ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೋಟು ರದ್ದತಿ ತಪ್ಪು ನಿರ್ಧಾರ: ಕುಮಾರಸ್ವಾಮಿ

Last Updated 8 ನವೆಂಬರ್ 2017, 10:47 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ‘ದೊಡ್ಡ ಮುಖಬೆಲೆಯ ನೋಟು ರದ್ದತಿಯಿಂದ ಜನರಿಗೆ ಅನುಕೂಲವಾಗಿಲ್ಲ. ಈ ನೀತಿಯಿಂದ ₹ 5 ಲಕ್ಷ ಕೋಟಿ ಕಪ್ಪುಹಣ ಹಿಡಿತಕ್ಕೆ ಸಿಗಲಿದೆ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ನಂಬಿಕೆ ಹುಸಿಯಾಗಿದೆ’ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

ತಾಲ್ಲೂಕಿನ ಮುಗುಳುವಳ್ಳಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮೋದಿ ಅವರ ನಿರ್ಧಾರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದ ಆರ್ಥಿಕ ತಜ್ಞರು ಈಗ ಟೀಕಿಸುತ್ತಿದ್ದಾರೆ. ಆರ್‌ಬಿಐ ನಿವೃತ್ತ ಗವರ್ನರ್ ರಘುರಾಂ ರಾಜನ್‌ ಅವರು ಬಹಳಷ್ಟು ಟೀಕೆ ವ್ಯಕ್ತಪಡಿಸಿದ್ದಾರೆ. ಈ ನೀತಿಯಿಂದ ಬಿಡಿಗಾಸು ಕಪ್ಪುಹಣ ವಾಪಸ್‌ ತರಲೂ ಸಾಧ್ಯವಾಗಿಲ್ಲ. ಹೊಸ ನೋಟುಗಳನ್ನು ಮುದ್ರಿಸಲು ಬಹಳಷ್ಟು ಹಣ ವೆಚ್ಚವಾಗಿದೆ. ಆದರೂ ಮೋದಿ ಅವರು ತಾನು ತೆಗೆದುಕೊಂಡು ನಿರ್ಧಾರವೇ ಸರಿ ಎಂದು ವಾದಿಸುತ್ತಾರೆ’ ಎಂದರು.

‘ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಅನುಷ್ಠಾನಕ್ಕೂ ಮುನ್ನ ಸಾಧಕಬಾಧಕಗಳ ಕುರಿತು ಚರ್ಚಿಸಿಲ್ಲ. ಕೆಲ ವಸ್ತುಗಳಿಗೆ ಶೇ 12, ಮತ್ತೆ ಕೆಲವಕ್ಕೆ ಶೇ 18, ಶೇ 28ರಷ್ಟು ತೆರಿಗೆ ನಿಗದಿಗೊಳಿಸಲಾಗಿದೆ. ಇದರ ಪರಿಣಾಮವಾಗಿ ಉಂಟಾದ ಹಾನಿ ಸರಿಪಡಿಸಲು ಜಿಎಸ್‌ಟಿ ದರ ಕಡಿಮೆ ಮಾಡುವಂಥ ತೀರ್ಮಾನಗಳನ್ನು ಅವೈಜ್ಞಾನಿಕವಾಗಿ ಕೈಗೊಂಡಿದ್ದಾರೆ. ದೇಶವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುವ ನಿಟ್ಟಿನಲ್ಲಿ ಮೋದಿ ನೇತೃತ್ವದ ಸರ್ಕಾರ ವಿಫಲವಾಗಿದೆ’ ಎಂದು ಅವರು ಟೀಕಿಸಿದರು.

‘ವಿಶ್ವಬ್ಯಾಂಕ್‌ ನೀಡುವ ಪ್ರಮಾಣಪತ್ರಗಳಿಂದ ಅಮೆರಿಕದಂಥ ದೇಶಗಳಿಗೆ ಅನುಕೂಲ ಇರಬಹುದು. ಭಾರತದಂಥ ದೇಶ ಇಂಥ ಪ್ರಮಾಣಪತ್ರ ಪಡೆದು ಜನತೆಯ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯ ಇಲ್ಲ. ಕೇಂದ್ರದಲ್ಲಿನ ಬಿಜೆಪಿ ಸರ್ಕಾರವು ದೇಶದ ಆರ್ಥಿಕ ಪ್ರಗತಿಯನ್ನು ಕುಂಠಿತಗೊಳಿಸಿದೆ’ ಎಂದು ಅವರು ಆರೋಪಿಸಿದರು.

‘ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಬ್ಯಾರಲ್‌ ಕಚ್ಚಾ ತೈಲದ ಬೆಲೆಯು 120 ಡಾಲರ್‌ ಇದ್ದದ್ದು, 52 ಡಾಲರ್‌ಗೆ ಇಳಿಕೆಯಾಗಿದ್ದರಿಂದ ಸುಮಾರು ₹ 6 ಲಕ್ಷ ಕೋಟಿ ಕೇಂದ್ರ ಸರ್ಕಾರಕ್ಕೆ ಉಳಿತಾಯವಾಯಿತು. ಈ ಅವಕಾಶವನ್ನು ಕೇಂದ್ರ ಸರ್ಕಾರ ಸರಿಯಾಗಿ ಬಳಸಿಕೊಂಡಿಲ್ಲ. ಪೆಟ್ರೊಲ್‌, ಡೀಸೆಲ್‌ ದರವನ್ನು ಸರ್ಕಾರ ಕಡಿಮೆ ಮಾಡಿಲ್ಲ. ಕೃಷಿಕರಿಗೂ ಯಾವುದೇ ನೆರವು ನೀಡುತ್ತಿಲ್ಲ. ಮೋದಿ ಅವರ ಸರ್ಕಾರ ಭಾಷಣಗಳಿಗೆ ಸೀಮಿತವಾಗಿದೆ’ ಎಂದು ಲೇವಡಿ ಮಾಡಿದರು.

‘ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಕ್ಕೆ ₹ 2.5 ಲಕ್ಷ ಕೋಟಿ ಅನುದಾನ ನೀಡಿದ್ದು, ಅನುದಾನ ಬಳಸಿರುವುದಕ್ಕೆ ಲೆಕ್ಕಕೊಡಿ ಎಂದು ಬಿಜೆಪಿ ರಾಷ್ಟ್ರೀಯ ಘಟಕದ ಅಧ್ಯಕ್ಷ ಅಮಿತ್ ಷಾ ಅವರು ಪರಿವರ್ತಾನ ರ್‍ಯಾಲಿಯಲ್ಲಿ ಕೇಳಿದ್ದಾರೆ. ನಮ್ಮ ರಾಜ್ಯದ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಲೆಕ್ಕ ಕೇಳುವುದಕ್ಕೆ ಅವರಿಗೆ ಏನು ಅಧಿಕಾರ ಇದೆ. ರಾಜ್ಯದ ಜನರು ಪಾವತಿಸುವ ತೆರಿಗೆಯಲ್ಲಿ ಸಿಂಹಪಾಲು ಕೇಂದ್ರ ಸರ್ಕಾರಕ್ಕೆ ಸಂದಾಯವಾಗುತ್ತದೆ. ಆ ಹಣವನ್ನೇ ಅನುದಾನವಾಗಿ ನೀಡಿದ್ದಾರೆ’ ಎಂದು ಹೇಳಿದರು.

ಸಿದ್ದರಾಮಯ್ಯ ವಿರುದ್ಧವೂ ಟೀಕೆ: ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಜಾಹಿರಾತಿನ ಮೂಲಕ ನಡೆಯುತ್ತಿದೆ. ಜಾಹಿರಾತಿಗೆ ವ್ಯಯಿಸಿರುವ ಹಣವನ್ನು ರಾಜ್ಯದ ಅಭಿವೃದ್ಧಿಗೆ ವಿನಿಯೋಗಿಸಿದ್ದರೆ ಹಲವಾರು ಹಳ್ಳಿಗಳನ್ನು ಉದ್ಧಾರ ಮಾಡಬಹುದಿತ್ತು ಎಂದು ಕುಮಾರಸ್ವಾಮಿ ಕುಟುಕಿದರು.

‘ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಘೋಷಿಸಿರುವ ‘ಭಾಗ್ಯ’ಗಳು ಹೊಸ ಕಾರ್ಯಕ್ರಮಗಳೇನಲ್ಲ. ಹಿಂದೆ ಕೆ.ಜಿ.ಗೆ ₹ 2 ದರದಲ್ಲಿ ಅಕ್ಕಿ ವಿತರಿಸುತ್ತಿದ್ದನ್ನೇ, ಈಗ ಪುಕ್ಕಟ್ಟೆಯಾಗಿ ವಿತರಿಸುವ ಯೋಜನೆ ಮಾಡಿದ್ದಾರೆ. ಇದಕ್ಕೆ ಕೇಂದ್ರ ಸರ್ಕಾರದ ಶೇ 80 ಸಬ್ಸಿಡಿ ಅನುದಾನವನ್ನು ಸದ್ಬಳಕೆ ಮಾಡಿಕೊಂಡಿದ್ದಾರೆ. ಇದರಲ್ಲಿ ರಾಜ್ಯ ಸರ್ಕಾರದ ಹಣ ಇಲ್ಲ’ ಎಂದರು.

ಸಾಲದ ಹೊರೆ ಹೊರಿಸಿರುವುದೇ ಸಿದ್ದರಾಮಯ್ಯ ಕೊಡುಗೆ: ರಾಜ್ಯದಲ್ಲಿನ ಪ್ರತಿ ಕುಟುಂಬಕ್ಕೆ ತಲಾ ₹ 50,000 ಸಾಲದ ಹೊರೆ ಹೊರಿಸಿರುವುದೇ ಸಿದ್ದರಾಮಯ್ಯ ಅವರ ಕೊಡುಗೆ. 4 ವರ್ಷದಲ್ಲಿ ರಾಜ್ಯ ಸರ್ಕಾರ ₹ 1.25 ಲಕ್ಷ ಕೋಟಿ ಸಾಲ ಮಾಡಿದೆ. ನೀರಾವರಿ, ರಸ್ತೆಗಳ ಹೆಸರಿನಲ್ಲಿ ಹಣ ದೋಚಿದ್ದಾರೆ. ಸಮಾಜಕಲ್ಯಾಣ ಇಲಾಖೆಯಲ್ಲಿ ದಲಿತರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರ ಕಾರ್ಯಕ್ರಮಗಳ ಹೆಸರಿನಲ್ಲಿ ಲೂಟಿ ಮಾಡಿದ್ದಾರೆ’ ಎಂದು ಆರೋಪಿಸಿದರು. 

‘ತೆಂಗು, ಅಡಿಕೆ, ಕಾಫಿ ಬೆಳೆಗಾರರ ಹಿತ ಕಾಯುವಲ್ಲಿ ಸರ್ಕಾರ ವಿಫಲವಾಗಿದೆ. ಸ್ವಾಮಿನಾಥನ್‌ ವರದಿ ಸಲ್ಲಿಕೆಯಾಗಿ 11 ವರ್ಷವಾದರೂ, ಅದರ ಅನುಷ್ಠಾನದ ಬಗ್ಗೆ ಗಮನಹರಿಸಿಲ್ಲ. ಗೋರಖ್‌ ಸಿಂಗ್‌ ವರದಿ ಸಲ್ಲಿಕೆಯಾಗಿ ಹಲವು ವರ್ಷಗಳಾಗಿದೆ. ಈ ವರದಿ ಜಾರಿಗೊಳಿಸುವುದಾಗಿ ವಿವಿಧ ಪಕ್ಷಗಳ ನಾಯಕರು ಹಲವು ಸ್ಥಾನ ಗಿಟ್ಟಿಸಿದ್ದಾರೆ. ರೈತರ ₹ 50,000 ಸಾಲಮನ್ನಾ ಘೋಷಣೆ ಮಾಡಿ 4 ತಿಂಗಳಾಗಿದೆ. ಆದರೆ, ಈವರೆಗೆ ಈ ಬಾಬ್ತಿಗೆ ಹಣ ಬಿಡುಗಡೆ ಮಾಡಿಲ್ಲ’ ಎಂದರು.

‘ರಾಜ್ಯದಲ್ಲಿ ಕ್ಷೀರ ಉತ್ಪಾದನೆ ಹೆಚ್ಚಿಸಲು ಎಚ್‌.ಡಿ.ರೇವಣ್ಣ ಅವರ ಪಾತ್ರ ಮಹತ್ವದ್ದು. ರೇವಣ್ಣ ಅವರು ಕೆಎಂಎಫ್‌ ಅಧ್ಯಕ್ಷರಾದಾಗ ಸುಮಾರು ₹ 13 ಕೋಟಿ ನಷ್ಟದಲ್ಲಿತ್ತು. ದಿಟ್ಟ ನಿರ್ಧಾರಗಳನ್ನು ಕೈಗೊಂಡು ಸುಮಾರು ₹ 5 ಸಾವಿರ ಕೋಟಿ ಆದಾಯ ಗಳಿಸುವಂತೆ ಮಾಡಿದರು’ ಎಂದರು.

ಮಾಸಾಂತ್ಯಕ್ಕೆ 150 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
‘ಇದೇ 16ರಂದು ಹುಬ್ಬಳಿಯಲ್ಲಿ ಪಕ್ಷದ ಕಾರ್ಯಕಾರಿ ಸಮಿತಿ ಸಭೆ ನಡೆಯಲಿದೆ. ವಿಧಾನಸಭೆ ಚುನಾವಣೆಗೆ ಅಖೈರುಗೊಳಿಸಿರುವ 150 ಅಭ್ಯರ್ಥಿಗಳ ಪಟ್ಟಿಯನ್ನು ಈ ತಿಂಗಳ ಅಂತ್ಯದ ಹೊತ್ತಿಗೆ ಬಿಡುಗಡೆ ಮಾಡಲಾಗುವುದು’ ಎಂದು ಕುಮಾರಸ್ವಾಮಿ ತಿಳಿಸಿದರು.

‘ಜೆಡಿಎಸ್‌ನ ಹಾಲಿ ಶಾಸಕರೆಲ್ಲರಿಗೂ ಟಿಕೆಟ್‌ ನೀಡಲಾಗುವುದು. ಶಾಸಕ ಚಿಕ್ಕಮಾದು ಈಚೆಗೆ ನಿಧನರಾಗಿದ್ದು, ಅವರ ಕ್ಷೇತ್ರದಲ್ಲಿ ಹೊಸ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗುವುದು’ ಎಂದು ಸ್ಪಷ್ಟಪಡಿಸಿದರು.

‘ಜನರನ್ನು ಹತ್ತಿರದಿಂದ ಸಂಪರ್ಕಿಸಲು ಗ್ರಾಮವಾಸ್ತವ್ಯ ನಡೆಸುತ್ತಿದ್ದೇವೆ. ಜನರ ಸಮಸ್ಯೆಗಳನ್ನು ತಿಳಿದುಕೊಳ್ಳಬಹುದು. ಪ್ರಣಾಳಿಕೆ ಸಿದ್ಧಪಡಿಸಲು ಅನುಕೂಲವಾಗುತ್ತದೆ’ ಎಂದು ಅವರು ಹೇಳಿದರು.

‘ಪೂರ್ವನಿಗದಿತ ಕಾರ್ಯಕ್ರಮ ನಿಮಿತ್ತ ರೇವಣ್ಣ ಅವರು ನವದೆಹಲಿಗೆ ತೆರಳಿದ್ದರಿಂದ ಮೈಸೂರಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರಲಿಲ್ಲ. ಪಕ್ಷದಲ್ಲಿ ಯಾವುದೇ ಗೊಂದಲ ಇಲ್ಲ. ಚುನಾವಣೆಯಲ್ಲಿ ಸ್ಪರ್ಧಿಸಲು ಪ್ರಜ್ವಲ್‌ ರೇವಣ್ಣ ಅಪೇಕ್ಷಿಸಿದ್ದಾರೆ. ಟಿಕೆಟ್‌ ನೀಡುವ ವಿಚಾರದಲ್ಲಿ ಅಂತಿಮವಾಗಿ ಪಕ್ಷ ಕೈಗೊಳ್ಳುವ ನಿರ್ಧಾರಕ್ಕೆ ಎಲ್ಲರೂ ಬದ್ಧರಾಗಿರುತ್ತಾರೆ’ ಎಂದರು.

‘ಸಮುದಾಯಗಳ ಸಂಘಟಕರನ್ನು ತೃಪ್ತಿಪಡಿಸಲು ಸರ್ಕಾರವು ಜಯಂತ್ಯುತ್ಸವಗಳನ್ನು ಆಚರಿಸುತ್ತಿದೆ. ಇದರ ಬದಲು ಆ ಸಮುದಾಯದವರ ಏಳಿಗೆಗೆ ಕಾರ್ಯಕ್ರಮಗಳನ್ನು ರೂಪಿಸುವುದು ಒಳಿತು’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT