7

ದೇಹದಂಡನೆಗೆ ಸೊಮಾಟಿಕ್‌ ಮಾರ್ಗ

Published:
Updated:
ದೇಹದಂಡನೆಗೆ ಸೊಮಾಟಿಕ್‌ ಮಾರ್ಗ

ಕಳರಿಪಯಟ್ಟು, ಕುಸ್ತಿ, ಭರತನಾಟ್ಯದಂಥ ಪುರಾತನ ಕಲೆಗಳಿಂದ ಮನಸ್ಸು ಮತ್ತು ದೇಹಗಳ ನಡುವಿನ ಸಂಬಂಧ ಗಟ್ಟಿಯಾಗುತ್ತದೆ. ಇವುಗಳು ದೈಹಿಕ ಶ್ರಮಕ್ಕೆ ಒತ್ತು ನೀಡುವುದರೊಂದಿಗೆ ನಮ್ಮ ಮಾನಸಿಕ ಆರೋಗ್ಯಕ್ಕೂ ಸಹಕಾರಿಯಾಗುತ್ತದೆ. ಇದೇ ತತ್ವವನ್ನು ಆಧರಿಸಿ, ಅಲೆಕ್ಸಾಂಡರ್‌ ತಂತ್ರ, ಥಾಯಿ ಚಿ ಹಾಗೂ ಫೆಲ್ಡೆಕ್ರಂಯಿಸ್‌ ವಿಧಾನವನ್ನು ಬಳಸಿಕೊಂಡು ಶಾರೀರಿಕ ಹಾಗೂ ಮಾನಸಿಕ ಒತ್ತಡವನ್ನು ದೂರ ಮಾಡುವ ಹೊಸ ತಂತ್ರಗಾರಿಕೆ ‘ಸೊಮಾಟಿಕ್‌ ಅಭ್ಯಾಸ’ವನ್ನು ಲಾಲ್‌ಬಾಗ್‌ನ ಆರ್ಟ್‌ ಸೆಂಟರ್‌ನ ‘ಶೂನ್ಯ’ದಲ್ಲಿ ಹೇಳಿಕೊಡಲಾಗುತ್ತದೆ.

‘ಸೋಮ ಅಂದ್ರೆ ಶರೀರ. ಇದು ಗ್ರೀಕ್‌ ಭಾಷೆಯ ಪದ. ಸೊಮಾಟಿಕ್‌ ಅಂದ್ರೆ ಶರೀರದಿಂದ ಆಗುವ, ಶರೀರದಿಂದ ಮಾಡುವ ಎಂಬ ಅರ್ಥ ಬರುತ್ತದೆ. ಶರೀರ ಹಾಗೂ ಮೆದುಳಿಗೆ ನೇರ ಸಂಬಂಧ ಇದೆ.  ಸೊಮಾಟಿಕ್‌ ಅಭ್ಯಾಸ ಮಾಡುವುದರಿಂದ ಶರೀರದಿಂದ ಮೆದುಳಿಗೆ, ನಮ್ಮ ಆಲೋಚನೆಗೆ ಸಹಾಯಕವಾಗುತ್ತದೆ. ನಮ್ಮ ಶರೀರ ಯಾವಾಗಲೂ ಒತ್ತಡವಿರುತ್ತದೆ. ಶರೀರದೊಳಗಿನ ಒತ್ತಡ, ಆತಂಕಗಳು ಬಗ್ಗೆ ನಮ್ಮ ಅರಿವಿಗೆ ಬಂದಿರುವುದಿಲ್ಲ. ಒತ್ತಡಗಳು ಹಲವು ರೀತಿಯಿಂದ ಉಂಟಾಗಬಹುದು. ಕೆಲಸ, ಮನಸ್ಸಿನ ಆತಂಕ ಇವುಗಳೂ ಶರೀರದ ಮೇಲೆ ಒತ್ತಡ ಹಾಕುತ್ತವೆ. ಸೊಮಾಟಿಕ್‌ ಇದಕ್ಕೆ ಪರಿಹಾರ ಒದಗಿಸಬಲ್ಲದು ಎನ್ನುತ್ತಾರೆ ಶೂನ್ಯದ ಪ್ರಧಾನ ವ್ಯವಸ್ಥಾಪಕರಾದ ದೀಪಾಂಕರ್‌.

ಸೊಮಾಟಿಕ್‌ ಹೊಸತೇನಲ್ಲ. ಪುರಾತನ ಕಾಲದಿಂದಲೂ ಒತ್ತಡ ನಿವಾರಣೆಗೆ ಈ ವಿಧಾನ ಬಳಕೆಯಲ್ಲಿದೆ. ಇದು ಒಂದು ಲೆಕ್ಕದಲ್ಲಿ ಯೋಗ, ಕಳರಿಪಯಟ್ಟು, ಕುಸ್ತಿ, ಅಲೆಕ್ಸಾಂಡರ್‌ ಟೆಕ್ನಿಕ್‌, ಥಾಯಿ ಚಿ ಕಲೆಗಳ ಮಿಶ್ರಣದಂತಿದೆ. ಜೀವವಿಜ್ಞಾನ, ಮನೋವಿಜ್ಞಾನ, ಭಕ್ತಿ ಮತ್ತು ಪ್ರಕೃತಿಯಿಂದ ಎರವಲು ಪಡೆದು ಸೊಮಾಟಿಕ್‌ ರೂಪುಗೊಂಡಿದೆ. ಹೊಸ ತಂತ್ರಜ್ಞಾನಗಳು ಇದರಲ್ಲೂ ಬಂದಿದೆ. ಈಗಿನ ಜೀವನಶೈಲಿಗೆ ತಕ್ಕಂತೆ ಸೊಮಾಟಿಕ್‌ ಅಭ್ಯಾಸದಲ್ಲೂ ಸ್ವಲ್ಪ ಬದಲಾವಣೆ ಮಾಡಿಕೊಳ್ಳಲಾಗಿದೆ. ಇದರಲ್ಲಿ ಶರೀರದ ಒತ್ತಡ ದೂರ ಮಾಡುವ ಬಗ್ಗೆ ಹೇಳುವ ಅಲೆಕ್ಸಾಂಡರ್‌ ಟೆಕ್ನಿಕ್‌, ಫೆಲ್ಡೆಕ್ರಂಯಿಸ್‌ ವಿಧಾನವನ್ನು ಹೆಚ್ಚು ಬಳಸಲಾಗುತ್ತದೆ. ಈ ಅಭ್ಯಾಸವನ್ನು ನೋಡುತ್ತಿದ್ದರೆ ನೃತ್ಯವೇನೋ ಎಂಬಂತೆ ಅನುಮಾನ ಕಾಡದಿರದು.

‘ಪ್ರತಿದಿನವೂ ಸೊಮಾಟಿಕ್‌ ಅಭ್ಯಾಸದಲ್ಲಿ ತೊಡಗಿಕೊಳ್ಳುವವರು ಸೂಕ್ಷ್ಮಮತಿಗಳು ಹಾಗೂ ಆರೋಗ್ಯವಂತರು ಆಗಿರುತ್ತಾರೆ. ಇದು ದೈಹಿಕ ಶ್ರಮಕ್ಕೆ ಒತ್ತು ನೀಡುವುದರಿಂದ ಶರೀರ ಚೈತನ್ಯದಿಂದ ಕೂಡಿರುತ್ತದೆ. ಆದರೆ ಸೊಮಾಟಿಕ್‌ ಅಭ್ಯಾಸ ಸುಲಭವಾದುದ್ದೇನೂ ಅಲ್ಲ, ಶರೀರವನ್ನು ಹೆಚ್ಚು ದಂಡಿಸಬೇಕಾಗುತ್ತದೆ. ಆದರೆ ಬೆಂಗಳೂರಿನಂತಹ ನಗರದಲ್ಲಿ ಒತ್ತಡದಲ್ಲಿ ದಿನ ಕಳೆಯುವವರಿಗೆ ಇದು ಉತ್ತಮ ಆಯ್ಕೆ' ಎಂಬುದು ದೀಪಾಂಕರ್‌ ಸಲಹೆ.

‘ಅಭಿವೃದ್ಧಿ ಹೊಂದಿದ ನಗರಗಳಲ್ಲಿ ದಿನಾ ಒತ್ತಡದ ಬದುಕು. 9–11 ತಾಸು ಕಂಪ್ಯೂಟರ್‌ ಮುಂದೆಯೇ ಕೂತಿರುತ್ತಾರೆ. ಅವರಿಗೆ ಊಟಕ್ಕೂ ಸಮಯವಿಲ್ಲ. ಇಂತಹವರು ಸೊಮಾಟಿಕ್‌ ಅಭ್ಯಾಸಕ್ಕಾಗಿ 2 ಗಂಟೆ ಮೀಸಲಿಟ್ಟರೆ ಮನಸ್ಸು, ಶರೀರ ಪ್ರಫುಲ್ಲತೆಯಿಂದ ಇರುತ್ತದೆ. ಅಭ್ಯಾಸ ಮಾಡುತ್ತಾ ಹೋದಂತೆ ಶರೀರ ಒತ್ತಡವನ್ನು ನಿರ್ವಹಿಸುವ ಬಗ್ಗೆ ಅರಿತುಕೊಳ್ಳುತ್ತದೆ. ನಮ್ಮೊಳಗೆ ನಾವು ಸಮಾಧಾನವನ್ನು ತಂದುಕೊಳ್ಳಬಹುದು’ ಎನ್ನುತ್ತಾರೆ ಅವರು.

‘ಆಟೋಟಗಳಲ್ಲಿ ಪಾಲ್ಗೊಳ್ಳುವವರಿಗೆ, ನೃತ್ಯಗಾರರು, ಗಾಯಕರು, ಸಂಗೀತ ಕಲಾವಿದರು ಹಾಗೂ ಅಪಘಾತಗಳಲ್ಲಿ ಗಾಯಗೊಂಡವರಿಗೆ ಇದು ಸಹಕಾರಿ. ಮಕ್ಕಳು ಈ ಅಭ್ಯಾಸ ಮಾಡುವಾಗ ಸೂಕ್ತ ಸಲಹೆ ಅಗತ್ಯ. ಇದು ಯೋಗಕ್ಕಿಂತಲೂ ವೇಗವಾಗಿ ಶರೀರದ ಮೇಲೆ ಪರಿಣಾಮ ಬಿರುತ್ತದೆ. ಮಕ್ಕಳು ದಿನನಿತ್ಯ ಸೊಮಾಟಿಕ್‌ ಅಭ್ಯಾಸ ಆಳವಡಿಸಿಕೊಂಡಲ್ಲಿ ದೇಹದ ಚೈತನ್ಯ ಹಾಗೆಯೇ ಇರುತ್ತದೆ. ಬೆನ್ನು ನೋವು, ಮಂಡಿನೋವಿನಂಥ ಸಮಸ್ಯೆ ಇರುವ ವಯಸ್ಕರೂ ಸೊಮಾಟಿಕ್‌ ಅಭ್ಯಾಸ ಮಾಡುವುದರಿಂದ ಪರಿಹಾರ ಕಾಣಬಹುದು' ಎನ್ನುತ್ತಾರೆ ಅವರು.

ಸೊಮಾಟಿಕ್‌ ಒಂದು ಬಾರಿ ಕಲಿತುಕೊಂಡಲ್ಲಿ ನಂತರ ಮನೆಯಲ್ಲೇ ಅಭ್ಯಾಸ ಮುಂದುವರಿಸಬಹುದು. ಲಾಲ್‌ಬಾಗ್‌ ರಸ್ತೆಯ 'ಶೂನ್ಯ'ದಲ್ಲಿ ವಾರಾಂತ್ಯಗಳಲ್ಲಿ ಸೊಮಾಟಿಕ್‌ ಕೋರ್ಸ್‌ ನಡೆಸುತ್ತಾರೆ.

ಮಾಹಿತಿಗೆ: 9535602420 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry