ್ನ್ ಸಲ್ಲಿಕೆಯಾಗಿದೆ. ಲೆಕ್ಕಪತ್ರ ವರದಿ ಸಲ್ಲಿಸುವಾಗ ಕಣ್ತಪ್ಪಿನಿಂದ ತಪ್ಪುಗಳು ಆಗೇ ಆಗುತ್ತವೆ. ಈ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಈಗ ಅವಕಾಶವೇ ಇಲ್ಲ. ಜುಲೈ ತಿಂಗಳ ‘3ಬಿ’ಯಲ್ಲಿ ತಪ್ಪಿದ್ದರೆ ಅದು ಸಲ್ಲಿಕೆಯಾಗುವುದಿಲ್ಲ. ಅದು ಸಲ್ಲಿಕೆಯಾಗದೆ ಮುಂದಿನ ತಿಂಗಳ 3ಬಿ ಲೆಕ್ಕಪತ್ರ ವರದಿಗಳನ್ನು ಸಲ್ಲಿಸಲು ಜಾಲತಾಣವು ಅವಕಾಶ ನೀಡುವುದಿಲ್ಲ. ಲೆಕ್ಕಪತ್ರ ವರದಿಗೆ ಸಂಬಂಧಿಸಿದ ಇಂತಹ ಅಡಚಣೆಗಳು ಸಾಕಷ್ಟಿವೆ.

ಬ್ರ್ಯಾಂಡ್‌, ಅನ್‌ಬ್ರ್ಯಾಂಡ್‌...

‘ಬ್ರ್ಯಾಂಡ್ ಮತ್ತು ಅನ್‌ ಬ್ರ್ಯಾಂಡ್‌ ಎಂಬ ವರ್ಗೀಕರಣ ಸರಿ ಇಲ್ಲ. ಅದನ್ನು ಕೈಬಿಡಿ ಎಂದು ಆರಂಭದಲ್ಲಿಯೇ ಸರ್ಕಾರಕ್ಕೆ ಸಲಹೆ ನೀಡಲಾಗಿತ್ತು. ಆದರೆ ಜಿಎಸ್‌ಟಿ ಜಾರಿಯಾಗಿ ನಾಲ್ಕು ತಿಂಗಳು ಕಳೆದರೂ ಆ ಬಗ್ಗೆ ಗಮನ ನೀಡಿಲ್ಲ. ಅದರಿಂದ ಸೃಷ್ಟಿಯಾಗಿರುವ ಸಮಸ್ಯೆ ಹಾಗೆಯೇ ಮುಂದುವರಿದಿದೆ. ಇದರಿಂದ ಖರೀದಿ ಮತ್ತು ಮಾರಾಟದ ಮೇಲೆ ಅಡ್ಡ ಪರಿಣಾಮ ಬೀರಿದೆ’ ಎಂದು ಎಫ್‌ಕೆಸಿಸಿಐನ ಆಹಾರ ಧಾನ್ಯ ಮತ್ತು ಬೇಳೆಕಾಳು ಸಮಿತಿಯ ಅಧ್ಯಕ್ಷ ಭರತ್‌ ಕುಮಾರ್ ಷಾ ಮತ್ತು ಎಫ್‌ಕೆಸಿಸಿಐ ಎಪಿಎಂಸಿ ಅಧ್ಯಕ್ಷ ರಮೇಶ್‌ ಚಂದ್ರ ಲಹೋಟಿ ಅಸಮಾಧಾನ ಹೊರಹಾಕುತ್ತಾರೆ.

ಬ್ರ್ಯಾಂಡ್‌ ಮತ್ತು ಬ್ರ್ಯಾಂಡೆಡ್‌ ಅಲ್ಲದ ಆಹಾರ ಪದಾರ್ಥಗಳು ಎಂದರೆ ಏನು ಎನ್ನುವ ಬಗ್ಗೆ ಸ್ಪಷ್ಟನೇ ನೀಡುವಂತೆಯೂ ಕೇಳಲಾಗಿತ್ತು. ಅದೂ ಅಗಿಲ್ಲ. ಖಾಲಿ ಚೀಲದಲ್ಲಿ ಆಹಾರ ಪದಾರ್ಥಗಳನ್ನು ದಾಸ್ತಾನು ಮಾಡಿಟ್ಟರೆ ನಾಳೆ ಆಹಾರ ಇಲಾಖೆಯವರು ಗುಣಮಟ್ಟದ ಮಾನ್ಯತೆ ಇಲ್ಲ, ಅಕ್ರಮ ದಾಸ್ತಾನು ಎಂದು ಜಪ್ತಿ ಮಾಡುವ ಸಾಧ್ಯತೆ ಇದೆ. ಹಾಗಂತ ಸಗಟು ಮಾರಾಟಗಾರರು ಚೀಲದ ಮೇಲೆ ಹೆಸರು ಹಾಕಿದರೆ ಅದನ್ನು ಬ್ರ್ಯಾಂಡ್‌ ಎಂದು ಪರಿಗಣಿಸಿ ಶೇ 5 ರಷ್ಟು ತೆರಿಗೆ ವಿಧಿಸಿದರೆ ವರ್ತಕರಿಗೆ ಹೊರೆಯಾಗಲಿದೆ. ಅಂತಹ ಸಂದರ್ಭದಲ್ಲಿ ವ್ಯಾಪಾರಿಗಳು ಸಹಜವಾಗಿಯೇ ಅದನ್ನು ಗ್ರಾಹಕರಿಗೆ ವರ್ಗಾಯಿಸುತ್ತಿದ್ದಾರೆ.

ಸಾಕಷ್ಟು ಬದಲಾವಣೆ ಅಗತ್ಯ

‘ಸಮಸ್ಯೆಗಳನ್ನು ಬಗೆಹರಿಸುವ ಬಗ್ಗೆ ಬರೀ ಭರವಸೆ, ಆಶ್ವಾಸನೆಗಳನ್ನು ನೀಡಲಾಗುತ್ತಿದೆ. ರಿಟರ್ನ್ ಸಲ್ಲಿಕೆಗೆ ಸಂಬಂಧಿಸಿದಂತೆ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ವಹಿವಾಟಿಗೆ ಸಂಬಂಧಿಸಿದ ಎಲ್ಲಾ ದಾಖಲೆಪತ್ರಗಳನ್ನು ಇಡುವುದು, ರಿಟರ್ನ್ ಸಲ್ಲಿಕೆ, ತೆರಿಗೆ ಪಾವತಿ... ಹೀಗೆ ಸರ್ಕಾರ ಹೇಳಿರುವ ಎಲ್ಲಾ ನಿಯಮಗಳನ್ನೂ ನಾವು ಪಾಲಿಸಲು ಸಿದ್ಧ. ಆದೇ ಪ‍್ರಯತ್ನದಲ್ಲಿಯೇ ಇದ್ದೇವೆ. ಆದರೆ ವ್ಯವಸ್ಥೆಯೇ ಸರಳವಾಗಿಲ್ಲ. ರಿಟರ್ನ್‌ ಸಲ್ಲಿಸಲು ಬಹಳ ಸಮಯ ಹಿಡಿಯುತ್ತಿದೆ. ಕೆಲವೊಮ್ಮೆ ಲಾಗಿನ್‌ ಆಗಲೇ ಸಾಧ್ಯವಾಗುವುದಿಲ್ಲ’ ಎಂದು ಎಫ್‌ಕೆಸಿಸಿಐನ ಎಪಿಎಂಸಿ ಸಮಿತಿ ಅಧ್ಯಕ್ಷ ರಮೇಶ್‌ ಚಂದ್ರ ಲಹೋಟಿ ಮಾಹಿತಿ ನೀಡಿದರು.

ಒಂದು ತಿಂಗಳ ಲೆಕ್ಕಪತ್ರ ಮಾಹಿತಿ ಅಪ್‌ಲೋಡ್‌ ಮಾಡಲು ಕನಿಷ್ಠ 4 ಗಂಟೆ ಬೇಕು. ಆದರೆ ಎಷ್ಟು ಜನರಿಗೆ ಈ ಮಾಹಿತಿ ಇದೆ ಎನ್ನುವುದೂ ಮುಖ್ಯ. ಇಲ್ಲಿ ಎಲ್ಲವೂ ಆನ್‌ಲೈನ್‌ ಹಾಗಾಗಿ ಬಹಳಷ್ಟು ವರ್ತಕರು ಪ್ರತಿಯೊಂದು ಮಾಹಿತಿಯನ್ನು ದಾಖಲಿಡಲು ಮತ್ತು ರಿಟರ್ನ್‌ ಸಲ್ಲಿಸಲು ಲೆಕ್ಕಪರಿಶೋಧಕರನ್ನು ಅವಲಂಬಿಸುವುದು ಅನಿವಾರ್ಯವಾಗಿದೆ. ಇದು ಅವರಿಗೆ ಹೆಚ್ಚು ಹೊರೆಯಾಗಿ ಪರಿಣಿಮಿಸಿದೆ.

‘25 ವರ್ಷಗಳಿಂದ ವಹಿವಾಟಿಗೆ ಸಂಬಂಧಿಸಿದ ಎಲ್ಲಾ ಲೆಕ್ಕಪತ್ರಗಳನ್ನು ನಾನೇ ನಿರ್ವಹಣೆ ಮಾಡುತ್ತಿದ್ದೇನೆ. ಹೀಗಿದ್ದರೂ ಜಿಎಸ್‌ಟಿಗೆ ಹೊಂದಿಕೊಳ್ಳಲು ನನಗೇ ಸಾಕಷ್ಟು ಕಷ್ಟವಾಗುತ್ತಿದೆ. ಹೀಗಿರುವಾಗ ಸಣ್ಣ ವರ್ತಕರ ಪಾಡೇನು? ನೀವೇ ಊಹಿಸಿಕೊಳ್ಳಿ. ಒಬ್ಬ ವರ್ತಕ ತಿಂಗಳಿಗೆ ಕನಿಷ್ಠ ₹10 ಸಾವಿರ ಜಿಎಸ್‌ಟಿಗಾಗಿ ವ್ಯಯಿಸಲೇಬೇಕು. ಇದು ಹೆಚ್ಚುವರಿ ಹೊರೆ’ ಎಂದರು.

ರಿವರ್ಸ್ ಚಾರ್ಜ್ ಕೈಬಿಡಿ

ಪೂರೈಕೆದಾರನ ಬದಲಿಗೆ ಸರಕು ಮತ್ತು ಸೇವೆಗಳನ್ನು ಸ್ವೀಕರಿಸಿದ ವ್ಯಕ್ತಿ ತೆರಿಗೆ ಪಾವತಿಸುವಂತಹ ರಿವರ್ಸ್‌ ಚಾರ್ಜ್‌ ಕೈಬಿಡುವಂತೆ ವರ್ತಕರು ಒತ್ತಾಯಿಸಿದ್ದಾರೆ. ಅಧಿಕೃತ ಪೂರೈಕೆದಾರರಿಂದಲೇ ಸರಕು ಮತ್ತು ಸೇವೆಗಳನ್ನು ಸ್ವೀಕರಿಸುತ್ತೇವೆ. ಹೀಗಿರುವಾಗ ಸ್ವೀಕರಿಸುವ ವ್ಯಕ್ತಿಯೇ ಏಕೆ ತೆರಿಗೆ ಪಾವತಿಸಬೇಕು ಎಂದು ಕೆಲವು ಉದ್ಯಮಿಗಳು ಪ್ರಶ್ನೆ ಮಾಡಿದ್ದಾರೆ. ಸರಕು ಸಾಗಣೆ ಮಾಡುವವರು ತೆರಿಗೆ ಪಾವತಿಸಲಿ. ಅದರ ಹೊರೆಯನ್ನು ವರ್ತಕರ ಮೇಲೆ ಹಾಕುತ್ತಿರುವುದು ಸರಿಯಲ್ಲ. ಅದನ್ನು ಸಂಪೂರ್ಣವಾಗಿ ಕೈಬಿಡಬೇಕು ಎನ್ನುವುದು ಇನ್ನೂ ಕೆಲವು ವರ್ತರ ಬೇಡಿಕೆಯಾಗಿದೆ.

ಇ–ವೇ ಬಿಲ್‌

ರಾಜ್ಯದಲ್ಲಿ ಈವರೆಗೆ ’ಇ–ಸುಗಮ’ ವ್ಯವಸ್ಥೆ ಇತ್ತು. ಅದು ಅತ್ಯಂತ ಸರಳವಾಗಿತ್ತು. ಆದರೆ ಜಿಎಸ್‌ಟಿಯಲ್ಲಿ ಪರಿಚಯಿಸಿರುವ ‘ಇವೇ ಬಿಲ್‌’ ಸರಳವಾಗಿಲ್ಲ. ಬಿಲ್ ಜನರೇಟ್‌ ಮಾಡಲು ಸಾಕಷ್ಟು ಸಮಯ ಹಿಡಿಯುತ್ತದೆ. ಕೆಲವು ಬದಲಾವಣೆಯೂ ಅಗತ್ಯ. ರಾಜ್ಯಗಳ ಮಧ್ಯೆ ಸರಕು ಸಾಗಣೆ ಆಗುವಾಗ ಇವೇ–ಬಿಲ್‌ ಕಡ್ಡಾಯ ಮಾಡಲಿ. ಆದರೆ ರಾಜ್ಯಗಳ ಒಳಗೆ ₹ 50,000 ಮೌಲ್ಯದ ಸರಕು ಸಾಗಿಸಲೂ ಇವೇ–ಬಿಲ್ ಕಡ್ಡಾಯ ಮಾಡುವುದು ಸರಿಯಲ್ಲ. ಅದನ್ನು ಕೈಬಿಡಬೇಕು ಎಂದು ವರ್ತಕರು ಬೇಡಿಕೆ ಸಲ್ಲಿಸಿದ್ದಾರೆ.

ಒಟಿಪಿ ಸಮಸ್ಯೆಗೆ ಪರಿಹಾರ

ಪ್ರತಿಯೊಂದು ಲೆಕ್ಕಪತ್ರ ವರದಿಯನ್ನು ಜಿಎಸ್‌ಟಿ ಜಾಲತಾಣದಲ್ಲಿ ಸಲ್ಲಿಸುವ ಮುಂಚೆ ದೃಢೀಕರಣಕ್ಕಾಗಿ ನೋಂದಾಯಿತ ಮೊಬೈಲ್‌ಗೆ ಒಂದು ಬಾರಿಯ ರಹಸ್ಯ ಸಂಖ್ಯೆ (ಒಟಿಪಿ) ಬರುತ್ತದೆ. ಇದನ್ನು ದಾಖಲಿಸಿದರೆ ಮಾತ್ರ ಲೆಕ್ಕಪತ್ರ ವರದಿ ಸಲ್ಲಿಕೆಯಾಗುತ್ತದೆ. ಬಹುತೇಕ ವರ್ತಕರು ತೆರಿಗೆ ಸಲಹೆಗಾರರು ಮತ್ತು ಲೆಕ್ಕಪರಿಶೋಧಕರು ನೆರವಿನಿಂದ ರಿಟರ್ನ್‌ ಸಲ್ಲಿಸುತ್ತಾರೆ. ಹಾಗಾಗಿ ಎರಡು ಇ–ಮೇಲ್ ಮತ್ತು ಮೊಬೈಲ್ ಸಂಖ್ಯೆಗೆ ರಿಟರ್ನ್‌ ಸಲ್ಲಿಕೆಗೆ ಸಂಬಂಧಿಸಿದ ಮಾಹಿತಿಗಳನ್ನು ನೀಡುವ ವ್ಯವಸ್ಥೆ ಕಲ್ಪಿಸಲು ಜಿಎಸ್‌ಟಿಎನ್‌ ನಿರ್ಧರಿಸಿದೆ.

ನೋಂದಣಿ ರದ್ದು

ಜಿಎಸ್‌ಟಿಗೆ ವಲಸೆ ಬಂದಿರುವ ವಹಿವಾಟುದಾರರಲ್ಲಿ ತಮ್ಮ ನೋಂದಣಿ ರದ್ದುಪಡಿಸಲು ಇಚ್ಛಿಸುವವರಿಗೆ ‘ಜಿಎಸ್‌ಟಿಎನ್‌’ ಜಾಲತಾಣದಲ್ಲಿ ಈಗ ಸೂಕ್ತ ಸೌಲಭ್ಯ ಕಲ್ಪಿಸಿಕೊಡಲಾಗಿದೆ. ವಾರ್ಷಿಕ ₹ 20 ಲಕ್ಷದವರೆಗೆ ವಹಿವಾಟು ನಡೆಸುವವರು, ನೋಂದಣಿ ರದ್ದು ಮಾಡಿಕೊಳ್ಳಬಹುದಾಗಿದೆ. ಅಂತರ್ಜಾಲ ತಾಣದಲ್ಲಿ ಲಾಗಿನ್‌ ಆದ ನಂತರ ಅಲ್ಲಿಯ ವ್ಯಕ್ತಿ ಪರಿಚಯ ವಿಭಾಗದಲ್ಲಿ ಬರುವ ‘REG 29’ ರಲ್ಲಿ ನೋಂದಣಿ ರದ್ದುಪಡಿಸಬಹುದು. ವಾರ್ಷಿಕ ₹ 20 ಲಕ್ಷ ವಹಿವಾಟು ನಡೆಸುವವರಿಗೆ ವಿನಾಯ್ತಿ ನೀಡಲಾಗಿದೆ.

ಆಫ್‌ಲೈನ್‌ ಸೌಲಭ್ಯ

ಕಂಪೋಸಿಷನ್‌ ಸ್ಕೀಮ್‌ (ರಾಜೀ ತೆರಿಗೆ ಪದ್ಧತಿ) ಆಯ್ಕೆ ಮಾಡಿಕೊಂಡವರು ಅಂತರ್ಜಾಲದ ಸಂಪರ್ಕ ಇಲ್ಲದೆ ‘ಜಿಎಸ್‌ಟಿಆರ್‌–4’ ಸಲ್ಲಿಸಬಹುದು. ಜಿಎಸ್‌ಟಿ ಜಾಲತಾಣದಲ್ಲಿ ಈ ಸೌಲಭ್ಯ ಕಲ್ಪಿಸಲಾಗಿದೆ. ಆಫ್‌ಲೈನ್‌ ಟೂಲ್ ಡೌನ್‌ಲೋಡ್‌ ಮಾಡಲು: www.gst.gov.in ನಲ್ಲಿ download >offline tool > GSTR-4 offline tool

₹20 ಲಕ್ಷದಿಂದ ₹1 ಕೋಟಿ ವರೆಗೆ ವಾರ್ಷಿಕ ವಹಿವಾಟು ಮಿತಿ ಹೊಂದಿರುವ ಸಣ್ಣ ಉದ್ಯಮಗಳು ಕಂಪೋಸಿಷನ್‌ ಸ್ಕೀಮ್‌ ಆಯ್ಕೆ ಮಾಡಿಕೊಳ್ಳಬಹುದು. ಇಂತಹ ಉದ್ಯಮಗಳು ಜಿಎಸ್‌ಟಿಆರ್–4 ಸಲ್ಲಿಸಬೇಕಾಗುತ್ತದೆ.

**

ದೇಶದಾದ್ಯಂತ ರಿಟರ್ನ್‌ ಸಲ್ಲಿಕೆ

56 ಲಕ್ಷ ಜುಲೈನಲ್ಲಿ

52 ಲಕ್ಷ ಆಗಸ್ಟ್‌

42 ಲಕ್ಷ: ಸೆಪ್ಟೆಂಬರ್‌ಗೆ

ರಾಜ್ಯದ ಮಾಹಿತಿ

4.4 ಲಕ್ಷ : ಜುಲೈ

3.70 ಲಕ್ಷ: ಆಗಸ್ಟ್‌

3.40ಲಕ್ಷ: ಸೆಪ್ಟೆಂಬರ್‌

**

ಜಿಎಸ್‌ಟಿ ಸಮರ್ಥವಾಗಿಲ್ಲ

‘ಸಿದ್ಧತೆ ಇಲ್ಲದೇ ವ್ಯವಸ್ಥೆ ಜಾರಿಗೊಳಿಸಲಾಗಿದೆ ಎನ್ನುವುದು ಈಗ ಅರಿವಾಗುತ್ತಿದೆ. ಜಿಎಸ್‌ಟಿಎನ್‌ ಜಾಲತಾಣ ಸಮರ್ಥವಾಗಿಲ್ಲ’ ಎಂದು ಎಫ್‌ಕೆಸಿಸಿಐನ ಜಿಎಸ್‌ಟಿ ಸಮಿತಿ ಅಧ್ಯಕ್ಷ ಮನೋಹರ್ ಬಿ.ಟಿ. ತಿಳಿಸಿದರು.

‘ಜಿಎಸ್‌ಟಿ ತೆರಿಗೆ ವ್ಯವಸ್ಥೆಯಲ್ಲಿಯೇ ಹೊಸತು. ಅದರಲ್ಲೂ ಸಂಪೂರ್ಣವಾಗಿ ತಂತ್ರಜ್ಞಾನ ಆಧಾರಿತವಾದಂತಹ ವ್ಯವಸ್ಥೆಯಾಗಿದೆ. ವರ್ತಕರಿಗೆ ಅದರ ಬಗ್ಗೆ ತಿಳಿವಳಿಕೆಯೇ ಇರಲಿಲ್ಲ. ಹಾಗಿರುವಾಗ ಎರಡು ತಿಂಗಳ ಒಳಗೆ ಎಲ್ಲವನ್ನೂ ಕಲಿತುಕೊಳ್ಳಲು ಸಾಧ್ಯವಿಲ್ಲ.

‘ಲೆಕ್ಕಪತ್ರ ಪರಿಶೋಧಕರನ್ನು ಇಟ್ಟುಕೊಂಡೇ ರಿಟರ್ನ್ ಫೈಲ್ ಮಾಡಬೇಕು. ಸಣ್ಣ ವರ್ತಕರಿಗೆ ಲೆಕ್ಕಪತ್ರ ಪರಿಶೋಧಕರಿಗೆ ಕೊಡಲು ಅವರ ಬಳಿಕ ಹಣ ಇರಬೇಕಲ್ಲ. ದಿನಕ್ಕೊಂದು ಹೊಸ ನಿಯಮ ಜಾರಿಗೆ ಬಂದರೆ ಎಲ್ಲವೂ ಗೋಜಲು ಗೋಜಲಾಗುತ್ತಿದೆ’ ಎಂದರು.

**

ದೇಶದ ಆರ್ಥಿಕತೆಯಲ್ಲಿ ಮಹತ್ವದ ಬದಲಾಣೆಗೆ ಜಿಎಸ್‌ಟಿ ನಾಂದಿಯಾಗಲಿದೆ. ಹೊಸ ವ್ಯವಸ್ಥೆ ಆಗಿರುವುದರಿಂದ ಹಲವು ಸವಾಲುಗಳನ್ನು ಎದುರಿಸಬೇಕಾಗಿದೆ. ಪತ್ರ, ಟ್ವಿಟರ್‌, ಇ–ಮೇಲ್‌, ಸಾಮಾಜಿಕ ಜಾಲತಾಣಗಳ ಮೂಲಕವೂ ವ್ಯವಸ್ಥೆಯಲ್ಲಿ ಇರುವ ಲೋಪಗಳ ಬಗ್ಗೆ ದೂರುಗಳು ಬರುತ್ತಿವೆ. ಎಲ್ಲವನ್ನೂ ಆದ್ಯತೆಯ ಮೇರೆಗೆ ಪರಿಹರಿಸಲು ಗಮನ ನೀಡಲಾಗುತ್ತಿದೆ.

–ಮಹೇಂದರ್ ಸಿಂಗ್‌, ಜಿಎಸ್‌ಟಿ ಸದಸ್ಯ

**

ತಂತ್ರಜ್ಞರ ಬೆಂಬಲ ಇರುವ ಸಹಾಯವಾಣಿ ಅಗತ್ಯವಿದೆ. ದಿನದ 24 ಗಂಟೆಯೂ ಅದು ಕಾರ್ಯನಿರ್ವಹಿಸಬೇಕು. ತೆರಿಗೆ ಪಾವತಿದಾರರಿಗೆ ಎಲ್ಲಾ ರೀತಿಯ ಸಲಹೆ, ಮಾರ್ಗದರ್ಶನಗಳನ್ನೂ ನೀಡುವಂತಿರಬೇಕು.

–ಬಿ.ಟಿ. ಮನೋಹರ್, ಎಫ್‌ಕೆಸಿಸಿಐನ ಜಿಎಸ್‌ಟಿ ಸಮಿತಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT