3
ಸ್ವತಂತ್ರ ಧರ್ಮದ ಮಾನ್ಯತೆಗೆ ಸರ್ವರ ಸಹಕಾರ ಮುಖ್ಯ. ಅದನ್ನು ಸಾಧ್ಯಗೊಳಿಸುವ ನಿಟ್ಟಿನಲ್ಲಿ ಚಿಂತನೆ ನಡೆಯಲಿ

ದ್ವೇಷ ಸಾಧನೆ ಸಾಕು; ಕಾರ್ಯಸಾಧನೆ ಬೇಕು

Published:
Updated:
ದ್ವೇಷ ಸಾಧನೆ ಸಾಕು; ಕಾರ್ಯಸಾಧನೆ ಬೇಕು

ಆಂದೋಲನ ಶಬ್ದಕ್ಕೆ ಕ್ರಾಂತಿ ಎಂಬ ಅರ್ಥವಿದೆ. ಪ್ರಸ್ತುತ ದಿನಮಾನಗಳಲ್ಲಿ ಅದು ಹೋರಾಟದ ಸ್ವರೂಪವನ್ನು ಪಡೆದುಕೊಂಡಿರುತ್ತದೆ. ಹೋರಾಟವು ಸಾಮಾನ್ಯ ಬೇಡಿಕೆಗಳನ್ನು ಒಳಗೊಂಡು ಜ್ವಲಂತ ಸಮಸ್ಯೆಗಳ ಕಡೆಗೂ ಗಮನಹರಿಸುತ್ತದೆ. ಬೇಡಿಕೆ ಈಡೇರಿದಾಕ್ಷಣ ಹೋರಾಟಕ್ಕೆ ನಿಲುಗಡೆ. ಕ್ರಾಂತಿ ಅಥವಾ ಆಂದೋಲನವು ಸೈದ್ಧಾಂತಿಕ ನೆಲೆಗಟ್ಟಿನ ಮೇಲೆ ನಡೆಯುತ್ತವೆ. ಅಮೆರಿಕ ಮತ್ತು ಫ್ರೆಂಚ್ ಮುಂತಾದ ದೇಶಗಳಲ್ಲಿ ನಡೆದದ್ದನ್ನು ಕ್ರಾಂತಿಯೆಂದು ಇತಿಹಾಸಕಾರರು ಅರ್ಥೈಸಿದ್ದಾರೆ. ಅದರಂತೆ 900 ವರ್ಷಗಳ ಹಿಂದೆ ಅಂದರೆ 12ನೇ ಶತಮಾನದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ಕ್ರಾಂತಿ ನಡೆಯಿತು.

ಕ್ರಾಂತಿ ಅಥವಾ ಆಂದೋಲನಕ್ಕೆ ತಾತ್ವಿಕತೆಯೇ ತಳಹದಿ. ಸಮಾಜವು ಸಂಪ್ರದಾಯಬದ್ಧವಾಗಿದೆ; ಚಲನರಹಿತವಾಗಿದೆ. ಅದನ್ನು ಸದಾ ಚಲನಶೀಲಗೊಳಿಸಬೇಕಾಗುತ್ತದೆ. ಸಾಮಾಜಿಕ ಅಸಮಾನತೆ, ಜಾತಿಯ ಸ್ಪೃಶ್ಯ-ಅಸ್ಪೃಶ್ಯತೆ, ಆರ್ಥಿಕ ತಾರತಮ್ಯ, ಲಿಂಗ ಅಸಮಾನತೆ, ಅಮಾನವೀಯತೆ, ಧರ್ಮ ಮತ್ತು ದೇವರ ಹೆಸರಲ್ಲಿ ನಡೆಯುವ ಶೋಷಣೆ ಮುಂತಾದ ಸಮಸ್ಯೆಗಳು ನಿರಂತರವಾಗಿ ಕಾಡುತ್ತಲೇ ಇರುತ್ತವೆ. ಯಾವುದೇ ದಾರ್ಶನಿಕರು ಬಂದಾಗ, ಸಾಮಾಜಿಕ ಪಿಡುಗುಗಳ ವಿರುದ್ಧ ಜಾಗೃತಿ ಮೂಡಿಸುತ್ತಾರೆ. ಅವರು ಮರೆಯಾದ ತಕ್ಷಣ ಸಮಾಜವು ಅವರು ಬೋಧಿಸಿದ ಆದರ್ಶಗಳನ್ನು ಮರೆಯುತ್ತದೆ.

ಒಂದು ಕ್ರಾಂತಿಯ ಯಶಸ್ಸಿನ ದಿಸೆಯಲ್ಲಿ ಬದ್ಧತೆ ಮತ್ತು ಪ್ರಬುದ್ಧತೆಯನ್ನು ಹೊಂದಿದ ವ್ಯಕ್ತಿತ್ವಗಳು ಬೇಕಾಗುತ್ತವೆ. 12ನೇ ಶತಮಾನದ ವಚನಕಾರರ ಚಳವಳಿ ಇಂದಿಗೂ

ಪ್ರಸ್ತುತವಾಗಿದೆ ಯಾಕೆ? ಬಸವಣ್ಣ, ಅಲ್ಲಮ, ಚನ್ನಬಸವಣ್ಣ, ಸಿದ್ಧರಾಮಣ್ಣ, ಅಕ್ಕಮಹಾದೇವಿಯಂಥವರ ಮುಂದಾಳುತನದೊಂದಿಗೆ ಮಾದಾರ ಚೆನ್ನಯ್ಯ, ಡೋಹರ ಕಕ್ಕಯ್ಯ, ನುಲಿಯಚಂದಯ್ಯ, ಹಡಪದ ಅಪ್ಪಣ್ಣ, ಮಡಿವಾಳ ಮಾಚಿದೇವ, ಸಮಗಾರ ಹರಳಯ್ಯ, ಉರಿಲಿಂಗಪೆದ್ದಿಗಳಂಥ ಸಮರ್ಥ ಹಾಗೂ ತತ್ತ್ವನಿಷ್ಠರ ಸಾಮೂಹಿಕ ನೇತೃತ್ವ.

ಹರಳಯ್ಯ ಮತ್ತು ಮಧುವಯ್ಯ ಹಾಗೂ ಅವರ ಮಕ್ಕಳು ಬಸವಾದಿ ಶರಣರ ಜಾತ್ಯತೀತ ಸಮಾಜ ರಚನೆಗೆ ಮುಂದಾದ ಸಂದರ್ಭದಲ್ಲಿ ತಮ್ಮ ಬದುಕನ್ನು ತೆತ್ತರು. ಇಡೀ ಕ್ರಾಂತಿಗೆ ಅವರು ಆಹಾರವಾದರು. ಸಿದ್ಧಾಂತಕ್ಕಾಗಿ ಜೀವ ತೆರುವಷ್ಟು ಗಟ್ಟಿಗರು. ಅದರಂತೆ ಗಾಂಧೀಜಿ ಮುಖಂಡತ್ವದಲ್ಲಿ ನಡೆದ ಸ್ವಾತಂತ್ರ್ಯ ಸಂಗ್ರಾಮ. ಗಾಂಧಿಯವರ ಗಟ್ಟಿ ನಿರ್ಧಾರ ಮತ್ತು ದೇಶವನ್ನು ಗುಲಾಮಗಿರಿಯಿಂದ ಪಾರು ಮಾಡಲೇಬೇಕೆಂಬ ಅಚಲವಾದ ನಿರ್ಧಾರ. ಆ ಸಂಗ್ರಾಮದಲ್ಲಿ ಹಲವಾರು ಏಕೆ, ಸಾವಿರಾರು ಜನರು ಜೀವತೆತ್ತರು. ಬ್ರಿಟಿಷರು ನಡೆಸಿದ ಜಲಿಯನ್ ವಾಲಾಬಾಗ್ ಹತ್ಯೆಯೇ ಅದಕ್ಕೊಂದು ನಿದರ್ಶನ.

ಸ್ವಾತಂತ್ರ್ಯಕ್ಕಾಗಿ ಹೋರಾಡಿ ಮಡಿದ ವೀರಸೇನಾನಿಗಳ ಬಲಿದಾನದಿಂದಾಗಿ ಇಂದು ನಾವು ಸ್ವಾತಂತ್ರ್ಯವನ್ನು ಅನುಭವಿಸುತ್ತಿದ್ದೇವೆ. ಅದರಂತೆ ಇಂದಿನ ಲಿಂಗಾಯತ, ವೀರಶೈವ ಮಾತ್ರವಲ್ಲದೆ ಜಂಗಮರು ಮೊದಲಾಗಿ ಎಲ್ಲರೂ ಅಂದು ಶೂದ್ರಾತಿಶೂದ್ರ ವರ್ಗಕ್ಕೆ ಸೇರಿದವರಾಗಿದ್ದರು. ಸಾಮಾಜಿಕ ಸಮಾನತೆಗಾಗಿ ನಡೆದ ಕ್ರಾಂತಿಯ ಫಲವಾಗಿ ಧಾರ್ಮಿಕ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ದೊರಕಿತು.

ಈ ನಡುವೆ ಸಮಗ್ರ ಕ್ರಾಂತಿಯನ್ನೆಸಗಿದ ಬಸವಾದಿ ಶರಣರ ತತ್ತ್ವಗಳನ್ನು ಗಾಳಿಗೆ ತೂರಿ, ವೈದಿಕತನ ವಿಜೃಂಭಿಸಿದ್ದು ದೊಡ್ಡ ದುರಂತ. ನಂತರದ ದಿನಗಳಲ್ಲಿ ನಾವು ಕೂಡಾ ಸಾಂಸ್ಕೃತಿಕವಾಗಿ ಹಾಗೂ ಸಾಮಾಜಿಕವಾಗಿ ಉನ್ನತಿ ಹೊಂದಿದ್ದೇವೆಂದು ತೋರಿಸಲು ಹೆಣಗಾಡಬೇಕಾಯಿತು. ಅಂದು ಉನ್ನತಿಕೆಗಾಗಿ; ಇಂದು ಮೀಸಲಾತಿಗಾಗಿ. ತಾವು ಶೂದ್ರವರ್ಗಕ್ಕೆ ಸೇರಿದವರೆಂದು ಗುರುತಿಸಿಕೊಳ್ಳಲು ಏನೆಲ್ಲ ನಾಟಕೀಯ ವಿದ್ಯಮಾನಗಳು ನಡೆಯುತ್ತಿವೆ. ಎಲ್ಲ ವರ್ಗದವರಲ್ಲೂ ಬಡವರಿದ್ದಾರೆ; ಶೋಷಣೆಗೆ ಒಳಗಾದವರು ಇದ್ದಾರೆ. ಅವರಿಗೆ ನ್ಯಾಯ ಸಿಗಬೇಕು ನಿಜ. ಆದರೆ ಮೀಸಲಾತಿ ನೆಪದಲ್ಲಿ ಸಾಮಾಜಿಕ ಸಂಘಟನೆ ಒಡೆದು ಹೋಗಬಾರದಲ್ಲ!

ಲಿಂಗಾಯತ ಸ್ವತಂತ್ರ ಧರ್ಮದ ಮನ್ನಣೆಗಾಗಿ ನಡೆಯುತ್ತಿರುವ ಹೋರಾಟದ ಬಗ್ಗೆ ಕೆಲವರು ಸಮಾಜ ಒಡೆಯುವ ಕೆಲಸವೆಂದು ಮೂದಲಿಸುತ್ತಿದ್ದಾರೆ. ಅಂಥವರಿಗೆ ಒಂದು ಪ್ರಶ್ನೆ- ಲಿಂಗಾಯತ ಮತ್ತು ವೀರಶೈವದ ಹೆಸರಿನಲ್ಲಿ ಕೆಲ ಉಪಜಾತಿಗಳು ತಾವು ಲಿಂಗಾಯತ ಸಮಾಜಕ್ಕೆ ಸೇರಿದವುಗಳಲ್ಲ; ತಮಗೆ ಸರ್ಕಾರಿ ಕೋಟಾದಲ್ಲಿ ಮೀಸಲಾತಿ ಬೇಕೆಂದು ಸರ್ಕಾರಕ್ಕೆ ದುಂಬಾಲು ಬಿದ್ದು ಮೂಲ ಲಿಂಗಾಯತ ಸಂಘಟನೆಯಿಂದ ಹೊರಹೋದವಲ್ಲವೇ? ಸಮಾಜ ಆಗ ಹೋಳಾಗದಂತೆ ಯಾಕೆ ನೋಡಿಕೊಳ್ಳಲಿಲ್ಲ?

ಬಸವಪ್ರಣೀತ ಲಿಂಗಾಯತ ಧರ್ಮದೊಂದಿಗೆ ಗುರುತಿಸಿಕೊಳ್ಳಲು ಕೆಲ ಜನಾಂಗಗಳು ಇಚ್ಛಿಸುತ್ತವೆ. ಅಂಥವರಲ್ಲಿ ಶಿವಸಿಂಪಿಗ, ಗಾಣಿಗ, ಬಣಜಿಗ, ಕುಂಚಿಟಿಗ, ಮಡಿವಾಳ ಇತ್ಯಾದಿ ಜನಾಂಗಗಳು. ಈ ಜನಾಂಗಗಳನ್ನು ಹೊರತುಪಡಿಸಿ ಉಳಿದ ಲಿಂಗಾಯತ ಧರ್ಮದ ಉಪಜಾತಿಗಳು ಮೀಸಲಾತಿ ಸೌಲಭ್ಯಕ್ಕಾಗಿ ಹೋರಾಡಿ, ಅದನ್ನು ಗಿಟ್ಟಿಸಿಕೊಂಡಿರುವುದನ್ನು ಕಾಣಬಹುದು. ಇವರನ್ನೊಳಗೊಂಡಂತೆ ಲಿಂಗಾಯತ ಧರ್ಮದ 99 ಉಪಜಾತಿಗಳಿಗೆ ಸ್ವತಂತ್ರ ಧರ್ಮದ ಅಡಿಯಲ್ಲಿ ಮೀಸಲಾತಿ ಸೌಲಭ್ಯವು ದೊರಕುವ ಸಾಧ್ಯತೆಯಿದೆ. ಮೀಸಲಾತಿ ಸೌಲಭ್ಯವನ್ನು ಪಡೆದವರು ತಟಸ್ಥರಾಗಿದ್ದಾರೆ.

ಶರಣರ ಸಿದ್ಧಾಂತವು ವೈದಿಕತೆಯನ್ನು ಬದುಕಿನ ಮಾರ್ಗವೆಂದು ಪರಿಗಣಿಸದೆ, ಅದು ಮುಗ್ಧಜನರ ಶೋಷಣೆಯ ಹಾದಿಯೆಂದು ಬಗೆಯಿತು. ಅಲ್ಲದೆ ಕಾಯಕ ಧರ್ಮವನ್ನು ಬಲವಾಗಿ ಪ್ರತಿಪಾದಿಸುತ್ತ ಪ್ರತಿಯೊಂದು ಜನಾಂಗದಲ್ಲೂ ದುಡಿಯುವ ಪ್ರವೃತ್ತಿಯನ್ನು ಜಾಗೃತಗೊಳಿಸಿತು. ‘ಬೇಡುವವರಿಲ್ಲದೆ ಬಡವಾದೆ’ ಎಂಬ ಬಸವವಾಣಿಯಲ್ಲಿ ಸ್ಥಾನಮಾನ ಹಾಗೂ ಸ್ವಸ್ಥ ಸಮಾಜದ ಪರಿಕಲ್ಪನೆ ಸ್ಪಷ್ಟವಾಗಿದೆ.

ಸದ್ಯ ನಡೆದಿರುವ ಹೋರಾಟವನ್ನು ಗಮನಿಸುತ್ತ ಹೋದರೆ, ಯಾರ್‍ಯಾರ ಒಳಗೆ ಏನೇನು ಇದೆ ಎಂಬುದು ವ್ಯಕ್ತವಾಗುತ್ತಿದೆ. ಸಾಮಾಜಿಕ ಪರಿವರ್ತನೆ ನಡೆದಾಗಲೆಲ್ಲ ವಾದ-ವಿವಾದಗಳು ಕೇಳಿಬರುತ್ತವೆ. ಕ್ರಿಯೆ ಇರುವೆಡೆಯಲ್ಲಿ ಪ್ರತಿಕ್ರಿಯೆ ಇರಲಿಕ್ಕೇಬೇಕು. ಪ್ರಜಾಪ್ರಭುತ್ವದಲ್ಲಿ ಅಭಿಪ್ರಾಯಗಳು ಸಾಮಾನ್ಯ. ಅದರಂತೆ ಖಂಡನೆ-ಮಂಡನೆ. ಕೆಲವರು ಈ ಸಂದರ್ಭವನ್ನು ತಮಗಾಗದವರ ಚಾರಿತ್ರ್ಯವಧೆ ಮಾಡಲು ಬಳಸಿಕೊಂಡರು. ಇನ್ನು ಕೆಲವರು ತಮ್ಮ ನೇತಾರರ ಪರವಾಗಿ ವಾದಿಸಲು ಮುಂದಾದರು. ಇನ್ನು ಕೆಲವರು ಪರಸ್ಪರ ದೋಷಾರೋಪಣೆಗೆ ಸೀಮಿತವಾಗಲಾರದೆ ತಮಗಾಗದವರ ಭಾವಚಿತ್ರಗಳನ್ನು ಬೀದಿಗೆ ಎಳೆದು ತಂದರು. ಪ್ರತಿಕೃತಿ ದಹನ, ಚಪ್ಪಲಿ ಹಾರ ಹಾಕಲಾಯಿತು. ಎರಡೂ ಕಡೆ ಅದು ನಡೆಯಿತು. ಇಲ್ಲಿ ಸ್ವತಂತ್ರ ಧರ್ಮದ ಮಾನ್ಯತೆ ಮೂಲೆಗುಂಪಾಗಿ ವೈಯಕ್ತಿಕ ರಾಗ– ದ್ವೇಷಗಳು ಮಾಧ್ಯಮಗಳಿಗೆ ಸಾಕಷ್ಟು ಆಹಾರವಾದವು. ಸದ್ಯಕ್ಕಂತೂ ಅದಕ್ಕೆ ಪೂರ್ಣವಿರಾಮ ದೊರೆತಂತೆ ಕಾಣುವುದಿಲ್ಲ.

ಅಪ್ರಬುದ್ಧರು ಮತ್ತು ಅಪಕ್ವ ಹೃದಯದವರು ಎಲ್ಲ ಜನಾಂಗದಲ್ಲೂ ಇದ್ದಾರೆ, ಎಲ್ಲ ಕಾಲದಲ್ಲೂ ಇರುತ್ತಾರೆ. ‘ತಮ್ಮಿಂದ ದೀಕ್ಷೆ ಪಡೆದವರು ಹೀಗೆ ಮಾತನಾಡಬಹುದೇ?’ ಎಂದು ನನಗೆ ಕೆಲವರು ಕೇಳಬಹುದು; ಕೇಳುತ್ತಾರೆಂದು ಇಟ್ಟುಕೊಳ್ಳೋಣ. ಮುರುಘಾ ಶರಣರಿಂದ ದೀಕ್ಷೆ ಪಡೆದವರಲ್ಲಿ ಮಾತ್ರ ಅಪಕ್ವತೆ ಇಲ್ಲ; ಎಲ್ಲ ಕ್ಷೇತ್ರದಲ್ಲೂ ಅಪಕ್ವ ಹೃದಯಗಳು ಇರುತ್ತವೆ. ಅಮಾಯಕ ಮತ್ತು ಅಸಹಾಯಕ ಸ್ಥಿತಿಯಲ್ಲಿ ಇರುವವರು ಹಾಗೆ ವರ್ತಿಸುತ್ತಾರೆ; ಹೇಳಿಕೆ ನೀಡುತ್ತಾರೆಂದು ಹೇಳಲಿಕ್ಕಾಗದು. ಜವಾಬ್ದಾರಿ ಸ್ಥಾನದಲ್ಲಿರುವವರಿಂದಲೂ ಅಪ್ರಬುದ್ಧ ಹೇಳಿಕೆಗಳು ಮತ್ತು ವರ್ತನೆಗಳು. ಈ ದಿಶೆಯಲ್ಲಿ ಅವರವರ ಆಂತರಿಕ ಸ್ಥಿತಿ, ಅಧ್ಯಯನ ಮತ್ತು ಅನುಭವದ ಕೊರತೆಯಿಂದ ಅನಾರೋಗ್ಯಕರವಾದ ನಡೆ-ನುಡಿ.

ತಪ್ಪು, ಮಾನವನ ಸಹಜವಾದ ಗುಣ. ತಪ್ಪು ಮಾಡದವರು ಯಾರಿದ್ದಾರೆ? ಪ್ರತಿಯೊಂದು ತಪ್ಪು ಮಾನವನ ತಿಳಿವಳಿಕೆಗೆ ಹಾದಿ ಮಾಡಿಕೊಡುತ್ತದೆ. ಸಹಜವಾದ ತಪ್ಪುಗಳನ್ನೆಸಗುತ್ತಲೇ ಜ್ಞಾನಿಗಳೆನಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ತಪ್ಪಿನ ಪರಾಮರ್ಶೆ ಆಗಬೇಕು; ಒಳಿತಿನ ಅನ್ವೇಷಣೆ ನಡೆಯಬೇಕು. ತಪ್ಪು ಮಾಡುವುದು ಸಾಮಾನ್ಯ; ಕ್ಷಮಿಸುವುದು ದೈವಿಕ ಗುಣ. ತಪ್ಪುಗಳು ಯಾರ ಬದುಕನ್ನೂ ಬಿಡದಿರುವಾಗ, ಈ ಸಂದರ್ಭವನ್ನು ಯಾವುದಕ್ಕಾಗಿ ಬಳಸಿಕೊಳ್ಳಬಹುದು? ಇದು ಸ್ವವಿಮರ್ಶೆ ಮಾಡಿಕೊಳ್ಳಲು ಉತ್ತಮ ಸುಸಮಯ. ಪಶ್ಚಾತ್ತಾಪವು ನಿಜವಾದ ಪ್ರಾಯಶ್ಚಿತ್ತ. ಕೆಲವರು ತಪ್ಪು ಮಾಡುತ್ತಾರೆ; ತಾವು ಮಾತ್ರ ತಪ್ಪು ಮಾಡುವುದಿಲ್ಲ ಎಂಬಂತಹ ಸ್ಥಿತಿಯಲ್ಲಿ ಕೆಲವರಿದ್ದಾರೆ.

ಕೆಲವರು ಬೇರೆಯವರಿಗೆ ಕಾಣಿಸದಂತೆ ತಪ್ಪು ಮಾಡುತ್ತಾರೆ; ತಪ್ಪು ಮಾಡಲು ಹೋಗಿ ಸಿಕ್ಕಿ ಹಾಕಿಕೊಂಡುಬಿಡುತ್ತಾರೆ. ಕೆಲವರು ಮಾಡುವ ತಪ್ಪನ್ನು ಸಿಕ್ಕಿಹಾಕಿಕೊಳ್ಳದಂತೆ ಮಾಡುತ್ತಾರೆ. ಪ್ರತಿಯೊಬ್ಬರೂ ತಮ್ಮ ತಪ್ಪು-ಒಪ್ಪು ಪರಾಮರ್ಶಿಸಿಕೊಳ್ಳಬೇಕಾಗುತ್ತದೆ. ಹೆಚ್ಚು ತಪ್ಪು ಮಾಡಿದವನು ಹೆಚ್ಚು ಸಹಿಸಿಕೊಳ್ಳುತ್ತಾನೆ. ಸಂಕಟದ ಸಂದರ್ಭವನ್ನು ಹೆಚ್ಚುಹೆಚ್ಚು ಎದುರಿಸಿದವನು ಅನುಭವಿಯಾಗಿ ಕಂಗೊಳಿಸುತ್ತಾನೆ. ಬಡತನ, ಕಷ್ಟ, ಸಹಿಷ್ಣುತೆ, ದುಃಖ-ದುಮ್ಮಾನ, ಅವಮಾನ, ನಿಂದೆಗಳು ಒಬ್ಬ ಧೈರ್ಯವಂತ ಮತ್ತು ಗುಣವಂತನನ್ನು ಸೃಷ್ಟಿಸಬಲ್ಲವು.

ತಪ್ಪಿನ ಪರಾಮರ್ಶೆ ಮಾಡುತ್ತಲೇ, ಅವುಗಳ ಸಂಖ್ಯೆಯನ್ನು ತಗ್ಗಿಸುತ್ತ ನಡೆದಾಗ ಜಗತ್ತು ಅಂಥವರನ್ನು ‘ಮಹಾತ್ಮ’ ಎಂದು ಗೌರವಿಸುತ್ತದೆ. ವಿಶ್ವದ ಇತಿಹಾಸದಲ್ಲಿ ಬಸವಣ್ಣ ಮತ್ತು ಗಾಂಧೀಜಿ ಅವರಿಗೆ ಆ ಪದವಿ ಪ್ರಾಪ್ತವಾಗಿದೆ. ತಪ್ಪು ಮಾಡುವವನು ದೊಡ್ಡವನಲ್ಲ; ತಪ್ಪನ್ನು ಒಪ್ಪಿಕೊಳ್ಳುವವನು

ಮತ್ತು ತಿದ್ದಿಕೊಳ್ಳವವನು ದೊಡ್ಡವನು. ಬಸವಣ್ಣನವರು ತಮ್ಮದೊಂದು ವಚನದಲ್ಲಿ -

ಎನ್ನ ತಪ್ಪು ಅನಂತ ಕೋಟಿ, ನಿಮ್ಮ ಸೈರಣೆಗೆ ಲೆಕ್ಕವಿಲ್ಲ,

ಇನ್ನು ತಪ್ಪಿದೆನಾದಡೆ ನಿಮ್ಮ ಪಾದವೆ ದಿವ್ಯ

ಕೂಡಲಸಂಗಮದೇವಯ್ಯ

ನಿಮ್ಮ ಪ್ರಮಥರ ಮುಂದೆ ಕಿನ್ನರ ಬೊಮ್ಮಣ್ಣ ಸಾಕ್ಷಿ

ಈ ವಚನದಲ್ಲಿ ಬಸವಣ್ಣನವರು ದೇವರ ಮೇಲೆ ಆಣೆ ಮಾಡುವುದಕ್ಕಿಂತ ಸಮಕಾಲೀನ ಶರಣರಾದ ಕಿನ್ನರ ಬೊಮ್ಮಣ್ಣನು ಸಾಕ್ಷಿ ಎನ್ನುತ್ತಾರೆ. ಅವರಿಗೆ ದೇವರ ಮೇಲಿನ ಶ್ರದ್ಧೆ-ಭಕ್ತಿಗಿಂತ ಶರಣರ ಮೇಲೆ ಎಲ್ಲಿಲ್ಲದ ವಿಶ್ವಾಸ. ಶರಣರ ಸಾಕ್ಷಿಯು ಬಸವಣ್ಣನಂಥವರಿಗೆ ಆತ್ಯಂತಿಕವಾದರೆ, ಅವರವರ ಅಂತಃಸಾಕ್ಷಿಯೇ ಅವರವರ ತಪ್ಪು-ಒಪ್ಪುಗಳಿಗೆ ಸಾಕ್ಷಿ. ಅದಕ್ಕಿಂತ ಮಿಗಿಲಾದ ಸಾಕ್ಷಿ ಬೇಕಾಗಿಲ್ಲ.

ಆಕ್ರೋಶ ಮತ್ತು ಆವೇಶ ಎಂದಿಗೂ ಸಲ್ಲದು. ಅವು ಅಮೂಲ್ಯವಾದ ಸಮಯ ಮತ್ತು ಶಕ್ತಿಯನ್ನು ಹಾಳುಮಾಡುತ್ತವೆ. ಅನಿರೀಕ್ಷಿತವಾದ ಹಾಗೂ ಅಸಹ್ಯಕರವಾದ ಹೇಳಿಕೆಗಳು ಆಘಾತವನ್ನಲ್ಲದೆ ಸಮಾಜದಲ್ಲಿ ಕ್ಷೋಭೆಯನ್ನು ಉಂಟುಮಾಡುತ್ತವೆ. ಆಡಿದ ಮಾತಿಗೆ ಪ್ರತಿಭಟನೆ, ಪ್ರತಿಕೃತಿ ದಹನ ಮಾಡುತ್ತ ಕುಳಿತರೆ ಇನ್ನಷ್ಟು ಕ್ಷೋಭೆಯ ವಾತಾವರಣ. ಅದನ್ನು ಹೊರತುಪಡಿಸಿ ಪರಸ್ಪರ ಅವಲೋಕನ ಮಾಡಿಕೊಳ್ಳೋಣ. ಕೆಸರೆರಚಾಟಕ್ಕೆ ಕಾಲಹರಣ ಮಾಡುವುದು ಬೇಡ. ಕಾರ್ಯಸಾಧನೆಗೆ ಕಾಲವನ್ನು ಬಳಸಿಕೊಳ್ಳೋಣ. ಮೂರ್ಖತನದ ಪ್ರದರ್ಶನ ನಿಲ್ಲಲಿ. ನಮ್ಮೊಳಗೆ ಪ್ರಬುದ್ಧತೆ ಪ್ರಕಾಶಿಸುವಂತೆ ನೋಡಿಕೊಳ್ಳೋಣ. ಸ್ವತಂತ್ರ ಧರ್ಮದ ಮಾನ್ಯತೆಗೆ ಸರ್ವರ ಸಹಕಾರ ಬಹಳ ಮುಖ್ಯ. ಅದನ್ನು ಸಾಧ್ಯಗೊಳಿಸುವ ನಿಟ್ಟಿನಲ್ಲಿ ನಮ್ಮೊಳಗೆ ಚಿಂತನೆ ನಡೆಯಲಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry