ಸೋಮವಾರ, ಮಾರ್ಚ್ 8, 2021
31 °C

‘ಜೆಡಿಎಸ್‌ನಿಂದ ರಾಜ್ಯದ ಅಭಿವೃದ್ಧಿ ಸಾಧ್ಯ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಜೆಡಿಎಸ್‌ನಿಂದ ರಾಜ್ಯದ ಅಭಿವೃದ್ಧಿ ಸಾಧ್ಯ’

ದೇವದುರ್ಗ: ‘ಕಾಂಗ್ರೆಸ್‌ ಮತ್ತು ಬಿಜೆಪಿ ಸರ್ಕಾರದ ಭ್ರಷ್ಟಾಚಾರದಿಂದ ಜನರು ಬೇಸತ್ತಿದ್ದಾರೆ. ಭ್ರಷ್ಟಾಚಾರ ಆರೋಪ ಹೊತ್ತ ಕಾಂಗ್ರೆಸ್‌ಗೆ ಮತ್ತು ಕೋಮುವಾದಿ ಬಿಜೆಪಿಗೆ ತಕ್ಕ ಪಾಠ ಕಲಿಸಲು ಜನರು ಸಿದ್ಧರಾಗಿದ್ದಾರೆ’ ಎಂದು ಶಾಸಕ ಎ.ಎಸ್‌.ಪಾಟೀಲ ನಡಹಳ್ಳಿ ಹೇಳಿದರು.

ಪಟ್ಟಣದ ಸಾರ್ವಜನಿಕ ಕ್ಲಬ್‌ ಮೈದಾನದಲ್ಲಿ ತಾಲ್ಲೂಕು ಜೆಡಿಎಸ್‌ ಘಟಕದ ವತಿಯಿಂದ ಮಂಗಳವಾರ ಏರ್ಪಡಿಸಲಾಗಿದ್ದ ಹೈದರಾಬಾದ್‌ ಕರ್ನಾಟಕ ಸ್ವಾಭಿಮಾನ ಜಾಥಾ ಉದ್ಘಾಟಿಸಿ ಅವರು ಮಾತನಾಡಿದರು.

‘ಉತ್ತರ ಕರ್ನಾಟಕ ಅದರಲ್ಲೂ ಹೈದರಾಬಾದ್‌ ಕರ್ನಾಟಕ ಹಿಂದೆ ಉಳಿಯಲು ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷಗಳೇ ಕಾರಣ. ಈ ಭಾಗದಲ್ಲಿ ಪ್ರತಿಯೊಂದಕ್ಕೂ ಅನ್ಯಾಯವಾಗಿದೆ. ಇದನ್ನೇ ನಾನು ಧ್ವನಿ ಎತ್ತಿದರೆ ನನ್ನ ಬಾಯಿ ಮುಚ್ಚಲು ಕೆಲವರು ಮುಂದಾಗಿದ್ದಾರೆ’ ಎಂದು ಆರೋಪಿಸಿದರು.

‘ಜನತಾ ಪರಿಹಾರ ರಾಜ್ಯ ಮತ್ತು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಾಗಲೆಲ್ಲ ಅಭಿವೃದ್ಧಿಗೆ ಪೂರಕವಾಗಿದೆ. ಈ ಭಾಗದಲ್ಲಿ ಜ್ವಲಂತ ಸಮಸ್ಯೆಗಳನ್ನು ಮುಂದೆ ಇಟ್ಟುಕೊಂಡು ರಾಯಚೂರಿನಿಂದ ಬೆಳಗಾವವರೆಗೂ ಸ್ವಾಭಿಮಾನ ಯಾತ್ರೆಯನ್ನು ಹಮ್ಮಿಕೊಂಡಿದ್ದೇನೆ. ಸಮಾವೇಶದ ಕೊನೆಯ ದಿನದಂದು ನಾನು ಅಧಿಕೃತವಾಗಿ ಜೆಡಿಎಸ್‌ ಸೇರುತ್ತೇನೆ’ ಎಂದರು.

ರಾಯಚೂರು ಮೂಲಕ ದೇವದುರ್ಗಗೆ ಬಂದ ಜಾಥಾಗೆ ಜೆಡಿಎಸ್‌ ವತಿಯಿಂದ ಸ್ವಾಗತಿಸಲಾಯಿತು. ನಂತರ ತೆರೆದ ವಾಹನದಲ್ಲಿ ಸಾರ್ವಜನಿಕ ಕ್ಲಬ್‌ವರೆಗೂ ವಿವಿಧ ಕಲಾಮೇಳಗಳೊಂದಿಗೆ ಮೆರವಣಿಗೆ ನಡೆಯಿತು. ಜೆಡಿಎಸ್ ಮುಖಂಡರು, ಕಾರ್ಯಕರ್ತರು ಮುಂತಾದವರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಮಾಜಿ ಸಚಿವ ಹನುಮಂತಪ್ಪ ಆಲ್ಕೋಡ್‌, ಮುಖಂಡರಾದ ಮಹಾಂತೇಶ ಪಾಟೀಲ ಅತ್ತನೂರು, ಕರೆಮ್ಮ ಗೋಪಾಲಕೃಷ್ಣ ಅವರು ಕಾರ್ಯಕ್ರಮ ಕುರಿತು ಮಾತನಾಡಿದರು. ಪಕ್ಷದ ಜಿಲ್ಲಾಧ್ಯಕ್ಷ ಎಂ. ವಿರೂಪಾಕ್ಷಿ, ತಾಲ್ಲೂಕು ಘಟಕದ ಅಧ್ಯಕ್ಷ ದಾನಪ್ಪ ಆಲ್ಕೋಡ್‌, ಮುಖಂಡರಾದ ಶರಣಪ್ಪ ಬಳೆ, ರಾಘವೇಂದ್ರ ಕೋಲ್ಕಾರ್, ಮುದುಕಪ್ಪ ನಾಯಕ, ಬಾಪುಗೌಡ ಪಾಟೀಲ, ಶರಣಮ್ಮ ಬಳೆ, ಮುತ್ತಮ್ಮ ಬಸನಗೌಡ, ಫಿರೋಜ್‌ ಖಾನ್‌, ಶಾಲಂ ಉದ್ಧಾರ್‌ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.