ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ವಿ.ವಿ. ಸ್ವಾಯತ್ತೆಗೆ ಆತಂಕ

Last Updated 7 ನವೆಂಬರ್ 2017, 19:30 IST
ಅಕ್ಷರ ಗಾತ್ರ

* ಡಾ. ಕರೀಗೌಡ ಬೀಚನಹಳ್ಳಿ

ಕನ್ನಡ ವಿಶ್ವವಿದ್ಯಾಲಯದ ಬೆಳ್ಳಿಹಬ್ಬದ ಸಂದರ್ಭ ಇದು. ‘ಕನ್ನಡ ವಿಶ್ವವಿದ್ಯಾಲಯ ಕಾಯ್ದೆ– 1991’ರ ಅನ್ವಯ ಈ ವಿ.ವಿ.ಗೆ ದಕ್ಕಿರುವ ಸ್ವಾಯತ್ತತೆ ಹಾಗೂ ಅನನ್ಯತೆಗೆ ರಾಜ್ಯ ಸರ್ಕಾರದಿಂದ ಒದಗಿಬರುತ್ತಿರುವ ಕಂಟಕದ ಬಗ್ಗೆ ಗಂಭೀರ ಚರ್ಚೆಯಾಗಬೇಕಾದುದು ಅಗತ್ಯ.

ಕರ್ನಾಟಕ ಸರ್ಕಾರ ವಿಶೇಷ ಕಾಯ್ದೆಯೊಂದನ್ನು ರೂಪಿಸಿ ಕನ್ನಡ ವಿಶ್ವವಿದ್ಯಾಲಯವನ್ನು ಸ್ಥಾಪಿಸಿದೆ. ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ, ನೃತ್ಯ, ನಾಟಕ, ಶಿಲ್ಪ, ಚಿತ್ರ, ಸಂಗೀತ, ಚರಿತ್ರೆ, ಪುರಾತತ್ವ, ಭೂಗೋಳ, ವೈದ್ಯ, ವಿಜ್ಞಾನ, ತಂತ್ರಜ್ಞಾನ, ತತ್ವಶಾಸ್ತ್ರ ಮುಂತಾದ ಹಲವಾರು ಕ್ಷೇತ್ರಗಳಿಗೆ ಸಂಬಂಧಿಸಿದಂತೆ ‘ಕನ್ನಡದಲ್ಲಿ ಜ್ಞಾನ’ವನ್ನು ಅಭಿವೃದ್ಧಿಪಡಿಸಲು, ಸಂಶೋಧನೆ ಮುಂದುವರಿಸಲು ಹಾಗೂ ಸಾಂಸ್ಕೃತಿಕ ಅವಶ್ಯಕತೆಗಳನ್ನು ಪೂರೈಸಲು ಈ ವಿಶ್ವವಿದ್ಯಾಲಯವನ್ನು ಕಾನೂನುಬದ್ಧವಾಗಿ ಸ್ಥಾಪಿಸಲಾಗಿದೆ. ಮುಖ್ಯವಾಗಿ ಈ ವಿಶ್ವವಿದ್ಯಾಲಯವು ‘ಏಕಘಟಕ’ ಮತ್ತು ‘ನಿವಾಸಿ’ ಸ್ವರೂಪದ್ದಾಗಿದೆ. ಈ ಕಾಯ್ದೆಯಲ್ಲಿ ಹೇಳಿರುವಂತೆ, ಕನ್ನಡ ವಿಶ್ವವಿದ್ಯಾಲಯ ತನ್ನ ಸಂಶೋಧನೆಯಲ್ಲಿ ಮುಖ್ಯವಾಗಿ 18 ಉದ್ದೇಶಗಳನ್ನು ಒಳಗೊಂಡಿದೆ.

ಕನ್ನಡ ವಿಶ್ವವಿದ್ಯಾಲಯ ತನ್ನ ಶೈಕ್ಷಣಿಕ ಹಾಗೂ ಸಂಶೋಧನೆಯ ಸ್ವರೂಪದಲ್ಲಿ ರಾಜ್ಯದ ಇತರ ಸಾಮಾನ್ಯ ವಿಶ್ವವಿದ್ಯಾಲಯಗಳಿಗಿಂತ ಸಂಪೂರ್ಣವಾಗಿ ಭಿನ್ನವಾದುದು ಮತ್ತು ಅನನ್ಯವಾದುದು. ಇದು ಆಳವಾದ ಸಂಶೋಧನೆ ಮತ್ತು ಉನ್ನತ ಗ್ರಂಥಗಳ ಪ್ರಕಟಣೆಗಳ ನಿರ್ದಿಷ್ಟ ಉದ್ದೇಶದಿಂದ ಸ್ಥಾಪಿತವಾಗಿರುವ ವಿಶ್ವವಿದ್ಯಾಲಯ. ಬೋಧನೆ ಏನಿದ್ದರೂ ಇಲ್ಲಿ ಗೌಣವಾಗಿದ್ದು, ಕಲಿಕೆಯೇ ಪ್ರಧಾನ. ರಾಷ್ಟ್ರದಲ್ಲಿರುವ ಐಐಟಿ, ಐಐಎಂಗಳ ಮಾದರಿಯಲ್ಲಿ ‘ಕನ್ನಡದ ಅವಶ್ಯಕತೆ’ಗಳನ್ನು ಪೂರೈಸುವ ಸಲುವಾಗಿ ಕರ್ನಾಟಕ ರಾಜ್ಯದಲ್ಲಿ ಸ್ಥಾಪಿತವಾಗಿರುವ ಏಕೈಕ ವಿಶ್ವವಿದ್ಯಾಲಯವಿದು.

ಹೀಗೆ ಕನ್ನಡ ವಿಶ್ವವಿದ್ಯಾಲಯಕ್ಕೆ ಇರುವ ಅನನ್ಯತೆ ಮತ್ತು ಅಸ್ಮಿತೆ ರಾಜ್ಯದಲ್ಲಿರುವ ಇತರ ಯಾವ ವಿಶ್ವವಿದ್ಯಾಲಯಕ್ಕೂ ಇಲ್ಲ. ಹಾಗಾಗಿ ರಾಜ್ಯದ ಅಂದಿನ ಸರ್ಕಾರ, ಶಿಕ್ಷಣ ತಜ್ಞರು, ವಿದ್ವಾಂಸರು ಹಾಗೂ ಸಾಹಿತಿಗಳು ಸೇರಿ ಇದಕ್ಕೆ ಪ್ರತ್ಯೇಕವಾದ ಮತ್ತು ಅನನ್ಯವಾದ ಕಾಯ್ದೆ ರೂಪಿಸಿದ್ದಾರೆ. ಇದರ ಶೈಕ್ಷಣಿಕ ಹಾಗೂ ಸಂಶೋಧನಾತ್ಮಕ ವ್ಯಾಪ್ತಿ ಇಡೀ ಕರ್ನಾಟಕದ ಭೌಗೋಳಿಕ ವ್ಯಾಪ್ತಿಯನ್ನು ಹೊಂದಿದೆ.

ಆದರೆ ರಾಜ್ಯ ಸರ್ಕಾರವು ಕನ್ನಡ ವಿಶ್ವವಿದ್ಯಾಲಯ ಕಾಯ್ದೆ– 1991ನ್ನು ರಾಜ್ಯದ ಇತರ ಸಾಮಾನ್ಯ ‘ವಿಶ್ವವಿದ್ಯಾಲಯಗಳ ಕಾಯ್ದೆ– 2000’ ಜೊತೆ ವಿಲೀನಗೊಳಿಸಲು ಮುಂದಾಗಿ ವಿಧಾನಸಭೆಯ ಅನುಮೋದನೆ ಪಡೆದಿದ್ದು, ವಿಧಾನ ಪರಿಷತ್ ಅನುಮೋದನೆಗಾಗಿ ಕಾದು ಕುಳಿತಿದೆ. ಆದರೆ ವಿಧಾನ ಪರಿಷತ್ತು ವಿವಿಧ ಕ್ಷೇತ್ರಗಳನ್ನು ಪ್ರತಿನಿಧಿಸುತ್ತಿರುವ ತಜ್ಞರ ಪರಿಷತ್ತಾಗಿದೆ. ಅದು, ಇದಕ್ಕೆ ಅನುಮೋದನೆ ನೀಡಲಾರದು ಎಂಬ ಭರವಸೆ ಇದೆ. ಕರ್ನಾಟಕ ಏಕೀಕರಣ ಹೋರಾಟದ ಸಂದರ್ಭದಲ್ಲಿ ಸಾಹಿತಿಗಳಾದ ಬಿಎಂಶ್ರೀ, ಕುವೆಂಪು, ಬೇಂದ್ರೆ, ಪುತಿನ, ಮಾಸ್ತಿ, ಕಾರಂತ ಮುಂತಾದವರು ‘ಕನ್ನಡಕ್ಕಾಗಿಯೇ ಒಂದು ಪ್ರತ್ಯೇಕ ವಿಶ್ವವಿದ್ಯಾಲಯ ಬೇಕು’ ಎಂದು ಪ್ರತಿಪಾದಿಸುತ್ತಾ ಬಂದಿದ್ದರು. ಇಪ್ಪತ್ತೈದು ವರ್ಷಗಳ ಹಿಂದೆ ಅದು ಸಾಕಾರವಾಯಿತು. ಈಗ ಅದರ ಅಸ್ತಿತ್ವಕ್ಕೇ ಕಂಟಕ ತರಲು ಹೊರಟಿರುವ ರಾಜ್ಯ ಸರ್ಕಾರದ ನಿಲುವನ್ನು ಕನ್ನಡಿಗರೆಲ್ಲರೂ ವಿರೋಧಿಸುತ್ತಿರುವುದರಲ್ಲಿ ಅರ್ಥವಿದೆ.

ಕನ್ನಡ ವಿಶ್ವವಿದ್ಯಾಲಯ ಈಗ ಬೆಳ್ಳಿಹಬ್ಬ ಆಚರಿಸುತ್ತಿದ್ದು, ಸೆ.12ರಂದು ವಿಶ್ವವಿದ್ಯಾಲಯದ ವಿದ್ಯಾರಣ್ಯ ಆವರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಳ್ಳಿಹಬ್ಬದ ಕಾರ್ಯಕ್ರಮಗಳಿಗೆ ಚಾಲನೆ ನೀಡಿದ್ದಾರೆ. ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ, ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ ಅವರೂ ಕಾರ್ಯಕ್ರಮದಲ್ಲಿದ್ದರು. ಬೆಳ್ಳಿ ಹಬ್ಬದ ಭಾಗವಾಗಿ ನಡೆದ ಸಭೆ, ಸಮಾರಂಭ ಹಾಗೂ ವಿಚಾರಸಂಕಿರಣಗಳಿಗೆ ಬಂದಿದ್ದ ಸಂಶೋಧಕರು, ಅಧ್ಯಾಪಕರು, ವಿದ್ವಾಂಸರು, ಶಿಕ್ಷಣ ತಜ್ಞರು ಮತ್ತು ಹಿರಿಯ- ಕಿರಿಯ ಸಾಹಿತಿಗಳು, ಕಲಾವಿದರು ಕನ್ನಡ ವಿಶ್ವವಿದ್ಯಾಲಯದ ಕಾಯ್ದೆ–1991ನ್ನು ರಾಜ್ಯದ ಇತರ ವಿಶ್ವವಿದ್ಯಾಲಯಗಳ ಕಾಯ್ದೆ– 2000ದ ಜೊತೆ ವಿಲೀನಗೊಳಿಸುವ ಪ್ರಕ್ರಿಯೆಗೆ ಸರ್ಕಾರ ತೊಡಗಿರುವ ವಿಷಯವನ್ನು ಕೇಳಿ ಆಶ್ಚರ್ಯಚಕಿತರಾಗಿ, ಈ ಪ್ರಕ್ರಿಯೆಯನ್ನು ವಿರೋಧಿಸಿರುತ್ತಾರೆ.

ಆದ್ದರಿಂದ ರಾಜ್ಯ ಸರ್ಕಾರವು ಈ ‘ವಿಲೀನ ಪ್ರಕ್ರಿಯೆ’ಯನ್ನು ಕೈಬಿಡಬೇಕು. ಆದರೆ ಈ ಕಾಯ್ದೆಯಲ್ಲಿ ಏನಾದರೂ ನ್ಯೂನತೆಗಳಿದ್ದರೆ, ಅಂದರೆ ಅದರ ಭೌತಿಕ ಸ್ವರೂಪ, ಶೈಕ್ಷಣಿಕ ಆಡಳಿತ, ಹಣಕಾಸು ವಿಷಯ, ಸಂಶೋಧನೆಯ ವಿಧಾನ, ವಿಸ್ತರಣೆ ಕಾರ್ಯಗಳು, ಕಲಿಕೆಯ ಕೌಶಲಗಳು, ಬೋಧನೆಯಲ್ಲಿ ಬದಲಾವಣೆಗಳು- ಇತ್ಯಾದಿಗಳ ಬಗ್ಗೆ ಸರ್ಕಾರ ಹಾಗೂ ವಿವಿಧ ಕ್ಷೇತ್ರಗಳ ತಜ್ಞರು ಕುಳಿತು ಚಿಂತಿಸಿ, ಚರ್ಚಿಸಿ ಬದಲಾವಣೆಗಳನ್ನು ತರಲು ಅವಕಾಶವಿದ್ದೇ ಇದೆ.

ಕನ್ನಡ ವಿಶ್ವವಿದ್ಯಾಲಯ, ಮೊದಲ ಏಳು ವರ್ಷಗಳ ಕಾಲ ಕರ್ನಾಟಕ ಸರ್ಕಾರದ ಅನುದಾನದ ಅಡಿಯಲ್ಲಿ ಕೆಲಸ ಮಾಡಿತ್ತು. ಆನಂತರ ಇದರ ವಸ್ತು ಸಂಪನ್ಮೂಲ, ಶೈಕ್ಷಣಿಕ ಪ್ರಗತಿ, ಪುಸ್ತಕ ಪ್ರಕಟಣೆ ಹಾಗೂ ಬೆಳವಣಿಗೆಯನ್ನು ಪರಿಶೀಲಿಸಿ ವಿಶ್ವವಿದ್ಯಾಲಯ ಧನಸಹಾಯ ಆಯೋಗವು ಇದಕ್ಕೆ ರಾಷ್ಟ್ರೀಯ ಮಾನ್ಯತೆಯನ್ನು ನೀಡಿ ಧನಸಹಾಯ ಮಾಡುತ್ತಾ ಬಂದಿದೆ. ಕನ್ನಡ ರಾಜ್ಯ, ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿಯ ಅಭಿಮಾನದ ಪ್ರತೀಕವಾಗಿ ಸ್ಥಾಪಿತವಾದ ಇದಕ್ಕೆ ಮೊದಲಿನಿಂದಲೂ ರಾಜ್ಯ ಸರ್ಕಾರ ಸಹಕಾರ ನೀಡುತ್ತಾ ಬಂದಿದೆ. ಹಿಂದೆ ಈ ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ವ್ಯಕ್ತಿಗಳೇ ಕುಲಾಧಿಪತಿಗಳಾಗಿದ್ದರು. ಎಸ್. ಬಂಗಾರಪ್ಪ, ವೀರಪ್ಪ ಮೊಯಿಲಿ, ಎಚ್.ಡಿ. ದೇವೇಗೌಡ, ಜೆ.ಎಚ್. ಪಟೇಲ್‌, ಎಸ್.ಎಂ. ಕೃಷ್ಣ ಅವರು ಈ ವಿಶ್ವವಿದ್ಯಾಲಯದ ಬೆಳವಣಿಗೆಗೆ ತಮ್ಮದೇ ಆದ ರೀತಿಯಲ್ಲಿ ಕಾಣಿಕೆ ನೀಡಿದ್ದಾರೆ.

ವಿಶ್ವವಿದ್ಯಾಲಯವು ಯುಜಿಸಿ ವ್ಯಾಪ್ತಿಗೆ ಬಂದ ನಂತರ ಕುಲಾಧಿಪತಿ ಸ್ಥಾನ ರಾಜ್ಯಪಾಲರಿಗೆ ವರ್ಗಾವಣೆಯಾಯಿತು. ಆದರೂ ಸರ್ಕಾರ, ಕನ್ನಡ ವಿಶ್ವವಿದ್ಯಾಲಯವನ್ನು ರಾಜ್ಯದ ಇತರ ವಿಶ್ವವಿದ್ಯಾಲಯಗಳ ಥರ ನೋಡಬಾರದು. ಕನ್ನಡ ವಿಶ್ವವಿದ್ಯಾಲಯದ ಕಾಯ್ದೆ– 1991ನ್ನು ಹಾಗೆಯೇ ಕಾಪಾಡಬೇಕು. ಆ ಮೂಲಕ ಕನ್ನಡ ಭಾಷೆಯ ಅನನ್ಯತೆ, ಕನ್ನಡ ಜನರ, ಸಂಸ್ಕೃತಿಯ ಅಸ್ಮಿತೆಯನ್ನು ಉಳಿಸಿಕೊಳ್ಳಬೇಕು, ರಕ್ಷಿಸಿಕೊಳ್ಳಬೇಕು. ಇದಕ್ಕೆ ಸರ್ಕಾರದ ಹಾಗೂ ಕನ್ನಡಿಗರ ಮನಸ್ಸುಗಳು ತೀವ್ರವಾಗಿ ಸ್ಪಂದಿಸಬೇಕಾದದ್ದು ಅತ್ಯಗತ್ಯ.

ಮುಂದಿನ ದಿನಗಳಲ್ಲಿ ಕನ್ನಡ ವಿಶ್ವವಿದ್ಯಾಲಯದ ಬೆಳವಣಿಗೆಯನ್ನು ಕಾಯ್ದುಕೊಳ್ಳುವುದೆಂದರೆ ಕನ್ನಡ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ ಹಾಗೂ ‘ಕನ್ನಡ ವಿಶ್ವವಿದ್ಯಾಲಯದ ಕಾಯ್ದೆ– 1991’ ಇವುಗಳ ಸಂರಕ್ಷಣೆ ಮತ್ತು ಸಂವರ್ಧನೆಯೆಂದೇ ಸರ್ಕಾರ ಹಾಗೂ ಕನ್ನಡಿಗರು ಭಾವಿಸಬೇಕಾಗಿದೆ. ಕನ್ನಡ ರಾಜ್ಯ, ಜನ, ಭಾಷೆ ಎಂಬ ಸಮಸ್ತವನ್ನೂ ಹಾಗೂ ಕನ್ನಡ ತತ್ತ್ವವನ್ನು ಅರ್ಥಪೂರ್ಣವಾಗಿ ಗ್ರಹಿಸಿದಂತಹ ‘ಕವಿರಾಜಮಾರ್ಗ’ಕಾರ ಹೇಳುವ ಹಾಗೆ, ‘ಭಾವಿಸಿದ ಜನಪದಂ, ವಿಷಯ ವಸುಧಾವಲಯ ವಿಲೀನ ವಿಶದ ವಿಷಯ ವಿಶೇಷಂ’. ಈ ವಸುಧಾವಲಯದ ಅನನ್ಯತೆಯನ್ನು ರಕ್ಷಿಸಿಕೊಳ್ಳಬೇಕಾಗಿದೆ. ಹಾಗಾಗಿ ಈ ವಿಶ್ವವಿದ್ಯಾಲಯದ ಸ್ವಾಯತ್ತೆಯನ್ನು, ಪ್ರತ್ಯೇಕತೆಯನ್ನು ಈಗ ಇರುವ ಹಾಗೆಯೇ ಉಳಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT