7

ಅಪರೂಪದ ಸಮೋಸಗಳಿಗೆ ‘ಸಮೋಸಾ ಕಿಂಗ್’

Published:
Updated:
ಅಪರೂಪದ ಸಮೋಸಗಳಿಗೆ ‘ಸಮೋಸಾ ಕಿಂಗ್’

ಮೋಡಮುಸುಕಿದ್ದ ಬೆಂಗಳೂರಿನ ಚಳಿಯಲ್ಲಿ ತುಸು ನಡುಗುತ್ತಿದ್ದ ನನಗೆ ಟ್ರಾಫಿಕ್ ದಟ್ಟಣೆ ಬೇಸರ ತರಿಸಿತ್ತು. ಅದೇ ಮನಸ್ಥಿತಿಯಲ್ಲಿ ಹೋಟೆಲ್ ಒಳಗೆ ಕಾಲಿಟ್ಟಾಗ ಕಂಡ ಸಮೋಸಾ ಪ್ರಪಂಚ ಕಂಡಾಗ ನನ್ನ ಮೂಡ್ ತುಸು ಫ್ರೆಶ್ ಆಯಿತು.

ನಮ್ಮ ದೇಶದ ಅಡುಗೆಮನೆಗಳಲ್ಲಿ ಹುಟ್ಟಿದ ಸಮೋಸಾ ಇಂದು ವಿಶ್ವದಾದ್ಯಂತ ಮನೆಮಾತು. ಸಮೋಸಾದ ಇತಿಹಾಸ, ಬೆಳೆದುಬಂದ ಹಾದಿ, ಖ್ಯಾತಿಯನ್ನು ಅಲ್ಲಿ ಗೋಡೆಗಳ ಮೂಲಕ ಗ್ರಾಹಕರಿಗೆ ಮನಮುಟ್ಟುವಂತೆ ವಿವರಿಸಲಾಗಿತ್ತು. ಸಂಸ್ಥಾಪಕರ ಗುರುತಿಗೆ ಸಂಸ್ಥೆಯ ಸಿಖ್ ಮೀಸೆಯ ಲಾಂಛನ ನಗುತ್ತಿತ್ತು. ಸಮೋಸಾಕ್ಕೆ ಸಂಬಂಧಿಸಿದ ರೇಖಾಚಿತ್ರವೂ ಮನಮುಟ್ಟುವಂತಿತ್ತು. ಸಮೋಸಾದ ಇಂಥ ಹಲವು ಕಥೆಗಳಿಗೆ ಸಾಕ್ಷಿಯಾಗಿದ್ದು ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ 'ಸಮೋಸಾ ಸಿಂಗ್'.

ಇಂಪಾದ ಸಂಗೀತ ಕೇಳುತ್ತಾ ವೇಟರ್‌ನನ್ನು ಕರೆದು ಮೆನು ಓದಲು ಆರಂಭಿಸಿದೆ. ಮಾರುಕಟ್ಟೆಯಲ್ಲಿ ಒಂದೆರಡು ಬಗೆಯ ಸಮೋಸಾ ನೋಡಿದ್ದ ನನಗೆ ಇಲ್ಲಿದ್ದ ಹತ್ತಾರು ನಮೂನೆ ಸಮೋಸಗಳಿಂದ ಗಲಿಬಿಲಿ ಆಯಿತು. 'ಕಡಾಯಿ ಪನೀರ್' ಸಮೋಸಾಗೆ ಆರ್ಡರ್ ಮಾಡಿದೆ. ಒಂದೆರಡು ನಿಮಿಷಗಳಲ್ಲಿ ಬಿಸಿಬಿಸಿ ಸಮೋಸಾ ನನ್ನ ಮುಂದಿತ್ತು.

ನಾನು ಹಲವೆಡೆ ಸಮೋಸಾ ತಿಂತಿದ್ದೇನೆ, ಬಹುತೇಕ ಕಡೆ ಎಣ್ಣೆಯಲ್ಲಿ ಅದ್ದಿ ತೆಗೆದಂತೆ ಸಮೋಸಾ ಕಾಣುತ್ತಿತ್ತು. ಆದರೆ ಇಲ್ಲಿ ಮಾತ್ರ ಸಂಪೂರ್ಣ ಡ್ರೈ ಆಗಿತ್ತು. ಸಮೋಸಾದ ತುಂಡೊಂದನ್ನು ಚಟ್ನಿಯಲ್ಲಿ ಹೊರಳಿಸಿ ನಾಲಿಗೆ ಮೇಲೆ ಇರಿಸಿದ ತಕ್ಷಣ 'ವಾಹ್' ಎನ್ನುವ ರುಚಿ.

ಇದಾದ ನಂತರ ಆಲೂ ಸಮೋಸಾದ ರುಚಿ ನೋಡಲು ಮುಂದಾದೆ. ಬೆಂದ ಆಲೂಗಡ್ಡೆಯನ್ನು ಹಿಸುಕಿ, ಅದಕ್ಕೆ ಅವರೆಕಾಳು ಸೇರಿಸಿ ತಯಾರಿಸಿದ್ದ ಸಮೋಸಾ ವಿಶಿಷ್ಟ ರುಚಿ ನೀಡಿತು. ಸಮೋಸಾ ಮೆಲ್ಲುವಾಗಲೇ ಅಲ್ಲಿಗೆ ಬಂದ ಸಂಸ್ಥೆಯ ಸಹ ಸಂಸ್ಥಾಪಕಿ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಿಧಿಸಿಂಗ್ 'ಸಮೋಸಾ ಸಿಂಗ್' ಬೆಳೆದು ಬಂದ ಹಾದಿಯನ್ನು ವಿವರಿಸಿದರು.

'ಪತಿ ಶಿಖರ್‍ವೀರ್ ಸಿಂಗ್ ಹಾಗೂ ನಾನು ಖಾಸಗಿ ಸಂಸ್ಥೆಯಲ್ಲಿ ಉನ್ನತ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದೆವು. ಪಿಜ್ಜಾಗಳಿಗೆ ಇರುವಂತೆ ನಮ್ಮ ದೇಶದ ಆಹಾರ ಉತ್ಪನ್ನದ ವಿನೂತನ ಮಳಿಗೆ ಏಕೆ ತೆರೆಯಬಾರದು ಎಂಬ ಆಲೋಚನೆ ಬಂತು. ಇಬ್ಬರೂ ತಮ್ಮ ಕೆಲಸಗಳಿಗೆ ರಾಜೀನಾಮೆ ನೀಡಿ, 2016ರ ಫೆಬ್ರವರಿಯಲ್ಲಿ ಈ ಸಂಸ್ಥೆ ಹುಟ್ಟುಹಾಕಿದೆವು. ಸುಮಾರು ಆರು ತಿಂಗಳು ಪ್ರಯೋಗ ನಡೆಸಿದ ನಂತರವೇ ಉತ್ಪನ್ನವನ್ನು ಮಾರುಕಟ್ಟೆಗೆ ಪರಿಚಯಿಸಿದೆವು' ಎಂದರು ನಿಧಿ.

'ಯಶವಂತಪುರದಲ್ಲಿದ್ದ ಮನೆಯನ್ನೇ ಮಾರಾಟ ಮಾಡಿ ಕನಸಿನ ಸಂಸ್ಥೆಗೆ ಬಂಡವಾಳ ಹೂಡಿದ್ದೇವೆ. ಇಂದು ನಗರದಲ್ಲಿ ಏಳು ಮಳಿಗೆಗಳನ್ನು ತೆರೆದು, ಗ್ರಾಹಕರ ಮನಸಿನಲ್ಲಿ ಸಮೋಸಾಗಾಗಿ ಒಂದು ಬ್ರ್ಯಾಂಡ್ ನೆಲೆ ನಿಲ್ಲುವಂತೆ ಮಾಡಿದ್ದೇವೆ' ಎಂದ ಅವರ ಮಾತಿನಲ್ಲಿ ತೃಪ್ತಿಯ ಭಾವ ಇಣುಕುತ್ತಿತ್ತು.

'ನಗರದ ಹಲವೆಡೆ ಸಮೋಸಾಗಳು ಸಿಗುತ್ತಿವೆ. ಏನು ನಿಮ್ಮ ವೈಶಿಷ್ಟ್ಯ?' ಎಂದು ಪ್ರಶ್ನಿಸಿದಾಗ, 'ಗರಿಯಾದ ಗರಿಯಾದ ಸ್ವಾದಿಷ್ಟಭರಿತ ಸಮೋಸಾ ನಮ್ಮ ವೈಶಿಷ್ಟ್ಯ. ಅಗತ್ಯ ಮಸಾಲೆಗಳನ್ನು ನಾವೇ ತಯಾರಿಸುತ್ತೇವೆ. ಕೊಬ್ಬಿನ ಅಂಶ ಮತ್ತು ಕ್ಯಾಲೊರಿ ಸಹ ಇತರೆಡೆ ಸಿಗುವ ಸಮೋಸಾಗಳಿಗೆ ಹೋಲಿಸಿದರೆ ಕಡಿಮೆ' ಎಂಬುದು ಅವರ ವಿವರಣೆ.

'ಸಮೋಸಾ ಸಿಂಗ್‌'ನಲ್ಲಿ ಕಡಾಯಿ ಪನ್ನೀರ್ ಹಾಗೂ ಚೈನೀಸ್ ಮಂಚೂರಿಯನ್ ಸಮೋಸಾಗಳಿಗೆ ಹೆಚ್ಚು ಬೇಡಿಕೆ. ಉಳಿದಂತೆ ಚಾಕೊಲೇಟ್ ಆರೆಂಜ್ ಸಮೋಸಾ, ಚಾಕೊಲೇಟ್ ಪೆನಟ್ ಸಮೋಸಾ ಹಾಗೂ ಚಿಕನ್ ಸಮೋಸಾಗಳನ್ನು ಇಲ್ಲಿ ಲಭ್ಯವಿದೆ. ದೀಪಾವಳಿ ಹಬ್ಬದ ದಿನ ಉಡುಗೊರೆ ನೀಡಲೆಂದೇ 'ಶಾಹಿ ಸಮೋಸಾ' ಎನ್ನುವ ಹೊಸ ಉತ್ಪನ್ನ ಪರಿಚಯಿಸಿದ್ದರು. ಸಿಹಿಯಾಗಿದ್ದರೂ ಇದು ಶುಗರ್‍ಲೆಸ್ ಎನ್ನುವುದು ವಿಶೇಷ. ಒಳಭಾಗದಲ್ಲಿ ಒಣಹಣ್ಣುಗಳನ್ನು ಸೇರಿಸಿದ್ದ ಈ ಸಮೋಸಾ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿತ್ತು.

ಸಮೋಸಾ ಸವಿಯಲು ಹೋದ ನನಗೆ, ಸಮೋಸಾದ ಇತಿಹಾಸದ ಜೊತೆಗೆ ಆಹಾರೋದ್ಯಮದ ಒಳಹೊರಗೂ ಪರಿಚಯವಾದ ತೃಪ್ತಿ ಸಿಕ್ಕಿತು.

**

ಸಮೋಸಾ ಸಿಂಗ್

ವಿಳಾಸ: 16 "ಎ" ಅಡ್ಡರಸ್ತೆ, ನೀಲಾದ್ರಿ ನಗರ, ಎಲೆಕ್ಟ್ರಾನಿಕ್ ಸಿಟಿ ಮೊದಲ ಹಂತ

ಸಮಯ: ಬೆಳಿಗ್ಗೆ 9ರಿಂದ ರಾತ್ರಿ 10ರ ತನಕ

ಬೆಲೆ: 15ರಿಂದ 60 ರೂಪಾಯಿ ತನಕ

ಆರ್ಡರ್ ಮಾಡಲು: 09741850433

ಹೆಚ್ಚಿನ ಮಾಹಿತಿಗೆ: samosasingh.com

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry