ಶುಕ್ರವಾರ, ಮಾರ್ಚ್ 5, 2021
21 °C
ವೇಣುಗೋಪಾಲ್, ವಿಷ್ಣುನಾಥನ್‌ ವಿರುದ್ಧ ಅರವಿಂದ ಲಿಂಬಾವಳಿ ಟೀಕಾಸ್ತ್ರ

‘ಅತ್ಯಾಚಾರಿಗಳು ರಾಜ್ಯಕ್ಕೆ ಬರುವುದು ಬೇಡ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಅತ್ಯಾಚಾರಿಗಳು ರಾಜ್ಯಕ್ಕೆ ಬರುವುದು ಬೇಡ’

ಮಂಗಳೂರು: ಕಾಂಗ್ರೆಸ್‌ ರಾಜ್ಯ ಉಸ್ತುವಾರಿಗಳಾದ ಕೆ.ಸಿ. ವೇಣುಗೋಪಾಲ್ ಹಾಗೂ ವಿಷ್ಣುನಾಥನ್‌ ಅತ್ಯಾಚಾರ ಎಸಗಿರುವ ಆರೋಪ ಎದುರಿಸುತ್ತಿದ್ದು, ಇಂಥವರು ರಾಜ್ಯಕ್ಕೆ ಬರುವುದು ಬೇಡ. ಅವರನ್ನು ವಾಪಸ್‌ ಕರೆಸಿಕೊಳ್ಳಿ ಎಂದು ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಆಗ್ರಹಿಸಿದರು.

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನ್ಯಾ.ಜಿ.ಶಿವಶಂಕರ್‌ ಆಯೋಗವು ಈಗಾಗಲೇ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರಿಗೆ ವರದಿ ಸಲ್ಲಿಸಿದೆ. ಇಬ್ಬರೂ ಅತ್ಯಾಚಾರ ನಡೆಸಿರುವುದು ಹಾಗೂ ಸೋಲಾರ್‌ ಹಗರಣದಲ್ಲಿ ಭಾಗಿಯಾಗಿರುವುದು ವರದಿಯಲ್ಲಿ ಸ್ಪಷ್ಟವಾಗಿದೆ. ಪಿಣರಾಯಿ ವಿಜಯನ್‌ ಅವರು, ಇಂಥವರ ರಕ್ಷಣೆ ಮಾಡಬಾರದು ಎಂದರು.

ಜಾರ್ಜ್‌ ರಾಜೀನಾಮೆಗೆ ಹೋರಾಟ: ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ಸಚಿವ ಕೆ.ಜೆ. ಜಾರ್ಜ್‌ ಅವರ ರಾಜೀನಾಮೆಗೆ ಒತ್ತಾಯಿಸಿ, ಬೆಳಗಾವಿ ಅಧಿವೇಶನದಲ್ಲಿ ಆರಂಭದ ದಿನದಿಂದಲೇ ಹೋರಾಟ ಮಾಡಲು ಕೋರ್‌ ಕಮಿಟಿ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಲಿಂಬಾವಳಿ ತಿಳಿಸಿದರು.

ಹುಬ್ಬಳ್ಳಿಯಲ್ಲಿ ಕಾರ್ಯಕ್ರಮ: ಪರಿವರ್ತನಾ ರ‍್ಯಾಲಿಯ ಸಮಾವೇಶ ಡಿಸೆಂಬರ್‌ 21 ರಂದು ಹುಬ್ಬಳ್ಳಿಯಲ್ಲಿ ನಡೆಯಲಿದ್ದು, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಮುಂದಿನ ಕೋರ್‌ ಕಮಿಟಿ ಸಭೆ ಇದೇ 25ರಂದು ನಡೆಯಲಿದೆ. ವಿಧಾನ ಪರಿಷತ್‌ ಅಭ್ಯರ್ಥಿಗಳ ಆಯ್ಕೆ ಸೇರಿದಂತೆ ಇತರ ವಿಷಯಗಳ ಕುರಿತು ವಿಸ್ತೃತ ಚರ್ಚೆ ನಡೆಸಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದರು.

***

ಅಭ್ಯರ್ಥಿಗಳ ಆಯ್ಕೆ ಇಲ್ಲ

ಶಿಕ್ಷಕರ ಕ್ಷೇತ್ರ ಹಾಗೂ ಪದವೀಧರ ಕ್ಷೇತ್ರಗಳಿಂದ ರಾಜ್ಯ ವಿಧಾನ ಪರಿಷತ್ತಿಗೆ ನಡೆಯಲಿರುವ ಚುನಾವಣೆಯ ಅಭ್ಯರ್ಥಿಗಳ ಆಯ್ಕೆ ಮಾಡಲು ಗುರುವಾರ ನಡೆದ ಕೋರ್‌ ಕಮಿಟಿ ಸಭೆಯಲ್ಲಿ ಸಾಧ್ಯವಾಗಿಲ್ಲ.

ಅಭ್ಯರ್ಥಿಗಳ ಆಯ್ಕೆಗಾಗಿ ರಚಿಸಲಾಗಿರುವ ಉಪಸಮಿತಿಗಳ ವರದಿ ಇನ್ನೂ ಸಲ್ಲಿಕೆ ಆಗಬೇಕಿದೆ. ಶೀಘ್ರ ವರದಿ ಸಲ್ಲಿಸಲು ಸೂಚಿಸಲಾಗಿದ್ದು, ನಂತರ ರಾಜ್ಯ ಘಟಕದ ಅಧ್ಯಕ್ಷ ಯಡಿಯೂರಪ್ಪ ಅವರು, ಪಕ್ಷದ ಉಸ್ತುವಾರಿಗಳಾದ ಮುರಳೀಧರ್ ರಾವ್‌, ಪ್ರಕಾಶ್‌ ಜಾವಡೇಕರ್‌, ಪಿಯೂಷ್‌ ಗೋಯಲ್‌ರ ಮೂಲಕ ಕೇಂದ್ರ ನಾಯಕರಿಗೆ ಪಟ್ಟಿ ಸಲ್ಲಿಸಲಿದ್ದಾರೆ. ನಂತರ ವರಿಷ್ಠರು ತೀರ್ಮಾನ ಕೈಗೊಳ್ಳುವರು ಎಂದು ಅರವಿಂದ ಲಿಂಬಾವಳಿ ತಿಳಿಸಿದರು.

***

ರಾಜ್ಯ ಸರ್ಕಾರದ ವಿರುದ್ಧ ಸದನದ ಒಳಗೆ ಹಾಗೂ ಹೊರಗೆ ಹೋರಾಟ ನಡೆಸಲು ಕೋರ್‌ ಕಮಿಟಿ ಸಭೆಯಲ್ಲಿ ನಿರ್ಧರಿಸಲಾಗಿದೆ.

ಅರವಿಂದ ಲಿಂಬಾವಳಿ, ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.