ಸೋಮವಾರ, ಮಾರ್ಚ್ 8, 2021
32 °C

ಬಾಕ್ಸಿಂಗ್‌: ಐದನೇ ಚಿನ್ನಕ್ಕೆ ಮುತ್ತಿಟ್ಟ ಮೇರಿ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಬಾಕ್ಸಿಂಗ್‌: ಐದನೇ ಚಿನ್ನಕ್ಕೆ ಮುತ್ತಿಟ್ಟ ಮೇರಿ

ಹೋ ಚಿ ಮಿನ್ ಸಿಟಿ, ವಿಯೆಟ್ನಾಂ (ಪಿಟಿಐ): ಮೇರಿ ಕೋಮ್ ಭರವಸೆ ಹುಸಿಗೊಳಿಸಲಿಲ್ಲ. ಬಲವಾದ ಪಂಚ್‌ಗಳ ಮೂಲಕ ಎದುರಾಳಿಯನ್ನು ಕಂಗೆಡಿಸಿದ ಅವರು ಏಷ್ಯನ್ ಮಹಿಳಾ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದು ಸಂಭ್ರಮಿಸಿದರು.

ಇಲ್ಲಿ ಬುಧವಾರ ಮುಕ್ತಾಯಗೊಂಡ ಚಾಂಪಿಯನ್‌ಷಿಪ್‌ನ 48 ಕೆಜಿ ವಿಭಾಗದ ಫೈನಲ್‌ನಲ್ಲಿ ಅವರು ಉತ್ತರ ಕೊರಿಯಾದ ಕಿಮ್ ಹ್ಯಾಂಗ್ ಮಿ ಅವರನ್ನು 5–0ಯಿಂದ ಮಣಿಸಿದರು. ಈ ವಿಭಾಗದಲ್ಲಿ ಅವರು ಗೆದ್ದ ಮೊದಲ ಏಷ್ಯಾ ಕಪ್ ಪ್ರಶಸ್ತಿ ಇದು. ಒಟ್ಟಾರೆ ಏಷ್ಯನ್‌ ಚಾಂಪಿಯನ್‌ಷಿಪ್‌ನಲ್ಲಿ ಇದು ಅವರ ಐದನೇ ಪ್ರಶಸ್ತಿ. ಐದು ಬಾರಿ ವಿಶ್ವ ಚಾಂಪಿಯನ್‌ ಪಟ್ಟ ಅಲಂಕರಿಸಿದ ಶ್ರೇಯವೂ ಅವರದಾಗಿದೆ.

2012ರ ಒಲಿಂ‍ಪಿಕ್ಸ್‌ನಲ್ಲಿ ಕಂಚು ಗೆದ್ದಿದ್ದ ಮಣಿಪುರದ ಮೇರಿ ಕೋಮ್‌ ರಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು ವಿಫಲರಾಗಿದ್ದರು. ನಂತರ ವಿವಿಧ ಕಾರಣಗಳಿಂದ ಬಾಕ್ಸಿಂಗ್ ರಿಂಗ್‌ನಿಂದ ದೂರ ಉಳಿದಿದ್ದ ಅವರು ನಡೆಸಿದ ಕಠಿಣ ಪರಿಶ್ರಮದ ಫಲವಾಗಿ ಈಗ ಸಾಧನೆಯ ಮುಡಿಗೆ ಮತ್ತೊಂದು ಗರಿ ಸೇರಿಸಿಕೊಂಡಿದ್ದಾರೆ.

2014ರ ನಂತರ ಅವರು ಗಳಿಸಿದ ಮೊದಲ ಅಂತರರಾಷ್ಟ್ರೀಯ ಪಕದ ಇದಾಗಿದ್ದು ಯಾವುದೇ ಸ್ಪರ್ಧೆಯಲ್ಲಿ ಒಂದು ವರ್ಷದ ನಂತರ ಗಳಿಸಿದ ಪ್ರಶಸ್ತಿಯಾಗಿದೆ.

ಮಂಗಳವಾರ ನಡೆದ ಸೆಮಿಫೈನಲ್ ಬೌಟ್‌ನಲ್ಲಿ ಅವರು ಜಪಾನ್‌ನ ತ್ಸುಬಾಸಾ ಕೊಮುರ ಎದುರು 5–0ಯಿಂದ ಗೆದ್ದಿದ್ದರು. ಈ ಮೂಲಕ ಆರನೇ ಬಾರಿ ಏಷ್ಯನ್ ಚಾಂಪಿಯನ್‌ಷಿಪ್‌ನ ಫೈನಲ್‌ ಪ್ರವೇಶಿಸಿದ ಸಾಧನೆ ಮಾಡಿದ್ದರು.

ಬುಧವಾರ ಪ್ರಶಸ್ತಿ ಗೆದ್ದ ನಂತರ ಮಾತನಾಡಿದ ಮೇರಿ ‘ಚಾಂಪಿಯನ್‌ಷಿಪ್‌ನಲ್ಲಿ ಮಾಡಿರುವ ಸಾಧನೆ ಖುಷಿ ತಂದಿದೆ. ಬಾಕ್ಸಿಂಗ್‌ ರಿಂಗ್‌ನಲ್ಲಿ ಇನ್ನು ಮುಂದೆ ಸಾಧನೆ ಮಾಡಲಾಗದು ಎಂದು ವಿಶ್ವವೇ ನಿರಾಸೆಗೊಳಿಸಿದಾಗಲೂ ನನಗೆ ಬೆಂಬಲ ನೀಡಿದ ದೇಶದ ಜನರಿಗೆ ಈ ಪ್ರಶಸ್ತಿಯನ್ನು ಅರ್ಪಿಸುತ್ತೇನೆ’ ಎಂದು ಹೇಳಿದರು.

ಸೋನಿಯಾಗೆ ಬೆಳ್ಳಿ ಪದಕ ಮೇರಿ ಅವರ ಚಿನ್ನದ ಸಂಭ್ರಮದ ನಡುವೆ ಭಾರತದ ಮೊತ್ತೊಬ್ಬರು ಭರವಸೆಯ ಬಾಕ್ಸರ್‌ ಸೋನಿಯಾ ಲಾಥರ್ ನಿರಾಸೆ ಮೂಡಿಸಿದರು. 57 ಕೆಜಿ ವಿಭಾಗದಲ್ಲಿ ಅವರು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡರು. ಚೀನಾದ ಇನ್‌ ಜುನ್ಹುವಾ ಎದುರು ಸೋನಿಯಾ ಸೋಲು ಕಂಡರು. ಈ ಮೂಲಕ ಅವರು ಸತತ ಎರಡನೇ ಬಾರಿ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಗೆದ್ದಂತಾಯಿತು. ಮಂಗಳವಾರ ನಡೆದ ಸೆಮಿಫೈನಲ್ ಬೌಟ್‌ಗಳಲ್ಲಿ ಸೋಲುಂಡ ಭಾರತದ ಐದು ಬಾಕ್ಸರ್‌ಗಳು ಕಂಚು ಗೆದ್ದಿದ್ದರು.

ಮೋದಿ ಅಭಿನಂದನೆ

ರಾಜ್ಯಸಭಾ ಸದಸ್ಯೆಯೂ ಆಗಿರುವ ಮೇರಿ ಕೋಮ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ. ‘ಚಿನ್ನ ಗೆದ್ದ ನಿಮಗೆ ಅಭಿನಂದನೆ. ನಿಮ್ಮ ಸಾಧನೆಗೆ ಭಾರತ ಪುಳಕಗೊಂಡಿದೆ’ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.