7

ಕನ್ನಡ ವಿ.ವಿ.ಯನ್ನು ಹೊರಗಿಡಿ

Published:
Updated:

ಕರ್ನಾಟಕದ ಭಾಷೆ, ಸಾಹಿತ್ಯ, ಸಂಸ್ಕೃತಿ, ಚರಿತ್ರೆ, ಸಮಾಜಗಳ ಅಧ್ಯಯನಕ್ಕಾಗಿ 1991ರ ವಿಶೇಷ ಕಾಯ್ದೆಯ ಮೂಲಕ ಕನ್ನಡ ವಿಶ್ವವಿದ್ಯಾಲಯವನ್ನು ಸ್ಥಾಪನೆ ಮಾಡಲಾಯಿತು. 25 ವರ್ಷಗಳಿಂದ ವಿಶ್ವವಿದ್ಯಾಲಯ ಇದರ ಅಡಿಯಲ್ಲಿಯೇ ಕೆಲಸ ಮಾಡಿಕೊಂಡು ಬಂದಿದೆ. ಆದರೆ ಇದೇ ತಿಂಗಳ 13 ರಂದು ಬೆಳಗಾವಿಯಲ್ಲಿ ಆರಂಭವಾಗಲಿರುವ ವಿಧಾನಮಂಡಲದ ಅಧಿವೇಶನದಲ್ಲಿ ಕರ್ನಾಟಕ ವಿಶ್ವವಿದ್ಯಾಲಯಗಳ ತಿದ್ದುಪಡಿ ಮಸೂದೆಗೆ ಅನುಮೋದನೆ ಸಿಕ್ಕಿದರೆ  ಕನ್ನಡ ವಿಶ್ವವಿದ್ಯಾಲಯದ 1991ರ ವಿಶೇಷ ಕಾಯ್ದೆ ರದ್ದುಗೊಳ್ಳುತ್ತದೆ. ಇದರಿಂದ, ಸಂಶೋಧನೆಗೆಂದೇ ಸ್ಥಾಪನೆಯಾಗಿರುವ ಕನ್ನಡ ವಿಶ್ವವಿದ್ಯಾಲಯವು ಬೋಧನೆ ಮತ್ತು ಪದವಿ ನೀಡಿಕೆ ಪ್ರಧಾನವಾದ ಇತರೆ ವಿಶ್ವವಿದ್ಯಾಲಯಗಳ ಜತೆ ಸೇರಿಕೊಳ್ಳುತ್ತದೆ. ವಿಶ್ವವಿದ್ಯಾಲಯವು ಬೆಳ್ಳಿಹಬ್ಬ ಆಚರಿಸುತ್ತಿರುವ ಸಂದರ್ಭದಲ್ಲಿ ಇದೊಂದು ಆಘಾತಕರ ಸಂಗತಿಯಾಗಿದೆ. ಇದೊಂದು ಕನ್ನಡ ವಿರೋಧಿ ನಿಲುವಾಗಿದೆ.

ಉದ್ದೇಶಿತ ಮಸೂದೆಯನ್ನು ಸಿದ್ಧಪಡಿಸುವ ಮುನ್ನ ಉನ್ನತ ಶಿಕ್ಷಣ ಇಲಾಖೆಯು ತಮ್ಮ ಚಿಂತನೆಯಿಂದ ವಿಶ್ವವಿದ್ಯಾಲಯವನ್ನು ನೇರವಾಗಿ ಮತ್ತು ಪರೋಕ್ಷವಾಗಿ ರೂಪಿಸಿದವರ, ಕನ್ನಡಪರ ವಿದ್ವಾಂಸರ, ವಿಶ್ವವಿದ್ಯಾಲಯವನ್ನು ಕಟ್ಟಿದ ಹಿಂದಿನ ಕುಲಪತಿಗಳ ಹಾಗೂ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಸಮುದಾಯದ ಜತೆ ಯಾವುದೇ ಸಮಾಲೋಚನೆ ಮಾಡಿರುವುದಿಲ್ಲ. ಇದು ಜನತಂತ್ರ ವಿರೋಧಿ ನಡೆಯಾಗಿದೆ. ಈ ಹಿನ್ನೆಲೆಯಲ್ಲಿ ಉದ್ದೇಶಿತ ಮಸೂದೆಯೊಳಗೆ ಕನ್ನಡ ವಿಶ್ವವಿದ್ಯಾಲಯವನ್ನು ಸೇರಿಸಬಾರದೆಂದೂ ಅದರ ಅನನ್ಯತೆ ಕಾಪಾಡಬೇಕೆಂದೂ ಕಳೆದ ಮಾರ್ಚ್‌ ತಿಂಗಳಲ್ಲಿ ನಾಡಿನ 25ಕ್ಕೂ ಹೆಚ್ಚು ಚಿಂತಕರು ಮುಖ್ಯಮಂತ್ರಿ ಅವರನ್ನು ಕಂಡು ವಿನಂತಿಸಿದ್ದರು. ಅದಕ್ಕೆ ಮುಖ್ಯಮಂತ್ರಿ ಒಪ್ಪಿದ್ದರು. ಆದರೂ ಕನ್ನಡ ವಿಶ್ವವಿದ್ಯಾಲಯದ ಸಾಂಸ್ಕೃತಿಕ ಮಹತ್ವ ಮತ್ತು ವಿಶಿಷ್ಟತೆಯನ್ನು ನಿರಾಕರಿಸುವ ಈ ಮಸೂದೆ ಅಂಗೀಕಾರಕ್ಕೆ ಯತ್ನಿಸಲಾಗುತ್ತಿದೆ.

ಬೋಧನ ಪ್ರಧಾನ ವಿಶ್ವವಿದ್ಯಾಲಯಗಳನ್ನು ನಿರ್ವಹಿಸಲು ರೂಪಿಸಲಾಗಿರುವ ಈ ಮಸೂದೆಯು ಸಂಶೋಧನೆಯೇ ಮುಖ್ಯ ಚಟುವಟಿಕೆಯಾಗಿರುವ ಕನ್ನಡ ವಿಶ್ವವಿದ್ಯಾಲಯಕ್ಕೆ ಸರಿಹೊಂದುವುದಿಲ್ಲ. ಕನ್ನಡ ವಿಶ್ವವಿದ್ಯಾಲಯವು ಕರ್ನಾಟಕ ಸಂಸ್ಕೃತಿಯಲ್ಲಿ ಸೃಷ್ಟಿಯಾಗಿರುವ ವಿವಿಧ ಜ್ಞಾನ ಪರಂಪರೆಗಳನ್ನು ಹಾಗೂ ಅಲ್ಲಿರುವ ಸಾಂಸ್ಕೃತಿಕ ಬಹುತ್ವವನ್ನು ಶೋಧಿಸುತ್ತದೆ. ಆದರೆ ಉದ್ದೇಶಿತ ತಿದ್ದುಪಡಿ ಮಸೂದೆಯು ಕನ್ನಡ ವಿ.ವಿ.ಯು ಈವರೆಗೆ ಅನುಭವಿಸಿಕೊಂಡು ಬಂದ ಶೈಕ್ಷಣಿಕ ಸ್ವಾತಂತ್ರ್ಯ ಮತ್ತು ಆಡಳಿತ ಸ್ವಾಯತ್ತತೆಗಳನ್ನು ನಾಶಮಾಡುತ್ತದೆ; ಸಮಸ್ತ ಅಧಿಕಾರವನ್ನು ಉನ್ನತ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಒಪ್ಪಿಸುತ್ತದೆ. ಇದರಿಂದ ಕನ್ನಡ ವಿಶ್ವವಿದ್ಯಾಲಯದ ಮೂಲ ಆಶಯಕ್ಕೆ ಪೂರಕವಾಗಿ ಕೆಲಸ ಮಾಡಲು ಅಸಾಧ್ಯವಾಗುತ್ತದೆ.

ಕನ್ನಡ ವಿಶ್ವವಿದ್ಯಾಲಯವು ತನ್ನ ಕಾಲುಶತಮಾನದ ಅನುಭವದ ಮೂಲಕ ತನ್ನ ಆಡಳಿತ ಮತ್ತು ಶೈಕ್ಷಣಿಕ ಸಮಸ್ಯೆಗಳನ್ನು ಗುರುತಿಸುವ ಮತ್ತು ಅವನ್ನು ಬಗೆಹರಿಸಿಕೊಳ್ಳುವ ಅಗತ್ಯವಿದೆ. ಈ ದಿಸೆಯಲ್ಲಿ ಬೆಳ್ಳಿಹಬ್ಬ ಆಚರಣೆ ಸಂದರ್ಭದಲ್ಲಿ ಅದು ತನ್ನನ್ನು ಪುನರ್‌ ರೂಪಿಸಿಕೊಳ್ಳಲು ನಾಡಿನ ಚಿಂತಕರನ್ನು ಕರೆಯಿಸಿಕೊಂಡು ಚರ್ಚಿಸಿದೆ. ಬದಲಾದ ಸನ್ನಿವೇಶಕ್ಕೆ ತಕ್ಕಂತೆ ತನ್ನನ್ನು ಸಜ್ಜುಗೊಳಿಸುವ ಪ್ರಕ್ರಿಯೆಯೂ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಉದ್ದೇಶಿತ ತಿದ್ದುಪತಿ ಮಸೂದೆಯಿಂದ ಕನ್ನಡ ವಿಶ್ವವಿದ್ಯಾಲಯವನ್ನು ಹೊರಗಿಡಬೇಕು ಎಂದು ಸರ್ಕಾರವನ್ನು ಕೋರುತ್ತೇವೆ.

ಶಾಂತಾದೇವಿ ಕಣವಿ, ಕಮಲಾ ಹಂಪನಾ, ಮಲ್ಲಿಕಾ ಘಂಟಿ, ಮೀರಾ ನಾಯಕ, ಶಾಂತಾ ಇಮ್ರಾಪುರ, ಹೇಮಾ ಪಟ್ಟಣಶೆಟ್ಟಿ, ಕೋ. ಚೆನ್ನಬಸಪ್ಪ, ಬಿ. ಶೇಖ್‌ ಅಲಿ, ಚೆನ್ನವೀರ ಕಣವಿ, ದೇವನೂರ ಮಹಾದೇವ,  ಜಿ.ಎಚ್‌. ನಾಯಕ, ಹಂಪ ನಾಗರಾಜಯ್ಯ, ಕೆ. ಮರುಳಸಿದ್ಧಪ್ಪ, ಬರಗೂರು ರಾಮಚಂದ್ರಪ್ಪ, ಚಂದ್ರಶೇಖರ ಪಾಟೀಲ, ಗಿರಡ್ಡಿ ಗೋವಿಂದರಾಜ, ಗುರುಲಿಂಗ ಕಾಪಸೆ, ಸೋಮಶೇಖರ ಇಮ್ರಾಪುರ, ಮನು ಬಳಿಗಾರ್‌, ಎಸ್‌.ಜಿ. ಸಿದ್ಧರಾಮಯ್ಯ, ಸಿದ್ಧಲಿಂಗಯ್ಯ, ರಹಮತ್‌ ತರೀಕೆರೆ, ಕರೀಗೌಡ ಬೀಚನಹಳ್ಳಿ, ಹಿ.ಚಿ. ಬೋರಲಿಂಗಯ್ಯ, ಜಿ.ಕೆ. ಗೋವಿಂದರಾವ್‌, ಎಂ. ಚಂದ್ರ ಪೂಜಾರಿ, ಸಿದ್ಧಲಿಂಗ ಪಟ್ಟಣಶೆಟ್ಟಿ, ಕೆ.ಎಸ್‌. ಭಗವಾನ್‌, ಪ್ರೀತಿ ಶ್ರೀಮಂಧರ್‌ ಕುಮಾರ್‌,

ಕನ್ನಡ ವಿ.ವಿ: ಸಂಭ್ರಮ ಮತ್ತು ಸಂಕಟ

ನಾಡಿನ ಇತರೆ ವಿಶ್ವವಿದ್ಯಾಲಯಗಳ ಹಾಗೆ ಆಡಳಿತದ ನೆಲೆಯ ಇಚ್ಛೆಯಿಂದ ಕನ್ನಡ ವಿಶ್ವವಿದ್ಯಾಲಯ ಹುಟ್ಟಿಲ್ಲ. ಕನ್ನಡ ನಾಡಿನ ಭಾಷೆ, ಸಾಹಿತ್ಯ, ಸಂಸ್ಕೃತಿ, ಜನಪದ, ಗ್ರಾಮ ಸಮಾಜ, ಸಾಮಾನ್ಯ ಜನರು, ಅಸಹಾಯಕರು ಇವರ ಬೆಳವಣಿಗೆಗೆ ಅವಿರತ ಆಲೋಚಿಸಿದ ಉದ್ಧಾಮ ಪಂಡಿತರು ಹಾಗೂ ಶ್ರೇಷ್ಠ ಸಾಹಿತಿಗಳ ಕನಸಿನ ನಿರಂತರ ಪ್ರಯತ್ನದ ಫಲವಾಗಿ ಕನ್ನಡ ವಿಶ್ವವಿದ್ಯಾಲಯ ಜನ್ಮ ತಾಳಿದೆ. 92 ವರ್ಷಗಳ ಹಿಂದೆಯೇ ಕನ್ನಡ ನಾಡಿಗೆ ಕನ್ನಡ ವಿಶ್ವವಿದ್ಯಾಲಯ ಬೇಕು ಎಂಬ ಬಹಳ ದೊಡ್ಡ ಕನಸನ್ನು ಸಾಹಿತಿಗಳು ಕಂಡಿದ್ದರು.

1925ರಲ್ಲಿ ಬೆಳಗಾವಿಯಲ್ಲಿ ನಡೆದ 11ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬೆನಗಲ್ ರಾಮರಾಯರು, 1932ರ ಮಡಿಕೇರಿ ಸಾಹಿತ್ಯ ಸಮ್ಮೇಳನದಲ್ಲಿ  ಡಿ.ವಿ. ಗುಂಡಪ್ಪ,  1938ರ ಬಳ್ಳಾರಿ ಸಾಹಿತ್ಯ ಸಮ್ಮೇಳನದಲ್ಲಿ  ದಿವಾಕರ ರಂಗರಾಯರು ಕನ್ನಡ ವಿಶ್ವವಿದ್ಯಾಲಯ ಬೇಕು ಎಂಬುದನ್ನು ಒತ್ತಿ ಹೇಳಿದ್ದರು. ಹಂಪಿಯಲ್ಲಿ ಕನ್ನಡ ವಿಶ್ವವಿದ್ಯಾಲಯವನ್ನೂ, ಬೆಳಗಾವಿಯಲ್ಲಿ ತಾಂತ್ರಿಕ ವಿಶ್ವವಿದ್ಯಾಲಯವನ್ನೂ ಸ್ಥಾಪನೆ ಮಾಡಬೇಕೆಂದು 1990ರ ಹುಬ್ಬಳ್ಳಿಯ ಸಮ್ಮೇಳನದಲ್ಲಿ ನಿರ್ಣಯ ಮಾಡಿ ಸರ್ಕಾರವನ್ನು ಒತ್ತಾಯಿಸಲಾಗಿತ್ತು.

ಈ 25 ವರ್ಷಗಳಲ್ಲಿ ಕನ್ನಡ ವಿಶ್ವವಿದ್ಯಾಲಯ ನಾಡಿಗೆ ಅಗತ್ಯವಾಗಿರುವ ಕನ್ನಡ ಜ್ಞಾನವನ್ನು ನಿರ್ಮಾಣ ಮಾಡಿದೆ. ಕೆಳಜಾತಿಗಳು, ಕೆಳ ವರ್ಗಗಳು, ಆದಿವಾಸಿಗಳು, ಅಲೆಮಾರಿಗಳು, ಬುಡಕಟ್ಟುಗಳು, ದೇವದಾಸಿಯರು, ಅಸಹಾಯಕ ಮಹಿಳೆಯರು, ಹಲವಾರು ಅಂಚಿನ ಸಮುದಾಯಗಳನ್ನು ಕುರಿತು ಮಹತ್ವದ ಗ್ರಂಥಗಳನ್ನು ಪ್ರಕಟಿಸಿದೆ. ಸಾಮಾನ್ಯವಾಗಿ ವಿಶ್ವವಿದ್ಯಾಲಯಗಳು ಬುದ್ಧಿಜೀವಿಗಳು ಎಂದು ಗುರುತಿಸಲಾರದವರನ್ನು ವಿಶ್ವವಿದ್ಯಾಲಯದ ಬೌದ್ಧಿಕ ಚಟುವಟಿಕೆಗಳಿಗೆ ಬಳಸಿಕೊಂಡಿದೆ. ನಾಡಿನ ಮೂಲೆಮೂಲೆಯಲ್ಲಿ ಎಲೆ ಮರೆಯ ಕಾಯಿಯಂತೆ ಇರುವ  ವಿದ್ವಾಂಸರು, ಚಿಂತಕರು, ಹೋರಾಟಗಾರರು, ಕೃಷಿಕರು, ಕಲಾವಿದರು, ಶಿಕ್ಷಕರನ್ನು ಸಂಪನ್ಮೂಲ ವ್ಯಕ್ತಿಗಳನ್ನಾಗಿ ಕರೆದು ಅವರಲ್ಲಿದ್ದ ಅಪಾರ ಜ್ಞಾನವನ್ನು ಪಡೆದು ಪುಸ್ತಕ ರೂಪದಲ್ಲಿ ಪ್ರಕಟಿಸಿದೆ.

ಬೋಧನೆಯೇ ಪ್ರಧಾನವಾಗಿರುವ ವಿಶ್ವವಿದ್ಯಾಲಯಗಳಿಗೆ ಇಂತಹ ಕೆಲಸ ಮಾಡುವ ಸಾಮರ್ಥ್ಯ ಇತ್ತಾದರೂ ಅವುಗಳಿಗಿರುವ ಕಾಯ್ದೆಯ ಮಿತಿಯೇ ಅದಕ್ಕೆ ತೊಡಕಾಗಿತ್ತು. ಕನ್ನಡ ವಿಶ್ವವಿದ್ಯಾಲಯಕ್ಕೆ ಇದುವರೆಗೆ ಆ ತೊಡಕು ಇಲ್ಲದ ಕಾರಣಕ್ಕೆ ಇಂತಹ ಮಹತ್ವದ ಕೆಲಸವನ್ನು ಮಾಡಲು ಅವಕಾಶವಾಗಿತ್ತು ಎಂಬುದನ್ನು ಮರೆಯದಿರೋಣ.

ಡಾ. ಬಿ.ಎಂ. ಪುಟ್ಟಯ್ಯ, ಹಂಪಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry