ಸೋಮವಾರ, ಮಾರ್ಚ್ 8, 2021
19 °C
ಕಬ್ಬನ್‌ ಉದ್ಯಾನದಲ್ಲಿರುವ ಜವಾಹರ ಬಾಲಭವನದಲ್ಲಿ ಕಾರ್ಯಕ್ರಮ

ಏಳು ಮಕ್ಕಳಿಗೆ ಶೌರ್ಯ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಏಳು ಮಕ್ಕಳಿಗೆ ಶೌರ್ಯ ಪ್ರಶಸ್ತಿ

ಬೆಂಗಳೂರು: ಮಕ್ಕಳ ದಿನಾಚರಣೆ ನಿಮಿತ್ತ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕೊಡಮಾಡುವ ಕೆಳದಿ ಚನ್ನಮ್ಮ ಹಾಗೂ ಹೊಯ್ಸಳ ಶೌರ್ಯ ಪ್ರಶಸ್ತಿಗೆ ಏಳು ಮಕ್ಕಳು ಭಾಜನರಾಗಿದ್ದಾರೆ.

ಪ್ರಶಸ್ತಿಗೆ ಆಯ್ಕೆಯಾದ ಮಕ್ಕಳು

ಕೆ.ಆರ್‌. ನಿತೀನ್, ದಕ್ಷಿಣ ಕನ್ನಡ ಜಿಲ್ಲೆ, ಪುತ್ತೂರು ತಾಲ್ಲೂಕು, ಕೌಕ್ರಾಡಿ ಗ್ರಾಮದ ಪ್ರಥಮ ಪಿಯು ವಿದ್ಯಾರ್ಥಿ (ತೊಟದಲ್ಲಿ ಹಾವು ಕಚ್ಚಿ ಮನೆಗೆ ಓಡಿ ಬಂದ ತಂಗಿಯ ಕಾಲಿನಲ್ಲಿದ್ದ ವಿಷವನ್ನು ಬಾಯಲ್ಲಿ ಹೀರಿ ತೆಗೆದು ಪ್ರಾಣ ರಕ್ಷಿಸಿದ್ದ)

ಸಿ.ಡಿ. ಕೃಷ್ಣ ನಾಯ್ಕ, ಶಿವಮೊಗ್ಗದ ತ್ರಿಮೂರ್ತಿ ನಗರದ 7ನೇ ತರಗತಿ ವಿದ್ಯಾರ್ಥಿ (ತುಂಗಾ ಕಾಲುವೆಯಲ್ಲಿ ಈಜಲು ಹೋಗಿ ಮುಳುಗಿದ್ದ ಇಬ್ಬರು ಮಕ್ಕಳನ್ನು ನೀರಿಗೆ ಹಾರಿ ಕಾಪಾಡಿದ್ದ.)

ವೈಶಾಖ್, ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕು, ಕಡೂರುಮನೆ ಗ್ರಾಮದ 6ನೇ ತರಗತಿ ವಿದ್ಯಾರ್ಥಿ (ಶಾಲೆಯಿಂದ ಮನೆಗೆ ಬರುತ್ತಿದ್ದಾಗ ಹೆಬ್ಬಾವು ಸುತ್ತಿಕೊಂಡು ನುಂಗಲು ಯತ್ನಿಸಿತ್ತು. ಪಕ್ಕದಲ್ಲಿದ್ದ ಕಲ್ಲನ್ನು ಎತ್ತಿ ಹಾವಿನ ತಲೆ ಜಜ್ಜಿ ಹಿಡಿತದಿಂದ ಬಿಡಿಸಿಕೊಂಡಿದ್ದ. ಅಲ್ಲಿಗೆ ಓಡಿ ಬಂದ ಬಾಲಕಿಯನ್ನು ಹತ್ತಿರ ಬರದಂತೆ ತಡೆದು ಆಕೆಯ ಪ್ರಾಣ ರಕ್ಷಣೆಯನ್ನೂ ಮಾಡಿದ್ದ)

ಜುನೇರಾ ಹರಂ, ಚಾಮರಾಜನಗರದ ಮುಬಾರಕ್ ಮೊಹಲ್ಲಾದ 2ನೇ ತರಗತಿ ವಿದ್ಯಾರ್ಥಿನಿ (ಮನೆಯ ಅಂಗಳದಲ್ಲಿದ್ದ ನೀರಿನ ಬ್ಯಾರಲ್‌ಗೆ ಬಿದ್ದಿದ್ದ ಮಗುವಿನ ಪ್ರಾಣ ರಕ್ಷಣೆ ಮಾಡಿದ್ದಳು)

ಎಚ್.ಕೆ. ದೀಕ್ಷಿತಾ ಮತ್ತು ಎಚ್.ಕೆ. ಅಂಬಿಕಾ, ಚಿಕ್ಕಬಳ್ಳಾಪುರ ಜಿಲ್ಲೆ, ಶಿಡ್ಲಘಟ್ಟ ತಾಲ್ಲೂಕಿನ ಹನುಮಂತಪುರ ಗ್ರಾಮದ 6 ಮತ್ತು 7ನೇ ತರಗತಿ ವಿದ್ಯಾರ್ಥಿನಿಯರು (ಗೋಬರ್ ಗ್ಯಾಸ್ ಗುಂಡಿಗೆ ಬಿದಿದ್ದ ಬಾಲಕನನ್ನು ಇಬ್ಬರು ಸೇರಿ ಮೇಲೆತ್ತಿ ಪ್ರಾಣ ರಕ್ಷಣೆ ಮಾಡಿದ್ದರು)

ನೇತ್ರಾವತಿ ಚವ್ಹಾಣ, ಬಾಗಲಕೋಟೆ ಜಿಲ್ಲೆ ಹುನಗುಂದ ತಾಲ್ಲೂಕಿನ ವಡ್ಡರ ಹೊಸೂರಿನ 15 ವರ್ಷದ ಬಾಲಕಿ.  (ಕಲ್ಲಿನ ಕ್ವಾರಿ ಗುಂಡಿಯಲ್ಲಿ ಈಜಲು ಹೋಗಿ ನೀರಿನಲ್ಲಿ ಮುಳುಗುತ್ತಿದ್ದ ಇಬ್ಬರು ಬಾಲಕರನ್ನು ರಕ್ಷಣೆ ಮಾಡಲು ಕೆರೆಗೆ ಹಾರಿದ್ದಳು. ಒಬ್ಬನನ್ನು ರಕ್ಷಿಸಿ ಮತ್ತೊಬ್ಬನ ರಕ್ಷಣೆಗೆ ಇನ್ನೊಮ್ಮೆ ಹಾರಿದ್ದಳು. ನೀರಿನಲ್ಲಿದ್ದ ಬಾಲಕ ಆಕೆಯ ಕುತ್ತಿಗೆಯನ್ನು ಹಿಡಿದಿದ್ದರಿಂದ ಈಜಲಾಗದೆ ಇಬ್ಬರೂ ಮೃತಪಟ್ಟಿದ್ದಾರೆ) ಪ್ರಾಣದ ಹಂಗು ತೊರೆದು ನೀರಿಗೆ ಹಾರಿದ ನೇತ್ರಾವತಿ ಚವ್ಹಾಣಗೆ ಮರಣೋತ್ತರ ಪ್ರಶಸ್ತಿ ನೀಡಲಾಗುತ್ತಿದೆ.

ಬಾಲಕರಿಗೆ ಹೊಯ್ಸಳ ಮತ್ತು ಬಾಲಕಿಯರಿಗೆ ಕೆಳದಿ ಚನ್ನಮ್ಮ ಹೆಸರಿನಲ್ಲಿ ಪ್ರಶಸ್ತಿ ನೀಡಲಾಗುತ್ತದೆ. ಪ್ರಶಸ್ತಿಯು ₹ 10,000 ನಗದು ಬಹುಮಾನ, ಪ್ರಶಸ್ತಿ ಪತ್ರ ಮತ್ತು ನೆನಪಿನ ಕಾಣಿಕೆ ಒಳಗೊಂಡಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಉಮಾಶ್ರೀ ತಿಳಿಸಿದ್ದಾರೆ.

ಮಕ್ಕಳ ಕಲ್ಯಾಣ ಪ್ರಶಸ್ತಿಗಳು

ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿರುವ 4 ಸ್ವಯಂ ಸೇವಾ ಸಂಸ್ಥೆ ಮತ್ತು ನಾಲ್ವರಿಗೆ ವೈಯಕ್ತಿಕ ಪ್ರಶಸ್ತಿ ನೀಡಲಾಗಿದೆ. ಬೆಂಗಳೂರು ಮತ್ತಿಕೆರೆಯ ಸ್ಪರ್ಶ ಟ್ರಸ್ಟ್, ಚಾಮರಾಜನಗರದ ದೀನಬಂಧು ಸಂಸ್ಥೆ, ಬೆಳಗಾವಿಯ ಮಾಹೇಶ್ವರಿ ಅಂಧ ಮಕ್ಕಳ ಶಾಲೆ, ಬೀದರ್‌ನ ಅರಳು ಸಂಸ್ಥೆ ಈ ಪ್ರಶಸ್ತಿಗೆ ಭಾಜನವಾಗಿವೆ. ತಲಾ ₹ 1 ಲಕ್ಷ ನಗದು ಪುರಸ್ಕಾರವನ್ನು ಪ್ರಶಸ್ತಿ ಒಳಗೊಂಡಿದೆ.

ವೈಯಕ್ತಿಕ ಪ್ರಶಸ್ತಿಗೆ ಮೈಸೂರಿನ ಎಚ್.ಕೆ. ರಾಮನಾಥ(ಮಕ್ಕಳ ನಾಟಕ), ತುಮಕೂರು ಜಿಲ್ಲೆಯ ಬಿ.ಎಸ್. ನಂದಕುಮಾರ್(ಮಹಿಳಾ ಮತ್ತು ಮಕ್ಕಳ ಹಕ್ಕು), ಧಾರವಾಡ ಜಿಲ್ಲೆಯ ಪದ್ಮಾ ಕೊಡಗು(ರಂಗಭೂಮಿ), ಚಾಮರಾಜನಗರದ ಜೆ. ಆಡಿಸ್ ಆರ್ನಾಲ್ಡ್(ಮಕ್ಕಳ ಹಕ್ಕು) ಭಾಜನರಾಗಿದ್ದಾರೆ. ಈ ಪ್ರಶಸ್ತಿಯ ₹ 25,000 ನಗದು ಬಹುಮಾನ ಒಳಗೊಂಡಿದೆ.

‘ನಗರದ ಕಬ್ಬನ್‌ ಉದ್ಯಾನದಲ್ಲಿರುವ ಜವಾಹರ ಬಾಲಭವನದಲ್ಲಿ ಇದೇ 14ರಂದು ನಡೆಯಲಿರುವ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ರಾಜ್ಯಪಾಲರು ಪ್ರಶಸ್ತಿ ಪ್ರದಾನ ಮಾಡುವರು’ ಎಂದು ಉಮಾಶ್ರೀ ತಿಳಿಸಿದ್ದಾರೆ.

ಇದಲ್ಲದೇ, ವಿವಿಧ ಕ್ಷೇತ್ರಗಳಲ್ಲಿ ಅಸಾಧಾರಣ ಪ್ರತಿಭೆ ಹೊಂದಿರುವ 35 ಮಕ್ಕಳನ್ನು ರಾಷ್ಟ್ರ ಪ್ರಶಸ್ತಿಗೆ ನಾಮನಿರ್ದೇಶನ ಮಾಡಿದ್ದು, ಅವರಿಗೂ ಸಹ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುತ್ತಿದೆ ಎಂದು ಅವರು ವಿವರಿಸಿದ್ದಾರೆ.

*

ರಾಷ್ಟ್ರ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ಮಕ್ಕಳು

ಕ್ರೀಡಾಕ್ಷೇತ್ರ: ಶರೋಲ್ ಆ್ಯನಿ ಲೋಬೋ (ಉಡುಪಿ), ಸೋನಿಕ ಎಂ. ರಾಜ್ (ಹಾಸನ), ಯಂಕಣ್ಣ (ಬಾಗಲಕೋಟೆ), ಪ್ರಿಯದರ್ಶಿನಿ (ಉತ್ತರ ಕನ್ನಡ), ದಾನಮ್ಮ ಗುರವ (ಬಾಗಲಕೋಟೆ), ವೀಣಾ ಶಿವಪ್ಪ ಕಡಕೋಳ (ಬೆಳಗಾವಿ), ಕರುಣಾ ರಾಜನ್ ವಘೇಲಾ (ಬೆಳಗಾವಿ), ಜೈ ಶೈಲೇಶ್ ಪ್ರಭು (ಬೆಳಗಾವಿ), ಶ್ರದ್ಧಾ ಪಾಟೀಲ (ಬೀದರ್).

ಕಲೆ: ಕೆ. ಪ್ರದೀಶ್ (ಉಡುಪಿ), ಎಸ್‌.ವಿ. ವೈವಸ್ವತ ತಂಡುಲ (ಚಿಕ್ಕಮಗಳೂರು).

ನಾವಿನ್ಯತೆ: ಎ. ರಾಘವೇಂದ್ರ (ಬೆಂಗಳೂರು ಗ್ರಾಮಾಂತರ), ಕೋಟಾ ಅನಿಕೇತ್ ಶೆಣೈ (ಉಡುಪಿ), ಸ್ವಸ್ತಿಕ್ ಪದ್ಮ (ದಕ್ಷಿಣ ಕನ್ನಡ),  ಆಯುಷ್ ಕೆ. ತಮ್ಮಣ್ಣವರ್ (ಬೆಳಗಾವಿ), ಪಂಪನಗೌಡ (ರಾಯಚೂರು).

ಸಾಂಸ್ಕೃತಿಕ: ಅನಘ ಪ್ರಸಾದ್ (ತುಮಕೂರು), ಎಂ. ಅದ್ವಿಕಾ ಶೆಟ್ಟಿ (ದಕ್ಷಿಣ ಕನ್ನಡ), ಸಹನಾ ಬೇವೂರ್ (ಬಾಗಲಕೋಟೆ).

ತಾರ್ಕಿಕ: ಜಿ. ಮೋನಾ (ತುಮಕೂರು), ಎಲ್‌. ಅಗ್ನಿತೇಜ್‌ (ಚಿಕ್ಕಮಗಳೂರು), ಪಲ್ಲವಿ ಶಿರಹಟ್ಟಿ (ಬಾಗಲಕೋಟೆ).

ಸಮಾಜ ಸೇವೆ: ನಿಖಿಯಾ ಶಂಷೇರ್ (ಬಳ್ಳಾರಿ), ಮಲ್ಲಮ್ಮ (ಕೊಪ್ಪಳ), ಕೆ.ಪಿ. ಸುಚಿತ್ರಾ (ಚಾಮರಾನಗರ), ಒ. ನಯನಾ (ಚಿತ್ರದುರ್ಗ).

ಸಂಗೀತಾ: ಎಂ. ನಿರೀಕ್ಷಾ (ಬೆಂಗಳೂರು), ಎನ್‌. ಪ್ರಜ್ವಲ್ (ಬೆಂಗಳೂರು), ಭೂಮಿಕಾ ಮಧುಸೂಧನ್ (ಬೆಂಗಳೂರು), ನಿಖಿಲ್ ಮೃತ್ಯುಂಜಯ ಹೂಲಿ (ಬಾಗಲಕೋಟೆ).

ಇತರ ಪ್ರತಿಭೆ: ಎಚ್‌. ವಿಶ್ವನಾಯಕ (ಬೆಂಗಳೂರು ಗ್ರಾಮಾಂತರ), ಎ.ಜಿ. ಐಶ್ವರ್ಯಾ (ಕೊಡಗು), ಮಹೇಶ್‌ ಮಹಾನಿಂಗಪ್ಪ ಗೌರಿ (ಬೆಳಗಾವಿ) ಮತ್ತು ಆರತಿ ಎ. ಮಡಿವಾಳ (ಉಡುಪಿ).

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.