ಏಷ್ಯನ್ ಬಾಕ್ಸಿಂಗ್: ಐದನೇ ಪ್ರಶಸ್ತಿ ಮೇಲೆ ಮೇರಿ ಕಣ್ಣು

ಹೋ ಚಿ ಮಿನ್ ಸಿಟಿ, ವಿಯೆಟ್ನಾಂ (ಪಿಟಿಐ): ಐದು ಬಾರಿ ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿರುವ ಭಾರತದ ಬಾಕ್ಸರ್ ಎಂ.ಸಿ.ಮೇರಿ ಕೋಮ್ ಏಷ್ಯನ್ ಬಾಕ್ಸಿಂಗ್‌ನಲ್ಲೂ ಐದನೇ ಪ್ರಶಸ್ತಿ ಗೆಲ್ಲುವ ಅವಕಾಶ ಒದಗಿ ಬಂದಿದೆ. ಮಂಗಳವಾರ ನಡೆದ ಸೆಮಿಫೈನಲ್‌ನಲ್ಲಿ ಅವರು ಜಪಾನ್‌ನ ತ್ಸುಬಾಸ ಕೊಮುರ ಅವರನ್ನು 5–0ಯಿಂದ ಮಣಿಸಿ ಅಂತಿಮ ಹಣಾಹಣಿಗೆ ಸಜ್ಜಾದರು.
ಆರನೇ ಬಾರಿ ಫೈನಲ್ ಪ್ರವೇಶಿಸಿರುವ ಮೇರಿ ಚಿನ್ನ ಗೆದ್ದರೆ ಏಷ್ಯನ್ ಚಾಂಪಿಯನ್‌ಷಿಪ್‌ನ 48 ಕೆಜಿ ವಿಭಾಗದಲ್ಲಿ ಮೊದಲ ಪ್ರಶಸ್ತಿ ಗಳಿಸಿದ ಸಾಧನೆ ಮಾಡಿದಂತಾಗಲಿದೆ. ಈ ಹಿಂದೆ ಅವರು 51 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದರು.
ಸೆಮಿಫೈನಲ್ ಹಣಾಹಣಿಯಲ್ಲಿ ಮೇರಿ ಕೋಮ್ ಎದುರಾಳಿಯ ಮೇಲೆ ಪೂರ್ಣ ಆಧಿಪತ್ಯ ಸ್ಥಾಪಿಸಿದರು. ರಕ್ಷಣಾತ್ಮಕ ಆಟಕ್ಕೆ ಒತ್ತು ನೀಡಿದ ಮೇರಿ ಅವಕಾಶ ಲಭಿಸಿದಾಗಲೆಲ್ಲ ಪಾಯಿಂಟ್‌ಗಳನ್ನು ಕಲೆ ಹಾಕಿದರು. ಇದರಿಂದ ಕೊಮುರಾ ಕಂಗೆಟ್ಟು ಸುಲಭವಾಗಿ ಸೋಲೊಪ್ಪಿಕೊಂಡರು. ಬುಧವಾರ ನಡೆಯಲಿರುವ ಫೈನಲ್‌ನಲ್ಲಿ ಮೇರಿ ಕೋಮ್ ಉತ್ತರ ಕೊರಿಯಾದ ಕಿಮ್ ಹ್ಯಾಂಗ್ ಮಿ ಅವರನ್ನು ಎದುರಿಸುವರು.
ಸೋನಿಯಾ ಲಾಥರ್ ಫೈನಲ್‌ಗೆ
57 ಕೆಜಿ ವಿಭಾಗದಲ್ಲಿ ಸೋನಿಯಾ ಲಾಥರ್ ಕೂಡ ಪ್ರಶಸ್ತಿ ಹಂತಕ್ಕೆ ಪ್ರವೇಶ ಪಡೆದರು. ಆದರೆ ಮಾಜಿ ವಿಶ್ವ ಚಾಂಪಿಯನ್ ಸರಿತಾ ದೇವಿ (64 ಕೆಜಿ), ಪ್ರಿಯಾಂಕಾ ಚೌಧರಿ (60 ಕೆಜಿ), ಲವ್ಲಿನಾ ಬೊರ್ಗೊವಿನ್ (69 ಕೆಜಿ), ಸೀಮಾ ಪೂನಿಯಾ (+81 ಕೆಜಿ) ಮತ್ತು ಶಿಕ್ಷಾ (54 ಕೆಜಿ) ಸೆಮಿಫೈನಲ್‌ನಲ್ಲಿ ಸೋತು ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡರು.
ಸೋನಿಯಾ ಸೆಮಿಫೈನಲ್ ಬೌಟ್‌ನಲ್ಲಿ ಎದುರಾಳಿ ಉಜ್ಬೆಕಿಸ್ತಾನದ ಯಡ್ಗೊರೊಯ್ ಮಿರ್ಜೆವಾ ಅವರನ್ನು ಸುಲಭವಾಗಿ ಮಣಿಸಿದರು. ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಈ ಹಿಂದೆ ಬೆಳ್ಳಿ ಗೆದ್ದಿರುವ ಸೋನಿಯಾ ನಾಳೆ ನಡೆಯಲಿರುವ ಫೈನಲ್‌ನಲ್ಲಿ ಚೀನಾದ ಯಿನ್ ಜುನುಹಾ ಅವರನ್ನು ಎದುರಿಸುವರು.
ಏಷ್ಯನ್ ಗೇಮ್ಸ್‌ನಲ್ಲಿ ಕಂಚು ಗೆದ್ದಿದ್ದ ಸರಿತಾ ದೇವಿ ಸೆಮಿಫೈನಲ್‌ನಲ್ಲಿ ಚೀನಾದ ಡೋ ಡ್ಯಾನ್ ಎದುರು, ಶಿಕ್ಷಾ ಅವರು ಚೀನಾ ಥೈಪೆಯ ಲಿನ್ ಯು ಟಿಂಗ್ ಎದುರು, ಪ್ರಿಯಾಂಕಾ ಅವರು ಕೊರಿಯಾದ ಓ ಯೋಂಜಿ ಎದುರು, ಲವ್ಲಿನಾ ಅವರು ಕಜಕಸ್ತಾನದ ವೆಲೆಂಟಿನಾ ಖಾಲ್ಜೋವಾ ಎದುರು ಮತ್ತು ಸೀಮಾ ಅವರು ಕಜಕಸ್ತಾನದ ಗುಜಾಲ್ ಇಸ್ಮಟೋವಾ ಎದುರು ಸೋತರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.