ಗುರುವಾರ , ಫೆಬ್ರವರಿ 25, 2021
18 °C

ಕಬ್ಬಿನ ದರ: ₹ 3140 ನಿಗದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಬ್ಬಿನ ದರ: ₹ 3140 ನಿಗದಿ

ಜಮಖಂಡಿ: ‘ತಾಲ್ಲೂಕಿನ ಹಿಪ್ಪರಗಿಯ ಸಾಯಿಪ್ರಿಯಾ ಸಕ್ಕರೆ ಕಾರ್ಖಾನೆಗೆ 2016–17ನೇ ಸಾಲಿನಲ್ಲಿ ರೈತರು ಪೂರೈಸಿದ ಪ್ರತಿ ಟನ್‌ ಕಬ್ಬಿಗೆ ₹ 3140 ದರ ನಿಗದಿ ಮಾಡಲಾಗಿದ್ದು, ಈಗಾಗಲೇ ₹2700 ಮೊದಲ ಕಂತಿನ ಹಣ ಪಾವತಿಸಲಾಗಿದೆ’ ಎಂದು ಕಾರ್ಖಾನೆ ಅಧ್ಯಕ್ಷ ಮುರುಗೇಶ ನಿರಾಣಿ ಹೇಳಿದರು.

ಕಾರ್ಖಾನೆಯ ಆವರಣದಲ್ಲಿ ಮಂಗಳವಾರ ಕರೆದ ರೈತರ ಸಭೆಯಲ್ಲಿ ಅವರು ಈ ವಿಷಯ ತಿಳಿಸಿದರು. ರಾಜ್ಯದ ಯಾವುದೇ ಖಾಸಗಿ ಸಕ್ಕರೆ ಕಾರ್ಖಾನೆ ನೀಡದ ದರ ನಮ್ಮ ಕಾರ್ಖಾನೆ ನೀಡುತ್ತಿದೆ. ಬಾಕಿ ಹಣ ಪ್ರತಿ ಟನ್‌ಗೆ ₹340 ಅನ್ನು ಪಾವತಿಸಲಾಗುವುದು ಎಂದರು.

ಕಾರ್ಖಾನೆಗೆ ಪೂರೈಸಿದ co 671, co 92005, co94012 ಕಬ್ಬು ತಳಿಗಳಿಗೆ ಮಾತ್ರ ಈ ದರ ಅನ್ವಯ ಆಗಲಿದೆ. ಸಮೀರವಾಡಿ ಅಥವಾ ಉಗಾರ ಸಕ್ಕರೆ ಕಾರ್ಖಾನೆಗಳು ಪ್ರಕಟಿಸುತ್ತಿದ್ದ ಕಬ್ಬುದರ ಈವರೆಗೆ ರೈತರ ಬೇಡಿಕೆಗೆ ಆಧಾರವಾಗಿರುತ್ತಿದ್ದವು. ಆದರೆ, ಇನ್ನೂ ಮುಂದೆ ಸಾಯಿಪ್ರಿಯಾ ಕಾರ್ಖಾನೆ ದರ ರೈತರ ಬೇಡಿಕೆಗೆ ಆಧಾರವಾಗಲಿದೆ ಎಂದರು.

ಕಬ್ಬಿನ ಬೀಜ, ಗೊಬ್ಬರ ಹಾಗೂ ಕೊಳವೆ ಬಾವಿ ಕೊರೆಯಲು ಮುಂಗಡ ಹಣ ಕೇಳುವ ರೈತರಿಗೆ ಹಣ ಪಾವತಿಸುವ ಬದಲಾಗಿ ನೇರವಾಗಿ ಪೂರೈಸುವುದಾಗಿ ಭರವಸೆ ನೀಡಿದರು. 2017–18ನೇ ಸಾಲಿಗೆ ಕಬ್ಬುದರ ಇನ್ನೂ ನಿಗದಿ ಮಾಡಿಲ್ಲ. ಯೋಗ್ಯ ದರ ನೀಡಲಾಗುತ್ತದೆ ಎಂಬ ವಿಶ್ವಾಸದಿಂದ ರೈತರು ಸಾಯಿಪ್ರಿಯಾ ಸಕ್ಕರೆ ಕಾರ್ಖಾನೆಗೆ ಕಬ್ಬು ಪೂರೈಸಬೇಕು ಎಂದರು.

ಪ್ರಸಕ್ತ ಹಂಗಾಮಿನಲ್ಲಿ ಅಂದಾಜು 10 ಲಕ್ಷ ಟನ್‌ ಕಬ್ಬು ನುರಿಸುವ ಗುರಿ ಹೊಂದಲಾಗಿದೆ. ಬರುವ ಜನವರಿ ತಿಂಗಳ ವರೆಗೆ ಕಬ್ಬು ನುರಿಸುವ ಹಂಗಾಮು ಮುಂದುವರಿಯಲಿದೆ ಎಂದರು. ಮಾಜಿ ಶಾಸಕ ಸಿದ್ದು ಸವದಿ, ಅರುಣಕುಮಾರ ಶಹಾ, ಟಿ.ಎ. ಬಿರಾದಾರ, ಶ್ರೀಶೈಲ ದಳವಾಯಿ, ಡಾ.ಮಹಾವೀರ ದಾನಿಗೊಂಡ, ಡಾ.ಎ.ಆರ್‌. ಬೆಳಗಲಿ, ಬಿ.ಎಸ್‌. ಸಿಂಧೂರ, ಪುಂಡಲೀಕ ಪಾಲಬಾವಿ, ಕಾಡು ಮಾಳಿ, ವಿರೂಪಾಕ್ಷಯ್ಯ ಕಂಬಿ, ಮಾಮೂನ ಪಾರ್ಥನಳ್ಳಿ, ವರ್ಧಮಾನ ಯಲಗುದ್ರಿ, ವಿ.ಆರ್‌. ದೇಸಾಯಿ, ಎ.ಬಿ. ಮನಗೂಳಿ, ಸಿ.ಪಿ. ಜನವಾಡ, ಡಾ.ರಾಕೇಶ ಲಾಡ ಸಭೆಯಲ್ಲಿ ಪಾಲ್ಗೊಂಡಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.