ಭಾನುವಾರ, ಫೆಬ್ರವರಿ 28, 2021
31 °C
ಕೇರಳದ ಸೌರಫಲಕ ಹಗರಣದ ನ್ಯಾಯಾಂಗ ತನಿಖೆ ವರದಿ

ವೇಣುಗೋಪಾಲ್‌ ಮೇಲೆ ಲೈಂಗಿಕ ದೌರ್ಜನ್ಯ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವೇಣುಗೋಪಾಲ್‌ ಮೇಲೆ ಲೈಂಗಿಕ ದೌರ್ಜನ್ಯ ಆರೋಪ

ತಿರುವನಂತಪುರ: ಬಹುಕೋಟಿ ಸೌರಫಲಕ ಹಗರಣದ ತನಿಖೆ ನಡೆಸಲು ನೇಮಿಸಿದ್ದ ನ್ಯಾಯಮೂರ್ತಿ ಜಿ. ಶಿವರಾಜನ್‌ ನೇತೃತ್ವದ ಆಯೋಗದ ವರದಿಯನ್ನು ಕೇರಳ ವಿಧಾನಸಭೆಯಲ್ಲಿ ಮಂಡಿಸಲಾಗಿದೆ.

ಮಾಜಿ ಮುಖ್ಯಮಂತ್ರಿ ಉಮ್ಮನ್‌ ಚಾಂಡಿ ಮತ್ತು ಕಾಂಗ್ರೆಸ್ ಮುಖಂಡರಾದ ಎ.ಪಿ. ಅನಿಲ್‌ಕುಮಾರ್‌ ಮತ್ತು ಅಡೂರ್‌ ಪ್ರಕಾಶ್‌ ಹಾಗೂ ಕರ್ನಾಟಕ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ಅವರು ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಸೌರಫಲಕ ಹಗರಣದ ಆರೋಪಿ ಸರಿತಾ ನಾಯರ್‌ ಮಾಡಿರುವ ಆರೋಪದ ಬಗ್ಗೆಯೂ ವರದಿಯಲ್ಲಿ ಉಲ್ಲೇಖ ಇದೆ.

2013ರ ಜುಲೈ 19ರಂದು ಸರಿತಾ ಅವರು ಸೆರೆಮನೆಯಿಂದ ಬರೆದ ಪತ್ರದ ಆಧಾರದಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖೆ ನಡೆಸಲಾಗಿದೆ. ವರದಿಯಲ್ಲಿ ಉಲ್ಲೇಖಿಸಲಾಗಿರುವ ವ್ಯಕ್ತಿಗಳು ಸರಿತಾ ಮತ್ತು ಅವರ ವಕೀಲರೊಂದಿಗೆ ದೂರವಾಣಿ ಮೂಲಕ ಸಂಪರ್ಕ ಹೊಂದಿದ್ದರು ಎಂದು ವರದಿಯಲ್ಲಿ ಹೇಳಲಾಗಿದೆ. ಸರಿತಾ ಅವರು ಬರೆದಿರುವ ಪತ್ರ ಮತ್ತು ಭ್ರಷ್ಟಾಚಾರ ಹಗರಣದ ವಿವರಗಳು ವರದಿಯಲ್ಲಿ ಇವೆ.

ಆದರೆ ವರದಿಯಲ್ಲಿರುವ ಅಂಶಗಳನ್ನು ಕಾಂಗ್ರೆಸ್‌ ಪ್ರಶ್ನಿಸಿದೆ. ಆರೋಪಿಯ ಹೇಳಿಕೆಯ ಆಧಾರದಲ್ಲಿಯೇ ಈ ವರದಿ ಸಿದ್ಧಪಡಿಸಲಾಗಿದೆ ಎಂದು ಕಾಂಗ್ರೆಸ್‌ ಹೇಳಿದೆ. 1,073 ಪುಟಗಳ ಈ ವರದಿಯನ್ನು ಸೆ. 26ರಂದು ಆಯೋಗವು ಸರ್ಕಾರಕ್ಕೆ ಸಲ್ಲಿಸಿತ್ತು.

ವೇಣುಗೋಪಾಲ್‌ರನ್ನು ಹಿಂದಕ್ಕೆ ಕಳಿಸಿ:‌ ‘ಕೇರಳದಲ್ಲಿ ನಡೆದಿದೆ ಎನ್ನಲಾದ ಲೈಂಗಿಕ ಹಗರಣದ ಆರೋಪಕ್ಕೆ ಗುರಿಯಾಗಿರುವ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ಅವರನ್ನು ಕೂಡಲೇ ಹಿಂದಕ್ಕೆ ಕಳುಹಿಸಿ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್‌, ಕಾಂಗ್ರೆಸ್‌ ಪಕ್ಷವನ್ನು ಆಗ್ರಹಿಸಿದರು.

‘ಸೋಲಾರ್‌ ಹಗರಣ ಮತ್ತು ಲೈಂಗಿಕ ಹಗರಣದ ಕುರಿತಂತೆ ನ್ಯಾಯಾಂಗ ತನಿಖಾ ವರದಿಯನ್ನು ಕೇರಳ ವಿಧಾನಮಂಡಲದಲ್ಲಿ ಮಂಡಿಸಲಾಗಿದೆ. ಅದರಲ್ಲಿ ವೇಣುಗೋಪಾಲ್‌ ಆರೋಪಿ ಎಂದು ಹೆಸರಿಸಲಾಗಿದೆ’ ಎಂದು ಅವರು ಶುಕ್ರವಾರ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.

‘ಅತ್ಯಾಚಾರಿಗಳು ಬರದಂತೆ ತಡೆಯಿರಿ’

ಮಂಗಳೂರು:
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಶುಕ್ರವಾರ ಇಡೀ ದಿನ ಪರಿವರ್ತನಾ ಯಾತ್ರೆಯ ವೇದಿಕೆಯನ್ನು ರಾಜ್ಯ ಕಾಂಗ್ರೆಸ್‌ ಉಸ್ತುವಾರಿಯಾಗಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌ ವಿರುದ್ಧ ವಾಗ್ದಾಳಿಗೆ ಬಳಸಿಕೊಂಡರು. ವೇಣುಗೋಪಾಲ್‌ ವಿರುದ್ಧದ ಅತ್ಯಾಚಾರ ಆರೋಪವನ್ನು ಭಾಷಣಗಳಲ್ಲಿ ಪ್ರಸ್ತಾಪಿಸಿ, ‘ಅತ್ಯಾಚಾರಿಗಳು ಜಿಲ್ಲೆಗೆ ಬರದಂತೆ ತಡೆಯಿರಿ’ ಎಂದು ಕರೆ ನೀಡಿದರು.

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ, ಪುತ್ತೂರು ಮತ್ತು ಬೆಳ್ತಂಗಡಿ ತಾಲ್ಲೂಕುಗಳಲ್ಲಿ ಪರಿವರ್ತನಾ ಯಾತ್ರೆ ನಡೆಸಿದ ಅವರು, ಮೂರೂ ಕಡೆ ಬಹಿರಂಗ ಸಭೆಗಳಲ್ಲಿ ಮಾತನಾಡಿದರು. ಕೇರಳದಲ್ಲಿ ನಡೆದಿದೆ ಎನ್ನಲಾದ ಸೋಲಾರ್‌ ಹಗರಣದ ಸಂಬಂಧ ನ್ಯಾಯಾಂಗ ತನಿಖಾ ಆಯೋಗವು ನೀಡಿರುವ ವರದಿಯ ಕುರಿತು ಪ್ರಸ್ತಾಪಿಸಿದ ಅವರು, ‘ಸರಿತಾ ಎಂಬ ಮಹಿಳೆಯ ಮೇಲೆ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಅತ್ಯಾಚಾರ ನಡೆಸಿದ್ದಾರೆ ಎಂಬ ಆರೋಪವಿದೆ. ಕೊಲೆ ಬೆದರಿಕೆಯನ್ನೂ ಹಾಕಿದ್ದಾರೆ. ಇಂತಹವರು ನಮ್ಮ ರಾಜ್ಯಕ್ಕೆ ಬೇಕೇ’ ಎಂದು ಪ್ರಶ್ನಿಸಿದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ನಿಮ್ಮ ಪಕ್ಷದ ಉಸ್ತುವಾರಿ ಒಬ್ಬ ಅತ್ಯಾಚಾರಿ. ಕಾಂಗ್ರೆಸ್‌ಗೆ ಇಂತಹವರೇ ಬೇಕು. ಅತ್ಯಾಚಾರಿಗಳು ಜಿಲ್ಲೆಗೆ ಬಂದಾಗ ತಡೆದು ವಾಪಸು ಕಳುಹಿಸಿ’ ಎಂದು ಸುಳ್ಯದಲ್ಲಿ ನಡೆದ ಸಮಾವೇಶದಲ್ಲಿ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದರು.

ಬಂಧನಕ್ಕೆ ಆಗ್ರಹ

ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ನಡೆದ ಸಮಾವೇಶದಲ್ಲೂ ವೇಣುಗೋಪಾಲ್‌ ವಿರುದ್ಧ ವಾಗ್ದಾಳಿ ಮುಂದುವರಿಸಿದ ಯಡಿಯೂರಪ್ಪ, ‘ಸಿದ್ದರಾಮಯ್ಯ ಅವರೇ ನಿಮಗೆ ಮಾನ, ಮರ್ಯಾದೆ ಇದ್ದರೆ ವೇಣುಗೋಪಾಲ್‌ ರಾಜ್ಯಕ್ಕೆ ಬಂದಾಗ ಬಂಧಿಸಿ. ಅವರೊಬ್ಬ ಅತ್ಯಾಚಾರಿ ಎಂಬುದು ವಿಚಾರಣೆಯಲ್ಲಿ ಸಾಬೀತಾಗಿದೆ. ಅವರನ್ನು ಬಂಧಿಸಿ ಜೈಲಿಗೆ ಕಳುಹಿಸುವ ಕೆಲಸ ಮಾಡಿ’ ಎಂದು ಆಗ್ರಹಿಸಿದರು.

‘ಅತ್ಯಾಚಾರ ಆರೋಪ ಸಾಬೀತಾಗಿರುವ ವ್ಯಕ್ತಿಗೆ ಕಾಂಗ್ರೆಸ್‌ ಪಕ್ಷ ಸಂಸದರ ಸ್ಥಾನ ನೀಡಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಹುದ್ದೆ ನೀಡಿರುವುದರ ಜೊತೆಗೆ ಕರ್ನಾಟಕ ರಾಜ್ಯದ ಉಸ್ತುವಾರಿಯನ್ನೂ ನೀಡಿದೆ. ಅತ್ಯಾಚಾರಿಯನ್ನು ಲೋಕಸಭಾ ಸದಸ್ಯರ ಹುದ್ದೆಯಲ್ಲಿ ಮತ್ತು ರಾಜ್ಯದ ಉಸ್ತುವಾರಿಯನ್ನಾಗಿ ಮುಂದುವರಿಸುತ್ತೀರಾ ಎಂಬ ಪ್ರಶ್ನೆಗೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಉಪಾಧ್ಯಕ್ಷ ರಾಹುಲ್‌ ಗಾಂಧಿ ಉತ್ತರ ನೀಡಬೇಕು’ ಎಂದು ಒತ್ತಾಯಿಸಿದರು.

ಸಂಜೆ ಬೆಳ್ತಂಗಡಿ ಪಟ್ಟಣದಲ್ಲಿ ನಡೆದ ಬಹಿರಂಗ ಸಭೆಯಲ್ಲೂ ಹೆಚ್ಚಿನ ಸಮಯವನ್ನು ವೇಣುಗೋಪಾಲ್‌ ವಿರುದ್ಧದ ವಾಗ್ದಾಳಿಗೆ ಮೀಸಲಿಟ್ಟರು. ಅವರು ಜಿಲ್ಲೆಗೆ ಬರದಂತೆ ತಡೆಯುವಂತೆ ಅಲ್ಲಿಯೂ ಕರೆ ನೀಡಿದರು.ಕಾಂಗ್ರೆಸ್‌ಗೆ ದುರ್ಗತಿ: ಕುಮಾರಸ್ವಾಮಿ

ಬೆಂಗಳೂರು:
‘ಸೋಲಾರ್ ಹಗರಣದ ಆರೋಪ ಎದುರಿಸುತ್ತಿರುವ ಕೆ.ಸಿ. ವೇಣುಗೋಪಾಲ್ ಅವರನ್ನೇ ರಾಜ್ಯ ಉಸ್ತುವಾರಿಯಾಗಿ ಮುಂದುವರಿಸಿರುವ ಕಾಂಗ್ರೆಸ್ ದುರ್ಗತಿ ಬಗ್ಗೆ ಜನರೇ ತೀರ್ಮಾನಿಸುತ್ತಾರೆ’ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಹೇಳಿದರು.

‘ವೇಣುಗೋಪಾಲ್ ಅವರದ್ದು ಕಾಂಗ್ರೆಸ್ ಪಕ್ಷ ನೀಡಿದ ಹುದ್ದೆ. ಸರ್ಕಾರ ನೀಡಿದ ಹುದ್ದೆಯಾದರೆ ವಾಪಸ್ ಪಡೆಯಿರಿ ಎಂದು ಆಗ್ರಹ ಮಾಡುತ್ತಿದ್ದೆ. ಅವರನ್ನು ಮುಂದುವರಿಸುವ ಅನಿವಾರ್ಯತೆ ಇದೆಯೇ ಎಂಬ ಬಗ್ಗೆ ಆ ಪಕ್ಷದವರೇ ತೀರ್ಮಾನಿಸಲಿ’ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.