7

ಬೇಸಿಗೆಗೆ ಮೊದಲೇ ದಿಢೀರ್‌ ವಿದ್ಯುತ್ ಕಡಿತ ಅಸಮರ್ಥನೀಯ

Published:
Updated:
ಬೇಸಿಗೆಗೆ ಮೊದಲೇ ದಿಢೀರ್‌ ವಿದ್ಯುತ್ ಕಡಿತ ಅಸಮರ್ಥನೀಯ

ಬೇಸಿಗೆ ಇನ್ನೂ ಕಾಲಿಟ್ಟೇ ಇಲ್ಲ. ಚಳಿಗಾಲವೇ ಈಗ ಶುರುವಾಗುವ ಹಂತದಲ್ಲಿದೆ. ಆದರೂ ರಾಜ್ಯದಲ್ಲಿ ಈಗಲೇ ವಿದ್ಯುತ್‌ ಕಡಿತ, ವಿದ್ಯುತ್ ಅಭಾವ ಆರಂಭವಾಗಿದೆ. ರಾಜಧಾನಿ ಬೆಂಗಳೂರಿಗೆ ಅದರ ಬಿಸಿ ಜೋರಾಗಿಯೇ ತಟ್ಟಿದೆ. ಮೂರು ದಿನಗಳಿಂದ ವಿವಿಧೆಡೆ ಪೂರ್ವಸೂಚನೆ ಇಲ್ಲದೆ ವಿದ್ಯುತ್‌ ಪೂರೈಕೆ ಸ್ಥಗಿತ ಮಾಡುತ್ತಿರುವುದರಿಂದ ಜನ ಹೈರಾಣಾಗಿದ್ದಾರೆ. ಈಗಲೇ ಈ ಗತಿ ಬಂದರೆ, ಇನ್ನು ಬೇಸಿಗೆಯಲ್ಲಿ ಏನು ಕಾದಿದೆಯೋ ಎಂದು ಆತಂಕಗೊಂಡಿದ್ದಾರೆ. ಆದರೆ ಅಧಿಕಾರಿಗಳು ಮಾತ್ರ ಎಂದಿನಂತೆ ಬಳಕೆದಾರರಿಗೆ, ‘ಮಿತವಾಗಿ ವಿದ್ಯುತ್‌ ಬಳಸಿ’ ಎಂಬ ಪುಕ್ಕಟೆ ಸಲಹೆ ಕೊಡುತ್ತಿದ್ದಾರೆ. ಪದೇಪದೇ ವಿದ್ಯುತ್‌ ಪೂರೈಕೆ ಸ್ಥಗಿತಗೊಂಡರೆ ಮಿತಬಳಕೆ ಅಲ್ಲದೆ, ಇನ್ನೇನು ಅಗತ್ಯದಷ್ಟು ಬಳಸಲು ಆಗುತ್ತದೆಯಾ?

ಸಾಮಾನ್ಯವಾಗಿ ವಿದ್ಯುತ್ತಿಗೆ ಬೇಡಿಕೆ ಬೇಸಿಗೆಯಲ್ಲಿಯೇ ಅಧಿಕ. ನೀರಾವರಿ ಪಂಪ್‌ಸೆಟ್‌ಗಳು, ಫ್ಯಾನ್‌, ಎ.ಸಿ. ಬಳಕೆ ಹೆಚ್ಚೇ ಇರುತ್ತದೆ. ಆದರೆ ಈಗ ಬೇಡಿಕೆ ಸ್ವಾಭಾವಿಕವಾಗಿಯೇ ಕಡಿಮೆಯಿದೆ. ಅಲ್ಲದೆ ಬಹುತೇಕ ಕಡೆ ಚೆನ್ನಾಗಿ ಮಳೆಯಾಗಿದೆ. ಜಲಾಶಯಗಳು ತುಂಬಿವೆ ಅಥವಾ ಸಾಕಷ್ಟು ನೀರು ಸಂಗ್ರಹವಾಗಿದೆ. ಹೀಗಿದ್ದೂ ಈಗಿನಿಂದಲೇ ವಿದ್ಯುತ್‌ ಸಮಸ್ಯೆ ಎದುರಿಸಬೇಕು ಎಂದರೆ ಜನ ಆಕ್ರೋಶ, ಅಸಮಾಧಾನ ವ್ಯಕ್ತಪಡಿಸುವುದು ಸಹಜ. ಇಂತಹ ಪರಿಸ್ಥಿತಿ ಎದುರಿಸಲು ಸರ್ಕಾರ ಪೂರ್ವಸಿದ್ಧತೆ ಮಾಡಿಕೊಂಡಿಲ್ಲ, ಮುಂದಾಲೋಚನೆ ಇಲ್ಲ ಎಂಬುದನ್ನು ಇದು ನೆನಪಿಸುತ್ತದೆ. ವಿದ್ಯುತ್‌ ಕಣ್ಣಾಮುಚ್ಚಾಲೆ ಶುರುವಾಗಿರುವುದನ್ನು ‘ಸಣ್ಣ ವಿಷಯ, ತಾತ್ಕಾಲಿಕ ಸಮಸ್ಯೆ’ ಎಂದು ತಳ್ಳಿಹಾಕುವಂತೆಯೂ ಇಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಬೇಕು.

ಶಾಖೋತ್ಪನ್ನ ಘಟಕಗಳು ತೀವ್ರ ಕಲ್ಲಿದ್ದಲು ಕೊರತೆ ಎದುರಿಸುತ್ತಿವೆ ಮತ್ತು ಕೆಲ ಘಟಕಗಳಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿರುವುದರಿಂದ ಉತ್ಪಾದನೆಗೆ ಪೆಟ್ಟು ಬಿದ್ದಿದೆ ಎಂದು ಅಧಿಕಾರಿಗಳು ಸಮಜಾಯಿಷಿ ಕೊಡುತ್ತಿದ್ದಾರೆ. ಒಂದೇ ಒಂದು ದಿನದ ಅಗತ್ಯದಷ್ಟೂ ಕಲ್ಲಿದ್ದಲು ಸಂಗ್ರಹ ನಮ್ಮಲ್ಲಿ ಇಲ್ಲ ಎನ್ನುವುದಂತೂ ಭಯ ಹುಟ್ಟಿಸುತ್ತದೆ. ಅಂದರೆ ಆಯಾ ದಿನ ಪೂರೈಕೆ ಆಗುವ ಕಲ್ಲಿದ್ದನ್ನು ಅದೇ ದಿನ ಬಳಕೆ ಮಾಡುತ್ತಿದ್ದೇವೆ. ನಮ್ಮಲ್ಲೇನೂ ಕಲ್ಲಿದ್ದಲು ಗಣಿಗಳಿಲ್ಲ. ಅದು ಹೊರ ರಾಜ್ಯಗಳ ಗಣಿಗಳಿಂದ ರೈಲಿನಲ್ಲಿ ಬರಬೇಕು. ಇದರಲ್ಲಿ ಅಲ್ಪಸ್ವಲ್ಪ ಏರುಪೇರಾದರೂ ದೊಡ್ಡ ಸಂಕಷ್ಟ. ಏಕೆಂದರೆ ಕಲ್ಲಿದ್ದಲು ಇಲ್ಲದೇ ಶಾಖೋತ್ಪನ್ನ ಘಟಕಗಳನ್ನು ನಡೆಸಲು ಸಾಧ್ಯವೇ ಇಲ್ಲ. ಅಲ್ಲದೆ ನಮ್ಮ ರಾಜ್ಯದ ವಿದ್ಯುತ್‌ ಉತ್ಪಾದನೆಯ ಗಣನೀಯ ಭಾಗ ಶಾಖೋತ್ಪನ್ನ ಘಟಕಗಳನ್ನೇ ಅವಲಂಬಿಸಿದೆ.

ಹೀಗಿರುವಾಗ ಮುಂದಾಲೋಚನೆ ವಹಿಸಿ ಕಲ್ಲಿದ್ದಲ್ಲನ್ನು ದಾಸ್ತಾನು ಮಾಡಿಕೊಳ್ಳದೇ ಇರುವುದು ಅತಿ ದೊಡ್ಡ ವೈಫಲ್ಯ. ಖಾಸಗಿ ವಲಯದ ಉಡುಪಿ ಪವರ್‌ ಕಾರ್ಪೊರೇಷನ್‌ ಘಟಕದಲ್ಲೂ ತಾಂತ್ರಿಕ ತೊಂದರೆಯಾಗಿದ್ದು ಅಲ್ಲಿಂದಲೂ ಪೂರ್ಣ ಪ್ರಮಾಣದ ವಿದ್ಯುತ್‌ ಸಿಗುತ್ತಿಲ್ಲ. ಜತೆಗೆ, ಆ ಸಂಸ್ಥೆಗೆ ಬಾಕಿ ಉಳಿಸಿಕೊಳ್ಳಲಾಗಿದೆ ಎಂಬ ವರದಿಗಳೂ ಇವೆ. ಸಾಮಾನ್ಯ ಗ್ರಾಹಕರೇನಾದರೂ ಬಿಲ್‌ ಕಟ್ಟುವುದು ಒಂದು ದಿನ ತಡವಾದರೂ ವಿದ್ಯುತ್‌ ಸಂಪರ್ಕ ಕಡಿತ ಮಾಡಲಾಗುತ್ತದೆ. ಹೀಗಿರುವಾಗ ಸರ್ಕಾರವೇ ಬಾಕಿ ಉಳಿಸಿಕೊಂಡಿದ್ದಕ್ಕೆ ಕಾರಣ ಏನು? ಇವೆಲ್ಲವುಗಳ ಬಗ್ಗೆ ರಾಜ್ಯದ ಜನರಿಗೆ ಸರ್ಕಾರ ವಿವರಿಸಬೇಕು. ಪೂರ್ವಸೂಚನೆ ಕೊಡದೆ ವಿದ್ಯುತ್‌ ಕಡಿತ ಮಾಡುವಂತಿಲ್ಲ ಎಂದು ವಿದ್ಯುತ್‌ ನಿಯಂತ್ರಣ ಆಯೋಗದ ಆದೇಶ ಇದೆ. ಅದನ್ನೂ ಪಾಲಿಸಿಲ್ಲ. ಅನಿರೀಕ್ಷಿತವಾಗಿ ತಾಂತ್ರಿಕ ತೊಂದರೆಯಾದರೆ ತಕ್ಷಣವೇ ಗ್ರಾಹಕರ ಗಮನಕ್ಕೆ ತರಬೇಕಾಗಿತ್ತು. ಆದರೆ ತಂದಿಲ್ಲ. ಇದು ಕೂಡ ದೊಡ್ಡ ಲೋಪ. ಏಕಾಏಕಿ ವಿದ್ಯುತ್‌ ಕಡಿತ ಮಾಡಿದರೆ ಅತಿ ಹೆಚ್ಚು ತೊಂದರೆ ಆಗುವುದು ಉದ್ಯಮ ವಲಯಕ್ಕೆ. ಈಗಲೇ ವಿವಿಧ ಸಮಸ್ಯೆಗಳಿಂದ ಕಂಗೆಟ್ಟಿರುವ ಈ ವಲಯಕ್ಕೆ ಈಗ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಐ.ಟಿ., ಬಿ.ಟಿ.ಯಿಂದ ವಿಶ್ವಖ್ಯಾತಿ ಪಡೆದ ಬೆಂಗಳೂರಿನ ಪ್ರತಿಷ್ಠೆಗೆ ದಿಢೀರ್‌ ವಿದ್ಯುತ್‌ ಕಡಿತದಿಂದ ಧಕ್ಕೆ ಬರುತ್ತದೆ. ಅದನ್ನೂ ಗಮನದಲ್ಲಿ ಇಟ್ಟುಕೊಳ್ಳಬೇಕು. ಅಲ್ಲದೆ ಈಗ ದೇಶದ ಉದ್ದಗಲಕ್ಕೂ ವಿದ್ಯುತ್‌ ವಿತರಣಾ ಜಾಲ ಹರಡಿದೆ. ವಿದ್ಯುತ್‌ ವಿನಿಮಯ ಮಾರುಕಟ್ಟೆ ವ್ಯವಸ್ಥೆ ಕಾರ್ಯ ನಿರ್ವಹಿಸುತ್ತಿದೆ. ಇದರ ಮೂಲಕ ಎಲ್ಲಿಂದ ಬೇಕಾದರೂ ಯಾವುದೇ ಸಮಯದಲ್ಲಿ ವಿದ್ಯುತ್‌ ಖರೀದಿಸುವ ಸೌಕರ್ಯ ಇದೆ. ಆದ್ದರಿಂದ ನೆಪ ಹೇಳುವುದನ್ನು ಬಳಕೆದಾರರು ಒಪ್ಪಲಾರರು. ಪರ್ಯಾಯ ವ್ಯವಸ್ಥೆಯೊಂದಿಗೆ ಸದಾ ಸಜ್ಜಾಗಿರಬೇಕು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry