ಅಶೋಕ್ ವಿರುದ್ಧ ಎಸಿಬಿಗೆ ದೂರು

ಬೆಂಗಳೂರು: ಬಗರ್ ಹುಕುಂ ಯೋಜನೆಯ ನಿಯಮ ಉಲ್ಲಂಘಿಸಿ ಬೆಂಗಳೂರು ದಕ್ಷಿಣ ತಾಲ್ಲೂಕಿನಲ್ಲಿ ಶಾಸಕ ಆರ್. ಅಶೋಕ್ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಅಕ್ರಮವಾಗಿ ಭೂಮಿ ಮಂಜೂರು ಮಾಡಿದ್ದು, ಅವರ ವಿರುದ್ಧ ತನಿಖೆ ನಡೆಸುವಂತೆ ಭ್ರಷ್ಟಾಚಾರ ನಿಗ್ರಹ ದಳಕ್ಕೆ(ಎಸಿಬಿ) ಕೆಪಿಸಿಸಿ ಸದಸ್ಯ ಎಂ.ಎ. ಸಲೀಂ ದೂರು ನೀಡಿದ್ದಾರೆ.
‘1994ರಿಂದ ಬಗರ್ ಹುಕುಂ ಸಮಿತಿಯು ಅಕ್ರಮವಾಗಿ ಭೂಮಿ ಮಂಜೂರು ಮಾಡಿದೆ. ವಾರ್ಷಿಕ ಆದಾಯ ₹ 8,000ಕ್ಕಿಂತ ಕಡಿಮೆ ಇರಬೇಕು, ಮಹಾನಗರ ಪಾಲಿಕೆ ಸರಹದ್ದಿಗೆ 18 ಕಿಲೋ ಮೀಟರ್ ವ್ಯಾಪ್ತಿಯ ಅಂತರ ಇರಬೇಕು, ಒಂದು ಕುಟುಂಬಕ್ಕೆ 4 ಎಕರೆ 38 ಗುಂಟೆ ಮೀರಬಾರದು ಎಂಬ ಷರತ್ತುಗಳಿವೆ. ಆದರೆ, ಸಮಿತಿ ಈ ಅಂಶಗಳನ್ನು ಗಣನೆಗೆ ತೆಗೆದುಕೊಂಡಿಲ್ಲ. ಸಿರಿವಂತರಿಗೆ ಭೂಮಿ ಮಂಜೂರು ಮಾಡಿದೆ’ ಎಂದು ದೂರಿದ್ದಾರೆ.
‘1994ರಿಂದ 1997ರವರೆಗೆ ಎಂ. ಶ್ರೀನಿವಾಸ್ ಬಗರ್ ಹುಕುಂ ಸಮಿತಿ ಅಧ್ಯಕ್ಷರಾಗಿದ್ದು, 1998ರ ಬಳಿಕ ಶಾಸಕ ಅಶೋಕ್ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ. ಅರ್ಜಿ ಸಲ್ಲಿಸಲು ನಿಗದಿ ಮಾಡಿದ್ದ ದಿನಾಂಕ ಮುಗಿದ ಬಳಿಕ ಬಂದ ಅರ್ಜಿಗಳನ್ನು ಸೇರ್ಪಡೆ ಮಾಡಲಾಗಿದೆ. ಅವೆಲ್ಲವೂ ಅಶೋಕ್ ಆಪ್ತರ ಅರ್ಜಿಗಳು’ ಎಂದು ಆರೋಪಿಸಿದ್ದಾರೆ.
‘ಅಶೋಕ್ ಸಮಿತಿ ಅಧ್ಯಕ್ಷರಾದ ಬಳಿಕ ವ್ಯಾಪಕ ಅಕ್ರಮ ನಡೆದಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಇದಕ್ಕೆ ಹೆಚ್ಚಿನ ಬೆಂಬಲ ನೀಡಲಾಗಿದೆ. ಈ ಅಕ್ರಮಕ್ಕೆ ಕಂದಾಯ ಇಲಾಖೆ ಅಧಿಕಾರಿಗಳೇ ಮೂಲ ಕಾರಣಕರ್ತರು. ಈ ಸಂಬಂಧ ರಾಜ್ಯಪಾಲ, ಲೋಕಾಯುಕ್ತ, ಜಿಲ್ಲಾಧಿಕಾರಿ, ಬಿಎಂಟಿಎಫ್ ಮುಖ್ಯಸ್ಥರಿಗೆ 10 ವರ್ಷಗಳ ಹಿಂದೆಯೇ ದೂರು ಸಲ್ಲಿಸಲಾಗಿದೆ. ಅವರೂ ಅಕ್ರಮ ಬಯಲಿಗೆಳೆಯಲು ಪ್ರಾಮಾಣಿಕ ಪ್ರಯತ್ನ ಮಾಡಿಲ್ಲ’ ಎಂದೂ ತಿಳಿಸಿದ್ದಾರೆ.
ಅಕ್ರಮದಲ್ಲಿ ಭಾಗಿಯಾಗಿರುವ ಎಲ್ಲರ ವಿರುದ್ಧ ಎಸಿಬಿ ಅಧಿಕಾರಿಗಳು ಎಫ್ಐಆರ್ ದಾಖಲಿಸಿ ತನಿಖೆ ನಡೆಸಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.