ಶನಿವಾರ, ಮಾರ್ಚ್ 6, 2021
32 °C

ಫ್ಯಾಕ್ಟರಿಗಳು ಮತ್ತು ಹುಡುಗಿಯರು!

ಪ್ರವೀಣ ಕುಲಕರ್ಣಿ Updated:

ಅಕ್ಷರ ಗಾತ್ರ : | |

ಫ್ಯಾಕ್ಟರಿಗಳು ಮತ್ತು ಹುಡುಗಿಯರು!

ಹಾಂಕಾಂಗ್‌ನಿಂದ ಫೆರಿಯೊಳಗೆ ಸಮುದ್ರಯಾನ ಮಾಡಿದ ಖುಷಿಯಲ್ಲಿ ಸೆಂಜೆನ್‌ಗೆ ಬಂದಿಳಿದಾಗ ಅಲ್ಲಿ ನಮ್ಮನ್ನು ತಪಾಸಣೆಗೆ ಒಳಪಡಿಸಿದ ವಲಸೆ ವಿಭಾಗದ ಅಧಿಕಾರಿಗಳೆಲ್ಲ ಬರೀ ಯುವತಿಯರು. ಈ ಊರಿನ ಮಾಲ್‌ಗಳಲ್ಲಿ ಯಾವುದೇ ಅಂಗಡಿ ಹೊಕ್ಕರೂ ‘ಹಲೋ’ ಎಂದು ಎದುರುಗೊಳ್ಳುತ್ತಿದ್ದುದು ಸಹ ಸಪೂರವಾದ ಸೇಲ್ಸ್‌ ಗರ್ಲ್‌ಗಳೇ. ಅರೆರೆ ಏನಿದು ಸೋಜಿಗ? ಪ್ರವಾಸಿ ತಾಣಗಳಲ್ಲಿ ಟಿಕೆಟ್‌ ಹರಿಯುವವರು, ರೈಲು ಓಡಿಸುವವರು, ‘ನಮಸ್ತೆ’ ಎನ್ನುತ್ತಾ ಭಾರತೀಯ ಯೋಗ ಕಲಿಸುವವರು, ಸಲೂನ್‌ನಲ್ಲಿ ಕ್ಷೌರಿಕ ವೃತ್ತಿಯಲ್ಲಿ ನಿರತರಾದವರು, ಕೊನೆಗೆ ಹೋಟೆಲ್‌ನಲ್ಲಿ ‘ಏನುಬೇಕು’ ಎಂದು ಕೇಳಲು ಬಂದವರು ಎಲ್ಲಾ ಲಲನೆಯರೇ!

‘ಹೌದಲ್ಲ, ಈ ಊರಿನಲ್ಲಿ ಎಲ್ಲೆಡೆ ಹುಡುಗಿಯರೇ ತುಂಬಿದ್ದಾರೆ. ಹುಡುಗರು ಎಲ್ಲಿದ್ದಾರೆ, ಏನು ಕೆಲಸ ಮಾಡುತ್ತಾರೆ’ ಎಂಬ ಪ್ರಶ್ನೆ ತಲೆಯಲ್ಲಿ ಗಿರಕಿ ಹೊಡೆಯತೊಡಗಿತು. ‘ನಿಮ್ಮನ್ನು ನಿಬ್ಬೆರಗಾಗಿಸುವಂತಹ ಒಂದು ಮಾಹಿತಿ ಹೇಳುತ್ತೇನೆ.

ಈ ಊರಿನಲ್ಲಿ ಹೆಣ್ಣು–ಗಂಡಿನ ಲಿಂಗಾನುಪಾತ 7:1ರಷ್ಟಿದೆ. ಅಂದರೆ ಏಳು ಹುಡುಗಿಯರಿಗೆ ಒಬ್ಬ ಹುಡುಗ’ ಎಂದು ಕಣ್ಣು ಮಿಟುಕಿಸಿದರು ನಮ್ಮ ಮಾರ್ಗದರ್ಶಕಿ ಜೈನಿ.

‘ನನಗೆ ಗೊತ್ತು, ನಿಮ್ಮ ಮನವೀಗ ಎತ್ತ ಓಡುತ್ತಿದೆ ಎಂಬುದು. ಈ ಊರಿನಲ್ಲೇ ಇದ್ದಿದ್ದರೆ ಒಬ್ಬೊಬ್ಬರೂ ಏಳೇಳು ಮದುವೆ ಆಗಬಹುದಿತ್ತು ಎಂದು ಮನದಲ್ಲೇ ಮಂಡಿಗೆ ತಿನ್ನುತ್ತಿದ್ದೀರಾ? ಊಂ..ಹುಂ.. ಅದು ಏಳೇಳು ಜನ್ಮಕ್ಕೂ ಸಾಧ್ಯವಿಲ್ಲ. ಏಕೆಂದರೆ, ಇಲ್ಲಿ ನೀವೊಂದು ಮದುವೆ ಆಗಬೇಕಾದರೆ ಒಂದು ಲಕ್ಷ ಹಾಂಕಾಂಗ್‌ ಡಾಲರ್‌ (ಸುಮಾರು₹ 8.5 ಲಕ್ಷ) ವಧುದಕ್ಷಿಣೆ ಕೊಡಬೇಕು. ಜತೆಗೆ ಒಂದು ಮನೆಯನ್ನೂ ಕಟ್ಟಿರಬೇಕು. ಗೊತ್ತೆ? ಈ ಊರಲ್ಲಿ ನಿವೇಶನದ ಬೆಲೆ ಚದರ ಮೀಟರ್‌ಗೆ 50 ಸಾವಿರ ಹಾಂಕಾಂಗ್‌ ಡಾಲರ್‌ ಇದೆ’ ಎಂದು ತುಂಟನಗೆ ಬೀರಿದರು ಆಕೆ. ಅಷ್ಟೊಂದು ಹುಡುಗಿಯರು ಇದ್ದರೂ ಮನೆ ಕಟ್ಟಲಾಗದೆ, ವಧುದಕ್ಷಿಣೆ ಭರಿಸಲಾಗದೆ, ಮದುವೆ ಆಗಲಾರದೆ ವಿರಹವೇದನೆಯಿಂದ ಬಳಲುವ ಹುಡುಗರ ಸಂಖ್ಯೆ ಇಲ್ಲಿ ಹೆಚ್ಚಾಗಿದೆಯಂತೆ. 35ರ ಗಡಿ ದಾಟಿದರೂ ಇನ್ನೂ ಮದುವೆಯಾಗದ ನಮ್ಮ ಮಾರ್ಗದರ್ಶಕಿ, ‘ಯೋಗ್ಯ ಹುಡುಗನ ಹುಡುಕಾಟ ನಡೆದಿದೆ’ ಎಂದು ಲಾವಾ ಮೊಬೈಲ್ ಸಂಸ್ಥೆಯ ಆಹ್ವಾನದ ಮೇರೆಗೆ ಚೀನಾಕ್ಕೆ ಬಂದಿದ್ದ ಭಾರತೀಯ ಪತ್ರಕರ್ತರ ಮುಂದೆ ಗುಟ್ಟು ಬಿಟ್ಟುಕೊಟ್ಟರು.ಹತ್ತು–ಹಲವು ಸೋಜಿಗಗಳ ಗಣಿಯಾದ ದಕ್ಷಿಣ ಚೀನಾದ ಈ ಬಂದರು ನಗರಿ, ತನ್ನಲ್ಲಿ ನಮ್ಮನ್ನು ಬಿಟ್ಟುಕೊಳ್ಳುತ್ತಾ ಕೊಟ್ಟ ಮೊದಲ ಶಾಕ್‌ ಇದು.

‘ಇಷ್ಟೊಂದು ಅಸಾಮಾನ್ಯ ಲಿಂಗಾನುಪಾತಕ್ಕೆ ಏನು ಕಾರಣ’ ಎಂದು ಕೇಳಿದಾಗ ಜೈನಿ ಕೊಟ್ಟ ಉತ್ತರ ಹೀಗಿತ್ತು: ‘ಸೆಂಜೆನ್‌ ಮಾಹಿತಿ ತಂತ್ರಜ್ಞಾನ ನಗರಿಯಾಗಿ ಬೆಳೆದಂತೆಲ್ಲ ಸುತ್ತಲಿನ ಊರುಗಳಿಂದ ದೊಡ್ಡ ಸಂಖ್ಯೆಯಲ್ಲಿ ಹುಡುಗಿಯರು ಕೆಲಸ ಮಾಡಲು ಈ ಊರಿಗೆ ದಾಂಗುಡಿ ಇಟ್ಟರು. ಹುಡುಗರು ಊರಲ್ಲೇ ಕೃಷಿ ಕಾರ್ಯಗಳಲ್ಲಿ ತೊಡಗಿಸಿಕೊಂಡರು. ಚೀನಾದಲ್ಲಿ ‘ಪ್ರತಿ ದಂಪತಿಗೆ ಒಂದು ಮಗು’ ಎಂಬ ನಿಯಮ ಜಾರಿಯಲ್ಲಿದೆಯಲ್ವಾ? ಅದೇನು ಸೋಜಿಗವೋ, ಇಲ್ಲಿನ ಬಹುತೇಕ ದಂಪತಿಗಳಿಗೆ ಜನಿಸಿದ್ದು ಹೆಣ್ಣುಮಕ್ಕಳು.’

ಕೇವಲ 40 ವರ್ಷಗಳ ಹಿಂದಿನ ಮಾತು. ಆಗ ಸೆಂಜೆನ್‌, ಮೀನುಗಾರರ ಒಂದು ಪುಟ್ಟ ಹಳ್ಳಿ. ನೂರಾರು ಕೃಷಿಕರೂ ಇಲ್ಲಿ ನೆಲೆ ಕಂಡುಕೊಂಡಿದ್ದರು. ಬಡತನವನ್ನೇ ಹಾಸಿ, ಹೊದ್ದ ಊರು. ಸಾಗರದಲ್ಲಿ ಬಲೆ ಬೀಸಿದಾಗ ಸಿಗುತ್ತಿದ್ದ ಯಥೇಚ್ಛ ಮೀನುಗಳನ್ನು ಬಿಟ್ಟರೆ, ಅದರ ಅಂಚಿನ ಉದ್ದಕ್ಕೂ ಚಾಚಿಕೊಂಡಿದ್ದ ಕೃಷಿಭೂಮಿಗೆ ಇಲ್ಲಿನವರ ಹಸಿವು ಇಂಗಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿಯೇ ಬದುಕು ಕಟ್ಟಿಕೊಳ್ಳಲು ಪ್ರತಿವರ್ಷ ನೂರಾರು ಚೀನಿಯರು ಸಾಗರೋಲ್ಲಂಘನ ಮಾಡಿ ಅಕ್ರಮವಾಗಿ ಹಾಂಕಾಂಗ್‌ನೊಳಗೆ ನುಸುಳುತ್ತಿದ್ದರಂತೆ.

ಚೀನಾದ ಕಮ್ಯುನಿಸ್ಟ್‌ ಸರ್ಕಾರ 1980ರಲ್ಲಿ ಜಾಗತೀಕರಣಕ್ಕೆ ತೆರೆದುಕೊಂಡಾಗ ತನ್ನ ಆರ್ಥಿಕ ಸುಧಾರಣಾ ಕ್ರಮಗಳ ಮೊದಲ ಪ್ರಯೋಗ ಶಾಲೆಯನ್ನಾಗಿ ಮಾಡಿಕೊಂಡಿದ್ದು ಇದೇ ಮೀನುಗಾರರ ಊರನ್ನು. ದೇಶದ ಮೊದಲ ವಿಶೇಷ ಆರ್ಥಿಕ ವಲಯಕ್ಕೆ (ಎಸ್‌ಇಜೆಡ್‌) ಇಲ್ಲಿನ ನೆಲವನ್ನೇ ಆಯ್ದುಕೊಂಡಿತು ಆಗಿನ ಡೆಂಗ್‌ ಕ್ಸಿಯಾಪಿಂಗ್‌ ಅವರ ಸರ್ಕಾರ. ಸುತ್ತಲಿನ ಹತ್ತಾರು ಹಳ್ಳಿಗಳ ಜನರನ್ನೂ ಲೆಕ್ಕಕ್ಕೆ ತೆಗೆದುಕೊಂಡರೆ ಆಗ ಈ ಹೋಬಳಿಯ ಜನಸಂಖ್ಯೆ 30 ಸಾವಿರದಷ್ಟಿತ್ತು. ಈಗ ನೋಡಿ, ಈ ಊರಿನ ಜನಸಂಖ್ಯೆ 1.20 ಕೋಟಿ!

ಡೆಂಗ್‌ ಅವರು ಈ ವಿಶೇಷ ಆರ್ಥಿಕ ವಲಯದಲ್ಲಿ ಬಂಡವಾಳ ಸೆಳೆಯಲು ಹೂಡಿಕೆದಾರರಿಗೆ ಎಂತಹ ಅವಕಾಶ ಮಾಡಿಕೊಟ್ಟರೆಂದರೆ ತೆರಿಗೆಯಲ್ಲಿ ಭಾರಿ ರಿಯಾಯ್ತಿ ಘೋಷಿಸಿದರು. ಸರ್ಕಾರದ ಅನುಮತಿ ಪಡೆಯದೆ ಮುಕ್ತವಾಗಿ ವಹಿವಾಟು ನಡೆಸಬಹುದು ಎಂಬ ಆಮಿಷವನ್ನು ಬೇರೆ ಒಡ್ಡಿದರು. ಒಂದೆರಡು ಗಂಟೆ ಸಮುದ್ರಯಾನ ಮಾಡಿದರೆ ತಲುಪಬಹುದಾಗಿದ್ದ ಸೆಂಜೆನ್‌ನಲ್ಲಿ ಹಾಂಕಾಂಗ್‌ನ ಸಿರಿವಂತರು ಹಣ ಸುರಿದರು. ಫ್ಯಾಕ್ಟರಿಗಳು ಅಕ್ಷರಶಃ ನಾಯಿಕೊಡೆಗಳಂತೆ ಮೇಲೆದ್ದವು. ‘ಹಾಂಕಾಂಗ್‌ನ ಸಿರಿವಂತರ ಆಟದ ಮೈದಾನ’, ‘ಜಗತ್ತಿನ ಫ್ಯಾಕ್ಟರಿ’ ಎಂಬ ಉಪ ಹೆಸರುಗಳು ಆಗಲೇ ಈ ಊರಿಗೆ ಅಂಟಿಕೊಂಡಿದ್ದು.

ಒಂದೊಂದು ಫ್ಯಾಕ್ಟರಿ ಇಲ್ಲಿ ಎದ್ದಾಗಲೂ ಚೀನಾದ ಇತರ ಭಾಗಗಳಿಂದ ಈ ಊರಿಗೆ ಸಾವಿರಾರು ಜನ ವಲಸೆ ಬಂದರು. ಕಡಿಮೆ ಸಂಬಳಕ್ಕೆ ಬೇಕಾದಷ್ಟು ಕಾರ್ಮಿಕರು ಸಿಗುತ್ತಿದ್ದುದು ಬಂಡವಾಳ ಹೂಡಿಕೆದಾರರ ಕಣ್ಣು ಸೆಂಜೆನ್‌ ಬಿಟ್ಟು ಬೇರೆಡೆ ಹೊರಳದಂತೆ ಮಾಡಿತು. ಮಾಹಿತಿ ತಂತ್ರಜ್ಞಾನ ಉದ್ಯಮವೂ ಇದೇ ಊರನ್ನು ಹುಡುಕಿಕೊಂಡು ಬಂತು. ಚೀನಾ ಸರ್ಕಾರ ತನ್ನೆಲ್ಲ ಸಾಮರ್ಥ್ಯ ಒಟ್ಟುಗೂಡಿಸಿ, ಹತ್ತು ವರ್ಷಗಳವರೆಗೆ ಆಚೀಚೆ ನೋಡದೆ, ಸೆಂಜೆನ್‌ನಲ್ಲಿ ಅದ್ಭುತ ಎನ್ನುವಂತಹ ಮೂಲಸೌಕರ್ಯ ಒದಗಿಸಿತು. ಹೌದು, ಕೆಲವೆಡೆ ಕೂಡುರಸ್ತೆಗಳಲ್ಲಿ ಟ್ರಾಫಿಕ್‌ ಸಿಗ್ನಲ್‌ಗಳು ಉಳಿದುಕೊಂಡಿದ್ದರೂ ಈ ಊರಿನಲ್ಲಿ ಎಲ್ಲಿ ನೋಡಿದಲ್ಲಿ ತುಂಬಿಹೋಗಿವೆ ಸಿಗ್ನಲ್‌ಮುಕ್ತ ಸಂಚಾರದ ಮೇಲ್ಸೇತುವೆಗಳು.

ಸಾರ್ವಜನಿಕರ ಸಂಚಾರಕ್ಕೆ ಇಲ್ಲಿಯಂತಹ ಉತ್ಕೃಷ್ಟ ವ್ಯವಸ್ಥೆ ಏಷ್ಯಾದಲ್ಲಿ ಪ್ರಾಯಶಃ ಬೇರೆಲ್ಲೂ ಇದ್ದಂತಿಲ್ಲ. ಬಸ್‌ಗಳ ತಡೆರಹಿತ ಸಂಚಾರಕ್ಕಾಗಿಯೇ ರಸ್ತೆಯ ಒಂದು ಭಾಗವನ್ನು (ಲೇನ್‌) ಮೀಸಲಿಡಲಾಗಿದೆ. ನಗರದ ಎಲ್ಲ ದಿಕ್ಕುಗಳಿಗೂ ಸಂಪರ್ಕ ಕಲ್ಪಿಸುವಂತಹ ರೈಲ್ವೆ ಜಾಲವಿದೆ. ಆಯಾ ನಿಲ್ದಾಣಗಳಿಂದಲೇ ಚೀನಾದ ಇತರ ನಗರಗಳಿಗೆ ನೇರ ರೈಲು ಸೌಲಭ್ಯ ಕಲ್ಪಿಸಲಾಗಿದೆ. ಗಂಟೆಗೆ ಒಂದರಂತೆ ಅತಿವೇಗದ ಬುಲೆಟ್‌ ರೈಲುಗಳು ಅಲ್ಲಿಂದ ಹೊರಡುತ್ತವೆ. ಮೆಟ್ರೊ ರೈಲು, ನಗರದ ಎಲ್ಲ ಭಾಗಗಳಲ್ಲದೆ ಉಪನಗರಗಳಿಗೂ ಸಂಪರ್ಕ ಕಲ್ಪಿಸುತ್ತದೆ. ಈ ನಗರದ ‘ವಿಂಡೋ ಟು ದಿ ವರ್ಲ್ಡ್‌’ ತಾಣದಲ್ಲಿ ಮೋನೊ ರೈಲು ಓಡಾಡುತ್ತದೆ.

ರೈಲು, ಮೆಟ್ರೊ, ಬಸ್‌, ಟ್ಯಾಕ್ಸಿ ನಿಲ್ದಾಣಗಳೆಲ್ಲ ಅಕ್ಕಪಕ್ಕದಲ್ಲೇ ಇವೆ. ಹತ್ತಿರದ ಸ್ಥಳದ ಪ್ರಯಾಣಕ್ಕೆ ಬೈಕ್‌ ಟ್ಯಾಕ್ಸಿಗಳಿವೆ. ಇದ್ಯಾವುದೂ ಬೇಡ ಸೈಕಲ್‌ ಸವಾರಿ ಮಾಡಿದರಾಯಿತು ಎನ್ನುವವರಿಗೆ ಮಾರು ದೂರಕ್ಕೊಂದು ಅವುಗಳ ಸ್ಟ್ಯಾಂಡ್‌ಗಳಿವೆ. ಈ ಸೈಕಲ್‌ಗಳ ಬಳಕೆಗೆ ನೀವು ಮೊದಲೇ ಹೆಸರು ನೋಂದಣಿ ಮಾಡಿಕೊಂಡು, ಹಣ ತುಂಬಿರಬೇಕು. ಸೈಕಲ್‌ ಮೇಲೆ ಅಂಟಿಸಿದ ‘ಕ್ಯುಆರ್‌’ ಕೋಡ್‌ ಸ್ಕ್ಯಾನ್‌ ಮಾಡಿದರೆ, ನೀವು ನೋಂದಾಯಿತ ಸೈಕಲ್‌ ಸವಾರರು ಎಂಬುದನ್ನು ಖಚಿತಪಡಿಸಿಕೊಂಡು ಅದರ ಲಾಕ್‌ ತೆರೆದುಕೊಳ್ಳುತ್ತದೆ. ಆಮೇಲೆ ಮನೆ ಹತ್ತಿರದ ಸೈಕಲ್‌ ಸ್ಟ್ಯಾಂಡ್‌ವರೆಗೂ ಪರಿಸರಸ್ನೇಹಿ ಪ್ರಯಾಣ. ಚೀನಾದ ಬೀಜಿಂಗ್‌, ಶಾಂಘೈ ನಗರಗಳು ಜಗತ್ತಿನಲ್ಲೇ ಮಾಲಿನ್ಯದಲ್ಲಿ ಮುಂದಿದ್ದರೆ, ಈ ಊರು ದೇಶದ ನಂಬರ್‌ ಒನ್‌ ಮಾಲಿನ್ಯಮುಕ್ತ ನಗರವಾಗಿದೆ (ಇಂಗಾಲದ ಹೆಜ್ಜೆ ಗುರುತುಗಳು ಇಲ್ಲಿ ಬಲು ಕಡಿಮೆ).

ಕಡಲ ತೀರದಲ್ಲಿರುವ ಈ ನಗರದಲ್ಲಿ ಮಳೆ ಜಾಸ್ತಿಯಂತೆ. ಆದರೆ, ಎಷ್ಟೇ ಮಳೆಯಾದರೂ ನಗರದ ರಸ್ತೆಗಳಲ್ಲಿ ಸ್ವಲ್ಪ ನೀರೂ ನಿಲ್ಲುವುದಿಲ್ಲ ಎಂದರು ಜೈನಿ. ಬೇಡವೆಂದರೂ ಬೆಂಗಳೂರಿನ ಮಳೆ ಸನ್ನಿವೇಶಗಳು ನೆನಪಾದವು.

ಸೆಂಜೆನ್‌ ನಗರದ ಜನ ತಾಂತ್ರಿಕವಾಗಿ ಎಷ್ಟೊಂದು ಪಳಗಿದ್ದಾರೆ ಎಂದರೆ ನೀವು ಯಾವುದೇ ಎಲೆಕ್ಟ್ರಾನಿಕ್‌ ಸಲಕರಣೆಯನ್ನು ಒಯ್ದು ಅವರ ಕೈಗಿಟ್ಟರೆ ತಕ್ಷಣ ಅದರ ನಕಲು ಮಾಡಿಕೊಡುತ್ತಾರೆ. ಯಾವುದೇ ಮಾಲ್‌ಗೆ ಹೋದರೆ ಬ್ರ್ಯಾಂಡೆಡ್‌ ಸರಕುಗಳ ಫಸ್ಟ್‌ ಕಾಪಿ, ಸೆಕೆಂಡ್‌ ಕಾಪಿ ಹಾಗೂ ಥರ್ಡ್‌ ಕಾಪಿಗಳು ಖರೀದಿಗೆ ಲಭ್ಯ. ಫಸ್ಟ್‌ ಕಾಪಿ ಎಂದರೆ ಮೂಲ ಸರಕಿನಷ್ಟೇ ಉತ್ತಮ ಗುಣಮಟ್ಟದ ನಕಲು. ಉಳಿದೆರಡು ಕಾಪಿಗಳ ಗುಣಮಟ್ಟ ಕಳಪೆ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ (ನಮ್ಮ ದೇಶದಲ್ಲಿ ಸಿಗುವ ಚೀನಾ ಸರಕುಗಳ ಗುಣಮಟ್ಟ ಏಕೆ ಅಷ್ಟೊಂದು ಕಳಪೆ ಎಂಬುದು ಈಗ ಅರ್ಥವಾಗಿರಬೇಕಲ್ಲ?). ಜಗತ್ತಿನ ಅತ್ಯದ್ಭುತ ಎನಿಸುವಂತಹ ಎಲ್ಲ ಪ್ರೇಕ್ಷಣೀಯ ಸ್ಥಳಗಳ ಯಥಾವತ್ತು ನಕಲು ಮಾಡಿದ ‘ವಿಂಡೋ ಟು ದಿ ವರ್ಲ್ಡ್‌’ ಪ್ರವಾಸಿ ತಾಣವೂ ಇಲ್ಲಿದೆ. ವಿವಾದದ ಗಾಳಿ ಎಬ್ಬಿಸಿದ ನಮ್ಮ ತಾಜ್‌ ಮಹಲ್‌ ಕೂಡ ಅಲ್ಲಿದೆ.

ಮೊಬೈಲ್‌, ಕಂಪ್ಯೂಟರ್‌, ರೋಬೊ... ಯಾವುದು ಬೇಕಾದರೂ ಅದರ ಸಿದ್ಧ ಎಲೆಕ್ಟ್ರಾನಿಕ್‌ ಸರಕು ಅಥವಾ ಬಿಡಿಭಾಗಗಳು ಇಲ್ಲಿ ಲಭ್ಯ. ಜಗತ್ತಿನ ಹಲವು ಪ್ರಮುಖ ಕಂಪನಿಗಳು ಇಲ್ಲಿ ತಯಾರಾಗುವ ಬಿಡಿಭಾಗ ಖರೀದಿಸಿ, ತಮ್ಮ ಬ್ರ್ಯಾಂಡ್‌ನ ಸರಕು ಸಿದ್ಧಪಡಿಸಿ ಮಾರಾಟ ಮಾಡುತ್ತವೆ. ಹಾಗೆಯೇ ಎಲ್ಲಿಯೋ ತಯಾರಾದ ಜಗತ್ತಿನ ಎಲ್ಲ ಪ್ರಮುಖ ಬ್ರ್ಯಾಂಡ್‌ಗಳ ಸರಕುಗಳು ಇಲ್ಲಿ ಕಾಪಿಯಾಗುತ್ತವೆ.

ಸೆಂಜೆನ್‌ ಹೇಳಿ–ಕೇಳಿ ಗಗನಚುಂಬಿ ಕಟ್ಟಡಗಳ ನಗರ. ಇಲ್ಲಿನ ಬಿಲ್ಡರ್‌ಗಳು ಜಿದ್ದಿಗೆ ಬಿದ್ದಂತೆ ಎತ್ತರೆತ್ತರದ ಕಟ್ಟಡಗಳನ್ನು ಕಟ್ಟುವುದು ರೂಢಿ. ಕಳೆದ ಒಂದೇ ವರ್ಷದಲ್ಲಿ 11 ಗಗನಚುಂಬಿ ಕಟ್ಟಡಗಳು (200 ಮೀಟರ್‌ಗಿಂತ ಎತ್ತರ) ಈ ಊರಿನಲ್ಲಿ ನಿರ್ಮಾಣವಾಗಿವೆ. ಮಧ್ಯಮವರ್ಗದ ಜನರ ಮನೆಗಳು ಕಿಷ್ಕಿಂಧೆಯಂತಿವೆ. ಅವರೆಲ್ಲ ವಾಸವಾಗಿರುವುದು ಆಕಾಶದಲ್ಲಿ! ಅಂದರೆ, ಅವರ ಅಪಾರ್ಟ್‌ಮೆಂಟ್‌ಗಳು ಅಷ್ಟೊಂದು ಎತ್ತರವಾಗಿವೆ. ಸೆಂಜೆನ್‌ನಲ್ಲಿ ವಿದ್ಯುತ್‌ನ ಸಮೃದ್ಧಿ ಎಷ್ಟಿದೆ ಎಂದರೆ ರಾತ್ರಿಯಾದರೆ ದೀಪಗಳು ಕಟ್ಟಡಗಳ ಒಳಗೂ–ಹೊರಗೂ ಬೆಳಗುತ್ತವೆ. ಬೆಳಕಿನ ಮಳೆ ಸುರಿಯುತ್ತಿರುವಂತೆ ಭಾಸವಾಗುತ್ತದೆ ಅಲ್ಲಿನ ಸನ್ನಿವೇಶ. ಬಳಕೆ ಮಾಡಿ ಮಿಕ್ಕಿದ ವಿದ್ಯುತ್‌ ರಸ್ತೆ ಪಕ್ಕದ ಮರಗಳ ತಲೆ ಏರಿ ನರ್ತಿಸುತ್ತದೆ. ಹೌದು, ಮರಗಳಿಗೂ ದೀಪದ ಅಲಂಕಾರ ಮಾಡಿದ್ದಾರೆ ಇಲ್ಲಿನ ಜನ. ಆದ್ದರಿಂದಲೇ ನಿತ್ಯ ರಾತ್ರಿಯಾದರೆ ರಸ್ತೆಗಳಲ್ಲಿ ಬಣ್ಣ–ಬಣ್ಣದ ಬೆಳಕಿನ ಹೊಳೆ!

ಜಗತ್ತಿಗೆ ಇಷ್ಟೊಂದು ಢಾಳಾಢಾಳವಾಗಿ ತೆರೆದುಕೊಂಡಿದ್ದರೂ ಇಲ್ಲಿನ ಜನಕ್ಕೆ ಇಂಗ್ಲಿಷ್‌ನ ಗಂಧ–ಗಾಳಿ ಗೊತ್ತಿಲ್ಲ ಎನ್ನುವುದು ಆಶ್ಚರ್ಯ. ನೀವು ‘ಟಾಯ್ಲೆಟ್‌’ ಎಂದರೆ ಯಾರೂ ನಿಮಗೆ ಸಹಾಯಕ್ಕೆ ಬರುವುದಿಲ್ಲ. ಏಕೆಂದರೆ ಅದರ ಅರ್ಥ ಅವರಿಗೆ ಗೊತ್ತೇ ಇಲ್ಲ. ‘ಡಬ್ಲ್ಯುಸಿ’ ಎಂದರಷ್ಟೇ ನೀವು ನಿಸರ್ಗದ ಕರೆಗೆ ಇಲ್ಲಿ ಓಗೊಡಲು ಸಾಧ್ಯ ಎಂದು ಜೈನಿ ಮೊದಲೇ ಹೇಳಿದ್ದರು. ಇಲ್ಲಿನ ಜನರಿಗೆ ಇಂಗ್ಲಿಷ್‌ ಗೊತ್ತಿಲ್ಲವೇನೋ ನಿಜ. ಆದರೆ, ಅವರೆಲ್ಲ ಮೈಮುರಿದು ದುಡಿಯುವವರು. ಹುಡುಕಿದರೆ ಒಬ್ಬ ದಢೂತಿಯೂ ಸಿಗಲಿಲ್ಲ. ಸೆಂಜೆನ್‌ ಜನರ ಸಕ್ಕರೆ–ಹಾಲಿನ ಹಂಗಿಲ್ಲದ ಚಹಾ ಕುಡಿದಾಗ ನಮಗೂ ನವೋತ್ಸಾಹ. ಈ ಚಹಾವೇ ಅಲ್ಲಿನವರ ಆರೋಗ್ಯದ ಗುಟ್ಟಂತೆ ಕೂಡ. ಹೌದು, ಕಲಿಯಲು ಈ ಊರಲ್ಲಿ ಬೇಕಾದಷ್ಟು ಪಾಠಗಳಿವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.