3

‘ಹೆಂಡತಿಯ ಮೊಡವೆಯೇ ನನ್ನ ಚಿಂತೆ!’

Published:
Updated:
‘ಹೆಂಡತಿಯ ಮೊಡವೆಯೇ ನನ್ನ ಚಿಂತೆ!’

1. ನನಗೆ ಮದುವೆಯಾಗಿ ಮೂರು ವರ್ಷವಾಯಿತು. ನಾನು ಮದುವೆಯಾಗುವ ಮೊದಲು ಹುಡುಗಿ ನೋಡಲು ಹೋದಾಗ ನನ್ನ ಹೆಂಡತಿಯ ಮುಖದ ತುಂಬಾ ಮೊಡವೆ ಇತ್ತು. ಅದು ಪ್ರಾಯದ ಮೊಡವೆ ಎಂದು ಅವಳನ್ನೇ ಮದುವೆಯಾದೆ. ಈಗ ಮೂರು ವರ್ಷ ಕಳೆದರೂ ಅವಳ ಮುಖದಲ್ಲಿ ಮೊಡವೆಗಳು ನಿವಾರಣೆಯಾಗಿಲ್ಲ. ನನಗೆ ಈಗ ಅವಳ ಮೇಲೆ ಮೊದಲಿನ ಪ್ರೀತಿ ಇಲ್ಲ. ನನಗೆ ನೆಮ್ಮದಿಯಿಂದ ಜೀವನ ಸಾಗಿಸಲು ಆಗುತ್ತಿಲ್ಲ. ಏನು ಮಾಡಬೇಕು ತಿಳಿಯುತ್ತಿಲ್ಲ!

–ರಮೇಶ್, ಬೆಂಗಳೂರು‌

ಮದುವೆಯಲ್ಲಿ ಸೌಂದರ್ಯ ಮತ್ತು ಮೈಕಟ್ಟು ವಿಷಯವೇ ಅಲ್ಲ. ಮಾನಸಿಕ ಹೊಂದಾಣಿಕೆ ಮತ್ತು ಪರಸ್ಪರ ಅರ್ಥ ಮಾಡಿಕೊಳ್ಳುವುದೇ ಮುಖ್ಯವಾಗುತ್ತದೆ. ನಿಮ್ಮಿಬ್ಬರ ನಡುವಿನ ಬಾಂಧವ್ಯ ಹೇಗಿದೆ, ಇಬ್ಬರು ಒಬ್ಬನ್ನೊಬ್ಬರು ಹೇಗೆ ಅರ್ಥ ಮಾಡಿಕೊಂಡಿದ್ದೀರಿ ಎ‌ನ್ನುವುದು ತುಂಬಾ ಮುಖ್ಯ. ಚರ್ಮದ ಸೌಂದರ್ಯವನ್ನು ನೋಡುವ ದೃಷ್ಟಿಕೋನವನ್ನು ಬದಲಾಯಿಸಿಕೊಳ್ಳಿ. ಅದು ಕೇವಲ ಬಾಹ್ಯವಷ್ಟೇ. ಆಂತರಿಕ ಸೌಂದರ್ಯವನ್ನು ನೋಡಿ. ನಿಮ್ಮ ಹೆಂಡತಿ ನೀವು ಹಾಗೂ ನಿಮ್ಮ ಮನೆಯವರ ಜೊತೆ ಹೇಗೆ ಹೊಂದಿಕೊಂಡಿದ್ದಾರೆ ಎಂಬುದನ್ನು ನೋಡಿ.

ಮತ್ತು ಚರ್ಮದ ಸಮಸ್ಯೆಗೆ ನೀವು ಅವರನ್ನು ಚರ್ಮವೈದ್ಯರ ಬಳಿ ಕರೆದುಕೊಂಡು ಹೋಗಿ, ಈ ಸಮಸ್ಯೆಗೆ ಕಾರಣ ಏನು ತಿಳಿದುಕೊಳ್ಳಬಹುದು. ನೀವು ಪ್ರಬುದ್ಧರಾಗಿ. ಇದು ನಿಜಕ್ಕೂ ತುಂಬಾ ಚಿಕ್ಕ ವಿಷಯ. ಸುಂದರವಾದ ಮುಖವನ್ನು ನೀವು ಎಲ್ಲಿ ಬೇಕಾದರೂ ನೋಡಬಹುದು. ಆದರೆ, ಸುಂದರ ವ್ಯಕ್ತಿತ್ವ ಹಾಗೂ ಹೃದಯವಂತಿಕೆ ಇರುವ ವ್ಯಕ್ತಿಯನ್ನು ನೋಡಲು ಸಾಧ್ಯವಿಲ್ಲ.

**

2. ನನ್ನ ವಯಸ್ಸು 25. ಎಂಟೆಕ್ ಮುಗಿದ ಮೇಲೆ ಮದುವೆ ಮಾಡಿದರು. ಮದುವೆಯಾಗಿ ಈ ನವೆಂಬರ್‌ಗೆ ಒಂದು ವರ್ಷ ಆಗುತ್ತದೆ. ನನ್ನ ಅತ್ತೆ ಹೆಚ್ಚು ವಿದ್ಯಾವಂತೆ ಅಲ್ಲ. ನನ್ನ ತಂದೆ ತಾಯಿ ಇಬ್ಬರು ಉನ್ನತ ಹುದ್ದೆಯಲ್ಲಿ ಇದ್ದವರು. ಅತ್ತೆ ಯಾವಾಗಲೂ ಅಮ್ಮನನ್ನು ಬೈಯುತ್ತಾರೆ. ನನಗೆ ಸಾಕಾಗಿ ಹೋಗಿದೆ. ‘ನಿಮ್ಮ ಅಮ್ಮ ಅಷ್ಟು ಕೊಟ್ಟಿಲ್ಲ, ನಿಂಗೆ ಮೋಸ ಮಾಡಿದ್ದಾರೆ’ ಎಂದೆಲ್ಲಾ ಯಾವಾಗಲೂ ಬೈಯುತ್ತಾರೆ. ನಾನು ಕೆಲಸಕ್ಕೆ ಪ್ರಯತ್ನ ಮಾಡುತ್ತಿದ್ದೇನೆ. ಆದರೆ ಇನ್ನೂ ಸಿಕ್ಕಿಲ್ಲ. ‘ಮದುವೆ ಎಂದರೆ ಇದೇನಾ’ ಎನ್ನಿಸಿ ಜೀವನವೇ ಬೇಡ ಎನ್ನಿಸುತ್ತಿದೆ. ಗಂಡನಿಗೆ ಬೇರೆ ಇರುವುದಕ್ಕೆ ಇಷ್ಟವಿಲ್ಲ. ಮದುವೆ ಆಗಿ ಮೊದಲ 5 ತಿಂಗಳು ಗಂಡನ ಅಕ್ಕನ ಮನೆಯಲ್ಲಿ ಇದ್ದೆ, ಆಮೇಲೆ ಮೂರು ತಿಂಗಳು ಅತ್ತೆಯ ಜೊತೆ ಇದ್ದೆ. ಮತ್ತೆ ಅವರ ಅಕ್ಕನ ಮಗನನ್ನು ನೋಡಿಕೊಳ್ಳೋಕೆ ಕಳುಹಿಸಿದ್ರು. ನನ್ನ ಜೀವನ ಅಲ್ಲಿ, ಇಲ್ಲಿ ಇರುವುದೇ ಆಗಿದೆ. ಅಮ್ಮ ಅಪ್ಪ ಎಷ್ಟು ನೋಡಿಕೊಳ್ತಾರೆ? ಅವರಿಗೂ ಗೊಂದಲ ಶುರುವಾಗಿದೆ. ಇದರಿಂದ ಹೇಗೆ ಹೊರಗಡೆ ಬರುವುದು ತಿಳಿಯುತ್ತಿಲ್ಲ.

–ಹೆಸರು, ಊರು ಬೇಡ

ಅನಿಶ್ಚಿತತೆ, ಅಭದ್ರತೆ ಮತ್ತು ಗೊಂದಲಗಳಿಗೆ ಎಡೆ ಮಾಡಿಕೊಡುತ್ತದೆ ಮತ್ತು ಜೀವನ ಸುಲಭವಿಲ್ಲ ಎಂಬ ಚಿತ್ರಣವು ನಮ್ಮ ಮುಂದೆ ಬರುತ್ತದೆ. ನನಗೆ ಅರ್ಥವಾಗುತ್ತದೆ. ನೀವು ಮದುವೆಯಾಗಿ ಒಂದು ವರ್ಷ ಕಳೆದಿದೆ. ಆದರೂ ಇನ್ನೂ ನೀವು ಸಂಸಾರಜೀವನಕ್ಕೆ ಒಗ್ಗಿಕೊಳ್ಳಲು ಸಾಧ್ಯವಾಗಿಲ್ಲ. ನೀವೆಲ್ಲರೂ ವಿದ್ಯಾವಂತರು ಹಾಗೂ ಪ್ರಬುದ್ಧರು. ಸೂಕ್ತವಾದ ಕೆಲಸ ಗಿಟ್ಟಿಸಿಕೊಳ್ಳಲು ಬೇಕಾದ ಪ್ರಯತ್ನಗಳನ್ನು ಮಾಡಬೇಕು. ಅಲ್ಲದೇ ಅದೇ ನಿಮ್ಮ ಮೊದಲ ಆದ್ಯತೆಯಾಗಿರಬೇಕು. ಈಗ ನೀವು ಮನೆಯಲ್ಲಿ ಬಿಡುವಿನಿಂದ ಇದ್ದೀರಿ; ನೀವೇ ಹೇಳಿದಂತೆ ಯಾರಿಗೆ ಅವಶ್ಯಕತೆ ಇದೆಯೋ ಅವರ ಜೊತೆ ನಿಮ್ಮನ್ನು ಕಳುಹಿಸುತ್ತಿದ್ದಾರೆ. ಅದು ತಪ್ಪಲ್ಲ. ಆದರೆ ಅದು ಸ್ವಲ್ಪ ಸಮಯಕ್ಕಾದರೆ ತೊಂದರೆಯಿಲ್ಲ. ನೀವು ಯಾರಿಗೂ ಟೇಕನ್ ಫಾರ್ ಗ್ರಾಂಟೆಂಡ್‌ನಂತಾಗಬಾರದು. ನಿಮ್ಮ ಯೋಚನೆಗಳಿಗೆ ಬ‌ದ್ಧರಾಗಿರಿ, ನಿಮ್ಮ ಗಂಡ ಹಾಗೂ ಅತ್ತೆಯೊಂದಿಗೆ ಮಾತನಾಡಿ. ಆರೋಗ್ಯಕರ ಸಂವಹನ ಇಲ್ಲಿ ನಿಮಗೆ ಸಹಾಯ ಮಾಡುತ್ತದೆ. ಬೇರೆಯಾಗಿ ಬದುಕುವುದಷ್ಟೇ ಈ ಸಮಸ್ಯೆಗೆ ಪರಿಹಾರವಲ್ಲ. ಅಂತರ್ಗತರಾಗಿರುವ ಬದಲು ಪರಿಸ್ಥಿತಿಯನ್ನು ಒಪ್ಪಿಕೊಳ್ಳಿ. ಇದು ನಿಮಗೆ ವಿಷಯವನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಲು ಸಹಾಯ ಮಾಡುತ್ತದೆ.

**

3. ನನಗೆ 55 ವರ್ಷ. ಯಾವುದೇ ಕೆಲಸವನ್ನಾದರು ಪದೇ ಪದೇ ಮಾಡಬೇಕು ಎನ್ನಿಸುತ್ತದೆ. ಉದಾ: ಬಾಗಿಲು ಲಾಕ್ ಆಗಿರುತ್ತೆ ಆದರೂ ಪದೇ ಪದೇ ನೋಡಬೇಕು ಅನ್ನಿಸುತ್ತದೆ. ಏನಾದ್ರೂ ಓದಿದ್ರೆ ಅರ್ಥ ಆಗಿರುತ್ತೆ, ಆದರೂ ಪದೇ ಪದೇ ಓದುತ್ತೀನಿ. ಹೀಗೆ ಯಾವುದನ್ನಾದರೂ ಪದೇ ಪದೇ ಮಾಡಿಲ್ಲ ಅಂದ್ರೆ ಸಮಾಧಾನನೇ ಇರೋಲ್ಲ. ಇದನ್ನು ಗೀಳು ಕಾಯಿಲೆ ಅಂತಾರೆ ಅನ್ನಿಸುತ್ತೆ. ಇದು ಎಲ್ಲರಿಗೂ ಇರುತ್ತದೆ. ಆದರೆ ನನಗೆ ಸ್ವಲ್ಪ ಜಾಸ್ತಿನೇ ಇದೆ. ಇದರಿಂದ ನನಗೆ ಎಲ್ಲಾ ಕಡೆ ಮುಜುಗರ ಆಗುತ್ತೆ, ಎಲ್ಲರೂ ನನ್ನನ್ನು ಆಡಿಕೊಳ್ತಾರೆ. ಈ ಸಮಸ್ಯೆಗೆ ಪರಿಹಾರ ಏನು?

–ಹೆಸರು ಬೇಡ, ತುಮಕೂರು

ನನಗೆ ಅರ್ಥವಾಗುತ್ತಿದೆ. ಎಲ್ಲಿ ಒಬ್ಬ ವ್ಯಕ್ತಿ ಒಂದೇ ಕೆಲಸವನ್ನು ತನಗೇ ತಿಳಿಯದಂತೆ ಪದೇ ಪದೇ ಮಾಡುತ್ತಿರುತ್ತಾನೋ ಅದು ಮಾನಸಿಕ ಸಮಸ್ಯೆಯ ಲಕ್ಷಣ. ಇದನ್ನು ನಿಭಾಯಿಸುವುದು ಸುಲಭದ ಮಾತಲ್ಲ. ಈ ತರಹದ ಕಾಯಿಲೆಯನ್ನು ಒಸಿಡಿ (ಒಬ್ಸೆಸಿವ್‌ ಕಂಪಲ್‌ಸಿವ್‌ ಡಿಸಾರ್ಡರ್‌) ಎನ್ನುತ್ತಾರೆ. ನೀವು ಒಬ್ಬ ಒಳ್ಳೆಯ ಮನಃಶಾಸ್ತ್ರಜ್ಞರನ್ನು ನೋಡುವುದು ಉತ್ತಮ ಎನ್ನುವುದು ನನ್ನ ಅಭಿಪ್ರಾಯ. ಅವರು ಇದನ್ನು ನಿಭಾಯಿಸಲು ನಿಮಗೆ ಕೆಲವು ಥೆರಪಿಗಳನ್ನು ನೀಡಬಹುದು. ಯಾವುದೇ ಒಳ್ಳೆಯ ಚಿಕಿತ್ಸೆಯ ಗುರಿ ಎಂದರೆ ನಿಮಗೆ ನೀವೇ ಚಿಕಿತ್ಸಕರಾಗುವುದನ್ನು ಕಲಿಸುವುದು, ಇದು ಒಂದು ರೀತಿಯ ಜೀವನಶೈಲಿ ನಿರ್ವಹಣೆ. ಅಬ್ಸೆಷನ್ ನಮ್ಮಲ್ಲಿ ಕಂಡ ಕೂಡಲೇ ಅದನ್ನು ಎದುರಿಸಬೇಕು ಜೊತಗೆ ಕಂಪಲ್‌ಷನ್‌ಗೆ ಪ್ರತಿರೋಧ ತೋರಬೇಕು. ನೀವು ಹೇಗೆ ಚಿಕಿತ್ಸೆಗೆ ಸ್ಪಂದಿಸುತ್ತಿರೋ ಹಾಗೇ ನಿಮಗೆ ಚಿಕಿತ್ಸೆ ನೀಡುತ್ತಾರೆ. ಈ ಸಮಸ್ಯೆಯಿಂದ ಹೊರಬರಲು ಸಮಯ ಬೇಕು. ಜೀವನದಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳಲು ಆರೋಗ್ಯವೇ ಮುಖ್ಯ. ಸಮತೋಲಿತ ಜೀವನ ನಡೆಸಲು ಉತ್ತಮ ನಿದ್ದೆ, ಸಮತೋಲಿತ ಡಯೆಟ್‌ ಹಾಗೂ ಏಕ್ಸ್‌ಸೈಜ್, ಸಾಮಾಜಿಕ ಸಂಬಂಧಗಳನ್ನು ಕಾಪಾಡಿಕೊಳ್ಳುವುದರಿಂದ ಪರಿಹಾರ ಕಂಡುಕೊಳ್ಳಬಹುದು.

**

4. ನನಗೆ 28 ವರ್ಷ. ಮದುವೆ ಆಗಿ ಏಳು ವರ್ಷದ ಹೆಣ್ಣು ಮಗಳಿದ್ದಾಳೆ. ಗಂಡ ತೀರಿಕೊಂಡು ಆರು ವರ್ಷ ಆಯ್ತು. ಕಷ್ಟ ಎಂದು ಮಗಳನ್ನು ಬಿಟ್ಟು ಹಾಸ್ಟೆಲ್‌ನಲ್ಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದೇನೆ. ಎಲ್ಲರೂ ಬೇರೆ ಮದುವೆ ಆಗಲು ಹೇಳುತ್ತಿದ್ದಾರೆ. ಆದರೆ ನನಗೆ ಇಷ್ಟವಿಲ್ಲ, ಅಲ್ಲದೇ ನಾನು ಆ ಯೋಚನೆಯಲ್ಲೇ ಇಲ್ಲ. ನಾನು ಮಗಳನ್ನು ಚೆನ್ನಾಗಿ ಸಾಕಬೇಕು ಮತ್ತು ಓದಿಸಬೇಕು, ನನಗೆ ಬೇರೆ ನಾನು ಬೇರೆ ಮದುವೆ ಆಗಬೇಕಾ? ಒಂದು ವೇಳೆ ಆದರೆ ನನ್ನ ಮಗಳು ನನ್ನಿಂದ ದೂರ ಆಗ್ತಾಳಾ – ಎನ್ನುವುದೇ ಭಯ. ಪರಿಹಾರ ತಿಳಿಸಿ.

–ಹೆಸರು, ಊರು ಬೇಡ.

ಸಿಂಗಲ್ ಪೇರೆಂಟ್ ಆಗಿ ಒಬ್ಬ ಮಗುವನ್ನು ಬೆಳೆಸುವುದು ಎಷ್ಟು ಕಷ್ಟ ಎಂಬುದು ನನಗೆ ತಿಳಿದಿದೆ. ನೀವು ಆರಿಸಿದ ದಾರಿ ನಿಜಕ್ಕೂ ಪ್ರಶಂಸನೀಯ. ಆದರೂ ನೀವಿನ್ನು ತುಂಬಾ ದೂರ ಸಾಗಬೇಕಿದೆ, ಮತ್ತೆ ಜೀವನಕ್ಕೆ ಮತ್ತೆ ಒಬ್ಬ ಒಳ್ಳೆಯ ಸಂಗಾತಿಯನ್ನು ಪಡೆದುಕೊಂಡರೆ ಅವರು ನಿಮಗೆ ಬೆಂಬಲವಾಗಿರುತ್ತಾರೆ. ಇದರ ಬಗ್ಗೆ ಯೋಚಿಸಿ. ಯಾವುದು ತಪ್ಪಲ್ಲ. ಒಂದು ವೇಳೆ ಇದು ನಿಮ್ಮ ಯೋಚನೆಯಲ್ಲಿದ್ದರೆ ಈಗಲೇ ಕಾರ್ಯರೂಪಕ್ಕೆ ತನ್ನಿ. ಸಮಯ ಸಾಗಿದಂತೆ ಹೊಸ ಜೀವನಕ್ಕೆ ಹೊಂದಿಕೊಳ್ಳಲು ನಿಮಗೆ ಕಷ್ಟವಾಗಬಹುದು. ನಿಮ್ಮ ಮಗಳ ವಿಷಯಕ್ಕೆ ಬಂದರೆ ಅವಳು ಯಾವಾಗಲೂ ನಿಮ್ಮೊಂದಿಗೆ ಇರುತ್ತಾಳೆ. ನಿಮ್ಮೊಂದಿಗೆ ನಿಮ್ಮ ಮಗಳನ್ನು ಒಪ್ಪಿಕೊಳ್ಳುವವರನ್ನು ನೋಡಿ. ಮತ್ತು ಅಲ್ಲದೇ ಇದ್ಯಾವುದಕ್ಕೂ ನಿಮ್ಮನ್ನು ನೀವು ಒತ್ತಾಯಿಸಿಕೊಳ್ಳಬೇಡಿ. ನಿಮಗೆ ಇದು ನಿಜವಾಗಿಯೂ ಇಷ್ಟವಿದ್ದರೆ ಇದು ಯಶಸ್ಸು ಕಾಣಲು ಸಾಧ್ಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry