ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಬಿಎಂಪಿ ಸ್ಥಾಯಿ ಸಮಿತಿ ಚುನಾವಣೆ: 132 ಸದಸ್ಯರ ಅವಿರೋಧ ಆಯ್ಕೆ

Last Updated 10 ನವೆಂಬರ್ 2017, 19:44 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿಯ 12 ಸ್ಥಾಯಿ ಸಮಿತಿಗಳಿಗೆ ಶುಕ್ರವಾರ ನಡೆದ ಚುನಾವಣೆಯಲ್ಲಿ 132 ಸದಸ್ಯರು ಅವಿರೋಧವಾಗಿ ಆಯ್ಕೆಯಾದರು. ಪ್ರಾದೇಶಿಕ ಆಯುಕ್ತೆ ಎಂ.ವಿ.ಜಯಂತಿ ಅಧ್ಯಕ್ಷತೆಯಲ್ಲಿ ಚುನಾವಣಾ ಪ್ರಕ್ರಿಯೆ ನಡೆಯಿತು.

ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿಗೆ 13 ಸದಸ್ಯರು ನಾಮಪತ್ರ ಸಲ್ಲಿಸಿದ್ದರು. ಬಳಿಕ ಕಾಂಗ್ರೆಸ್‌ನ ಶಿಲ್ಪಾ ಅಭಿಲಾಷ್‌, ಜಿ.ಬಾಲಕೃಷ್ಣನ್‌ ಹಿಂಪಡೆದರು. ವಾರ್ಡ್‌ ಮಟ್ಟದ ಸಾರ್ವಜನಿಕ ಕಾಮಗಾರಿ ಸ್ಥಾಯಿ ಸಮಿತಿಗೆ ನಾಮಪತ್ರ ಸಲ್ಲಿಸಿದ್ದ ಕಾಂಗ್ರೆಸ್‌ನ ಎಂ.ವೇಲು ನಾಯ್ಕರ್‌ ಹಿಂಪಡೆದರು.

ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಸ್ಥಾಯಿ ಸಮಿತಿಗೆ 13 ನಾಮ ಪತ್ರಗಳು ಸಲ್ಲಿಕೆಯಾಗಿದ್ದವು. 2 ನಾಮಪತ್ರಗಳನ್ನು ಸಲ್ಲಿಸಿದ್ದ ಪಕ್ಷೇತರ ಸದಸ್ಯ ಸಿ.ಆರ್‌.ಲಕ್ಷ್ಮಿನಾರಾಯಣ ಒಂದನ್ನು ಹಿಂಪಡೆದರು. ಈ ಸಮಿತಿಗೆ ಕಾಂಗ್ರೆಸ್‌ನ ಎಸ್‌.ಆನಂದ ಕುಮಾರ್‌ ಸಹ ನಾಮಪತ್ರ ಸಲ್ಲಿಸಿದ್ದರು.

‘ಆನಂದ ಕುಮಾರ್‌ ಬೇರೊಂದು ಸಮಿತಿಗೆ ಆಯ್ಕೆ ಆಗಿದ್ದಾರೆ. ಹೀಗಾಗಿ ಅವರ ನಾಮಪತ್ರ ಪರಿಗಣಿಸಲು ಸಾಧ್ಯವಿಲ್ಲ’ ಎಂದು ಜಯಂತಿ ಸ್ಪಷ್ಟ
ಪಡಿಸಿದರು.

ಬಿಜೆಪಿ ಆಕ್ಷೇಪ: ‘ಮೇಯರ್‌ ಚುನಾವಣೆ ಸಂದರ್ಭದಲ್ಲೇ ಸ್ಥಾಯಿ ಸಮಿತಿಗಳ ಅಧ್ಯಕ್ಷ ಹಾಗೂ ಸದಸ್ಯ ಸ್ಥಾನಗಳಿಗೆ ಆಯ್ಕೆ ನಡೆಸಬೇಕು ಎಂದು ಹೈಕೋರ್ಟ್‌ ಆದೇಶ ನೀಡಿತ್ತು. ಆದರೆ, ಒಂದೂವರೆ ತಿಂಗಳು ಕಳೆದ ಬಳಿಕ ಸ್ಥಾಯಿ ಸಮಿತಿಗಳಿಗೆ ಚುನಾವಣೆ ನಡೆಯುತ್ತಿದೆ. ಪಾಲಿಕೆ ಆಡಳಿತದ ಕೊನೆ ವರ್ಷದಲ್ಲಿ ಸ್ಥಾಯಿ ಸಮಿತಿಗಳಿಗೆ ಆಯ್ಕೆಗೊಳ್ಳುವ ಅಧ್ಯಕ್ಷರು ಹಾಗೂ ಸದಸ್ಯರ ಅಧಿಕಾರಾವಧಿ ಕಡಿಮೆ ಆಗಲಿದೆ. ಹೀಗಾಗಿ, ಅಧಿಕಾರಾವ
ಧಿಯನ್ನು ನಿಗದಿಪಡಿಸಬೇಕು’ ಎಂದು ಬಿಬಿಎಂಪಿ ವಿರೋಧ ಪಕ್ಷದ ನಾಯಕ ಪದ್ಮನಾಭರೆಡ್ಡಿ ಒತ್ತಾಯಿಸಿದರು.

ಈ ಕುರಿತ ಮನವಿ ಪತ್ರವನ್ನು ಜಯಂತಿ ಅವರಿಗೆ ನೀಡಿದರು. ‘ಸ್ಥಾಯಿ ಸಮಿತಿ ಚುನಾವಣೆ ಸಂಬಂಧ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸುತ್ತೇನೆ’ ಎಂದರು.

‘ಸಮಿತಿಗಳ ಅಧಿಕಾರಾವಧಿ 2018ರ ನವೆಂಬರ್‌ 9ರವರೆಗೆ ಇರಲಿದೆ’ ಎಂದು ಜಯಂತಿ ತಿಳಿಸಿದರು.

ನಾಮಪತ್ರ ಹಿಂಪಡೆಯಲು ಮುಂದಾದ ಪಕ್ಷೇತರ ಸದಸ್ಯ ಎನ್‌. ರಮೇಶ್‌: ಲೆಕ್ಕಪತ್ರ ಸ್ಥಾಯಿ ಸಮಿತಿಗೆ ನಾಮಪತ್ರ ಸಲ್ಲಿಸಿದ್ದ ಪಕ್ಷೇತರ ಸದಸ್ಯ ಎನ್‌.ರಮೇಶ್‌ ನಾಮಪತ್ರ ಹಿಂಪಡೆಯಲು ಮುಂದಾದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮಾರತ್ತಹಳ್ಳಿ ವಾರ್ಡ್‌ನಲ್ಲಿ ಶೇ 20ರಷ್ಟು ಕೆಲಸಗಳು ಬಾಕಿ ಉಳಿದಿವೆ. ಲೆಕ್ಕಪತ್ರ ಸ್ಥಾಯಿ ಸಮಿತಿಯಲ್ಲಿದ್ದರೆ ಒಂದು ವರ್ಷ ನಗರ ಪ್ರದಕ್ಷಿಣೆ ಮಾಡಬೇಕು. ಇದರಿಂದ ವಾರ್ಡ್‌ನ ಅಭಿವೃದ್ಧಿ ಕಾರ್ಯಗಳಿಗೆ ಸಮಯ ಸಿಗುವುದಿಲ್ಲ. ಹೀಗಾಗಿ, ನಾಮಪತ್ರ ಹಿಂಪಡೆಯಲು ಯೋಚಿಸಿದ್ದೆ. ಸಮಿತಿಯಲ್ಲಿದ್ದೂ ವಾರ್ಡ್‌ನ ಕೆಲಸಗಳನ್ನು ಮಾಡಬಹುದು ಎಂದು ಕಾಂಗ್ರೆಸ್‌ ಸದಸ್ಯರು ಧೈರ್ಯ ತುಂಬಿದ್ದಾರೆ. ನನ್ನ ನಿಲುವು ಬದಲಿಸಿದ್ದೇನೆ’ ಎಂದರು.

‘ವಾರ್ಡ್‌ಮಟ್ಟದ ಸಾರ್ವಜನಿಕ ಕಾಮಗಾರಿ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ನೀಡುವಂತೆ ರಮೇಶ್‌ ಪಟ್ಟುಹಿಡಿದಿದ್ದರು. ಅದು ಸಿಗದ ಕಾರಣ, ನಾಮಪತ್ರ ಹಿಂಪಡೆಯಲು ಮುಂದಾಗಿದ್ದರು’ ಎಂದು ಕಾಂಗ್ರೆಸ್‌ನ ಸದಸ್ಯರೊಬ್ಬರು ತಿಳಿಸಿದರು.

ನೇತ್ರಾ ನಾರಾಯಣ್ ಜೆಡಿಎಸ್ ನಾಯಕಿ: ‘ಪಾಲಿಕೆಯ ಜೆಡಿಎಸ್‌ ಪಕ್ಷದ ನಾಯಕಿಯಾಗಿ ಕಾವಲ್‌ ಭೈರಸಂದ್ರ ವಾರ್ಡ್‌ ಸದಸ್ಯೆ ನೇತ್ರಾ ನಾರಾಯಣ್‌ ಅವರನ್ನು ನೇಮಕ ಮಾಡಲಾಗಿದೆ’ ಎಂದು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT