7
ವೈಶಾಖದ ಹುಣ್ಣಿಮೆ

ಎಚ್ಚರಿಕೆಯೇ ಬುದ್ಧತ್ವ

Published:
Updated:
ಎಚ್ಚರಿಕೆಯೇ ಬುದ್ಧತ್ವ

ಭಾರತೀಯ ಸಂಸ್ಕೃತಿಯನ್ನು ಮಾತ್ರವಲ್ಲದೆ, ಜಗತ್ತಿನ ಹಲವು ದೇಶಗಳ ಸಂಸ್ಕೃತಿ–ಚಿಂತನವನ್ನೂ ಬೌದ್ಧದರ್ಶನ ಪ್ರಭಾವಿಸಿದೆ. ಯಾವುದೇ ಒಂದು ಕಾಣ್ಕೆ ಸಾವಿರಾರು ವರ್ಷಗಳಿಂದ ಜೀವಂತವಾಗಿದೆ ಎಂದರೆ ಜನರು ಅದನ್ನು ಆದರಿಸುತ್ತಿರುವುದೇ ಮುಖ್ಯ ಕಾರಣ. ಹಾಗಾದರೆ ಬೌದ್ಧದರ್ಶನವನ್ನು ಜನರು ಯಾವ ಕಾರಣದಿಂದ ಸ್ವೀಕರಿಸುತ್ತಿದ್ದಾರೆ ಎನ್ನುವುದನ್ನು ಗಮನಿಸಲೇಬೇಕಾಗುತ್ತದೆ.

ಬುದ್ಧನ ಒಟ್ಟು ಉಪದೇಶವನ್ನು ಗಮನಿಸದಾಗ ಒಂದು ವಿಷಯ ಸ್ಪಷ್ಟವಾಗುತ್ತದೆ. ಅವನ ಉಪದೇಶದ ಬಹುಪಾಲು ನಮ್ಮ ಸಾಮಾನ್ಯ ರೀತಿ–ನೀತಿಗಳನ್ನು ಉದ್ದೇಶಿಸಿರುವಂಥದ್ದು. ಅಲೌಕಿಕವಾದ, ಅಮೂರ್ತವಾದ ತಾತ್ವಿಕತೆಗಿಂತಲೂ ಎಲ್ಲರಿಗೂ ಅನ್ವಯವಾಗುವಂಥ ಮಾತು–ನಡತೆ, ಸರಿ–ತಪ್ಪುಗಳ ಜಿಜ್ಞಾಸೆ ಅವನಲ್ಲಿ ಪ್ರಧಾನವಾಗಿ ಕಾಣುತ್ತೇವೆ. ತತ್ತ್ವಜಿಜ್ಞಾಸೆ ಇಲ್ಲವೇ ಇಲ್ಲ – ಎಂದಲ್ಲ; ಪ್ರಧಾನ ಒತ್ತು ನಮ್ಮ ವ್ಯಕ್ತಿತ್ವದ ಲೋಪ–ದೋಷಗಳನ್ನು ತಿದ್ದುವ ಕಡೆಗೇ ಇರುವುದು. ಬುದ್ಧನ ತಾತ್ವಿಕ

ಮಾರ್ಗವನ್ನು ‘ಬಹುಜನ ಹಿತಾಯಬಹುಜನ ಸುಖಾಯ’ ಎಂದು ಒಕ್ಕಣಿಸುವುದುಂಟು. ಎಲ್ಲರ ಹಿತವನ್ನೂ ಎಲ್ಲರ ಸುಖವನ್ನೂ ಒಳಗೊಂಡ ವಿವರಗಳ ಕಡೆಗೆ ಅವನ ಒಲವು. ಇಂಥದೊಂದು ವ್ಯಷ್ಟಿಹಿತವೂ ಸಮಷ್ಟಿಹಿತವೂ ಸಾಧ್ಯವಾಗುವುದು ಎಲ್ಲರ ಸಮೂಹ ಪ್ರಯತ್ನದಿಂದಾಗಿ. ಆದರೆ ಈ ಪ್ರಯತ್ನ ನಡೆಯಬೇಕಾದುದು ವೈಯಕ್ತಿಕ ಸ್ತರದಲ್ಲಿ. ಎಲ್ಲರೂ ನಮ್ಮ ಜೀವನದ ಗೊತ್ತು–ಗುರಿಗಳನ್ನು ಕಂಡುಕೊಳ್ಳುವುದೇ ಈ ಪ್ರಯತ್ನ. ‘ನನ್ನ ಜೀವನಕ್ಕೆ ಹೊಣೆ ನಾನೇ; ನನ್ನ ಸುಖ–ದುಃಖಗಳಿಗೆ ನಾನೇ ಕಾರಣ. ನಮ್ಮ ಆಲೋಚನೆ, ನಡತೆ, ಮಾತುಗಳೇ ನಮ್ಮ ಜೀವನವನ್ನು ನಿರ್ಮಿಸುವ ವಿವರಗಳು’ ಎಂಬ ಅರಿವು ಮೊದಲು ನಮಗೆ ಒದಗಬೇಕು. ‘ಧಮ್ಮಪದ’ದ ಗಾಹೆಯೊಂದು ಇದನ್ನು ಹೀಗೆಂದಿದೆ:

ಅತ್ತಾ ಹಿ ಅತ್ತನೋ ನಾಥೋ

ಕೋ ಹಿ ನಾಥೋ ಪರೋ ಸಿಯಾ |

ತಸ್ಮಾ ಸಂಯಮಮತ್ತಾನಂ

ಅಸ್ಸಂ ಭದ್ರಂ ವ ವಾಣಿಜೋ ||

‘ತನಗೆ ತಾನೇ ಒಡೆಯ; ತನಗೆ ತಾನೇ ಗತಿ. ಹೀಗಾಗಿ, ವರ್ತಕನು ಬೆಲೆಯುಳ್ಳ ಒಳ್ಳೆಯ ಕುದುರೆಯನ್ನು ಕಾಪಾಡಿಕೊಳ್ಳುವಂತೆ ನಿನ್ನನ್ನು ನೀನೇ ಹಿಡಿತದಲ್ಲಿಟ್ಟುಕೋ’. ಗಾಹೆಯ ಸರಳ ತಾತ್ಪರ್ಯವಿದು.

ಧಮ್ಮಪದದ ಈ ಮಾತಿನ ಜೊತೆಗೆ ಭಗವದ್ಗೀತೆಯ ಈ ಮಾತನ್ನೂ ನೋಡಬಹುದು:

ಉದ್ಧರೇದಾತ್ಮನಾSSತ್ಮಾನಂ

ನಾತ್ಮಾನಮವಸಾದಯೇತ್ |

ಆತ್ಮೈವ ಹ್ಯಾತ್ಮನೋ ಬಂಧುಃ

ಅತ್ಮೈವ ರಿಪುರಾತ್ಮನಃ ||

‘ತನ್ನನ್ನು ತಾನೇ ಉದ್ಧಾರ ಮಾಡಿಕೊಳ್ಳಬೇಕು. ತನ್ನನು ಇನ್ನೂ ಕೆಳಕ್ಕೆ ತಳ್ಳಿಬಿಡಬಾರದು. ಏಕೆಂದರೆ – ತಾನೊಬ್ಬನೇ ತನಗೆ ಬಂಧು. ತಾನೊಬ್ಬನೇ ತನಗೆ ವೈರಿ.’

ಇಂಥ ಅರಿವು ನಮಗೆ ಒದಗಬೇಕಾದರೆ ನಾವು ‘ಎಚ್ಚರಿಕೆ’ಯನ್ನು ಕಾಪಾಡಿಕೊಳ್ಳಬೇಕು. ಇದನ್ನೇ ಬುದ್ಧ ‘ಅಪ್ರಮಾದ’ ಎಂದು ಹೇಳಿರುವುದು.

–ಅವಲೋಕಿತ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry